ಬೇಡಿಕೆಗಳ ಈಡೇರಿಕೆಗೆ ರೈತ ಸಂಘಟನೆಗಳಿಂದ ಒತ್ತಾಯ

Team Udayavani, Oct 29, 2019, 4:33 PM IST

ಮುಳಬಾಗಿಲು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಾಲೂಕಿನ ಎನ್‌.ವಡ್ಡಹಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿಭಟನೆ ನಡೆಸಿ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಜಿಲ್ಲೆಯಲ್ಲಿ ಕೃಷಿಗೆ ಯಾವುದೇ ಶಾಶ್ವತ ನೀರಾವರಿ ಮೂಲಗಳಿಲ್ಲ. ಹೀಗಾಗಿ ಅಂತ ರ್ಜಲಮಟ್ಟ ಪಾತಾಳಕ್ಕೆ ಇಳಿದಿದೆ. ಆದರೂ ರೈತರು ಲಕ್ಷಾಂತರ ರೂ.ಗಳು ಸಾಲ ಮಾಡಿ, ಸಾವಿರಾರು ಅಡಿಗಳ ಆಳದವರೆಗೂ ಕೊಳವೆಬಾವಿ ಕೊರೆಸಿ ಸಿಗುವ ಅಲ್ಪ ಸ್ವಲ್ಪ ನೀರಿನಿಂದಲೇ ರೈತರು ಕಷ್ಟ ಪಟ್ಟು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವಲ್ಲಿ ಅಧಿಕಾರಿಗಳು ಹಾಗೂ ರಾಜಕೀಯ ಆಡಳಿತ ಮಂಡಳಿ ಸಂಪೂರ್ಣವಾಗಿ ವಿಫ‌ಲವಾಗಿದೆ ಎಂದು ಆರೋಪಿಸಿದರು.

ಮೂಲ ಸೌಲಭ್ಯಗಳನ್ನು ಕಲ್ಪಿಸಿ: ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಿಡಿತಕ್ಕೆ ಬಿಟ್ಟು ರೈತರನ್ನು ಶೋಷಣೆ ಮಾಡುವುದನ್ನು ತಪ್ಪಿಸುವಲ್ಲಿ ಕ್ರಮಕೈಗೊಳ್ಳದೇ ಇರುವುದು ಅನ್ನದಾತನಿಗೆ ಮಾಡಿದ ದ್ರೋಹವಾಗಿದೆ. ಅಲ್ಲದೇ ಎನ್‌. ವಡ್ಡಹಳ್ಳಿ ಮಾರುಕಟ್ಟೆಯಲ್ಲಿ ಬಾಕ್ಸ್‌ ಗಾತ್ರ ಹೆಚ್ಚಳ ಮಾಡಲಾಗಿದೆ. ಜತೆಗೆ ಸೂಕ್ತವಾದ ಮೂಲಸೌಲಭ್ಯಗಳಿಲ್ಲ. ಹೀಗಾಗಿ ರೈತರು ಮತ್ತು ಕೂಲಿ ಕಾರ್ಮಿಕರು ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕುಡಿಯುವ ನೀರಿನ ಸೌಲಭ್ಯವಿಲ್ಲ. ಶೌಚಾಲಯಗಳಿಲ್ಲ. ಮಾರುಕಟ್ಟೆಯಲ್ಲಿ ಸ್ವತ್ಛತೆಯಿಲ್ಲದೆ, ತ್ಯಾಜ್ಯ ಸರಿಯಾದ ಸಮಯಕ್ಕೆ ತೆರವುಗೊಳಿಸದೆ ಕೊಳೆತು ಗಬ್ಬುನಾರುತ್ತಿದೆ. ಮತ್ತೂಂದೆಡೆ ಮಾರುಕಟ್ಟೆಯಲ್ಲಿ ಸಿಬ್ಬಂದಿಯಿಲ್ಲದೆ ಸರ್ಕಾರಕ್ಕೆ ಬರುವ ಲಕ್ಷಾಂತರ ರೂಪಾಯಿ ಆದಾಯ ಅಧಿಕಾರಿಗಳ ಜೇಬುಸೇರುತ್ತಿದೆ ಎಂದು ಆರೋಪಿಸಿದರು.

ದಲ್ಲಾಳಿಗಳ ಶೋಷಣೆ ತಪ್ಪಿಸಿ: ಮುಖ್ಯವಾಗಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುವ ಮಾರುಕಟ್ಟೆಯಲ್ಲಿ ಸಿ.ಸಿ. ಕ್ಯಾಮೆರಾ ವ್ಯವಸ್ಥೆಯಿಲ್ಲ. ಪೋಲಿಸ್‌ ಭದ್ರತೆ ವ್ಯವಸ್ಥೆಯಿಲ್ಲ. ಜೊತೆಗೆ ತರಕಾರಿ ತಂದ ರೈತರ 100 ಕೆ.ಜಿ.ಗೆ 6 ಕೆಜಿಯಂತೆ ದಲ್ಲಾಳಿಗಳು ಕಡಿತಗೊಳಿಸಿ ಶೋಷಣೆ ಮಾಡುತ್ತಿದ್ದಾರೆ. ಮಂಡಿ ಮಾಲಿಕರು ಪರವಾನಗಿ ಪಡೆದಿರುವ ರಸೀದಿ ನೀಡುತ್ತಿಲ್ಲ. ಬೀಳಿ ಚೀಟಿ ದಂಧೆ ಮೀಟರ್‌ ಬಡ್ಡಿಯಂತೆ 100ಕ್ಕೆ 10 ರೂ. ಕಮಿಷನ್‌ ಪಡೆಯುತ್ತಿದ್ದಾರೆ. ಆಡಳಿತ ಮಂಡಳಿ ಮೌನವಾಗಿರುವ ಮೂಲಕ ಹಗಲು ದರೋಡೆಗೆ ಸಹಕಾರ ನೀಡಿದೆ. ಎಪಿಎಂಸಿ ನಿಯಮದಂತೆ ಬಿಳಿ ಚೀಟಿ ನೀಡದೆ. ಎಪಿಎಂಸಿ ನಿಗದಿ ಪಡಿಸಿರುವ ರಸೀದಿಯನ್ನೇ ಕಡ್ಡಾಯವಾಗಿ ನೀಡಲು ಆದೇಶಿಸಬೇಕು. ರಸೀದಿ ನೀಡದ ಮಂಡಿಗಳ ಪರವಾನಗಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ಅಧ್ಯಕ್ಷ ಫಾರೂಕ್‌ ಪಾಷಾ ಮಾತನಾಡಿ, ರೈತರಿಗೆ ಎಪಿಎಂಸಿ ಕಾನೂನಿನಂತೆ ಅರಿವು ಮೂಡಿಸಲು ಪ್ರತಿ ನಿತ್ಯ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿ ಸೌಲಭ್ಯಗಳ ಬಗ್ಗೆ ರೈತರಿಗೆ ಜಾಗೃತಿಗೊಳಿಸಬೇಕು. ಎನ್‌. ವಡ್ಡಹಳ್ಳಿ ಮತ್ತು ಮುಳಬಾಗಿಲು ಮಾರುಕಟ್ಟೆಯಲ್ಲಿ ಅನದೀಕೃತವಾಗಿ ವಹಿವಾಟು ನಡೆಸುವ ದಲ್ಲಾಳಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು. ಎಲ್ಲಾ ಮಂಡಿಗಳಲ್ಲಿ ಕಂಪ್ಯೂಟರ್‌ ಯಂತ್ರಗಳನ್ನು ಮೂರು ತಿಂಗಳಿಗೊಮ್ಮೆ ತೂಕ ಮತ್ತು ಅಳತೆ ಇಲಾಖೆಯಿಂದ ಪರೀಕ್ಷಿಸಿ ತೂಕದಲ್ಲಿ ಮೋಸವಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಎಪಿಎಂಸಿ ಯ ಆವರಣದಲ್ಲಿ ತರಕಾರಿ ಮತ್ತು ಟೊಮೋಟೊಗೆ ಬೇರೆ ಬೇರೆ ಸ್ಥಳಾವಕಾಶ ಕಲ್ಪಿಸಿ, ಮಾರುಕಟ್ಟೆಯಲ್ಲಿ ಗೊಂದಲವಾಗದಂತೆ ಕ್ರಮ ಕೈಗೊಂಡು ರೈತನಿಗೆ ಬೆಲೆ ಕುಸಿತವಾಗದ ರೀತಿ ಕ್ರಮ ಕೈಗೊಳ್ಳಬೇಕು. ಕಡ್ಡಾಯವಾಗಿ ಮಾರುಕಟ್ಟೆ ಒಳಗಡೆ ತರಕಾರಿ ವಾಹನಗಳು ಎಂಟ್ರಿ ಆದ ತಕ್ಷಣ ಗೇಟ್‌ ಬಿಲ್‌ ನಮೂದಿಸಿ,ಸರ್ಕಾರಕ್ಕೆ ಬರುವ ಹಣ ಪೋಲಾಗದಂತೆ ತಡೆ  ಯಬೇಕು. ರೀಪೇರಿ ಆಗಿರುವ ಶುದ್ದ ಕುಡಿಯುವ ನೀರಿನ ಘಟಕವನ್ನು ಕೂಡಲೇ ಸರಿಪಡಿಸಬೇಕೆಂದು ಕಾರ್ಯದರ್ಶಿ ಹೇಮಲತಾಗೆ ಮನವಿ ಸಲ್ಲಿಸಿದರು.

ರಾಜೇಶ್‌ ಕಾಳೆ, ಜಿಲ್ಲಾದ್ಯಕ್ಷ ಮರಗಲ್‌ ಶ್ರೀನಿ ವಾಸ್‌, ಯಲುವಳ್ಳಿ ಪ್ರಭಾಕರ್‌, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಆನಂದ್‌ಸಾಗರ್‌, ರಂಜೀತ್‌ಕುಮಾರ್‌, ಹೆಬ್ಬಿಣಿ ಆನಂದರೆಡ್ಡಿ, ಲಾಯರ್‌ಮಣಿ, ಸುನಿಲ್‌, ಕೃಷ್ಣ, ಹರೀಶ್‌, ಚಲಪತಿ, ಕಲ್ಯಾಣ್‌, ಸುಪ್ರಿಂಚಲ, ಜುಬೇರ್‌ಪಾಷಾ, ಸುರೇಶ್‌, ಅಣ್ಣಹಳ್ಳಿ ಶ್ರೀನಿವಾಸ್‌, ನಾಗರಾಜ್‌, ಅಹಮದ್‌ ಪಾಷಾ, ಭರತ್‌, ಶಿವು, ಸುಧಾಕರ್‌, ಕಾವೇರಿ   ಸುರೇಶ್‌, ಮೇಲಾಗಾಣಿ ದೇವರಾಜ್‌, ವಿಜಯಪಾಲ್‌, ರಾಜಣ್ಣ, ಆಂಬ್ಲಿಕಲ್‌ ಮಂಜುನಾಥ್‌ ಪಾಲ್ಗೊಂಡಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ