ಚುನಾವಣೆಗೆ ಸಜ್ಜಾಗಲು ಡಿ.ಸಿ.ಗಳಿಗೆ ಆಯೋಗ ಪತ್ರ

Team Udayavani, Sep 15, 2019, 1:05 PM IST

ಕೋಲಾರ ನಗರಸಭೆ ವಾರ್ಡ್‌ ಒಂದರಲ್ಲಿ ಆಕಾಂಕ್ಷಿಯೊಬ್ಬರು ಕುಡಿಯುವ ನೀರನ್ನು ಟ್ಯಾಂಕರ್‌ ಮೂಲಕ ಪೂರೈಕೆ ಮಾಡುತ್ತಿರುವುದು.

ಕೋಲಾರ: ರಾಜ್ಯ ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸಿದ್ಧವಾಗುವಂತೆ ಸೆ.13 ರಂದು ಪ್ರಕಟಣೆ ಹೊರಡಿಸಿದೆ. ಇದರಿಂದಾಗಿ ಜಿಲ್ಲೆಯ ಮೂರು ನಗರಗಳಲ್ಲಿ ಮತ್ತೆ ಚುನಾವಣೆ ಕಾವು ಆರಂಭವಾಗಿದೆ. ಕೆಲವು ತಿಂಗಳುಗಳ ಹಿಂದೆ ಕೋಲಾರ ಜಿಲ್ಲೆಯ ಬಂಗಾರಪೇಟೆ, ಮಾಲೂರು ಮತ್ತು ಶ್ರೀನಿವಾಸಪುರ ಪುರಸಭೆಗಳಿಗೆ ಚುನಾವಣೆ ನಡೆದಿದ್ದು, ಕೋಲಾರ, ಕೆಜಿಎಫ್(ರಾಬರ್ಟ್‌ಸನ್‌ಪೇಟೆ) ಮತ್ತು ಮುಳಬಾಗಿಲು ನಗರಸಭೆಗಳಿಗೆ ಕಾರಣಾಂತರಗಳಿಂದ ಚುನಾವಣೆ ನಡೆದಿರಲಿಲ್ಲ.

ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ 2012ರಲ್ಲಿ ಚುನಾವಣೆ ನಡೆದಿದ್ದು, ಏಳು ವರ್ಷಗಳೇ ಕಳೆದಿವೆ. 2012ರಲ್ಲಿ ಚುನಾವಣೆ ನಡೆದ ನಂತರ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಲು ಒಂದು ವರ್ಷ ಬೇಕಾಯಿತು. 2019ರ ಮಾರ್ಚ್‌ ಅಂತ್ಯಕ್ಕೆ ಆಡಳಿತ ಮಂಡಳಿಯ ಅಧಿಕಾರಾವಧಿ ಪೂರ್ಣಗೊಂಡಿತು. ಆದರೆ, ಸರ್ಕಾರ ಹೊರಡಿಸಿದ್ದ ವಾರ್ಡ್‌ವಾರು ಮೀಸಲು ಪಟ್ಟಿಯ ಕುರಿತಂತೆ ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರಿಂದ ಮೊದಲ ಹಂತದಲ್ಲಿ ಚುನಾವಣೆ ನಡೆದಿರಲಿಲ್ಲ. ಬಂಗಾರಪೇಟೆ, ಮಾಲೂರು, ಶ್ರೀನಿವಾಸಪುರ ಪುರಸಭೆಗಳಿಗೆ ಮಾತ್ರವೇ ಚುನಾವಣೆ ನಡೆದಿತ್ತು. ಕೋಲಾರ, ಕೆಜಿಎಫ್ ಮತ್ತು ಮುಳಬಾಗಿಲು ನಗರಸಭೆಯಲ್ಲಿ ಚುನಾವಣೆ ನಡೆದಿರಲಿಲ್ಲ.

ಪ್ರಚಾರ ಚುರುಕು: ಇದೀಗ ಚುನಾವಣಾ ಆಯೋಗವು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮತದಾರರ ಪಟ್ಟಿ ಸೇರಿದಂತೆ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿರುವುದರಿಂದ ಒಂದೆರೆಡು ತಿಂಗಳುಗಳಲ್ಲಿ ಚುನಾವಣೆ ನಡೆಯುವ ಆಸೆ ಚಿಗುರಿಸಿದೆ. ಇದರಿಂದ ಆಕಾಂಕ್ಷಿಗಳಲ್ಲಿ ಉತ್ಸಾಹ ಮತ್ತೆ ಗರಿಗೆದರಿದ್ದು, ವಾರ್ಡ್‌ಗಳಲ್ಲಿ ಜನತೆಯ ಮುಂದೆ ಬರತೊಡಗಿದ್ದಾರೆ.

ಕೊಡುಗೆಗಳ ವಿತರಣೆ: ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಅವಧಿಯೊಳಗೆ ಚುನಾವಣೆ ನಡೆಯುತ್ತದೆಯೆಂಬ ಕಾರಣಕ್ಕೆ ಚುನಾವಣೆಗೆ ಇನ್ನೂ ವೇಳಾಪಟ್ಟಿ ಪ್ರಕಟವಾಗದಿದ್ದರೂ ನಗರದ ವಿವಿಧ ವಾರ್ಡ್‌ಗಳಲ್ಲಿ ಒಂದು ವರ್ಷದಿಂದಲೂ ಆಕಾಂಕ್ಷಿ ಅಭ್ಯರ್ಥಿಗಳು ಕೆಲವು ವಾರಗಳಿಂದಲೇ ಪ್ರಚಾರ ಕಾರ್ಯಗಳನ್ನು ಆರಂಭಿಸಿ ಚುನಾವಣೆಗೆ ಸಜ್ಜಾಗುತ್ತಿದ್ದರು. ಪ್ರತಿ ವಾರ್ಡ್‌ನಲ್ಲಿಯೂ ಲಕ್ಷಾಂತರ ರೂ. ಅನ್ನು ಸಮಾಜಸೇವೆ, ಧಾರ್ಮಿಕ ಕಾರ್ಯಕ್ರಮ, ಕ್ರೀಡಾ ಚಟುವಟಿಕೆ, ಸೀರೆ ವಗೈರೆ ಕೊಡುಗೆಗಳ ವಿತರಣೆಗಾಗಿ ವೆಚ್ಚ ಮಾಡಲಾಗಿದೆ.

ಮಧ್ಯೆ ಲೋಕಸಭಾ ಚುನಾವಣೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಕಡಿವಾಣ ಬೀಳುವಂತಾಗಿತ್ತು. ಮೊದಲನೇ ಹಂತದಲ್ಲಿ ಚುನಾವಣೆ ನಡೆಯದ ನಗರಸಭೆ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯಗಳು ಸಂಪೂರ್ಣ ಸ್ಥಗಿತಗೊಳ್ಳುವಂತಾಗಿತ್ತು. ಇದೀಗ ಮತ್ತೆ ಚುನಾವಣಾ ಆಯೋಗ ಡಿ.ಸಿ.ಗೆ ಪತ್ರ ಬರೆದಿರುವುದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದ್ದು, ಆಕಾಂಕ್ಷಿಗಳನ್ನು ಬಡೆದೆಬ್ಬಿಸುವಂತಾಗಿದೆ.

ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ 35 ವಾರ್ಡ್‌ ಗಳಿದ್ದು, ವಾರ್ಡ್‌ವಾರು ಮೀಸಲಾತಿಯು ಪ್ರಕಟವಾಗಿ ಸರಿಯಾಗಿ ಒಂದು ವರ್ಷ ಆಗಿದೆ. ಆಯಾ ವಾರ್ಡ್‌ಗಳಲ್ಲಿ ಮೀಸಲಾತಿ ಪಟ್ಟಿಯನ್ನು ಅನುಸರಿಸಿ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದು, ವಾರ್ಡ್‌ನ ಮಹಿಳೆಯರು, ಯುವಕರನ್ನು ಆಕರ್ಷಿಸುವ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮುಂದುವರಿಸಲು ಚಿಂತಿಸುತ್ತಿದ್ದಾರೆ.

ಆಕ್ಷೇಪಗಳಿದ್ದರೂ ಕೋರ್ಟ್‌ ಮೆಟ್ಟಿಲೇರಿಲ್ಲ: ಕೋಲಾರ ನಗರಸಭೆ 35 ವಾರ್ಡ್‌ಗಳಿಗೆ ನಿಗದಿಪಡಿಸಿರುವ ಮೀಸಲಾತಿ ಕುರಿತಂತೆ ಸಾಕಷ್ಟು ಆಕ್ಷೇಪಗಳಿದ್ದರೂ ನಿಗದಿತ ಅವಧಿಯಲ್ಲಿ ಯಾರೂ ಆಕ್ಷೇಪಗಳನ್ನು ಸಲ್ಲಿಸಿರಲಿಲ್ಲ. ಹಿಂದಿನ ಶಾಸಕ ವರ್ತೂರು ಪ್ರಕಾಶ್‌ ತಮ್ಮಿಷ್ಟದಂತೆ ನಿಗದಿ ಪಡಿಸಿಕೊಂಡಿರುವ ಮೀಸಲಾತಿಯನ್ನು ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ ತಮ್ಮ ಬೆಂಬಲಿಗರಿಗೆ ಅನುಕೂಲ ವಾಗುವಂತೆ ಬದಲಾಯಿಸಬೇಕೆಂಬ ಒತ್ತಡವಿತ್ತು.

ನಗರದ 35 ವಾರ್ಡ್‌ಗಳ ಪೈಕಿ ಸುಮಾರು ಹತ್ತು ವಾರ್ಡ್‌ಗಳ ಮೀಸಲಾತಿ ಬದಲಾಯಿಸುವ ಕುರಿತು ಮುಖಂಡರ ವಲಯದಲ್ಲಿ ಐದಾರು ಪಟ್ಟಿಗಳು ಚಾಲ್ತಿಯಲ್ಲಿದ್ದವು. ಸಮ್ಮಿಶ್ರ ಸರಕಾರದಲ್ಲಿ ಮೀಸಲಾತಿಯನ್ನು ಬದಲಾಯಿಸಲು ಜೆಡಿಎಸ್‌ ಪಾಳೆಯದಲ್ಲಿ ಪ್ರಯತ್ನಗಳು ನಡೆದಿದ್ದವು. ಇದರ ನಡುವೆ ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಚುನಾವಣಾ ವೇಳಾಪಟ್ಟಿ ಘೋಷಣೆಯೂ ಸನಿಹವಾಗುತ್ತಿರುವುದರಿಂದ ಈ ಹಂತ‌ದಲ್ಲಿ ಇನ್ನು ಮೀಸಲಾತಿ ಪಟ್ಟಿ ಬದಲಾವಣೆ ಸಾಧ್ಯವಿಲ್ಲವೆಂದು ಹೇಳಲಾಗುತ್ತಿದೆ.

ಬದಲಾದ ವಾರ್ಡ್‌ಗಳ ಗಡಿ: ನಗರಸಭೆ ಚುನಾವಣಾ ವಾರ್ಡ್‌ವಾರು ಮೀಸಲಾತಿ ಪಟ್ಟಿ ಹೊರ ಬೀಳುತ್ತಿದ್ದಂತೆಯೇ ಹಾಲಿ ನಗರಸಭಾ ಸದಸ್ಯರು, ಮಾಜಿ ನಗರಸಭಾ ಸದಸ್ಯರು ಹಾಗೂ ಹೊಸದಾಗಿ ಚುನಾವಣೆ ಎದುರಿಸಲು ಸಿದ್ಧವಾಗಿರುವವರು ತಮ್ಮ ವಾರ್ಡ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಈ ಬಾರಿ ವಾರ್ಡ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗದಿದ್ದರೂ ವಾರ್ಡ್‌ಗಳ ಗಡಿಯಲ್ಲಿ ಬದಲಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ರಚಿತವಾಗಿರುವ ವಾರ್ಡ್‌ಗಳ ಮತಗಳನ್ನು ಜಾತಿವಾರು, ಪಕ್ಷವಾರು, ಧರ್ಮವಾರು, ಸಂಬಂಧಿಕರು, ಸ್ನೇಹಿತರ ವಲಯವನ್ನು ಗುರುತಿಸಿಕೊಂಡು ಉದ್ದೇಶಿತ ಅಭ್ಯರ್ಥಿಗಳು ಪ್ರಚಾರ ಆರಂಭಿಸಿದ್ದಾರೆ. ಮಹಿಳೆಯರಿಗೆ ಮೀಸಲಾದ ವಾರ್ಡ್‌ಗಳನ್ನು ಹೊರಡು ಪಡಿಸಿದಂತೆ ಪ್ರತಿ ವಾರ್ಡಿನಲ್ಲಿಯೂ ಏಳೆಂಟು ಮಂದಿ ಅಭ್ಯರ್ಥಿಗಳು ಹೀಗೆ ಪ್ರಚಾರ ಕಾರ್ಯವನ್ನು ಶುರುವಿಟ್ಟುಕೊಳ್ಳುತ್ತಿದ್ದಾರೆ.

ಬಿಜೆಪಿ ಪ್ರಯತ್ನ: ಸಾಮಾನ್ಯವಾಗಿ ಕೋಲಾರ ನಗರಸಭೆಯಲ್ಲಿ ಕಾಂಗ್ರೆಸ್‌, ವರ್ತೂರು ಬಣ ಹಾಗೂ ಜೆಡಿಎಸ್‌ದೆ ಪ್ರಾಬಲ್ಯವಿತ್ತು. ಆದರೆ, ಈ ಬಾರಿ ಲೋಕಸಭಾ ಸದಸ್ಯರಾಗಿ ಸಂಸದ ಎಸ್‌.ಮುನಿಸ್ವಾಮಿ ಆಯ್ಕೆಯಾಗಿರುವು ದರಿಂದ ಬಿಜೆಪಿಯಿಂದಲೂ ಟಿಕೆಟ್ಗಾಗಿ ಪ್ರಯತ್ನಿಸುವವರ ಸಂಖ್ಯೆ ಹೆಚ್ಚಳವಾಗಲಿದೆ. ಜೊತೆಗೆ ಕೋಲಾರ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟು ಓಡಾಡುತ್ತಿರುವ ಶ್ರೀಧರರೆಡ್ಡಿ, ಚಿಕ್ಕರಾಯಪ್ಪ, ಕೊತ್ತೂರು ಮಂಜುನಾಥ್‌ ಇತರರು ಮೊದಲು ನಗರಸಭೆಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕೆಂಬ ಕಾರಣದಿಂದ ಚುನಾವಣೆಯನ್ನು ಗಂಭೀರವಾಗಿ ಸ್ಪೀಕರಿಸುವ ಸಾಧ್ಯತೆಗಳಿವೆ. ಈ ಅಂದಾಜಿನ ಪ್ರಕಾರ ಈ ಬಾರಿ ಪ್ರತಿ ವಾರ್ಡಿನಲ್ಲಿಯೂ ತ್ರಿಕೋನ, ಚತುಷ್ಕೋನ ಪೈಪೋಟಿ ಸಾಮಾನ್ಯ ಎನ್ನಲಾಗುತ್ತಿದೆ.

ಇವೆಲ್ಲಾ ಕಾರಣಗಳಿಂದ ಈ ಬಾರಿ ಕೋಲಾರ ನಗರಸಭೆ ಚುನಾವಣೆ ನಿರೀಕ್ಷೆಗೂ ಮೀರಿ ರಂಗೇರಲಿದೆ.

ಕೇಳದಿದ್ದರೂ ಸೌಲಭ್ಯ: ಕೋಲಾರ ನಗರದ ನಾಗರೀಕರು ಹಲವಾರು ವರ್ಷಗಳಿಂದಲೂ ವಿವಿಧ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಸ ವಿಲೇವಾರಿ, ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪಗಳ ಕೊರತೆ, ಚರಂಡಿ, ಯುಜಿಡಿ ಸಮಸ್ಯೆಗಳು. ಆದರೆ, ಈಗ ವಾರ್ಡಿನ ಮೇಲೆ ಕಣ್ಣಿಟ್ಟಿರುವವರು ನಗರಸಭೆಯಿಂದ ಮತ್ತು ತಮ್ಮದೇ ಖರ್ಚಿನಿಂದ ಈ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿರುವುದರಿಂದ ವರ್ಷಗಳಿಂದ ಬಾರದ ನಲ್ಲಿಗಳಲ್ಲೂ ನೀರು ಬರುವಂತಾಗಿದೆ. ನಲ್ಲಿ ಇಲ್ಲದಿದ್ದರೂ ಟ್ಯಾಂಕರ್‌ ನೀರು ಪೂರೈಕೆಯಾಗುತ್ತಿದೆ. ಕಂಬ ಕಂಬಕ್ಕೂ ವಿದ್ಯುತ್‌ ದೀಪಗಳು ಮಿನುಗುತ್ತಿವೆ, ಅಗತ್ಯ ಇರಲಿ ಇಲ್ಲದಿರಲಿ ಹೈಮಾಸ್ಟ್‌ ದೀಪಗಳನ್ನು ಅಳವಡಿಸಲಾಗುತ್ತಿದೆ, ಕೆಲವು ವಾರ್ಡ್‌ಗಳಲ್ಲಿ ಅಭ್ಯರ್ಥಿಗಳೇ ಕಸ ವಿಲೇವಾರಿ, ಸ್ವಚ್ಛತಾ ಕಾರ್ಯಗಳನ್ನು ಕೈಗೆತ್ತಿಕೊಂಡು ರಸ್ತೆಗಳಿಗೆ ನಾಮ ಫ‌ಲಕ ಅಳವಡಿಕೆಗೂ ಮುಂದಾಗಿದ್ದಾರೆ. ಇದರಿಂದ ಸದ್ಯಕ್ಕೆ ಕೋಲಾರದ ನಾಗರೀಕರಿಗೆ ಬರದ ಬಿಸಿ ತಟ್ಟದಂತಾಗಿದೆ.

 

● ಕೆ.ಎಸ್‌.ಗಣೇಶ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ