ರಾಜಕಾರಣಿಗಳ ಇಷ್ಟಾನುಸಾರ ಸಾಲ ವಿತರಣೆ

ಕೆಲವು ತಾಲೂಕಿಗೆ ಹೆಚ್ಚು ಸಾಲ ವಿತರಣೆ • ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ನಡವಳಿಕೆ ಬಗ್ಗೆ ಸಂಸದ ಆಕ್ಷೇಪ

Team Udayavani, Sep 2, 2019, 3:47 PM IST

ಬಂಗಾರಪೇಟೆ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಮ್ಮ ಇಷ್ಟಾನುಸಾರ, ಆಯ್ದ ರಾಜಕಾರಣಿಗಳು ಹಾಗೂ ಕೆಲವೇ ತಾಲೂಕಿನ ಮಹಿಳಾ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ಸಾಲ ವಿತರಣೆ ಮಾಡುತ್ತಿದೆ. ಅಲ್ಲದೆ, ಕಾರ್ಯಕ್ರಮಗಳಿಗೂ ತಮ್ಮನ್ನು ಆಹ್ವಾನಿಸುತ್ತಿಲ್ಲ ಎಂದು ಸಂಸದ ಎಸ್‌.ಮುನಿಸ್ವಾಮಿ ಮೊದಲ ಬಾರಿಗೆ ಆಕ್ಷೇಪ ವ್ಯಕ್ತಪಡಿಸಿರುವುದು, ರಾಜಕೀಯ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಆರು ವರ್ಷಗಳ ಹಿಂದೆ ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್‌, ಬ್ಯಾಲಹಳ್ಳಿ ಗೋವಿಂದಗೌಡ ಅಧ್ಯಕ್ಷರಾದ ಮೇಲೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಅಧ್ಯಕ್ಷರು ತಮ್ಮ ಇಷ್ಟಾನುಸಾರ ಆಡಳಿತ ನಡೆಸುತ್ತಿದ್ದಾರೆ ಎಂದು ಸಂಸದ ಎಸ್‌.ಮುನಿಸ್ವಾಮಿ ಆಕ್ಷೇಪವೆತ್ತಿದ್ದಾರೆ.

ರಾಜಕೀಯ ಜಿದ್ದಾಜಿದ್ದಿ: ಸತತ 7 ಬಾರಿ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಲು ಪಣತೊಟ್ಟಿದ್ದ ಕ್ಷೇತ್ರದ ಕೆಎಚ್ಎಂ ವಿರೋಧಿಗಳು, ಬಿಜೆಪಿಯ ಎಸ್‌.ಮುನಿಸ್ವಾಮಿ ಅವರನ್ನು ಬೆಂಬಲಿಸಿದ್ದರು. ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಬಿಜೆಪಿಗೆ ಲೀಡ್‌ ಬಂದಿತ್ತು. ಆದರೆ, ಕೆಜಿಎಫ್ ಕ್ಷೇತ್ರದಲ್ಲಿ ಮಾತ್ರ ಹಿನ್ನಡೆಯಾಗಿತ್ತು. ಇದಕ್ಕೆ ಡಿಸಿಸಿ ಬ್ಯಾಂಕ್‌ನಿಂದ ನೀಡಿದ್ದ 200 ಕೋಟಿ ರೂ. ಸಾಲವೇ ಕಾರಣ ಎನ್ನುವ ಆರೋಪ ಸಂಸದ ಎಸ್‌.ಮುನಿಸ್ವಾಮಿ ಅವರದ್ದು.

ಕೆಲವು ತಾಲೂಕಿಗೆ ಕಡಿಮೆ ಸಾಲ: ಡಿಸಿಸಿ ಬ್ಯಾಂಕ್‌ಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳ 11 ತಾಲೂಕು ಸೇರಲಿದ್ದು, ಇದರಲ್ಲಿ ಕೆಜಿಎಫ್, ಬಂಗಾರಪೇಟೆ, ಕೋಲಾರ ಮತ್ತು ಶ್ರೀನಿವಾಸಪುರ ತಾಲೂಕಿಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ. ಇಲ್ಲಿನ ಶಾಸಕರ ಸಮ್ಮುಖದಲ್ಲಿ ಸಾಲ ವಿತರಣೆ ನಡೆಯುತ್ತಿದೆ. ಈ ಮೂಲಕ ಹೆಚ್ಚಿನ ಪ್ರಚಾರ ಪಡೆದುಕೊಳ್ಳಲಾಗುತ್ತಿದೆ. ಉಳಿದ 7 ತಾಲೂಕುಗಳಲ್ಲಿ ಕಡಿಮೆ ಪ್ರಮಾಣದ ಸಾಲ ವಿತರಣೆ ಜೊತೆಗೆ ಇಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹಾಗೂ ಅಲ್ಲಿನ ಸ್ಥಳೀಯ ಶಾಸಕರು ಹೋಗದೇ ರಾಜಕೀಯ ಮಾಡಲಾಗುತ್ತಿದೆ ಎಂಬುದು ಮುನಿಸ್ವಾಮಿ ದೂರು.

ಏಕೆ ಕರೆಯುತ್ತಿಲ್ಲ?: ಬಂಗಾರಪೇಟೆ ತಾಲೂಕಿನ ಬೂದಿಕೋಟೆಯಲ್ಲಿ ಶನಿವಾರ ಹಿಂದಿನಂತೆ ಮಹಿಳಾ ಸಂಘಗಳಿಗೆ ಸಾಲ ವಿತರಣೆ ಮಾಡಲಾಯಿತು. ಆದರೆ, ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರನ್ನು ಬಿಟ್ಟರೆ, ಸಂಸದ ಎಸ್‌.ಮುನಿಸ್ವಾಮಿ ಅವರಿಗೆ ಆಹ್ವಾನ ನೀಡಿರಲಿಲ್ಲ. ಬೂದಿಕೋಟೆ ವಿಎಸ್‌ಎಸ್‌ಎನ್‌ ಅಧ್ಯಕ್ಷ ಸೀತಾರಾಮಪ್ಪ ಬಿಜೆಪಿ ಬೆಂಬಲಿತರಾಗಿದ್ದು, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ತಾಲೂಕನವರೇ ಆಗಿರುವುದರಿಂದ ಸಂಸದ ಎಸ್‌.ಮುನಿಸ್ವಾಮಿಗೆ ಆಹ್ವಾನ ನೀಡಿದ್ದರು. ಈ ಸಂದರ್ಭದಲ್ಲಿ ಸಂಸದರು, ಈ ವರೆಗೂ ಇಂತಹ ಕಾರ್ಯಕ್ರಮಗಳಿಗೆ ತಮ್ಮನ್ನು ಏಕೆ ಕರೆಯುತ್ತಿಲ್ಲ ಎಂದು ಕೆಲವರನ್ನು ಪ್ರಶ್ನೆ ಮಾಡಿದ್ದಾರೆ.

ಡಿಸಿಸಿ ಬ್ಯಾಂಕ್‌ ವಿಎಸ್‌ಎಸ್‌ಎನ್‌ ಮೂಲಕ ಸಾಲ ವಿತರಣೆ ಮಾಡುತ್ತಿದೆ. ಇಲ್ಲಿನ ಆಡಳಿತ ಮಂಡಳಿ ಸದಸ್ಯರು ಕಾರ್ಯಕ್ರಮ ಆಯೋಜಿಸಿ ಶಾಸಕರು ಸೇರಿ ಕೆಲ ಮುಖಂಡರನ್ನು ಕರೆಯಿಸಿ ಸಾಲ ವಿತರಣೆ ಮಾಡಿಸುತ್ತಿದ್ದು, ಇದು ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಅಗುತ್ತಿದೆ. ಇದನ್ನು ಗಮನಿಸುತ್ತಿದ್ದ ಸಂಸದ ಎಸ್‌.ಮುನಿಸ್ವಾಮಿ ಬ್ಯಾಂಕ್‌ ನಮ್ಮ ವ್ಯಾಪ್ತಿಗೆ ಬರುವುದಿಲ್ಲವೇ, ಶಿಷ್ಠಾಚಾರ ಪಾಲನೆ ಏಕೆ ಮಾಡುತ್ತಿಲ್ಲ ಎಂದು ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ರವಿ ಅವರನ್ನು ಕೇಳಿದ್ದಾರೆ ಎನ್ನಲಾಗಿದೆ.

ಡಿಸಿಸಿ ಬ್ಯಾಂಕ್‌ಗೆ ಕೇವಲ ಆಡಳಿತ ಮಂಡಳಿಯಷ್ಟೇ ಅಲ್ಲ, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಹಕಾರಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಂಬಲಬೇಕು. ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಸಂಸದರನ್ನು ಇದುವರೆಗೂ ಸಾಲ ವಿತರಣೆ ಸೇರಿ ಯಾವುದೇ ಕಾರ್ಯಕ್ರಮಕ್ಕೆ ಏಕೆ ಆಹ್ವಾನ ನೀಡುತ್ತಿಲ್ಲ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕರಿಗೆ ಹಾಗೂ ಸಂಬಂಧಪಟ್ಟ ವಿಎಸ್‌ಎಸ್‌ಎನ್‌ಗಳ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಸದರು ನೇರವಾಗಿ ಪ್ರಶ್ನಿಸಿದ್ದಾರೆ.

 

● ಎಂ.ಸಿ.ಮಂಜುನಾಥ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ