ಜಗಳ ಬಿಡಿಸಲು ಹೋದ ಪೊಲೀಸರ ಮೇಲೆ ಹಲ್ಲೆ
Team Udayavani, Mar 16, 2021, 12:34 PM IST
ಮುಳಬಾಗಿಲು: ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಎರಡು ಗುಂಪುಗಳ ನಡುವೆ ಮಧ್ಯರಾತ್ರಿಯಲ್ಲಿ ನಡೆಯು ತ್ತಿದ್ದ ಜಗಳ ಬಿಡಿಸಲು ಹೋದ ಪೊಲೀಸರ ವಿರುದ್ಧವೇ ತಿರುಗಿ ಬಿದ್ದ ಕಾರ್ಮಿಕರು ಪೊಲೀಸ್ ಮೇಲೆ ಹಲ್ಲೆ ನಡೆಸಿ ವಾಹನವನ್ನು ಜಖಂಗೊಳಿಸಿದ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಹೆಸರಾಂತ ರಾಜಕಾರಣಿ ದಿ.ಮಂಡಿಕಲ್ ವೆಂಕಟೇಶ್ ಅವರ ಮಗ ಮಂಡಿಕಲ್ ಚೇತನ್ ಹಲವು ವರ್ಷಗಳ ಹಿಂದೆ ಕಸಬಾ ಹೋಬಳಿ ರಾಷ್ಟ್ರೀಯ ಹೆದ್ದಾರಿ 75ರ ಕಪ್ಪಲಮಡಗು ಗ್ರಾಮದ ಸಮೀಪ ಪ್ರೋಟ್ಯಾಕ್ ಕೋಳಿ ಮಾಂಸದ ಕಾರ್ಖಾನೆ ಸ್ಥಾಪಿಸಲಾಗಿದ್ದು, ಸದರೀ ಕಾರ್ಖಾನೆಯಲ್ಲಿ ಒರಿಸ್ಸಾ, ಚತ್ತೀಸ್‌ಘಡ್, ಪಶ್ಚಿಮ ಬಂಗಾಳ, ಜಾರ್ಖಂಡ್ ರಾಜ್ಯಗಳ 150ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಗಸ್ತು ವಾಹನ ಜಖಂ: ಭಾನುವಾರ ರಾತ್ರಿ 1.30 ಸಮಯದಲ್ಲಿ ಎರಡು ಗುಂಪುಗಳ ನಡುವೆ ಹಣದ ವಿಚಾರದಲ್ಲಿ ಉಂಟಾದ ಗಲಾಟೆಯು ತೀವ್ರ ಸ್ವರೂಪಕ್ಕೇರಿದಾಗ ಕಾರ್ಖಾನೆ ಮಾಲೀಕರು ನೀಡಿದ ಮಾಹಿತಿಯಂತೆ ಹೆದ್ದಾರಿ ಗಸ್ತು ತಿರುಗುತ್ತಿದ್ದ ಮುಳಬಾಗಿಲು ಪೊಲೀಸರು ಸ್ಥಳಕ್ಕೆ ಹೋಗಿ ಗಲಾಟೆಯನ್ನು ಬಿಡಿಸಲು ಹೋದಾಗ, ಎಎಸ್‌ಐ ರಮೇಶ್‌ಬಾಬು ಮತ್ತು ಎಚ್.ಸಿ ಗುಡಿಪಲ್ಲಿ ವೆಂಕಟರೆಡ್ಡಿ ಮೇಲೆಯೇ ಹಲ್ಲೆ ನಡೆಸಿ ಗಸ್ತು ವಾಹನ ಜಖಂಗೊಳಿಸಿದ್ದಾರೆ.
ಪಶ್ಚಿಮ ಬಂಗಾಳದ ಕಾರ್ಮಿಕರ ಬಂಧನ: ಕೂಡಲೇ ಸ್ಥಳಕ್ಕೆ ಧಾವಿಸಿದ ಪಿಎಸ್‌ಐ ಪ್ರದೀಪ್ ಸಿಂಗ್ ಮತ್ತು ಮತ್ತಷ್ಟು ಪೊಲೀಸರು ದಾಳಿಕೋರ ಪಶ್ಚಿಮ ಬಂಗಾಳದ 16 ಕಾರ್ಮಿಕರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಿದ್ದಾರೆ. ಮುಳಬಾಗಿಲು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಗೊಂಡ ಪೊಲೀಸರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.