ವಿದ್ಯಾರ್ಥಿನಿ ಸಾವಿಗೆ ನಿಲ್ದಾಣದ ಅವ್ಯವಸ್ಥೆ ಕಾರಣ

Team Udayavani, Nov 8, 2019, 4:11 PM IST

ಮಾಲೂರು: ಶೌಚಾಲಯವಿದ್ರೂ ನಿರ್ವಹಣೆ ಇಲ್ಲ, ತೊಟ್ಟಿ ಇದ್ರೂ ನೀರಿಲ್ಲ, ಕೊಳಾಯಿಗಳಿಲ್ಲ, ಗೋಡೆ, ನೀರಿನ ತೊಟ್ಟಿ ತುಂಬಾ ಎಲೆ ಅಡಕೆ, ಗುಟುಕಾ ಉದಿರುವ ಕಲೆ, ಅಡ್ಡಾದಿಡ್ಡಿಯಾಗಿ ನಿಲ್ಲುವ ಬಸ್‌ ಗಳು, ಕೂರಲು ಜಾಗವಿಲ್ಲದೆ ಬಸ್‌ ಮಧ್ಯೆ ನಿಲ್ಲುವ ಪ್ರಯಾಣಿಕರು, ತಂಗುದಾಣ ಇದ್ರೂ ಸ್ವತ್ಛತೆ ಇಲ್ಲ, ಚೇರ್‌ಗಳಿಲ್ಲ, ಜನ ಕೂರವ ಜಾಗದಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್‌… ಇದು ಪಟ್ಟಣ ಬಸ್‌ ನಿಲ್ದಾಣದ ಸ್ಥಿತಿ.

ಮೂರು ನಾಲ್ಕು ದಿನಗಳ ಹಿಂದೆ ವಿದ್ಯಾರ್ಥಿ ಸಾವಿಗೆ ಕಾರಣವಾದ ನಿಲ್ದಾಣದ ದುಃಸ್ಥಿತಿ. ಕಾಲೇಜು ಮುಗಿಸಿ ಮಧ್ಯಾಹ್ನ ಊರಿಗೆ ಹೊರಡಲು ದಾವಂತದಲ್ಲಿ ಅವ್ಯವಸ್ಥೆಗಳ ಆಗರವಾಗಿರುವ ಬಸ್‌ ನಿಲ್ದಾಣಕ್ಕೆ ಬಂದ ಸರ್ಕಾರಿ ಜೂನಿಯರ್‌ ಕಾಲೇಜಿನ ವಿದ್ಯಾರ್ಥಿನಿ ಟಿ.ಎಂ.ದೀಪಿಕಾ, ಬಸ್‌ ಹತ್ತುವ ಸಂದರ್ಭದಲ್ಲಿ ಚಾಲಕನ ಅಜಾಗರೂಕತೆಯಿಂದ ಎರಡು ಬಸ್‌ಗಳ ನಡುವೆ ಸಿಲುಕಿ ಸಾವನ್ನಪ್ಪಿದ್ದಳು. ಇದಕ್ಕೆ ಕಾರಣ ಯಾರು ಎಂಬ ಪ್ರಶ್ನೆಗೆ ಸ್ಥಳೀಯ ಪುರಸಭೆ, ಜನಪ್ರತಿನಿಧಿಗಳೇ ಉತ್ತರ ಹೇಳಬೇಕು.

ನಿಲ್ದಾಣ ಉನ್ನತೀಕರಿಸಿಲ್ಲ: ಮಹಾನಗರ ಬೆಂಗಳೂರಿಗೆ 48 ಕಿ.ಮೀ. ಇರುವ ಮಾಲೂರು ಶರವೇಗದಲ್ಲಿ ಬೆಳೆಯುತ್ತಿರುವ ಪಟ್ಟಣ. ಆಂಧ್ರ, ತಮಿಳುನಾಡು, ರಾಜ್ಯದ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಿಗೆ ನೂರಾರು ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ನಿತ್ಯ ಇಲ್ಲಿನ ನಿಲ್ದಾಣದಿಂದಲೇ ಸಂಚರಿಸುತ್ತವೆ. ಆದರೆ, ಸೂಕ್ತ ನಿಲ್ದಾಣದ ವ್ಯವಸ್ಥೆ ಇಲ್ಲ. 30 ವರ್ಷಗಳ ಹಿಂದೆ ಅಭಿವೃದ್ಧಿ ಕಂಡಿದ್ದ ನಿಲ್ದಾಣವನ್ನು ಈವರೆಗೂ ಉನ್ನತೀಕರಣ ಮಾಡಿಲ್ಲ. ಇದಕ್ಕೆ ಸ್ಥಳೀಯ ಪುರಸಭೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ತಾಲೂಕು ಆಡಳಿತ, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಇದರ ಫ‌ಲ ವಿದ್ಯಾರ್ಥಿನಿ ದೀಪಿಕಾ ಸಾವು.

ಸಾವು ಸಂಭವಿಸುತ್ತಲೇ ಇವೆ: ಮಾಲೂರು ಬಸ್‌ ನಿಲ್ದಾಣದಲ್ಲಿ ಸಂಭವಿಸಿದ ವಿದ್ಯಾರ್ಥಿನಿ ಟಿ. ಎಂ.ದೀಪಿಕಾಳ ಸಾವಿಗೂ ಮೊದಲು ಬಾಲಕ ಮೃತಪಟ್ಟಿದ್ದ. ಬಸ್‌ ಡಿಕ್ಕಿ ಹೊಡೆದ ಕಂಬ ಬಾಲಕನ ತಲೆ ಮೇಲೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದ.

ಸೌಲಭ್ಯವಿಲ್ಲ: 30 ವರ್ಷಗಳ ಹಿಂದೆ ಎ.ನಾಗರಾಜು ಶಾಸಕರಾಗಿದ್ದ ವೇಳೆ ಪುರಸಭೆ ವತಿಯಿಂದ ಬಸ್‌ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗಿತ್ತು. ಸದ್ಯ ಕೆಎಸ್‌ ಆರ್‌ಟಿಸಿ, ಖಾಸಗಿ ಬಸ್‌ಗಳಿಗೂ ನಿಲುಗಡೆ ಸ್ಥಳ ಇದೊಂದೇ. ರಸ್ತೆ ಸಾರಿಗೆ ಸಂಸ್ಥೆಯ 70, 40 ಖಾಸಗಿ ಬಸ್‌ಗಳು ದಿನಕ್ಕೆ ಎರಡು ಮೂರು ಬಾರಿ ನಿಲ್ದಾಣಕ್ಕೆ ಬಂದು ಹೋಗುತ್ತವೆ. ಸಾವಿರಾರು ಪ್ರಯಾಣಿಕರು ಇಲ್ಲಿಂದ ವಿವಿಧೆಡೆಗೆ ಸಂಚರಿಸುತ್ತಾರೆ. ಆದರೆ, ಅದಕ್ಕೆ ತಕ್ಕಂತೆ ಬಸ್‌ ನಿಲ್ದಾಣದಲ್ಲಿ ಸೌಲಭ್ಯ ಇಲ್ಲ.

ಮೈಯೆಲ್ಲ ಕಣ್ಣಾಗಿರಲಿ: ಈಗಿನ ಬಸ್‌ಗಳ ಸಂಖ್ಯೆಗೆ ಹೋಲಿಸಿದ್ರೆ ನಿಲ್ದಾಣ ಏನಕ್ಕೂ ಸಾಕಾಗುವುದಿಲ್ಲ. ಒಂದು ಬಸ್‌ ನಿಲ್ದಾಣಕ್ಕೆ ಬಂದು ಹೊರಹೋಗಲು ಕನಿಷ್ಠ 20 ನಿಮಿಷನಾದ್ರೂ ಬೇಕು. ಸ್ವಲ್ಪ ಯಾಮಾರಿದ್ರೂ ಮತ್ತೂಂದು ಬಸ್‌ಗೆ ಗುದ್ದಿ ಗಲಾಟೆ, ಹೊಡೆದಾಟ ಶುರುವಾಗುತ್ತದೆ. ಇಲ್ಲ, ಪ್ರಯಾಣಿಕರ ಪ್ರಾಣಕ್ಕೇ ಸಂಚಕಾರ ಬಂದಿರುತ್ತದೆ. ಹೀಗಾಗಿ ಈ ನಿಲ್ದಾಣಕ್ಕೆ ಬರುವ ಬಸ್‌ ಚಾಲಕರಿಗೆ ಮೈಯೆಲ್ಲ ಕಣ್ಣಾಗಿರಬೇಕು.

ಪ್ರಯಾಣಿಕರಿಗಿಲ್ಲ ಆಸನ: ನಿಲ್ದಾಣದಲ್ಲಿನ ಶೌಚಾಲಯವು ಪುರಸಭೆಗೆ ಸೇರಿದ್ದು, ಖಾಸಗಿ ವ್ಯಕ್ತಿಗಳು ನಿರ್ವಹಿಸುತ್ತಿದ್ದಾರೆ. ಉಚಿತ ಶೌಚಾಲಯ ಇಲ್ಲ. ಕುಡಿಯುವ ನೀರು ಕೇಳುವುದೇ ಬೇಡ. ಕೂರಲು ಕೆಲವೇ ಆಸನಗಳಿದ್ದರೂ ಕುಡಿದವರು, ಪುಂಡರು ಆರಾಮವಾಗಿ ನಿದ್ದೆ ಮಾಡುತ್ತಿರುತ್ತಾರೆ. ಹೀಗಾಗಿ ಮಕ್ಕಳು ಎತ್ತಿಕೊಂಡು ಮಹಿಳಾ ಪ್ರಯಾಣಿಕರು, ಕೋಲು ಹಿಡಿದ ವೃದ್ಧರು ಲಗೇಜ್‌ ಇಟ್ಟುಕೊಂಡು ಒಂಟಿ ಕಾಲಿನಲ್ಲಿ ಜನ ಓಡಾಡುವ ಜಾಗದಲ್ಲಿ ನಿಲ್ಲಬೇಕಾಗಿದೆ.

ಬಸ್‌ಗಳ ಮಧ್ಯೆದಲ್ಲೇ ನಿಲ್ಲಬೇಕು: ಇರುವ ಪುಟ್ಟ ತಂಗುದಾಣದಲ್ಲಿ ಅಂಗಡಿ ಮಳಿಗೆ ನಿರ್ಮಿಸಿ ಬಾಡಿಗೆ ನೀಡಲಾಗಿದೆ. ಜನ ಓಡಾಡಲು ಇರುವ ಫ‌ುಟ್‌ಪಾತ್‌ ಅನ್ನು ವ್ಯಾಪಾರಿಗಳು ಅಕ್ರಮಿಸಿಕೊಂಡಿದ್ದಾರೆ. ಹೀಗಾಗಿ ಪ್ರಯಾಣಿಕರಿಗೆ ಕೂರಲು, ನಿಲ್ಲಲ್ಲು ಸ್ಥಳವಿಲ್ಲ, ನಿಂತಿರುವ ಬಸ್‌ಗಳ ಮುಂದೆ, ಗುಟುಕಾ, ಎಲೆ ಅಡಕೆ ಉಗಿದಿರುವ ಜಾಗದಲ್ಲಿ ನಿಲ್ಲಬೇಕು. ಇನ್ನೂ ಅಲ್ಲಿಯೂ ನೆಮ್ಮದಿಯಾಗಿ ನಿಲ್ಲುವಂತಿಲ್ಲ, ಏಕೆಂದರೆ ಬಸ್‌ಗಳು ಮೈಮೇಲೆ ಬರುತ್ತವೆ. ಆಗ ತಮ್ಮ ಲಗೇಜು, ಮಕ್ಕಳು, ವೃದ್ಧರು ಎಲ್ಲವನ್ನೂ ಎತ್ತಿಕೊಂಡು ನಿಂತಿರುವ ಮತ್ತೂಂದು ಬಸ್‌ ಎದುರೋ, ಇಲ್ಲ, ಎರಡು ಬಸ್‌ ಗಳ ಮಧ್ಯದಲ್ಲೇ ನಿಲ್ಲಬೇಕು. ಒಂದು ವೇಳೆ ನಿಂತಿರುವ ಬಸ್‌ ಹೊರಡಲು ಪ್ರಾರಂಭಿಸಿದ್ರೆ ಪ್ರಯಾಣಿಕರು ನಿಲ್ಲಲು ಮತ್ತೂಂದು ಜಾಗ ಹುಡುಕಾಡಬೇಕು.

ಪ್ರಯಾಣಿಕರ ಜಾಗದಲ್ಲೇ ಪಾರ್ಕಿಂಗ್‌: ಬಸ್‌ ನಿಲ್ದಾಣದ ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಪೊಲೀಸ್‌ ಇಲಾಖೆ ವಿಫ‌ಲವಾಗಿದೆ. ದ್ವಿಚಕ್ರ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಮಾಡಿಲ್ಲ, ನಿಲ್ದಾಣದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ, ಇಲ್ಲಿಂದ ಬಸ್‌ ಗಳಲ್ಲಿ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಪ್ರಯಾಣಿಕರು ಕೂರುವ ಜಾಗದಲ್ಲೇ ಅಡ್ಡಾದಿಡ್ಡಿ ಯಾಗಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದರಿಂದ ಸಾಕಷ್ಟು ಕಿರಿಕಿರಿ ಉಂಟಾಗುತ್ತಿದೆ.

ಪ್ರತ್ಯೇಕ ನಿಲ್ದಾಣವಿಲ್ಲ: ಇನ್ನೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪ್ರತ್ಯೇಕ ಬಸ್‌ ನಿಲ್ದಾಣ ಹೊಂದುವ ನಿಯಮವಿದ್ದರೂ ಸ್ಥಳದ ಹುಡುಕಾಟದಲ್ಲಿಯೇ 10-12 ವರ್ಷ ಕಳೆಯಲಾಗಿದೆ. ಆದರೆ, ಇಲ್ಲಿಯ ವರೆಗೂ ಸೂಕ್ತ ಸ್ಥಳ ನಿಗದಿ ಪಡಿಸಿಲ್ಲ. ತಾಲೂಕು ಅಡಳಿತ ಸೇರಿದಂತೆ ಜನಪ್ರತಿನಿಧಿಗಳು ಸಾರ್ವಜನಿಕರ ಉಪಯೋಗಕ್ಕಾಗಿ ಕನಿಷ್ಠ ಸೌಲಭ್ಯ ಹೊಂದಿರುವ ಬಸ್‌ ನಿಲ್ದಾಣದ ನಿರ್ಮಾಣದ ಗುರಿ ಹೊಂದಿಲ್ಲ.

ಸಂಚಾರ ದಟ್ಟಣೆ ಹೇಳತೀರದು: ಸಂಚಾರ ದಟ್ಟಣೆ ಇಲ್ಲದಿದ್ದರೆ ದೀಪಿಕಾ ಸಾವಿನಂತಹ ಪ್ರಕರಣ ನಡೆಯುತ್ತಿರಲಿಲ್ಲ. ಸಾರ್ವಜನಿಕರಿಂದ ತೆರಿಗೆ, ಬಸ್‌ ನಿಲ್ದಾಣದ ಬಳಕೆಯ ಶುಲ್ಕ ವಸೂಲಿ ಮಾಡುತ್ತಿರುವ ಪುರಸಭೆಯು ಸಾರ್ವಜನಿಕರಿಗೆ ಕನಿಷ್ಠ ಸೌಲಭ್ಯ ಕಲ್ಪಿಸಿಲ್ಲ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಆಗಿದೆ. ಅಡ್ಡಾದಿಡ್ಡಿಯಾಗಿ ಬಸ್‌ ನಿಲ್ಲಿಸುವ ಕಾರಣ ಹೊರಹೋಗುವ, ಒಳ ಬರುವ ಬಸ್‌ಗಳಿಗೆ ಸಮಸ್ಯೆಯಾಗುತ್ತದೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ದೂರದೂರಿಗೆ ಹೋಗುವ ಪ್ರಯಾಣಿಕರು ಕಿರಿಕಿರಿ ಅನುಭವಿಸಬೇಕಾಗುತ್ತದೆ.

 

-ಎಂ.ರವಿಕುಮಾರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ