2ನೇ ಹಂತದಲ್ಲಿ 150 ಕೆರೆಗೆ ಕೆ.ಸಿ.ವ್ಯಾಲಿ ನೀರು

Team Udayavani, Nov 18, 2019, 4:08 PM IST

ಕೋಲಾರ: ಅವಿಭಜಿತ ಜಿಲ್ಲೆಯ 150 ಕೆರೆಗಳಿಗೆ ಹೆಚ್ಚುವರಿಯಾಗಿ ಕೆ.ಸಿ. ವ್ಯಾಲಿ ನೀರು ಹರಿಸುವ 2ನೇ ಹಂತದ ಯೋಜನೆಗೆ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ 450 ಕೋಟಿ ರೂ. ಬಿಡುಗಡೆಯಾಗಿದ್ದು, ಟೆಂಡರ್‌ ಪ್ರಕ್ರಿಯೆ ನಡೆದಿದೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ತಾಲೂಕಿನ ಅಮ್ಮನಲ್ಲೂರು ಗ್ರಾಪಂ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೊದಲ ಹಂತದಲ್ಲಿ ಕೆ.ಸಿ. ವ್ಯಾಲಿ ನೀರು ತಾಲೂಕಿನ ನರಸಾಪುರ, ಸುಗಟೂರು, ವೇಮಗಲ್‌ ಹೋಬಳಿಯ ಹಲವು ಕೆರೆಗಳಿಗೆ ಹರಿದಿದ್ದು, ಆ ಭಾಗದಲ್ಲಿ ಕೊಳವೆ ಬಾವಿಗಳಲ್ಲಿ ನೀರು ವೃದ್ಧಿಯಾಗಿದೆ, ಅಂತರ್ಜಲ ಹೆಚ್ಚಾಗಿದೆ ಎಂದು ಹೇಳಿದರು.

ಚಿಂತಾಮಣಿ ತಾಲೂಕಿಗೂ ನೀರು: ಮೊದಲ ಹಂತದಲ್ಲಿ ತುಂಬಿ 130 ಕೆರೆಗಳಿಗೆ ಹತ್ತಿರ ಇರುವ ಕೆರೆಗಳ ಸಾಲಿಗೆ ನೀರನ್ನು ಪಂಪ್‌ ಮಾಡಿ ಹರಿಸುವ ಯೋಜನೆ ಇದಾಗಿದ್ದು, ಈ ಯೋಜನೆಯಲ್ಲಿ 150 ಕೆರೆಗಳನ್ನು ಗುರುತಿಸಲಾಗಿದೆ. ಚಿಂತಾಮಣಿ ತಾಲೂಕಿನ ಮಾಡಿಕೆರೆ ಕೆರೆ ಬಳಿ ಪಂಪ್‌ ಹೌಸ್‌ ನಿರ್ಮಾಣ ಮಾಡಿ ಅಲ್ಲಿಂದ ಕೈವಾರ, ಮೈಲಾಪುರ ಚಿನ್ನಸಂದ್ರ, ಹೀರೆಕಟ್ಟಿಗೇನಹಳ್ಳಿ, ಕುರುಬೂರು ಕೆರೆಗಳಿಗೆ ನೀರು ಹರಿಸಲು ಅಂದಾಜು ಪಟ್ಟಿ ತಯಾರಿಸಲಾಗಿದೆ ಎಂದು ಹೇಳಿದರು.

150 ಕೆರೆಗಳಿಗೆ ಕುಡಿಯುವ ನೀರು: ಎತ್ತಿನ ಹೊಳೆ ಯೋಜನೆ ಕುಡಿಯುವ ನೀರಿನ ಯೋಜನೆಯಾಗಿದ್ದು, ಈ ನೀರು ತುಂಬಿಸಲು 150 ಕೆರೆಗಳನ್ನು ಆಯ್ಕೆ ಮಾಡಲಾಗಿದೆ. ಈ ಸರ್ಕಾರ ಬಂದ ಮೇಲೆ ಯೋಜನೆ ಕಾಮಗಾರಿ ಮಂದಗತಿಯಾಗಿದೆ ಎಂದು ಟೀಕಿಸಿದರು. ದೊಡ್ಡಬಳ್ಳಾಪುರ, ಕೊರಟಗೆರೆ ಬಳಿ ಡ್ಯಾಂ ನಿರ್ಮಿಸಲು ಭೂಸ್ವಾಧೀನ ಪ್ರಕ್ರಿಯೆ ತಡವಾಗಿದೆ. ಸಿದ್ದರಾಮಯ್ಯ ಈ ಯೋಜನೆಗೆ ಬೆಂಬಲನೀಡಿದ್ದರು. ಈಗಿನ ಬಿಜೆಪಿ ಸರ್ಕಾರಕ್ಕೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಬಗ್ಗೆ ಕಾಳಜಿ ಇಲ್ಲ ಎಂದರು.

ಸಿಬಿಕೆ ಬರುವ ಮುನ್ನವೇ ಶಾಸಕರು ಜಾಗ ಖಾಲಿ: ಶಾಸಕ ಕೆ.ಶ್ರೀನಿವಾಸಗೌಡರು ಮಾಜಿ ಸಚಿವ ಕೃಷ್ಣಬೈರೇಗೌಡರು ಬರುವ ಮುನ್ನವೇ ಗ್ರಾಮ ಪಂಚಾಯ್ತಿ ನೂತನ ಕಟ್ಟಡ ಲೋಕಾರ್ಪಣೆ ಮಾಡಿ ಅಲ್ಲಿಂದ ಹೊರ ನಡೆದರು. ಅನೇಕ ಮುಖಂಡರು ಸಿಬಿಕೆ ಬರುತ್ತಿದ್ದಾರೆ ಎಂದು ಹೇಳಿದರೂ ಅಲ್ಲಿ ನಿಲ್ಲದೇ ಬೇರೆ ಕೆಲಸವಿದೆ ಎಂದು ಹೇಳಿ ಹೊರ ನಡೆದ ನಂತರ ಬಂದ ಕೃಷ್ಣಬೈರೇಗೌಡರು ಕೇವಲ ಭಾಷಣ ಮಾಡಲು ಸೀಮಿತರಾದರು.

ಸಹಕಾರ: ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆ.ಸಿ. ವ್ಯಾಲಿ ನೀರನ್ನು ಕೃಷಿಗೆ ಬಳಸಬೇಡಿ, ಅದರಿಂದ ಅಂತರ್ಜಲ ವೃದ್ಧಿಯಾದರೆ ಕೊಳವೆ ಬಾವಿಗಳಲ್ಲಿ ನೀರು ಮೇಲೆ ಬರುತ್ತದೆ. ಇಲ್ಲಿನ ಜನತೆ ಬೈರೇಗೌಡರಂತೆ ನನ್ನನ್ನೂ ಕೈಹಿಡಿದರು. ಇಲ್ಲಿನ ರಸ್ತೆ, ಕುಡಿಯುವ ನೀರು ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರದ ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ ಮಾತನಾಡಿ, ನೂತನ ಕಟ್ಟಡಕ್ಕೆ 16.25 ಲಕ್ಷ ರೂ. ಖರ್ಚು ಮಾಡಲಾಗಿದೆ, ನನ್ನ ಅವಧಿಯಲ್ಲಿ ಸುಂದರ ಕಟ್ಟಡ ನಿರ್ಮಾಣವಾಗಿರುವುದಕ್ಕೆ ಖುಷಿ ಇದೆ ಎಂದರು.

ಪಿಡಿಒ ರವೀಂದ್ರ ನಿರೂಪಿಸಿದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್‌, ಗ್ರಾಪಂಉಪಾಧ್ಯಕ್ಷ ಪಿ.ಎನ್‌.ಪಾಪಣ್ಣ, ಸದಸ್ಯರಾದ ವೀರಪ್ಪರೆಡ್ಡಿ, ವನಜಾಕ್ಷಮ್ಮ,

ಯಶೋದಮ್ಮ, ನಾಗರಾಜ್‌, ಬಸಪ್ಪ, ಶ್ವೇತಾ, ಭಾಗ್ಯಮ್ಮ, ಅರುಣ್‌ ಕುಮಾರ್‌, ನಾರಾಯಣಮ್ಮ, ಸುವರ್ಣಮ್ಮ, ಯಶೋದಮ್ಮ, ನಾರಾಯಣಸ್ವಾಮಿ, ಮುನಿರಾಜು, ಮುನಿಶಾಮಿಗೌಡ, ವೆಂಕಟಲಕ್ಷ್ಮಮ್ಮ, ತಾಪಂ ಸದಸ್ಯೆ ನಾಗವೇಣಿ, ಮುಖಂಡರಾದ ಲೇಔಟ್‌ ಹರೀಶ್‌, ಬಾಬುಮೌನಿ, ಶ್ರೀನಿವಾಸ್‌, ನಾಗೇಶ್‌, ಶೇಕ್‌ ಅಹಮದ್‌, ಅನ್ವರ್‌ ಪಾಷ, ಕೃಷ್ಣಾಪುರ ರಾಜಣ್ಣ, ದೊಡ್ಡಗೌಡ, ಮುನೇಗೌಡ, ಕಾರ್ಯದರ್ಶಿ ಎ.ಎನ್‌.ಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ