ಕೋಲಾರ: ಮತ್ತೆ ನಾಲ್ವರಿಗೆ ಸೋಂಕು
Team Udayavani, Jun 14, 2020, 6:38 AM IST
ಕೋಲಾರ: ಜಿಲ್ಲೆಯಲ್ಲಿ ಶನಿವಾರ ನಾಲ್ಕು ಕೋವಿಡ್- 19 ಸೋಂಕಿತ ವ್ಯಕ್ತಿಗಳು ಪತ್ತೆಯಾಗುವ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 41ಕ್ಕೇರಿದಂತಾಗಿದೆ. ಮಾಲೂರು ತಾಲೂಕಿನ 36 ವರ್ಷದ ವ್ಯಕ್ತಿ ಅಂತಾರಾಜ್ಯ ಪ್ರವಾಸದ ಹಿನ್ನೆಲೆ ಹೊಂದಿದ್ದು, 38 ನೇ ಸೋಂಕಿತರಾಗಿ ಕೋಲಾರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶ್ರೀನಿವಾಸಪುರದಲ್ಲಿ ಮೂರು ದಿನಗಳ ಹಿಂದಷ್ಟೇ ಪತ್ತೆಯಾಗಿದ್ದ ಪಿ.6171 ಸೋಂಕಿತ ವ್ಯಕ್ತಿಯ ಪ್ರಥಮ ಸಂಪರ್ಕಿತರಾದ 80 ವರ್ಷದ ವೃದಟಛಿ, ಆತನ ಪತ್ನಿ 78 ವರ್ಷದ ವೃದೆಟಛಿ, 17 ವರ್ಷದ ಪುತ್ರಿ ಸೋಂಕಿತರಾಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ ಗುಣಮುಖರಾಗಿ 26 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆ ಕ್ವಾರಂಟೈನ್‌ನಲ್ಲಿದ್ದಾರೆ. 15 ಸಕ್ರಿಯ ಪ್ರಕರಣ ಚಿಕಿತ್ಸೆ ಹಂತದಲ್ಲಿ ಆಸ್ಪತ್ರೆಯಲ್ಲಿರುವಂತಾಗಿದೆ.
ತಾಲೂಕುವಾರು ಸೋಂಕಿತರದಲ್ಲಿ ಕೋಲಾರದಿಂದ 8, ಮಾಲೂರಿನಲ್ಲಿ 3, ಬಂಗಾರಪೇಟೆಯಲ್ಲಿ 10, ಕೆಜಿಎಫ್ನಿಂದ 4, ಮುಳಬಾಗಿಲಿನಿಂದ 10 ಹಾಗೂ ಶ್ರೀನಿವಾಸಪುರದಿಂದ 6 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಪ್ರಸ್ತುತ ಮುಳಬಾಗಿಲು ಹೊರತುಪಡಿಸಿ ಕೋಲಾರ ಜಿಲ್ಲೆಯ ಎಲ್ಲಾ ಐದು ತಾಲೂಕುಗಳಲ್ಲಿಯೂ ಸೋಂಕಿತರು ಇದ್ದಂತಾಗಿದೆ. ಮುಳಬಾಗಿ ಲಿನಲ್ಲಿ ಪತ್ತೆಯಾಗಿದ್ದ ಎಲ್ಲಾ 10 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.
ರಾಜಸ್ಥಾನ ಮೂಲದ ವ್ಯಕ್ತಿಗೆ ಸೋಂಕು
ಮಾಲೂರು: ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬನಿಗೆ ಕೋವಿಡ್ 19 ಸೋಂಕು ದೃಢಪಟ್ಟಿರುವ ಕಾರಣ, ಆತನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿನ ಸ್ಥಳೀಯ ಕೂರಂಡಹಳ್ಳಿ ಕೈಗಾರಿಕಾ ಪ್ರಾಂಗಣದ ಕಾರ್ಮಿಕನಾಗಿದ್ದ ಸೋಂಕಿತನು ಕಳೆದ ವಾರ ಮಾಲೂರು ಪಟ್ಟಣಕ್ಕೆ ಅಗಮಿಸಿದ್ದು, ರೇಣುಕಾ ಯಲ್ಲಮ್ಮ ಬಡಾವಣೆಯ ಕೃಷ್ಣಪ್ಪ ಲೇಔಟ್‌ನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ.
ವಾರದಿಂದ ಹೋಂ ಕ್ವಾರಂಟೈನ್ ಮಾಡಲಾಗಿದ್ದ ವ್ಯಕ್ತಿಗೆ ಶುಕ್ರವಾರ ಬಂದ ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟಿರುವ ಕಾರಣ, ಅತನನ್ನು ಕೋಲಾರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತ ವಾಸವಾಗಿದ್ದ ಬಾಡಿಗೆ ಮನೆಯ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಮಾಡಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ಶಾಸಕ ಕೆ.ವೈ.ನಂಜೇಗೌಡ, ಸ್ಥಳದಲ್ಲಿಯೇ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳವಂತೆ ಎಚ್ಚರಿಸುವ ಜೊತೆಗೆ ಬಡಾವಣೆಯ ಜನತೆಗೆ ಅಗತ್ಯ ವಸ್ತುಗಳನ್ನು ಪೂರೈಸಿ, ಯಾರೂ ಬಡಾವಣೆಯಿಂದ ಹೊರಬಾರದೆ ಮತ್ತು ಒಳ ಪ್ರವೇಶ ಮಾಡದಂತೆ ಎಚ್ಚರವಹಿಸುವಂತೆ ಆದೇಶ ನೀಡಿದರು. ತಹಶೀಲ್ದಾರ್ ಎಂ. ಮಂಜುನಾಥ್, ಮುಖ್ಯಾಧಿಕಾರಿ ಪ್ರಸಾದ್ ಇದ್ದರು.