ಕೃತಕವಾಗಿ ಮಾವು ಮಾಗಿಸುವುದು ಅಪರಾಧ

ಆರೋಗ್ಯದ ಮೇಲೆ ರಾಸಾಯನಿಕಗಳ ದುಷ್ಪರಿಣಾಮ • ಎಚ್ಚರವಹಿಸಲು ಗ್ರಾಹಕರಿಗೆ ಅಧಿಕಾರಿಗಳ ಸಲಹೆ

Team Udayavani, May 20, 2019, 12:38 PM IST

ಮಾರುಕಟ್ಟೆಯಲ್ಲಿ ಮಾವು ಫಸಲಿಗೆ ಮುನ್ನವೇ ಸಿಗುವ ಹಣ್ಣಾದ ಸುಂದರ ಹಾಗೂ ಬಣ್ಣದ ಮಾವು.

ಕೋಲಾರ: ಮನುಷ್ಯರು ಸೇವಿಸುವ ಸ್ವಾಭಾವಿಕ ಆಹಾರಗಳಲ್ಲಿ ಹಣ್ಣುಗಳು ಅತಿ ಮುಖ್ಯವಾಗಿದ್ದು, ಅವುಗಳನ್ನು ಆಕರ್ಷಿಸಲು ಮತ್ತು ಕೃತಕವಾಗಿ ಹಣ್ಣಾಗಿಸಲು ಕೆಲವು ಮಾರಣಾಂತಿಕ ರಾಸಾಯಿಕ ಬಳಸಲಾಗುತ್ತಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು, ಗ್ರಾಹಕರು ಎಚ್ಚರಿಕೆ ವಹಿಸುವಂತೆ ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾಡಳಿತ ಹೇಳಿದೆ.

ಗ್ರಾಹಕರು ಈ ಹಣ್ಣುಗಳ ಸೇವಿಸುವಾಗ ಎಚ್ಚರ ವಹಿಸಬೇಕು. ಗ್ರಾಹಕರನ್ನು ಆಕರ್ಷಿಸಲು ಕೃತಕವಾಗಿ ಹಣ್ಣು ಮಾಗಿಸುವುದು ರೂಢಿಯಲ್ಲಿದೆ. ಇದು ತುಂಬಾ ಅಪಾಯಕಾರಿ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಮಾಗಿಸಲು ಬಳಸುವ ಕ್ಯಾಲ್ಸಿಯಂ ಕಾರ್ಬೈಡ್‌ ಅನ್ನು ಮಸಾಲಾ ಎಂದೂ ಕರೆಯಲಾಗುತ್ತದೆ.

ಕ್ಯಾಲ್ಸಿಯಂ ಕಾರ್ಬೈಡ್‌ ಒಂದು ರಾಸಾಯನಿಕ ವಸ್ತುವಾಗಿದ್ದು, ಇದು ಪರಿಶುದ್ಧವಾಗಿರುವಾಗ ಯಾವುದೇ ಬಣ್ಣವಿರುವುದಿಲ್ಲ, ಕಲುಷಿತಗೊಂಡಾಗ ಬೂದು ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ವಾಸನೆಯಲ್ಲಿ ಬೆಳ್ಳುಳ್ಳಿಗೆ ಹೋಲುತ್ತದೆ. ಕ್ಯಾಲ್ಸಿಯಂ ಕಾರ್ಬೈಡ್‌ನ‌ಲ್ಲಿ ಆರ್ಸೆನಿಕ್‌ ಮತ್ತು ಫಾಸ್ಪರಸ್‌ ಬೈಡ್ರೈಡ್‌ ಎಂಬ ಅನಿಲ ಇರುತ್ತವೆ. ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಮಾಗಿಸಲ್ಪಡುವ ಹಣ್ಣುಗಳು ಅತಿ ಮೃದುವಾಗಿರುವುದಲ್ಲದೆ ರುಚಿ ಹಾಗೂ ಪರಿಮಳ ಕುಂಠಿತವಾಗಿರುತ್ತದೆ. ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಮಾಗಿಸುವ ಹಣ್ಣುಗಳು ಏಕರೂಪದಲ್ಲಿ ಹಣ್ಣಾದರೂ ಒಳಗಿನ ತಿರುಳು ಉತ್ತಮ ಗುಣಮಟ್ಟದ್ದಲ್ಲ. ಇವುಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕ್ಯಾಲ್ಸಿಯಂ ಕಾರ್ಬೈಡ್‌ ವಿನಾಶಕಾರಿಯಾಗಿದೆ. ಇದರಿಂದ ಮಾಗಿಸಿದ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ರಾಸಾಯನಿಕವು ಆರ್ಸೆನಿಕ್‌ ಹಾಗೂ ಫಾಸ್ಪರಸ್‌ ಹೈಡ್ರೈಡ್‌ ಅಂಶ ಹೊಂದಿರುವುದರಿಂದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

ಈ ರಾಸಾಯನಿಕ ಸೇವನೆಯಿಂದ (ಹಣ್ಣುಗಳ ರೂಪದಲ್ಲಿ) ಪ್ರಥಮವಾಗಿ ವಾಂತಿ, ಅತಿಸಾರ, ಎದೆಯುರಿ ಹಾಗೂ ಕಿಬ್ಬೊಟ್ಟೆಯಲ್ಲಿ ಉರಿ, ಸುಸ್ತು, ದುರ್ಬಲತೆ, ನುಂಗಲು ಕಷ್ಟವಾಗುವುದು, ಗಂಟಲ ಕೆರೆತ, ಕೆಮ್ಮು ಮತ್ತು ಉಸಿರಾಟದಲ್ಲಿ ತೊಂದರೆ, ಅತಿಯಾದ ಸೇವನೆಯಿಂದ ಶ್ವಾಸಕೋಶಗಳಲ್ಲಿ ಹಾನಿಕಾರಕ ದ್ರವ ತುಂಬಿಕೊಂಡು ಸಾವಿಗೆ ಕಾರಣವಾಗುತ್ತದೆ.

ಕೃತಕ ಹಣ್ಣು ಮಾಗಿಸುವಿಕೆ: ಹಣ್ಣುಗಳಲ್ಲಿರುವ ಅಸಿಟಲಿನ್‌, ಎಥಿಲಿನ್‌ ಹಾಗೂ ಇತರೆ ಅನಿಲಗಳು ಹಣ್ಣುಗಳ ಬಣ್ಣ ಬದಲಾಗಿಸುವಿಕೆಯಿಂದ ಹಿಡಿದು ಹಣ್ಣನ್ನು ಮಾಗಿಸುವುದರಲ್ಲಿ ಪರಿಪೂರ್ಣ ಕಾರ್ಯ ನಿರ್ವಹಿಸುತ್ತದೆ. ಈ ರೀತಿ ಕೃತಕವಾಗಿ ಹಣ್ಣು ಮಾಗಿಸುವುದರಿಂದ ಗುಣಮಟ್ಟದಲ್ಲಿ ಬಹಳ ಏರುಪೇರಾಗುತ್ತವೆ. ಜೊತೆಗೆ ಕೃತಕ ಹಣ್ಣು ಮಾಗಿಸುವಿಕೆಗೆ ರಾಸಾಯನಿಕಗಳ ಪ್ರಮಾಣವು ಸಹ ಹೆಚ್ಚಾಗುತ್ತಿದೆ.

ಕಾರ್ಬೈಡ್‌ ಅನಿಲ: ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ 2006, 2011ರ ಕಾನೂನಿನಡಿ ಹಲವು ನಿಬಂಧನೆಗಳಿದೆ.

ಆಹಾರ ಭದ್ರತೆ ಮತ್ತು ಗುಣಮಟ್ಟ ನಿಯಂತ್ರಣ ಕಾಯ್ದೆ, 2011, 2.3.5ರ ಪ್ರಕಾರ ಕ್ಯಾಲ್ಸಿಯಂ ಕಾರ್ಬೈಡ್‌ ಅನಿಲವನ್ನು ಹಣ್ಣು ಮಾಗಿಸುವುದಕ್ಕಾಗಿ ಉಪಯೋಗಿಸುವುದು ನಿಷೇಧ. ಯಾವುದೇ ವ್ಯಕ್ತಿಯು ಕಾರ್ಬೈಡ್‌ ಅನಿಲ ಮಾರುವುದಾಗಲಿ, ಪ್ರಸ್ತಾಪಿಸುವುದಾಗಲಿ ಹಾಗೂ ಅಸಿಟಲಿನ್‌ ಅನಿಲದಿಂದ ಹಣ್ಣಾಗಿಸುವುದನ್ನು ಸಹ ಕಾರ್ಬೈಡ್‌ ಅನಿಲವೆಂದು ಪರಿಗಣಿಸಿ ನಿಷೇಧಿಸಲ್ಪಟ್ಟಿದೆ.

ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ 2006, ಸೆಕ್ಷನ್‌ 50ರ ಅನ್ವಯ ನೈಸರ್ಗಿಕವಲ್ಲದ ಆಹಾರವನ್ನು ಮಾರುವುದಕ್ಕೆ ದಂಡ ತೆರಬೇಕಾಗುತ್ತದೆ.

ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ, ಸೆಕ್ಷೆನ್‌ 2006ರ ಅನ್ವಯ ಯಾವುದೇ ವ್ಯಕ್ತಿಯು ಅಥವಾ ವ್ಯಕ್ತಿಯ ಪರವಾಗಿ, ಅಸುರಕ್ಷಿತ ಆಹಾರವನ್ನು ಮಾರುವುದಾಗಲಿ, ಆಮದು ಮಾಡಿಕೊಳ್ಳುವುದಾಗಲಿ, ಶೇಖರಣೆ ಮಾಡುವುದಾಗಲಿ, ವಿತರಣೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.

ಮಾವು, ಸೇಬನ್ನು ತೊಳೆದು ಅಥವಾ ಸಿಪ್ಪೆ ತೆಗೆದು ತಿನ್ನಿ

ಗ್ರಾಹಕರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೆಂದರೆ, ಹಣ್ಣುಗಳನ್ನು ಸೇವನೆ ಮಾಡುವುದಕ್ಕಿಂತ ಮೊದಲು ಕುಡಿಯುವ ನೀರಿನಲ್ಲಿ ಹಣ್ಣುಗಳನ್ನು ಕೆಲವು ನಿಮಿಷಗಳವರೆಗೆ ಚೆನ್ನಾಗಿ ತೊಳೆಯುವುದರಿಂದ ರಾಸಾಯನಿಕಗಳು ಸ್ವಚ್ಛವಾಗುತ್ತವೆ. ಮಾವು ಮತ್ತು ಸೇಬನ್ನು ಸೇವಿಸುವಾಗ ಹೋಳುಗಳಾಗಿ ಕತ್ತರಿಸಿ ಸೇವಿಸುವುದು. ಸಾಧ್ಯವಾದರೆ ಸಿಪ್ಪೆಯನ್ನು ಸುಲಿದು ಹಣ್ಣನ್ನು ಸೇವಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.
● ಕೆ.ಎಸ್‌.ಗಣೇಶ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕೋಲಾರ: ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ನಗರದ ಸರ್ಕಾರಿ ಮಹಿಳಾ ಕಾಲೇಜು ದಾನಿಗಳ ನೆರವಿನಿಂದ ಸಕಲ...

  • ಬಂಗಾರಪೇಟೆ: ಬಿಲ್‌ ಪಾವತಿ ಮಾಡಿಲ್ಲ ಎಂದು ಗುತ್ತಿಗೆದಾರರು ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರಿಂದ ಪಟ್ಟಣದಿಂದ ಬೇತಮಂಗಲ ಮೂಲಕ ವಿ.ಕೋಟೆಗೆ ಸಂಪರ್ಕ ಕಲ್ಪಿಸುವ...

  • ಶ್ರೀನಿವಾಸ ಪುರ: 18 ವರ್ಷ ತುಂಬಿದ ಪ್ರತಿ ವ್ಯಕ್ತಿ ತಮ್ಮ ಮೊಬೈಲ್‌ ಮೂಲಕವೇತ ಮದಾನ ಪಟ್ಟಿಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ತಾಲೂಕು ಕಾರ್ಯನಿರ್ವಹಣಾಧಿಕಾರಿ...

  • ಮುಳಬಾಗಿಲು: ತಾಲೂಕಿನ ದೇವರಾಯಸಮುದ್ರ ಗ್ರಾಮದಲ್ಲಿ ನಿರ್ಮಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ಕಾಮಗಾರಿ ಅಧಿಕಾರಿಗಳು ಮತ್ತು ಗುತ್ತಿಗೆದಾರನ...

  • ಬೇತಮಂಗಲ: ಗ್ರಾಮ ವಿಕಾಸ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಕಳಪೆಯಾಗಿದೆ ಎಂದು ಕಳ್ಳಿಕುಪ್ಪ ಗ್ರಾಮಸ್ಥರು ಆರೋಪಿಸಿದರು. ಟಿ.ಗೊಲ್ಲಹಳ್ಳಿ...

ಹೊಸ ಸೇರ್ಪಡೆ