ಕೋಟಿಲಿಂಗ ಕಿತ್ತಾಟದಲ್ಲಿ ಕರಪತ್ರಗಳ ಪೈಪೋಟಿ

Team Udayavani, Mar 15, 2019, 7:26 AM IST

ಬಂಗಾರಪೇಟೆ: ತಾಲೂಕಿನ ಕಮ್ಮಸಂದ್ರದ ಕೋಟಿಲಿಂಗ ದೇಗುಲದ ಕಾರ್ಯದರ್ಶಿ ಕೆ.ವಿ.ಕುಮಾರಿ ಹಾಗೂ ಲಿಂಗೈಕ್ಯ ಕಮಲಸಾಂಭವ ಶಿವಮೂರ್ತಿ ಸ್ವಾಮೀಜಿಗಳ ಪುತ್ರ ಡಾ.ಶಿವಪ್ರಸಾದ್‌ರ ನಡುವೆ ಕರಪತ್ರಗಳ ಪೈಪೋಟಿ ಜೋರಾಗಿದೆ.

ದೇಗುಲದಲ್ಲಿ ಕೆ.ವಿ.ಕುಮಾರಿ ಹಾಗೂ ಡಾ.ಶಿವಪ್ರಸಾದ್‌ ದೇಗುಲದಲ್ಲಿ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿರುವುದು ಈ ಕರಪತ್ರಗಳಿಂದ ವ್ಯಕ್ತವಾಗುತ್ತದೆ. ಕೆ.ವಿ.ಕುಮಾರಿ ದೇಗುಲದಲ್ಲಿ ಪಾರ್ಕಿಂಗ್‌ ಹಾಗೂ ಫೋಟೋ ಸೆರೆಹಿಡಿಯುವ ಬಗ್ಗೆ ಹರಾಜು ಕರಪತ್ರ ಹೊರಡಿಸಿದರೆ, ಡಾ.ಶಿವಪ್ರಸಾದ್‌ ದೇಗುಲದ ಆವರಣದಲ್ಲಿ ಮಿನಿ ಕ್ಲಿನಿಕ್‌ ಆರಂಭಕ್ಕೆ ಪ್ರಯತ್ನ ನಡೆಸುತ್ತಿದ್ದು, ಕರಪತ್ರ ವಿತರಣೆ ಮಾಡಲಾಗುತ್ತಿದೆ.

ಹಾಗೆಯೇ ದೇಗುಲದಲ್ಲಿ ಹಲವು ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಶ್ರೀಗಳ ಪುತ್ರ ಡಾ.ಶಿವಪ್ರಸಾದ್‌ ಎತ್ತಂಗಡಿ ಮಾಡಿಸುವುದು ಮತ್ತು ಶ್ರೀಗಳ ಪುತ್ರ ಎಂಬ ಕಾರಣಕ್ಕೆ ದೇಗುಲದಲ್ಲಿ ಅಧಿಕಾರ ನಡೆಸುತ್ತಿರುವುದು ಕೆ.ವಿ.ಕುಮಾರಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಸ್ತುತ ಕೆ.ವಿ.ಕುಮಾರಿ ಹಾಗೂ ಡಾ.ಶಿವಪ್ರಸಾದ್‌ ನಡುವೆ ಅಧಿಕಾರಕ್ಕಾಗಿ ಪೈಪೋಟಿ ನಡೆಯುತ್ತಿದೆ. ಸದ್ಯಕ್ಕೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಚುನಾವಣಾ ಆಯೋಗ, ಜಿಲ್ಲಾ ಆರೋಗ್ಯಾಧಿಕಾರಿಗಳ ಅನುಮತಿ ಪಡೆಯುವ ಮುನ್ನವೇ ಕರಪತ್ರ ಹೊರಡಿಸಿ, ವಿವಾದಿತ ಸ್ಥಳದಲ್ಲಿ ವೈದ್ಯಶಾಲೆ ಆರಂಭಿಸುತ್ತಿದ್ದಾರೆಂದು ತಿಳಿದು ಬಂದಿದೆ.

ಕೆ.ವಿ.ಕುಮಾರಿ 30 ವರ್ಷಗಳಿಂದಲೂ ದೇವಾಲಯದ ಟ್ರಸ್ಟ್‌ನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದು, 2004ರಲ್ಲಿ ಶ್ರೀಗಳು ದೇವಾಲಯದ ಸಮಸ್ತ ಆಸ್ತಿ ವಿಲ್‌ ಬರೆದಿದ್ದಾರೆ. 30 ವರ್ಷಗಳ ನಂತರ ಇದ್ದಕ್ಕಿದ್ದಂತೆ ಶ್ರೀಗಳ ಪುತ್ರ ಡಾ.ಶಿವಪ್ರಸಾದ್‌ ಶ್ರೀಗಳು ಲಿಂಗೈಕ್ಯರಾದ ನಂತರ ಏಕಾಏಕಿ ಬಂದು ಅಧಿಕಾರ ಚಲಾಯಿಸುತ್ತಿದ್ದಾರೆ. ದೇಗುಲದಲ್ಲಿ ಹೆಚ್ಚು ಆದಾಯ ತರುವ ಪಾರ್ಕಿಂಗ್‌ ಸ್ಥಳ, ಕಳೆದ ವರ್ಷ 20 ಲಕ್ಷ ರೂ.ಗೆ ದಾಮೋದರರೆಡ್ಡಿ ಎಂಬುವವರಿಗೆ ಗುತ್ತಿಗೆ ನೀಡಿದ್ದರು.

ಗುತ್ತಿಗೆದಾರ ದಾಮೋದರರೆಡ್ಡಿ ಅವಧಿ ಮುಗಿದಿದ್ದು, ದೇವಾಲಯದ ಕಾರ್ಯದರ್ಶಿ ಕೆ.ವಿ.ಕುಮಾರಿ ಮಾ.15ರಂದು ಸಾರ್ವಜನಿಕರ ಮೂಲಕ ಹರಾಜು ಕರೆದಿರುವುದರಿಂದ ಹಾಗೂ ವಿವಾದಿತ ಸ್ಥಳವಾಗಿರುವ ದೇವಾಲಯದಲ್ಲಿ ಕ್ಲಿನಿಕ್‌ ಆರಂಭಿಸುತ್ತಿರುವುದರಿಂದ ಮತ್ತೆ ದೇಗುಲದಲ್ಲಿ ಗೊಂದಲ ಹೆಚ್ಚಾಗಲು ಕಾರಣವಾಗುತ್ತಿದೆ. ಈಗಾಗಲೇ ನಾಲ್ವರ ಮೇಲೆ ಸೆಕ್ಷನ್‌ 197 ಜಾರಿಯಲ್ಲಿದ್ದರೂ ಲೆಕ್ಕಿಸದೇ ವಿವಾದ ಸೃಷ್ಟಿ ಮಾಡುತ್ತಿರುವುದರಿಂದ ಪೊಲೀಸ್‌ ಇಲಾಖೆ ಎಲ್ಲರ ಮೇಲೂ ನಿಗಾ ಇಟ್ಟಿದೆ ಎನ್ನಲಾಗಿದೆ.

ಇಬ್ಬರ ನಡುವೆ ವಿವಾದ ಏರ್ಪಟ್ಟಿರುವುದರಿಂದ ಮಹಾಶಿವರಾತ್ರಿ ಮುನ್ನವೇ ಜಿಲ್ಲಾಡಳಿತ ಆಡಳಿತಾಧಿಕಾರಿಗಳನ್ನು ನೇಮಿಸಲು ಪ್ರಯತ್ನ ಮಾಡಿರುವುದಕ್ಕೆ ಜಿಲ್ಲೆಯ ಪ್ರಮುಖ ರಾಜಕಾರಣಿಯೊಬ್ಬರ ಕೈವಾಡ ಇದ್ದು, ಇವರ ಒತ್ತಡಕ್ಕೆ ಮಣಿದಿರುವುದರಿಂದ ಜಿಲ್ಲಾಡಳಿತ ಮುಜರಾಯಿ ಇಲಾಖೆಗೆ ಸೇರಿಸುವುದನ್ನು ಕೈಬಿಟ್ಟಿದೆ ಎನ್ನಲಾಗಿದೆ.

ಮನೆ ಬದಲಾಯಿಸಿದ ಪಿಎಸ್‌ಐ?: ದೇಗುಲದ ಹುಂಡಿಗಳ ಬೀಗದ ಕೈಗಳು ಕಾರ್ಯದರ್ಶಿ ಕೆ.ವಿ.ಕುಮಾರಿ ಬಳಿ ಇದ್ದು, ಇವರನ್ನು ಕೇಳದೇ ಏಕಾಏಕಿಯಾಗಿ ರಾತ್ರಿ ವೇಳೆ 2 ಬಾರಿ ಹುಂಡಿಗಳನ್ನು ಡಾ.ಶಿವಪ್ರಸಾದ್‌ ಒಡೆದು ಹಣ ದೋಚಿರುವ ಬಗ್ಗೆ ಬೇತಮಂಗಲ ಠಾಣೆಯಲ್ಲಿ ದೂರು ನೀಡಿದ್ದರೂ ದಾಖಲಿಸದೇ ನಿರ್ಲಕ್ಷ್ಯವಹಿಸಲಾಗಿದೆ. ದೇವಾಲಯದ ಗೊಂದಲ ಸೃಷ್ಟಿಯಾಗಲು ಕುಮ್ಮಕ್ಕು ನೀಡುತ್ತಿರುವ ಮುಖಂಡರೊಬ್ಬರ ಮನೆಯಲ್ಲಿ ಬಾಡಿಗೆಗೆ ಇರುವ ಇಲ್ಲಿನ ಸಬ್‌ ಇನ್ಸ್‌ಪೆಕ್ಟರ್‌ ಸುನೀಲ್‌, ದೇವಾಲಯದ ವಿವಾದದಿಂದ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮನೆಯನ್ನು ಬೇರೆಡೆಗೆ ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ.

ಅನುಮತಿ ಇಲ್ಲದಿದ್ದರೆ ಕ್ರಮ: ಪ್ರಸ್ತುತ ಲೋಕಸಭೆ ಚುನಾವಣೆ ನೀತಿ ಸಂಹಿತಿ ಜಾರಿಯಲ್ಲಿರುವುದರಿಂದ ಸಾಮಾಜಿಕ, ಧಾರ್ಮಿಕ ಸಭೆ ಸಮಾರಂಭ ಹಾಗೂ ಇತರೆ ಮದುವೆ ಕಾರ್ಯಕ್ರಮಗಳನ್ನು ಯಾರೇ ನಡೆಸಬೇಕಾದರೂ ತಹಶೀಲ್ದಾರ್‌ ಹಾಗೂ ಚುನಾವಣಾಧಿಕಾರಿಗಳ ಅನುಮತಿ ಕಡ್ಡಾಯ.

ಶ್ರೀಕೋಟಿಲಿಂಗ ದೇಗುಲದಲ್ಲಿ ಕ್ಲಿನಿಕ್‌ ನೂತನವಾಗಿ ಆರಂಭಿಸಬೇಕಾದರೆ ಸಂಬಂಧಪಟ್ಟ ಆರೋಗ್ಯ ಇಲಾಖೆ ಹಾಗೂ ಚುನಾವಣೆ ಆಯೋಗದ ಅನುಮತಿ ಕಡ್ಡಾಯವಾಗಿರಬೇಕು. ಹಾಗೆಯೇ ದೇಗುಲದಲ್ಲಿ ಹರಾಜು ನಡೆಸಬೇಕಾದರೂ ಇಲಾಖೆ ಅನುಮತಿ ಅಗತ್ಯ. ಇವರಿಬ್ಬರೂ ಅನುಮತಿ ಇಲ್ಲದೆ, ನಡೆಸಿದ್ದಲ್ಲಿ ಚುನಾವಣಾ ನೀತಿ ಸಂಹಿತೆ ಪ್ರಕಾರ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಕೆಜಿಎಫ್ ತಹಶೀಲ್ದಾರ್‌ ಕೆ.ರಮೇಶ್‌ ತಿಳಿಸಿದರು.

ಕಮ್ಮಸಂದ್ರದ ಶ್ರೀಕೋಟಿಲಿಂಗ ದೇವಾಲಯದ ಆವರಣದಲ್ಲಿ ಕ್ಲಿನಿಕ್‌ ಆರಂಭಿಸುವ ಬಗ್ಗೆ ಡಾ.ಶಿವಪ್ರಸಾದ್‌ ಮಾ.12 ರಂದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಪ್ರಸ್ತುತ ಲೋಕಸಭೆ ಚುನಾವಣೆ ಘೋಷಣೆಯಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಆರೋಗ್ಯ ಇಲಾಖೆ ಅನುಮತಿ ಕಡ್ಡಾಯವಾಗಿದ್ದು ಹೊಸದಾಗಿ ಕ್ಲಿನಿಕ್‌ ಆರಂಭಿಸಲು ಅನುಮತಿ ನೀಡಲು ಸಮಿತಿಯಿದೆ. ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿದ್ದು  ಅನುಮತಿ ಇಲ್ಲದೇ ಪ್ರಾರಂಭಿಸಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು.
-ಡಾ.ವಿಜಯಕುಮಾರ್‌, ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿ  

* ಎಂ.ಸಿ.ಮಂಜುನಾಥ್‌


ಈ ವಿಭಾಗದಿಂದ ಇನ್ನಷ್ಟು

  • ಕೋಲಾರ: ದಕ್ಷಿಣ ಕಾಶಿ ಎಂದೇ ಖ್ಯಾತವಾಗಿರುವ ನಗರ ಹೊರವಲಯದ ಅಂತರಗಂಗೆಯಲ್ಲಿ ಮಂಗಳವಾರ ರಾತ್ರಿ ನಡೆದ ಶಿವ ಲಕ್ಷ ದೀಪೋತ್ಸವ ಮತ್ತು ತೆಪ್ಪೋತ್ಸವ ನೋಡಲು ಸಹಸ್ರಾರು...

  • ಟೇಕಲ್‌: ಕಳೆದ ವಾರ 60 ರಿಂದ 80 ರೂ. ಇದ್ದ ಈರುಳ್ಳಿ ಬೆಲೆ ಈಗ 1 ಕೆ.ಜಿ. 90 ರೂ.ರಿಂದ 160 ರೂ.ವರೆಗೂ ಮಾರಾಟವಾಗುತ್ತಿದ್ದು, ಗ್ರಾಮೀಣ ಜನರು ತತ್ತರಿಸಿದ್ದಾರೆ. ಈರುಳ್ಳಿ ಬೆಲೆ...

  • ಮುಳಬಾಗಿಲು: ನಗರಸಭೆ ವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಸಂಬಂಧ ಈಗಾಗಲೇ ತಾಲೂಕು ಆಡಳಿತ 5 ಕಿ.ಮೀ. ವ್ಯಾಪ್ತಿಯನ್ನು ನಿರ್ಧರಿಸಿದೆ. ಆದರೆ, ನಿಗದಿ ಮಾಡಿರುವ ವ್ಯಾಪ್ತಿಗೆ...

  • ಕೋಲಾರ: ಜಿಲ್ಲೆಯಲ್ಲಿ 6 ಖರೀದಿ ಕೇಂದ್ರ ತೆರೆದು ಪ್ರತಿ ಕ್ವಿಂಟಾಲ್‌ಗೆ 3150 ರೂ. ಬೆಂಬಲ ಬೆಲೆ ನೀಡಿ ರೈತರಿಂದ ರಾಗಿ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಜೆ....

  • ಮುಳಬಾಗಿಲು: ಹಾಲಿನ ಉಷ್ಣಾಂಶ 28 ಡಿಗ್ರಿ ಬರಲಿಲ್ಲವೆಂದು ಚಿಕ್ಕಗೊಲ್ಲಹಳ್ಳಿ ಗ್ರಾಮದಲ್ಲಿ ಉತ್ಪಾದನೆಯಾಗುವ 6 ಕ್ಯಾನ್‌ ಹಾಲನ್ನೇ ತೆಗೆದುಕೊಳ್ಳದ ಸಂಘದ ಕಾರ್ಯವೈಖರಿ...

ಹೊಸ ಸೇರ್ಪಡೆ