ಸೈನೆಡ್‌ಗುಡ್ಡ ಹಸಿರಾಗಲು ಜಿಲ್ಲಾಡಳಿತ ನೆರವಾಗಲಿ

Team Udayavani, Jul 17, 2019, 12:23 PM IST

ಕೋಲಾರ ಚಿನ್ನದ ಗಣಿ ಪ್ರದೇಶದ ಸೈನೆಡ್‌ ಗುಡ್ಡಗಳು ಹಾಗೂ ಖಾಲಿ ಪ್ರದೇಶದಲ್ಲಿ ಸಸಿ ನೆಟ್ಟು ಹಸೀಕರಣ ಮಾಡುವ ಶ್ರಮದಾನಕ್ಕೆ ಸನ್ನದ್ಧವಾಗಿರುವ ವಿವಿಧ ಸಂಸ್ಥೆಗಳ ಪರಿಸರ ಸಂರಕ್ಷಣೆ ಸ್ವಯಂ ಸೇವಾ ಕಾರ್ಯಕರ್ತರು.

ಕೋಲಾರ: ಜಿಲ್ಲೆಗೆ ಚಿನ್ನದ ನಾಡೆಂದು ಹೆಸರು ತಂದು ಕೊಟ್ಟ ಕೆಜಿಎಫ್ ಚಿನ್ನದ ಗಣಿ ಪ್ರದೇಶವನ್ನು ಸಂಪೂರ್ಣ ಹಸಿರಾಗಿಸುವ ಮೂಲಕ ಅಪಾಯಕಾರಿ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಪರಿಸರವಾದಿ ಕೆ.ಎನ್‌.ತ್ಯಾಗರಾಜು ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು ಮುಂದಾಗಿವೆ.

ನೂರಾರು ವರ್ಷಗಳ ಇತಿಹಾಸವಿರುವ ಕೋಲಾರ ಚಿನ್ನದ ಗಣಿಗಳಿಂದ ಚಿನ್ನ ಸಂಸ್ಕರಿಸಿದ ಸೈನೆಡ್‌ಧೂಳನ್ನು ಬೆಟ್ಟದಂತೆ ಕೆಜಿಎಫ್ ನಗರದ ಸುತ್ತಲೂ ಹಾಕಲಾಗಿದೆ. ಈ ಗುಡ್ಡದಿಂದ ಪ್ರತಿ ಗಾಳಿ ಕಾಲದಲ್ಲಿ ಸೈನೆಡ್‌ ಮಿಶ್ರಿತ ಧೂಳು ಇಡೀ ನಗರವನ್ನು ಆವರಿಸುವ ಮೂಲಕ ಜನರಲ್ಲಿ ಸಿಲಿಕಾಸಿಸ್‌ ಎಂಬ ಅಪಾಯಕಾರಿ ಶ್ವಾಸಕೋಶ ಸಂಬಂಧಿ ಕಾಯಿಲೆಗೆ ಕಾರಣವಾಗುತ್ತಿತ್ತು. ಹಲವು ದಶಕಗಳಿಂದ ಈ ಸಮಸ್ಯೆ ಇದ್ದರೂ ಯಾರೂ ಶಾಶ್ವತ ಪರಿಹಾರ ಹುಡುಕಿರಲಿಲ್ಲ.

ನ್ಯಾಯಾಧೀಶರ ಪ್ರಯತ್ನ: ಕೆಜಿಎಫ್ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಆಗಮಿಸಿದ್ದ ಜಗದೀಶ್ವರ್‌ ಅವರು ಸೈನೆಡ್‌ ಧೂಳಿನ ಸಮಸ್ಯೆಗೆ ಪರಿಹಾರ ಹುಡುಕಲೇಬೇಕೆಂದು ನಿರ್ಧರಿಸಿ, ಗುಡ್ಡದ ಮೇಲೆ ವಿವಿಧ ಜಾತಿಯ 1 ಲಕ್ಷ ಸಸಿ ಹಾಕಿಸಿದ್ದರು. ಇದಕ್ಕೆ ಸ್ಥಳೀಯ ಆಡಳಿತ ಮತ್ತು ಸ್ವಯಂ ಸೇವಾ ಸಂಸ್ಥೆಗಳು, ನಾಗರಿಕರು ಕೈ ಜೋಡಿಸಿದ್ದರು. ಇದರ ಫ‌ಲವಾಗಿ ಸೈನೆಡ್‌ ಗುಡ್ಡದ ಧೂಳು ಆವರಿಸುವ ಸಮಸ್ಯೆ ಕಡಿಮೆಯಾಗುವಂತಾಗಿದೆ.

ಸೈನೆಡ್‌ ಗುಡ್ಡದ ಮೇಲೆ ಹಾಕಿದ್ದ 75 ಸಾವಿರ ವಿವಿಧ ಜಾತಿಯ ಸಸಿಗಳು, ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಹುಲ್ಲು ಜಾತಿಯ ಸಸಿಗಳು, ಅಗೇವು ಮತ್ತಿತರ ಸಸಿ ಬೆಳೆಸಲಾಗಿತ್ತು. ಹೀಗೆ ನೆಟ್ಟಿದ್ದ ಶೇ.90ಕ್ಕೂ ಹೆಚ್ಚು ಸಸಿಗಳು ಗುಡ್ಡದ ಮೇಲೆ ಬೆಳೆಯಲು ಆರಂಭಿಸಿವೆ.

ಒಣಗುವ ಭೀತಿ: ಸಸಿ ನೆಟ್ಟ ವರ್ಷದಲ್ಲಿ ಸುಮಾರಾಗಿ ಮಳೆ ಸುರಿದಿದ್ದರಿಂದ ಬಹುತೇಕ ಸಸಿಗಳು ಬೆಳೆಯಲು ಆರಂಭಿಸಿವೆ. ಹೀಗೆ ಬೆಳೆಯಲು ಆರಂಭಿಸಿದ ಗಿಡಗಳ ಬೇರುಗಳು ಕೊಂಚ ಆಳಕ್ಕೆ ಹೋಗುತ್ತಿದ್ದಂತೆಯೇ ಪೋಷಕಾಂಶ ಸಿಗದ ಕಾರಣದಿಂದ ಗಿಡಗಳು ಒಣಗಲು ಆರಂಭಿಸಿವೆ. ಗಿಡಗಳು ಹೀಗೆ ಒಣಗುತ್ತಿರುವುದನ್ನು ಗಮನಿಸಿದ ಸ್ವಯಂ ಸೇವಾ ಸಂಸ್ಥೆಗಳ ಸೇವಾಕರ್ತರು 1 ಸಾವಿರ ಸಸಿ ಬದಲಾಯಿಸಿದ್ದಾರೆ. ಆದರೆ, ಗಿಡ ಬದಲಾಯಿಸಿದರೂ ಮತ್ತದೇ ಸಮಸ್ಯೆ ಎದುರಾಗದು ಎಂಬ ನಂಬಿಕೆ ಇಲ್ಲವಾಗಿದೆ. ಆದ್ದರಿಂದ ಗಿಡಗಳನ್ನು ಮರವಾಗಿ ಬೆಳೆಸಲು ಅಗತ್ಯ ಗಮನ ನೀಡಲೇಬೇಕಾಗಿದೆ.

ಕ್ರಿಯಾ ಯೋಜನೆ: ಕೋಲಾರದ ಪರಿಸರವಾದಿ ಕೆ.ಎನ್‌.ತ್ಯಾಗರಾಜು ಇದಕ್ಕೊಂದು ಕ್ರಿಯಾ ಯೋಜನೆ ರೂಪಿಸಿದ್ದು, ಈಗಾಗಲೇ ಪ್ರಾಯೋಗಿಕವಾಗಿ 650 ಸಸಿಗಳಿಗೆ ಅಗತ್ಯ ಗೊಬ್ಬರ, ಪೋಷಕಾಂಶ ನೀಡುವ ಕೆಲಸವನ್ನು ವಾರಾಂತ್ಯಗಳಲ್ಲಿ ನಡೆಸುತ್ತಿದ್ದಾರೆ. ಇದಕ್ಕಾಗಿ ಅರಣ್ಯ ಇಲಾಖೆ, ಕೆಜಿಎಫ್ ನಗರಸಭೆ ಸೇರಿದಂತೆ ಎನ್‌ಸಿಸಿ, ಸ್ಕೌಟ್ಸ್‌ಗೈಡ್ಸ್‌, ಬಿಜಿಎಂಎಲ್, ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳನ್ನೊಳಗೊಂಡ ಪರ್ವ, ಸಮರ್ಥ್ ಭಾರತ ಇತ್ಯಾದಿ ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಿ ಶ್ರಮದಾನ ನಡೆಸಿದೆ.

ಇದೇ ತಂಡವನ್ನು ಬಳಸಿಕೊಂಡು ಸೈನೆಡ್‌ ಗುಡ್ಡದ ಮೇಲೆ ಇರುವ ಎಲ್ಲಾ ಸಸಿಗಳಿಗೂ ಗೊಬ್ಬರ, ನೀರು, ಪೋಷಕಾಂಶ ನೀಡುವುದು ಮತ್ತು ಸೈನೆಡ್‌ ಗುಡ್ಡದ ಇಳಿಜಾರಿನಲ್ಲಿ ಬಳ್ಳಿ ಗಿಡಗಳನ್ನು ಬೆಳೆಸುವ ಕ್ರಿಯಾ ಯೋಜನೆ ರೂಪಿಸಲಾಗಿದೆ.

ನೀರು ಗೊಬ್ಬರ: ಸೈನೆಡ್‌ ಗುಡ್ಡದ ಮೇಲೆ ಸುರಿಯುವ ಮಳೆ ನೀರು ಇಳಿಜಾರಿನಲ್ಲಿ ಹರಿದು ಕೆಳಕ್ಕೆ ಬರುವುದರಿಂದ ಗುಡ್ಡದಲ್ಲಿ ದೊಡ್ಡ ಗಾತ್ರದ ಕೊರಕಲು, ಕಂದಕಗಳು ನಿರ್ಮಾಣವಾಗುತ್ತಿವೆ. ಇಂತ ಕೊರಕಲು, ಕಂದಕಗಳಿಗೆ ಸ್ಥಳೀಯವಾಗಿ ಸಿಗುವ ಕಲ್ಲುಗಳನ್ನೇ ಬಳಸಿ ಕೊಂಡು ತಡೆ ಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಸೈನೆಡ್‌ಗುಡ್ಡದ ಮೇಲೆ ಸುರಿಯುವ ಮಳೆ ನೀರು ಅಲ್ಲಿಯೇ ಉಳಿಯುವಂತೆ ಮಾಡಲಾಗುತ್ತದೆ.

ನಗರಸಭೆಯಿಂದ ಗೊಬ್ಬರ: ಮಳೆ ನೀರು ನಿಂತು ಗಿಡಗಳಿಗೆ ಅಗತ್ಯವಾಗಿರುವ ತೇವಾಂಶವನ್ನು ಒದಗಿಸುತ್ತದೆ. ಹೀಗೆ ತೇವಾಂಶ ಒದಗಿಸಿದ ನಂತರ, ಕೆಜಿಎಫ್ನ ರಾಬರ್ಟ್‌ಸನ್‌ ಕಸದಿಂದ ತಯಾರಿಸುತ್ತಿರುವ ಗೊಬ್ಬರವನ್ನು ಗಿಡಗಳಿಗೆ ನೀಡಬೇಕಾಗುತ್ತದೆ. ಪ್ರಾಯೋಗಿಕವಾಗಿ ನಗರಸಭೆ ನೀಡಿರುವ ಒಂದು ಟ್ರ್ಯಾಕ್ಟರ್‌ ಗೊಬ್ಬರವನ್ನು ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು 650 ಗಿಡಗಳಿಗೆ ಹಾಕಿದ್ದಾರೆ.

ಧೂಳಿನ ಸಮಸ್ಯೆಗೆ ಪರಿಹಾರ: ನೀರು, ಗೊಬ್ಬರದ ನಂತರ ಸೈನೆಡ್‌ ಗುಡ್ಡಗಳ ಇಳಿಜಾರಿನಲ್ಲಿ 10 ರಿಂದ 15 ಜಾತಿಯ ಬಳ್ಳಿ ಗಿಡಗಳನ್ನು ಮೇಲ್ಭಾಗದಿಂದ ಕೆಳಭಾಗದವರೆಗೂ ಹರಡುವಂತೆ ಬೆಳೆಸಿದರೆ ಧೂಳಿನ ಸಮಸ್ಯೆ ಸಂಪೂರ್ಣವಾಗಿ ನಿಲ್ಲಿಸಬಹುದಾಗಿದೆ. ಜೊತೆಗೆ, ಮಳೆಗಾಲದಲ್ಲಿ ಸೈನೆಡ್‌ ಗುಡ್ಡ ಕೊರಕಲುಗಳ ಮೂಲಕ ನಗರದ ಚರಂಡಿಗಳನ್ನು ತುಂಬಿ ಮಾಡುತ್ತಿದ್ದ ಹಾನಿಯನ್ನು ನಿವಾರಣೆ ಮಾಡಬಹುದಾಗಿದೆ. ಈ ಪ್ರಾಯೋಗಿಕ ಕಾರ್ಯವನ್ನು ಮಾಡಲು ವಿವಿಧ ಸ್ವಯಂ ಸೇವಾ ಸಂಸ್ಥೆಯ ನೂರಾರು ಮಂದಿ ತಯಾರಾಗಿದ್ದು, ಇದಕ್ಕಾಗಿ ವಾರಾಂತ್ಯದಲ್ಲಿ ಕೆಜಿಎಫ್ ಸ್ವರ್ಣ ಕೆರೆಯಿಂದ ಫ‌ಲವತ್ತಾದ ಮಣ್ಣನ್ನು ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಸಾಗಿಸಲು ಟ್ರ್ಯಾಕ್ಟರ್‌ ಮತ್ತಿತರ ಸಲಕರಣೆಗಳನ್ನು ಒದಗಿಸಬೇಕಾಗುತ್ತದೆ. ಇದಕ್ಕಾಗಿ ಜಿಲ್ಲಾಡಳಿತ, ನಗರಸಭೆ, ಅರಣ್ಯ ಇಲಾಖೆ, ಬಿಜಿಎಂಎಲ್ ಆಡಳಿತ ಮಂಡಳಿ ಅಗತ್ಯನೆರವು ನೀಡಬೇಕಾಗಿದೆ.

● ಕೆ.ಎಸ್‌.ಗಣೇಶ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ