ಹಿಪ್ಪುನೇರಳೆ ತೋಟಕ್ಕೆ ವಿಷ ಸಿಂಪಡಿಸಿದ ಕಿಡಿಗೇಡಿಗಳು
Team Udayavani, Jan 21, 2021, 12:23 PM IST
ಕೋಲಾರ: ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಕೆಲ ಕಿಡಿಗೇಡಿಗಳು ಗ್ರಾಮದಲ್ಲಿನ ಕೆಲ ಹಿಪ್ಪು ನೇರಳೆ ತೋಟಗಳಿಗೆ ವಿಷ ಸಿಂಪಡಿಸಿ ವಿಕೃತಿ ಮೆರೆದಿದ್ದಾರೆ. ಗ್ರಾಮದ ಸೀತಾರಾಮ, ಮಂಜುನಾಥ್, ಶಿವಾನಂದ, ರಮೇಶ್, ನಾಗರಾಜ್, ಎಂ.ರಮೇಶ್ ಅವರ ರೇಷ್ಮೆ ತೋಟಗಳಿಗೆ ವಿಷ ಸಿಂಪಡಿಸಿರುವ ಪರಿಣಾಮ ವಿಷಪೂರಿತ ಹಿಪ್ಪುನೇರಳೆ ಸೊಪ್ಪು ತಿಂದ ರೇಷ್ಮೆ ಹುಳುಗಳು ನರಳಾಡಿ ಸಾವನ್ನಪ್ಪಿವೆ.
ಇದನ್ನೂ ಓದಿ:ಕಾಡಾನೆಗಳಿಗೆ ರೆಡಿಯೋ ಕಾಲರ್ ಅಳವಡಿಕೆ
ಇನ್ನೇನು ಕೇವಲ 10 ದಿನಗಳಲ್ಲಿ ಗೂಡು ಕಟ್ಟುವ ಹಂತದಲ್ಲಿದ್ದ ರೇಷ್ಮೆ ಹುಳುಗಳು ಈ ರೀತಿಯಾಗಿ ಸಾವನ್ನಪ್ಪಿದ್ದು ರೈತರು ಕಣ್ಣೀರು ಹಾಕುವಂತಾಗಿದೆ. ಅಲ್ಲದೇ, ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ.ರೇಷ್ಮೆ ಇಲಾಖೆ ಅಧಿಕಾರಿಗಳು ರೇಷ್ಮೆ ತೋಟಕ್ಕೆ ಮತ್ತು ಹುಳು ಸಾಕಾಣಿಕೆ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಂಬಂಧಪಟ್ಟವರು ಈ ಘಟನೆ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಂಡು ನಷ್ಟ ಪರಿಹಾರ ತುಂಬಿಕೊಡುವಂತೆ ರೈತರು ಮನವಿ ಮಾಡಿದ್ದಾರೆ.