ಕಾಯ್ದಿಟ್ಟ ಅರಣ್ಯದಲ್ಲಿ 26 ವರ್ಷದಿಂದ ಗಣಿಗಾರಿಕೆ

Team Udayavani, Oct 1, 2019, 6:07 PM IST

ಮುಳಬಾಗಿಲು: ತಾಲೂಕಿನ ದೊಡ್ಡಬಂಡಹಳ್ಳಿ 98 ಎಕರೆ ಕಾಯ್ದಿಟ್ಟ ಅರಣ್ಯದಲ್ಲಿ, ಅತಿಕ್ರಮಣ ಮಾಡಿ 26 ವರ್ಷಗಳಿಂದಲೂ ಅಕ್ರಮವಾಗಿ ಕಲ್ಲು, ಮರಳು, ಮಣ್ಣು, ಮುಂತಾದ ಗಣಿಗಾರಿಕೆಗೆ ಮಾಡುತ್ತಿದ್ದರೂ ಪ್ರಾದೇಶಿಕ ಅರಣ್ಯ ಇಲಾಖೆ ಕ್ರಮಕೈಗೊಳ್ಳದಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ತಾಲೂಕಿನಲ್ಲಿರುವ ಅರಣ್ಯ ಸಂರಕ್ಷಣೆಗಾಗಿ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ಹಲವು ಯೋಜನೆ ಜಾರಿ ಮಾಡುತ್ತಿದೆ. ಆದರೆ, ಇರುವ ಅರಣ್ಯವನ್ನೇ ಸಂರಕ್ಷಣೆ ಮಾಡದೇ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದು ಪರಿಸರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕಿನ ಗೋಕುಂಟೆ, ಹರಪನಾಯಕನಹಳ್ಳಿ, ಕಲಿಕರಿ, ಓಬಳೇಶ್ವರಬೆಟ್ಟ, ಕುನಿಬಂಡೆ, ಕನ್ನಂಪಲ್ಲಿ, ಕಗ್ಗಲನತ್ತ, ನಾಗೇನಹಳ್ಳಿ, ಕುರುಡುಮಲೆ, ಬಾಳಸಂದ್ರ, ದುಗ್ಗಸಂದ್ರ, ತಾವರೆಕೆರೆ, ಕಾಶೀಪುರ, ದೇವರಾಯಸ ಮುದ್ರ, ಕುರುಬರಹಳ್ಳಿ, ಟಿ.ನಡುಂಪಲ್ಲಿ, ಘಟ್ಟುಗುಡಿ, ಸುನಪಕುಂಟೆ, ದೊಡ್ಡಬಂಡಹಳ್ಳಿ, ಮಿಟ್ಟಹಳ್ಳಿ, ನೆರ್ನಹಳ್ಳಿ, ಪುಲಿಓಬರೆಡ್ಡಿಹಳ್ಳಿ ಸೇರಿ 8 ಸಾವಿರ ಎಕರೆ ಅರಣ್ಯ ಪ್ರದೇಶದಲ್ಲಿ ಗಿಡ ಮರ, ಮರಳು, ಕಲ್ಲುಬಂಡೆ, ಮುಂತಾದ ನೈಸರ್ಗಿಕ ಸಂಪನ್ಮೂಲ ಇದೆ.

ಅದನ್ನು ಸಂರಕ್ಷಿಸಲು ಒಬ್ಬ ವಲಯಾರಣ್ಯಾಧಿಕಾರಿ, ಇಬ್ಬರು ಉಪ ವಲಯಾರಣ್ಯಾಧಿಕಾರಿಗಳು, ಮೂವರು ಅರಣ್ಯ ರಕ್ಷಕರು, 19 ವೀಕ್ಷಕರು ಇದ್ದಾರೆ. ಕಾಯ್ದಿಟ್ಟ ಅರಣ್ಯವೆಂದು ಘೋಷಣೆ: 1963ರಲ್ಲಿ ಅರಣ್ಯ ಕಾಯ್ದೆ ಅಧಿನಿಯಮ(1964ನೇ ಇಸವಿ ಕರ್ನಾಟಕ ಅರಣ್ಯ ಅಧಿನಿಯಮ 5) 4ನೇ ಪ್ರಕರಣದ ಮೇರೆಗೆ ಸರ್ಕಾರ ಆದೇಶ ಸಂಖ್ಯೆ ಎ.ಎಚ್‌ಎಫ್ಎಫ್-795, ಎಫ್ಎಫ್-91, ದಿನಾಂಕ 2/11/1993ರಂತೆ ಮುಳಬಾಗಿಲು ತಾಲೂಕಿನ ಕಸಬಾ ಹೋಬಳಿ ದೊಡ್ಡಬಂಡಹಳ್ಳಿ ಸರ್ವೆ ನಂ. 7ರಲ್ಲಿನ 39 ಹೆಕ್ಟೇರ್‌ ಅರಣ್ಯ ಜಮೀನಿಗೆ ಸೀಮಾರೇಖೆಯನ್ನು ಗುರ್ತಿಸಿ, 98 ಎಕರೆಯನ್ನೂ ಕಾಯ್ದಿಟ್ಟ ಅರಣ್ಯ ಎಂದು ಸರ್ಕಾರ ಘೋಷಣೆ ಮಾಡಿದೆ.

ಅಕ್ರಮ ಕಲ್ಲು ಗಣಿಗಾರಿಕೆ: ಅದರಂತೆ ತಹಶೀಲ್ದಾರ್‌ ಅವರು ಸರ್ವೆ ನಂ.7ರ, ಪಿ1ರ ಪೈಕಿ 96.33 ಎಕರೆ ಜಮೀನನ್ನು ಪಹಣಿಯೊಂದಿಗೆ ಅಡಕಗೊಳಿಸಿ ದಿನಾಂಕ 15/7/2009 ರಂದು ಎಂ.ಆರ್‌.4/2008-2009ರಂತೆ ಮ್ಯೂಟೇಷನ್‌ ಸಹ ಅಂಗೀಕರಿಸಲಾಗಿದೆ. ಆದರೆ, ಈ ಪ್ರದೇಶದಲ್ಲಿ ಕಲ್ಲು, ಜಮೀನು ಇದ್ದು, ಕೆಲವು ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಇನ್ನೂ ಗುಡ್ಡದಲ್ಲಿನ ಕಲ್ಲನ್ನು ಅಕ್ರಮವಾಗಿ ಹೊರಗಡೆ ಸಾಗಿಸಲಾಗುತ್ತಿದೆ.

 ಒತ್ತುವರಿ ತೆರವು ಮಾಡಿಲ್ಲ: ಸರ್ಕಾರ 1993ರಲ್ಲಿಯೇ ಕಾಯ್ದಿಟ್ಟ ಅರಣ್ಯವೆಂದು ಘೋಷಣೆ ಮಾಡಿದ್ದರೂ ತಾಲೂಕಿನಲ್ಲಿ ವಲಯಾರಣ್ಯ ಇಲಾಖೆ ಅಧಿಕಾರಿ ಗಳಾಗಿದ್ದ ವಿ.ಕೃಷ್ಣಮೂರ್ತಿ, ಎನ್‌.ಡಿ.ಸುದರ್ಶನ್‌, ಎಂ.ಎಂ.ಹುಚ್ಚಯ್ಯ, ಎಂ.ನಾಗರಾಜ, ಕೆ.ವಿ.ಶ್ರೀನಿವಾ ಸಪ್ಪ, ವೈ.ವಿ. ಚಂದ್ರಶೇಖರ್‌ರೆಡ್ಡಿ, ಎಂ.ಎಸ್‌. ಸಂತೋಷ್‌ಕುಮಾರ್‌ ಆಗಲಿ, ಇಲ್ಲ, 5 ತಿಂಗಳಿಂದ ಸದ್ಯ ಕರ್ತವ್ಯದಲ್ಲಿರುವ ವಲಯಾರಣ್ಯಾಧಿಕಾರಿ ರವಿಕೀರ್ತಿ ಅವರಾಗಲಿ ಅತಿಕ್ರಮಿಸಿಕೊಂಡಿರುವ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ತೆರವುಗೊಳಿಸುವ ಗೋಜಿಗೆ ಹೋಗಲಿಲ್ಲ.

ಪ್ರಸ್ತುತ ಕಾಯ್ದಿಟ್ಟ ಅರಣ್ಯದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ, ಒತ್ತುವರಿ ಆಗಿರುವ ಅರಣ್ಯವನ್ನು ವಶಕ್ಕೆ ಪಡೆಯಲು ಮುಂದಾಗಿಲ್ಲ. ಈ ಹಿಂದೆ ವಲಯಾರಣ್ಯಾಧಿಕಾರಿ ಆಗಿದ್ದ ಎಸ್‌.ಸುರೇಶ್‌ಬಾಬು 2017 ಅಕ್ಟೋಬರ್‌ನಲ್ಲಿ ಜಂಟಿ ಸರ್ವೆ ಮಾಡಲು ತಹಶೀಲ್ದಾರ್‌ ಕಚೇರಿಗೆ ಪತ್ರ ಬರೆದಿದ್ದರು. ಆದರೆ, ಕಂದಾಯ ಮತ್ತು ಸರ್ವೇ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಬಕಾರಿ ಸಚಿವರ ಕ್ಷೇತ್ರದಲ್ಲಿಯೇ 98 ಎಕರೆ ದೊಡ್ಡಬಂಡಹಳ್ಳಿ ಕಾಯ್ದಿಟ್ಟ ಅರಣ್ಯಕ್ಕೆ ರಕ್ಷಣೆ ಇಲ್ಲದಂತಾಗಿದೆ. 1993ರಿಂದಲೂ ಕೆಲವರು ಅತಿಕ್ರಮಿಸಿಕೊಂಡಿದ್ದರೂ ಪ್ರಾದೇಶಿಕ ಅರಣ್ಯ ಇಲಾಖೆಯ ಯಾವುದೇ ಕ್ರಮಕೈಗೊಳ್ಳ ದಿರುವುದು ವಿಪರ್ಯಾಸ.

 

-ಎಂ.ನಾಗರಾಜಯ್ಯ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕೋಲಾರ: ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ನಗರದ ಸರ್ಕಾರಿ ಮಹಿಳಾ ಕಾಲೇಜು ದಾನಿಗಳ ನೆರವಿನಿಂದ ಸಕಲ...

  • ಬಂಗಾರಪೇಟೆ: ಬಿಲ್‌ ಪಾವತಿ ಮಾಡಿಲ್ಲ ಎಂದು ಗುತ್ತಿಗೆದಾರರು ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರಿಂದ ಪಟ್ಟಣದಿಂದ ಬೇತಮಂಗಲ ಮೂಲಕ ವಿ.ಕೋಟೆಗೆ ಸಂಪರ್ಕ ಕಲ್ಪಿಸುವ...

  • ಶ್ರೀನಿವಾಸ ಪುರ: 18 ವರ್ಷ ತುಂಬಿದ ಪ್ರತಿ ವ್ಯಕ್ತಿ ತಮ್ಮ ಮೊಬೈಲ್‌ ಮೂಲಕವೇತ ಮದಾನ ಪಟ್ಟಿಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ತಾಲೂಕು ಕಾರ್ಯನಿರ್ವಹಣಾಧಿಕಾರಿ...

  • ಮುಳಬಾಗಿಲು: ತಾಲೂಕಿನ ದೇವರಾಯಸಮುದ್ರ ಗ್ರಾಮದಲ್ಲಿ ನಿರ್ಮಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ಕಾಮಗಾರಿ ಅಧಿಕಾರಿಗಳು ಮತ್ತು ಗುತ್ತಿಗೆದಾರನ...

  • ಬೇತಮಂಗಲ: ಗ್ರಾಮ ವಿಕಾಸ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಕಳಪೆಯಾಗಿದೆ ಎಂದು ಕಳ್ಳಿಕುಪ್ಪ ಗ್ರಾಮಸ್ಥರು ಆರೋಪಿಸಿದರು. ಟಿ.ಗೊಲ್ಲಹಳ್ಳಿ...

ಹೊಸ ಸೇರ್ಪಡೆ