ಮಳೆ ಸಂತ್ರಸ್ತರಿಗೆ ಪರಿಹಾರ ನೀಡಲು ಜಿಲ್ಲಾಡಳಿತ ಕ್ರಮ

Team Udayavani, Apr 21, 2019, 8:43 PM IST

ಕೋಲಾರ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಬಿದ್ದಿರುವ ಮಳೆಯಿಂದಾಗಿ ಹಲವೆಡೆ ಹಾನಿಯುಂಟಾಗಿದ್ದು,ರೈತರಿಗೆ ನಷ್ಟ ಪರಿಹಾರ ಕಲ್ಪಿಸುವುದಾಗಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

ಶನಿವಾರ ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿನ ಲೋಕಸಭಾ ಚುನಾವಣೆ ಮತಯಂತ್ರಗಳನ್ನು ಸಂಗ್ರಹಿಸಿರುವ ಭದ್ರತಾ ಕೊಠಡಿಗೆ
ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಳೆಯಿಂದಾಗಿ ಶ್ರೀನಿವಾಸಪುರದಲ್ಲಿ ಮಾವಿನ ಕಾಯಿ ಉದುರಿಹೋಗಿದ್ದು, ಮಾವು ಬೆಳೆ ನಷ್ಟವಾಗಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಪ್ರಮಾಣವನ್ನು ಲೆಕ್ಕ ಹಾಕಿ ವರದಿ ನೀಡುವಂತೆ ತೋಟಗಾರಿಕಾ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಬಂಗಾರಪೇಟೆ ತಾಲೂಕಿನ ಹಲವು ಕಡೆಗಳಲ್ಲಿ ಹೆಚ್ಚಾಗಿ ಮಳೆಯಾಗಿದ್ದು, ಮನೆಗಳು ಕುಸಿದಿವೆ. ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ. ಮತ್ತೂಂದು ಕಡೆ ಫೌಲಿó ಫಾರಂಗೆ ಹಾನಿಯಾಗಿರುವ ಬಗ್ಗೆ ತಿಳಿದುಬಂದಿದ್ದು, ಕಂದಾಯ ಅಧಿಕಾರಿಗಳಿಂದ ವರದಿ ಪಡೆದು ನಷ್ಟಪರಿಹಾರವನ್ನು ಜಿಲ್ಲಾಡಳಿತದಿಂದ ಮಂಜೂರು ಮಾಡುವುದಾಗಿ ತಿಳಿಸಿದರು.

ಸ್ಟ್ರಾಂಗ್‌ರೂಂಗೆ ಪ್ರತಿದಿನ ಡೀಸಿ, ಎಸ್ಪಿ ಭೇಟಿ:
ಲೋಕಸಭೆ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದು, ಸ್ಟ್ರಾಂಗ್‌ರೂಂನಲ್ಲಿ ಮತಯಂತ್ರಗಳು ಭದ್ರವಾಗಿದೆ. ಭದ್ರತೆಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಸ್ಟ್ರಾಂಗ್‌ರೂಂ ಬಳಿಗೆ ಚುನಾವಣಾಧಿಕಾರಿಯೂ ಆಗಿರುವ ಡೀಸಿ ಜೆ.ಮಂಜುನಾಥ್‌ ಹಾಗೂ ಎಸ್ಪಿ ಡಾ.ರೋಹಿಣಿ ಕಟೋಚ್‌ ಸೆಪಟ್‌ ಪ್ರತಿದಿನ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.

ಶನಿವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ  ಜೆ.ಮಂಜುನಾಥ್‌, ಮತಯಂತ್ರಗಳು ಸ್ಟ್ರಾಂಗ್‌
ರೂಂನಲ್ಲಿ ಭದ್ರವಾಗಿದ್ದು, ಅವುಗಳನ್ನು ಮೇ 23ರ ಮತ ಎಣಿಕೆವರೆಗೆ ಕಾಪಾಡಿಕೊಳ್ಳಬೇಕಾಗಿದೆ.

ನಾನು ಮತ್ತು ಎಸ್ಪಿ ಪ್ರತಿ ದಿನ 1-2 ಬಾರಿ ಭೇಟಿ ನೀಡುತ್ತಿದ್ದೇವೆ. ಭದ್ರತಾ ಕೊಠಡಿಗೆ ಸೂಕ್ತ ಭದ್ರತೆ ಕಲ್ಪಿಸುವ ಸಲುವಾಗಿ ಕೇಂದ್ರ ಮತ್ತು ಸ್ಥಳೀಯ 120 ಮಂದಿ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು
ತಿಳಿಸಿದರು. ಸಿಬ್ಬಂದಿಗೆ ಹೊರಗಿನಿಂದ ಊಟ, ತಿಂಡಿ ವ್ಯವಸ್ಥೆ ಮಾಡಿಲ್ಲ, ಇಲ್ಲಿಯೇ ಸಿದ್ಧಪಡಿಸಿಕೊಳ್ಳುವುದರಿಂದ ಅಡುಗೆ ತಯಾರಿಗೆ ಬೇಕಾದ ಸಿಲಿಂಡರ್‌, ನೀರು ಸೇರಿದಂತೆ ಅಗತ್ಯ ಸೌಲಭ್ಯ
ಕಲ್ಪಿಸಲಾಗಿದ್ದು, ವಸತಿ ಸೌಕರ್ಯ ಮಾಡಿರುವುದಾಗಿ
ಹೇಳಿದರು.

ಮತಯಂತ್ರ ಕೇಂದ್ರದ ಒಳ ಮತ್ತು ಹೊರಗೆ 62 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 24/7 ರೆಕಾರ್ಡ್‌ ಆಗುತ್ತಿರುತ್ತದೆ. ಸಿಬ್ಬಂದಿ 3 ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಭ್ಯರ್ಥಿ ಕಡೆಯವರೂ ಇಲ್ಲಿ ಇರುವುದಕ್ಕೆ ಅವಕಾಶವಿದೆ. ಸಾರ್ವಜನಿಕರೂ ಸಿಸಿಟಿವಿ ದೃಶ್ಯಾವಳಿ ನೋಡಬಹುದಾಗಿದೆ ಎಂದರು. ಯುವ ಮತದಾರರ ಮತದಾನ
ಪ್ರಮಾಣ ಸೇರಿ ಬೂತ್‌ ಮಟ್ಟದ ಪ್ರಮಾಣವನ್ನು ಮತ ಎಣಿಕೆ ಬಳಿಕವಷ್ಟೇ ನೀಡಲಾಗುವುದು ಎಂದು ತಿಳಿಸಿದರು.ಮಳೆ ಬರುವ ಸಂಭವವಿದ್ದು, ನೀರು ಸೋರಿಕೆ ಮತ್ತಿತರ ಸಮಸ್ಯೆಗಳಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ