ಹುಲಿ ಹೆಜ್ಜೆ ಗುರುತು ಗ್ರಾಮಸ್ಥರು ಆತಂಕ
Team Udayavani, Oct 31, 2020, 1:11 AM IST
ಸಾಂದರ್ಭಿಕ ಚಿತ್ರ
ಮಡಿಕೇರಿ: ದಕ್ಷಿಣ ಕೊಡಗಿನ ಶ್ರೀಮಂಗಲ ಹೋಬಳಿಯ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಹುಲಿ ಹೆಜ್ಜೆ ಗುರುತು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.
ಕಳೆದ ಒಂದು ತಿಂಗಳಿನಿಂದ ಚೊಟ್ಟೆಯಂಡಮಾಡ ಸಂಜು ಅವರ ಗದ್ದೆ, ಉಳುವಂಗಡ ಅಜಿತ್ ಅವರ ಮನೆ ಪಕ್ಕ, ಚೆಟ್ಟಂಗಡ ಗಪ್ಪು ಪೂವಯ್ಯ ಹಾಗೂ ಬಿಪಿನ್ ಅವರ ತೋಟದಲ್ಲಿ ನಿರಂತರವಾಗಿ ಹುಲಿ ಪ್ರತ್ಯಕ್ಷವಾಗಿದ್ದು, ಬಲ್ಯಾಂಡಮಾಡ ಧನು ಎಂಬವರ ತೋಟದಲ್ಲಿ ಘರ್ಜಿಸುವ ಶಬ್ದ ಕೇಳಿಬಂದಿದೆ.
ಅಲ್ಲದೇ ಚೊಟ್ಟೆಯಂಡಮಾಡ ವಿಶು ಎಂಬವರ ಕಾಫಿ ಕಣದ ಪಕ್ಕದಲ್ಲೇ ಹುಲಿ ಹಾದು ಹೋಗಿರುವ ಹೆಜ್ಜೆ ಗುರುತುಗಳು ಕಂಡುಬಂದಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಗ್ರಾಮಸ್ಥರು ಎಚ್ಚರ ವಹಿಸುವಂತೆ ಮನವಿ ಮಾಡಲಾಗಿದೆ.