ಮೊದಲ ದಲಿತ ಸಮ್ಮೇಳನಕ್ಕೆ ಚಿನ್ನದ ನಾಡು ಸಜ್ಜು

ನಗರದ ಪ್ರಮುಖ ವೃತ್ತಗಳಿಗೆ ವಿದ್ಯುತ್‌ ದೀಪಾಲಂಕಾರ | ಬೃಹತ್‌ ವೇದಿಕೆ, ಪೆಂಡಾಲ್ ನಿರ್ಮಾಣ

Team Udayavani, Aug 17, 2019, 12:31 PM IST

ಕೋಲಾರ: ದಲಿತ ಚಳವಳಿಗಳ ಹುಟ್ಟೂರು, ಅತಿ ಹೆಚ್ಚು ದಲಿತರ ಜನಸಂಖ್ಯೆಯನ್ನು ಹೊಂದಿರುವ ಕೋಲಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ನಡೆಯುತ್ತಿರುವ ರಾಜ್ಯ ಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಚಿನ್ನದ ನಗರ ಸಜ್ಜಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪರಿಷತ್ತಿನ ಐದು ವರ್ಷಗಳ ಅಧಿಕಾರ ಅವಧಿಗೆ ಕೋರ್ಟ್‌ ತಡೆಯಾಜ್ಞೆ ತಂದ ನಂತರ ಸಮ್ಮೇಳನ ನಡೆಯುವ ಅನುಮಾನಗಳಿಗೆ ತೆರೆ ಬಿದ್ದಿದ್ದು, ಇದೀಗ ಎಲ್ಲಾ ಗೊಂದಲಗಳನ್ನು ಬಗೆಹರಿಸಿಕೊಂಡು ದಲಿತ ಸಾಹಿತ್ಯ ಸಮ್ಮೇಳನಕ್ಕೆ ಮುನ್ನುಡಿ ಬರೆಯಲು ಚಿನ್ನ, ಹಾಲು, ರೇಷ್ಮೆ ಖ್ಯಾತಿಯ ಕೋಲಾರ ಜಿಲ್ಲೆ ಸಜ್ಜಾಗಿದೆ.

ಕೋಲಾರ ಜಿಲ್ಲೆಗೆ ಅತಿ ಕಡಿಮೆ ಅವಧಿಯಲ್ಲಿ ಪ್ರಥಮ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ದಕ್ಕಿದಾಗ ಇಷ್ಟು ಕಡಿಮೆ ಅವಧಿಯಲ್ಲಿ ಸಿದ್ಧತೆ ಹೇಗೆ ಎಂಬ ಪ್ರಶ್ನೆ ಎದುರಾದರೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟಕರ ಇಚ್ಛಾಶಕ್ತಿ ಜೊತೆಗೆ ಕೇಂದ್ರ ಕಸಾಪ ಮತ್ತು ಜಿಲ್ಲಾಡಳಿತದ ಮಾರ್ಗದರ್ಶನ ಪಡೆದು ಸಮ್ಮೇಳನಕ್ಕೆ ಹಲವು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಭವಿಷ್ಯದ ದಾರಿದೀಪವಾಗಲಿ: ದಲಿತ ಹೋರಾಟಗಳ ತವರೂರು, ಚಳವಳಿಗಳ ತಮಟೆ ಸದ್ದಿಗೆ ಇಡೀ ದೇಶವನ್ನೇ ಅಲುಗಾಡಿಸುವ ಶಕ್ತಿ ಹೊಂದಿರುವ ಕೋಲಾರದಲ್ಲಿ ಮೊಟ್ಟ ಮೊದಲ ದಲಿತ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸ್ವಾಗತಾರ್ಹವಾಗಿದೆ. ಈ ಸಮ್ಮೇಳನ ದಲಿತರ ಜೀವನ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುವ ಹಾಗೂ ಭವಿಷ್ಯದ ಬಗ್ಗೆ ದಾರಿದೀಪವಾಗಲಿದೆ ಎಂಬ ನಿರೀಕ್ಷೆಯಲ್ಲಿ ಇಲ್ಲಿನ ಬುದ್ಧಿಜೀವಿಗಳು, ಚಿಂತಕರು ಲೆಕ್ಕ್ಕಾಚಾರ ಹಾಕಿದ್ದಾರೆ.

ಸಮಸ್ಯೆಗಳಿಗೆ ಪರಿಹಾರ ದೊರಕಲಿ: ಕೋಲಾರದಲ್ಲಿ ಶೋಷಿತ ಸಮುದಾಯಗಳ ಜೊತೆಗೆ ದಲಿತ ಸಮುದಾಯವೂ ಪಾಳೇಗಾರಿಕೆ ವ್ಯವಸ್ಥೆಯಲ್ಲಿ ನಲುಗಿರುವುದಕ್ಕೆ ಶತಮಾನಗಳ ಇತಿಹಾಸವಿದೆ. ವಾಸ್ತವ ನೆಲೆಗಟ್ಟಿನಲ್ಲಿ ಚಿಂತಿಸುವುದಾದರೆ ಇಂದಿಗೂ ಅವಮಾನ, ಅಸ್ಪೃಶ್ಯತೆ, ಜೀತ ಪದ್ಧತಿ, ಸಾಮಾಜಿಕ, ಆರ್ಥಿಕ, ರಾಜಕೀಯ ತಾರತಮ್ಯಗಳು ಈ ಸಮುದಾಯವನ್ನು ಕಾಡುತ್ತಿವೆ. ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಕೋಲಾರ ಜಿಲ್ಲೆಯ ಇತಿಹಾಸದ ಪುಟಗಳಲ್ಲಿ ಎಂದಿಗೂ ಮಾಸದ ಕಂಬಾಲಪಲ್ಲಿ ದಲಿತರ ನರಮೇಧ ಪ್ರಕರಣ ಮತ್ತೂಮ್ಮೆ ಈ ಸಮ್ಮೇಳನದಲ್ಲಿ ಪ್ರತಿಧ್ವನಿಸಲಿ ಎಂಬ ಆಶಯ ದಲಿತ ಬುದ್ಧಿಜೀವಿಗಳದಾಗಿದೆ.

ಕಠಿಣ ನಿರ್ಧಾರ ಪ್ರಕಟಿಸಲಿ: ದಲಿತರ ಅಭಿವೃದ್ಧಿಯೇ ಈ ಸಮ್ಮೇಳನದ ಮುಖ್ಯ ಉದ್ದೇಶವಾದರೆ ಇಂದು ದೇಶಾದ್ಯಂತ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು, ಅಸ್ಪೃಶ್ಯತೆ ಆಚರಣೆಗಳು ಮತ್ತೂಮ್ಮೆ ಈ ಸಮ್ಮೇಳನದಲ್ಲಿ ಸಾಹಿತಿಗಳ ಮೂಲಕ ಸದ್ದು ಮಾಡಲಿ ಎಂಬ ನಿರೀಕ್ಷೆಯೂ ಇದೆ. ಇಂತಹ ದುರ್ಘ‌ಟನೆಗಳಿಂದ ಹೊರಬರಲು ದಲಿತ ಸಮುದಾಯ ತೆಗೆದುಕೊಳ್ಳಬೇಕಾದ ಕಠಿಣ ನಿರ್ಧಾರಗಳನ್ನು ಈ ಸಮ್ಮೇಳನ ಪ್ರಕಟಿಸಲಿದೆ ಎಂದು ಹೇಳಲಾಗುತ್ತಿದೆ. ದಲಿತರ ಆರ್ಥಿಕ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ ತಾರತಮ್ಯಗಳ ಬಗ್ಗೆಯೂ ಸಮ್ಮೇಳನದ ಗೋಷ್ಠಿಗಳಲ್ಲಿ ಚರ್ಚೆಯಾಗಲಿದೆ. ಕೋಲಾರ ಜಿಲ್ಲೆಯ ದಲಿತರ, ಶೋಷಿತರ ಮಟ್ಟಿಗೆ 73ನೇ ಸ್ವಾತಂತ್ರ್ಯೋತ್ಸವ ಯಾರಿಗೆ ಬಂತು, ಎಲ್ಲಿಗೆ ಬಂತು ಎಂಬಂತಾಗಿದೆ. ಬಲಾಡ್ಯರ ರಾಜಕೀಯದಲ್ಲಿ ಸ್ವತಂತ್ರವಾಗಿ ರಾಜಕಾರಣ ಮಾಡಲಾಗದೆ ಮುಖ್ಯವಾಹಿನಿಗೆ ಬರಲಾಗದೆ ನರಳುತ್ತಿರುವ ದಲಿತ ಸಮುದಾಯಗಳಿಗೆ ಸಲಹೆ, ಸೂಚನೆ, ಮಾರ್ಗದರ್ಶನವನ್ನು ಈ ಸಮ್ಮೇಳನ ಮಾಡಲಿದೆಯೇ ಎಂಬುದು ಪ್ರಶ್ನಾರ್ಥಕವಾಗಿದೆ.

ರಾಜ್ಯ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ಟಿ.ಚನ್ನಯ್ಯ ಮಹಾದ್ವಾರದ ಡಾ.ಬಿ.ಆರ್‌.ಅಂಬೇಡ್ಕರ್‌ ವೇದಿಕೆಯಲ್ಲಿ ಡಾ.ಎಲ್.ಹನುಮಂತಯ್ಯ ಸಮ್ಮೇಳನಾಧ್ಯಕ್ಷತೆಯಲ್ಲಿ ರಾಜ್ಯದ ದಲಿತರ ಸ್ಥಿತಿಗಳ ಜೊತೆಗೆ ದಲಿತ ಚಳವಳಿಯ ಚಿಂತನೆಗಳ ಬಗ್ಗೆ ಸವಿಸ್ತಾರವಾದ ವಿಚಾರವಾದಿಗಳ, ಚಿಂತಕರ ಮಧ್ಯೆ ಮಹತ್ತರ ಚರ್ಚೆಗಳು ನಡೆಯಲಿದೆ.

ಹೊರ ಜಿಲ್ಲೆಗಳಿಂದ ಬರುವ ಪ್ರತಿನಿಧಿಗಳನ್ನು ಸಮ್ಮೇಳನ ವೇದಿಕೆಗೆ ಅತಿಥಿಗೃಹಗಳಿಗೆ ಕರೆತರಲು ಹೊಸ ಬಸ್‌ ನಿಲ್ದಾಣದಿಂದ ಆರು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮದವರಿಗೆ ಗಣ್ಯರಿಗೆ ಮತ್ತು ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಸಮ್ಮೇಳನದಲ್ಲಿ ಭೋಜನ ವ್ಯವಸ್ಥೆಗೆ ಶಿಸ್ತು ವೇದಿಕೆ ಹಾಗೂ ಸಾರಿಗೆ ಉಪ ಸಮಿತಿ ಮತ್ತು ಸ್ವಾಗತ ಸಮಿತಿಯ ಜೊತೆಯಲ್ಲಿ ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಸಮ್ಮೇಳನವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಕಸಾಪ ಹೊತ್ತಿದೆ.

ಒಟ್ಟಾರೆಯಾಗಿ ಹಲವು ಭಾರೀ ನಿರೀಕ್ಷೆಗಳೊಂದಿಗೆ ನಡೆಯುತ್ತಿರುವ ಪ್ರಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಇನ್ನೆರಡು ದಿನಗಳ ಸಮ್ಮೇಳನದ ಬೆಳವಣಿಗೆಗಳು ನಿರ್ಧರಿಸಲಿವೆ.

ಸಮ್ಮೇಳನ ಈ ನೆಲದ ಹೆಜ್ಜೆ ಗುರುತು ಗುರುತಿಸಬೇಕಿತ್ತು:

ರಾಜ್ಯ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನವು ನೆಲದ ಹೆಜ್ಜೆ ಗುರುತುಗಳ ಬಗ್ಗೆ ನಿಷ್ಠೆಯಾಗಿ ನೆಲೆ ಮಾಡಿರುವುದನ್ನು ಗುರುತಿಸುವ ಸಮ್ಮೇಳನವಾಗಬೇಕಿತ್ತು ಎಂದು ದಲಿತ ಹೋರಾಟಗಾರ, ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮ ಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರ ಹೊರವ ಲಯದ ತೇರಹಳ್ಳಿ ಬೆಟ್ಟದಲ್ಲಿನ ತಮ್ಮ ನಿವಾಸದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಶಕಗಳ ಹಿಂದೆ ನಡೆದಿರುವ ಹುಣಸೀಕೋಟೆ ಅನುಸೂಯಮ್ಮ, ಕಂಬಾಲಪಲ್ಲಿ ದಲಿತರನ್ನು ಸುಟ್ಟ ಘಟನೆಗಳ ಆಧಾರದಲ್ಲಿ ಈ ಪ್ರಥಮ ಸಮ್ಮೇಳನವು ನಡೆಯಬೇಕಾಗಿದ್ದರೂ ಅಂತಹ ವಾತಾವರಣದಲ್ಲಿ ಸಮ್ಮೇಳನ ನಡೆಯುತ್ತಿಲ್ಲ ಎಂದು ವಿಷಾದಿಸಿದ ಅವರು, ಅಂದು ಹತ್ಯೆಗೀಡಾದವರ ಚಿತಾಭಸ್ಮ ಮರುಭೇಟಿಯಾಗುವಂತೆ ಸಮ್ಮೇಳನ ನಡೆದಿದ್ದರೆ ಚೆನ್ನಾಗಿರುತ್ತಿತ್ತು ಎಂದರು. ದಲಿತ ಸಾಹಿತ್ಯ ಸಮ್ಮೇಳನವನ್ನು ಪ್ರತ್ಯೇಕವಾಗಿ ಸಮ್ಮೇಳನದ ಆಧಾರದಲ್ಲಿ ನಡೆಸದೆ ಪ್ರತಿವರ್ಷ ನಡೆಯುವ ಸಾಹಿತ್ಯ ಸಮ್ಮೇಳನದಲ್ಲೇ ನಡೆಸುವಂತಾ ಗಬೇಕಿತ್ತು. ಇದು ದಲಿತರ ಪ್ರಥಮ ರಾಜ್ಯ ಸಮ್ಮೇಳನ ಎಂದರೂ ದೊಡ್ಡ ರೀತಿಯ ಶ್ರದ್ಧೆಯ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ದಲಿತ ಸಾಹಿತ್ಯ ಸಮ್ಮೇಳನವು ಎಂದೂ ಪ್ರತ್ಯೇಕವಾಗಿ ಮೀಸಲಿಟ್ಟರೆ ಜನರ ಭಾವನೆಯಲ್ಲಿ ದಲಿತರು ಎನ್ನುವ ಪ್ರತ್ಯೇಕತೆಯ ಕೂಗು ಹಾಗೆಯೇ ಉಳಿಯುತ್ತದೆ. ದಲಿತರು ಪ್ರಸ್ತುತ ಕಾಲಘಟ್ಟದಲ್ಲಿ ಮುಖ್ಯವಾಹಿನಿಯಲ್ಲಿ ಇರಬೇಕು ಎನ್ನುವುದು ಮುಖ್ಯ ಆಶಯವಾಗಬೇಕು ಎಂದರು.

ಕೋಲಾರ ಜಿಲ್ಲೆಯನ್ನು ಚಳವಳಿಗಳ ತವರೂರು ಎಂದು ಕರೆಯಲಾಗಿದೆ. ಅಂತಹ ಚಳವಳಿಗೆ ಋಣ ತೀರಿಸುವಂತಹ ಸಮ್ಮೇಳನವು ಇದಾಗಿಲ್ಲ. ಚಳವಳಿಗಳ ದಲಿತ ಪ್ರಜ್ಞೆಯ ಪ್ರಾರಂಭಿಕ ನೆಲೆಗಳು ಎಚ್ಚರದೊಂದಿಗೆ ಹೊಸತನವನ್ನು ಕಾಣಬೇಕಾಗಿದೆ. ಪ್ರಸ್ತುತ ಕಾಲಘಟ್ಟದ ಸಮಾಜದಲ್ಲಿ ದಲಿತ ಪ್ರಜ್ಞೆಯ ಸಾಹಿತ್ಯ ಪ್ರಕಾರಗಳು ಇಲ್ಲವಾಗಿದೆ. ಸಮಕಾಲೀನ ಪರಂಪರೆಯ ಗುರುತುಗಳ ಜತೆಗೆ ಪ್ರಾದೇಶಿಕ ವೈಶಿಷ್ಟ್ಯತೆಯನ್ನು ಈ ಸಮ್ಮೇಳನ ಕಾಣಬೇಕಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾಲ್ಕು ಊಟದ ಕೌಂಟರ್‌: ಸಮ್ಮೇಳನದ ಸಭಾಂಗಣದ ಮುಂದೆ ಇರುವ ಹಾಲಿಸ್ಟರ್‌ ಸಮುದಾಯ ಭವನದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟು ನಾಲ್ಕು ಊಟದ ಕೌಂಟರ್‌ಗಳನ್ನು ಮಾಡಲಾಗಿದ್ದು, ಬೇರೆ ಬೇರೆ ಜಿಲ್ಲೆಗಳಿಂದ ಬಂದವರಿಗೆ ಮತ್ತು ಮಹಿಳಾ ಪ್ರತಿನಿಧಿಗಳಿಗೆ ಪ್ರತ್ಯೇಕವಾದ ಕೌಂಟರ್‌ ವ್ಯವಸ್ಥೆ ಮಾಡಿದ್ದು, ಸಮ್ಮೇಳನ ನಡೆಯುವ ಸ್ಥಳದಲ್ಲಿ ಕೂಪನ್‌ ವ್ಯವಸ್ಥೆ ಮಾಡಲಾಗಿದೆ.
ಅತಿಥಿಗಳಿಗೆ 147 ಕೊಠಡಿ ಮೀಸಲು: ಬೇರೆ ಜಿಲ್ಲೆಗಳಿಂದ ಬರುವ ಪ್ರತಿನಿಧಿಗಳಿಗೆ ಮತ್ತು ಸಮ್ಮೇಳನದಲ್ಲಿ ಭಾಗವಹಿಸುವ ಅತಿಥಿಗಳಿಗೆ ನಗರದ ವಿವಿಧ ಅತಿಥಿ ಗೃಹಗಳಲ್ಲಿ ಸುಮಾರು 135 ಕೊಠಡಿಗಳನ್ನು ಕಾಯ್ದಿರಿಸಲಾಗಿದ್ದು, ಇನ್ನೂ ದೇವರಾಜ ಅರಸು ಕಾಲೇಜಿನ 12 ಕೊಠಡಿಗಳ ಜೊತೆಗೆ ಪ್ರತಿನಿಧಿಗಳ ಆಧಾರದ ಮೇಲೆ ಇನ್ನಷ್ಟು ಕೊಠಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ.
20 ಪುಸ್ತಕ ಮಳಿಗೆ, ಪಾರ್ಕಿಂಗ್‌ ವ್ಯವಸ್ಥೆ: ಸಮ್ಮೇಳನ ನಡೆಯುವ ಸ್ಥಳದ ಮುಂದೆ 20 ಪುಸ್ತಕ ಮಳಿಗೆಗಳನ್ನು ತೆರೆಯಲಾಗಿದೆ. ದ್ವಿಚಕ್ರ ವಾಹನಗಳಿಗೆ ಡಿ.ವಿ.ಗುಂಡಪ್ಪ ಗ್ರಂಥಾಲಯ ಮತ್ತು ಮೆಥೋಡಿಸ್ಟ್‌ ಕಾಲೇಜಿನ ಆವರಣ, ನಾಲ್ಕು ಚಕ್ರದ ವಾಹನಗಳಿಗೆ ಒಕ್ಕಲಿಗರ ಭವನದ ಪಕ್ಕ ಮತ್ತು ನಚಿಕೇತನ ನಿಲಯದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಎಲ್ಲೆಡೆ ವಿದ್ಯುತ್‌ ದೀಪಾಲಂಕಾರ: ಸಮ್ಮೇಳನ ನಡೆಯುವ ರಂಗಮಂದಿರ ಮತ್ತು ಹಾಲಿಸ್ಟರ್‌ ಸಮುದಾಯ ಭವನಕ್ಕೆ ಮತ್ತು ಪರಿಷತ್‌ ಕಚೇರಿಯಿಂದ ಮೆಕ್ಕೆ ಸರ್ಕಲ್ವರೆಗೂ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ ಮತ್ತು ಬಂಟಿಂಗ್ಸ್‌ ಕಟ್ಟಿ ಸಮ್ಮೇಳನ ಮಹತ್ವವನ್ನು ಸಾರ್ವಜನಿಕ ತಿಳಿಸುವ ಬ್ಯಾನರ್‌ಗಳನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಕಟ್ಟಲಾಗಿದೆ.
ಬೃಹತ್‌ ಎಲ್ಇಡಿ ಟಿ.ವಿ. ವ್ಯವಸ್ಥೆ: ಸಮ್ಮೇಳನದ ಪ್ರಮುಖ ವೇದಿಕೆಯ ಹಾಲ್ನಲ್ಲಿ 650 ಅಸನಗಳ ವ್ಯವಸ್ಥೆಯಿದ್ದು, ವೇದಿಕೆಯ ಮುಂದೆ ಹಾಗೂ ರಂಗಮಂದಿರ ಹೊರಗಡೆ ಸಭೀಕರು ಕೂರಲು ಆಸನದ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬೃಹತ್‌ ಎಲ್ಇಡಿ ಟಿ.ವಿ.ಗಳನ್ನು ಹಾಕಿ 600 ಪ್ರತ್ಯೇಕ ಅಸನಗಳಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ