ಯುವ ಒಕ್ಕೂಟಗಳ ಸಾಮಾಜಿಕ ಕಳಕಳಿ ಶ್ಲಾಘನೀಯ: ಬೋಪಯ್ಯ

ಪೊನ್ನಂಪೇಟೆಯಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ

Team Udayavani, Nov 12, 2019, 5:22 AM IST

ಮಡಿಕೇರಿ: :ಇತರರಿಗೆ ಮಾದರಿಯಾಗಿರುವ ಯುವ ಒಕ್ಕೂಟಗಳ ಸಾಮಾಜಿಕ ಕಳಕಳಿ ಶ್ಲಾಘನೀಯವೆಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹೇಳಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಪಂಚಾಯತ್‌, ಜಿಲ್ಲಾ ಯುವ ಒಕ್ಕೂಟ ಹಾಗೂ ನಿಸರ್ಗ ಯುವತಿ ಮಂಡಳಿ ಪೊನ್ನಂಪೇಟೆ ಇವರ ಸಂಯುಕ್ತಾಶ್ರಯದಲ್ಲಿ ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಒಕ್ಕೂಟಗಳು ಸಾಮಾ ಜಿಕ ಕಳಕಳಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ವೆಂದರು. ಕಳೆದ ಅನೇಕ ವರ್ಷಗಳಿಂದ ಕೊಡಗು ಜಿಲ್ಲೆಯ ಯುವ ಸಮೂಹ ಯುವ ಒಕ್ಕೂಟಗಳ ಮೂಲಕ ಸಾಮಾಜಿಕ ಕಳಕಳಿಯ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಸಂಕಷ್ಟದ ಪರಿಸ್ಥಿತಿಗಳಲ್ಲೂ ಸ್ಪಂದಿಸುತ್ತಿರುವುದಲ್ಲದೆ ಸಂಸ್ಕೃತಿಯ ಬೆಳವಣಿಗೆಗೂ ಸಹಕರಿಸುತ್ತಿರುವುದು ಹೆಮ್ಮೆಯ ವಿಚಾರವೆಂದು ಬೋಪಯ್ಯ ಹೇಳಿದರು. ಇಂದಿನ ಪರಿಸ್ಥಿತಿಯಲ್ಲಿ ಯುವ ಒಕ್ಕೂಟಗಳು ಮತ್ತಷ್ಟು ಸಬಲತೆಯನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಎಂ.ಮಂಜು ಗಣಪತಿ, ತಾಲೂಕು ಒಕ್ಕೂಟದ ಅಧ್ಯಕ್ಷೆ ಶೀಲಬೋಪಣ್ಣ, ನಿಸರ್ಗ ಯುವತಿ ಮಂಡಳಿ ಅಧ್ಯಕ್ಷೆ ರೇಖಾ ಶ್ರೀಧರ್‌ ಮತ್ತಿತರರು ಹಾಜರಿದ್ದರು.

ವಿವಿಧ ಕಾರ್ಯಕ್ಷೇತ್ರಗಳಲ್ಲಿ ಸಾಧನೆಗೈದ ಯುವ ಶಕ್ತಿ ಸಂಘಟನೆಯ ಸದಸ್ಯ ಅಬ್ದುಲ್‌ ಬೇಗ್‌, ಪ್ರಮುಖರಾದ ಎಸ್‌.ಎಸ್‌.ಶೈಲೇಂದ್ರ, ಟಿ.ಎನ್‌.ಸುರೇಶ್‌, ರಶ್ಮಿ ಉತ್ತಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭಾ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿಜೇತರಾದವರಿಗೆ ಇದೇ ಸಂದರ್ಭ ಬಹುಮಾನಗಳನ್ನು ವಿತರಿಸಲಾಯಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ