ಶಾಲೆಯಲ್ಲಿರಬೇಕಾದ ಈ ಮಕ್ಕಳಿರುವುದು ಅರಣ್ಯದಲ್ಲಿ

Team Udayavani, Jan 28, 2020, 3:08 AM IST

ಶ್ರೀನಿವಾಸಪುರ (ಕೋಲಾರ): ತಾಲೂಕಿನ ದೊಡಮಲ ದೊಡ್ಡಿ ಮಾರ್ಗದಲ್ಲಿ ಸಿಗುವ ಅರಣ್ಯದಲ್ಲಿ ಶಿವಮೊಗ್ಗ, ಕಲಬುರಗಿ ಜಿಲ್ಲೆಯಿಂದ ವಲಸೆ ಬಂದಿರುವ ಕೂಲಿ ಕಾರ್ಮಿಕರು ನೀಲಗಿರಿ ಮರ ಕಟಾವು ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇವರೊಂದಿಗೆ ಸುಮಾರು 15 ಮಕ್ಕಳೂ ಬಂದಿದ್ದು, ಶಾಲೆಗೆ ಹೋಗದೆ 2 ತಿಂಗಳಿಂದ ಬಿಡಾರಗಳಲ್ಲೇ ಉಳಿದುಕೊಂಡಿದ್ದಾರೆ.

ಪಟ್ಟಣದಿಂದ ಕೊಳ್ಳೂರು ಮಾರ್ಗವಾಗಿ ದೊಡ ಮಲದೊಡ್ಡಿಗೆ ಹೋಗುವ ರಸ್ತೆಯಿಂದ 4 ಕಿ.ಮೀ. ದೂರದಲ್ಲಿರುವ ಅರಣ್ಯದಲ್ಲಿ ಈ ಕಾರ್ಮಿಕರು ನೀಲಗಿರಿ ಮರ ಕಟಾವು ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ನೀಲಗಿರಿ ಮರ ಕಟಾವು ಮಾಡಲು ಊರೂರು ಸುತ್ತುವ ಈ ಕೂಲಿ ಕಾರ್ಮಿಕರ ಕುಟುಂಬಗಳ ಜೊತೆ ಮಕ್ಕಳು ಸಹ ಶಾಲೆ ಬಿಟ್ಟು ಅಲೆದಾಡುತ್ತಿರುವುದು ವಿಷಾದನೀಯ.

15 ಕುಟುಂಬಗಳಿವೆ: ಈ ನೀಲಗಿರಿ ಮರಗಳನ್ನು ಸರ್ಕಾರದಿಂದ ವ್ಯಕ್ತಿಯೊಬ್ಬರು ಬಿಡ್‌ ಮಾಡಿದ್ದು, ಅವುಗಳನ್ನು ಕಟಾವು ಮಾಡಲು ಕಲಬುರುಗಿ ಜಿಲ್ಲೆಯ ಶಂಕರ್‌ ಎಂಬುವರು 15 ಕುಟುಂಬಗಳನ್ನು ಕರೆತಂದಿ ದ್ದಾರೆ. ನೀಲಗಿರಿ ಮರ ಕಡಿದು, ಅದರ ಸಿಪ್ಪೆ ತೆಗೆದು ಲಾರಿಗೆ ತುಂಬಿದರೆ ಒಂದು ಟನ್‌ಗೆ 500ರೂ. ನೀಡಲಾಗುತ್ತದೆ. ಈ ಕುಟುಂಬಗಳೊಂದಿಗೆ ಸುಮಾರು 15 ಮಕ್ಕಳು ಬಂದಿದ್ದಾರೆ. ಈ ಮಕ್ಕಳ ಪೈಕಿ ಕೆಲವರು ತಂದೆ -ತಾಯಿಗಳ ಜೊತೆ ಕೆಲಸ ಮಾಡಿದರೆ, ಚಿಕ್ಕ ಮಕ್ಕಳು ಟೆಂಟ್‌ ಹಾಕಿರುವ ಸ್ಥಳದಲ್ಲಿ ಆಟವಾಡಿಕೊಂಡಿದ್ದಾರೆ.

ಅಂಗನವಾಡಿ, ಶಾಲೆಗಳಲ್ಲಿ ಅ, ಆ, ಇ, ಈ, ಕಲಿಯಬೇಕಾದ ಈ ಮಕ್ಕಳು ಎರಡು ತಿಂಗಳಿಂದ ಬಿಸಿಲು, ಚಳಿಯಲ್ಲಿ ತಮ್ಮ ತಂದೆ- ತಾಯಿಗಳ ಜೊತೆ ಕೂಲಿ ಕೆಲಸ ಮಾಡಿಕೊಂಡು, ಬಿಡಾರಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗೆ ತಾಲೂಕಲ್ಲಿ ಜ.6ರಿಂದ 13ರವರೆಗೆ ಶಾಲೆ ಬಿಟ್ಟ ಮಕ್ಕಳು, ಶಾಲೆಯಿಂದ ಹೊರಗೆ ಇರುವ 34 ಮಕ್ಕಳನ್ನು ಶಿಕ್ಷಣ ಇಲಾಖೆ ಪತ್ತೆ ಮಾಡಿದೆ. ಆದರೆ, ಈ ಮಕ್ಕಳು ಅವರ ಕಣ್ಣಿಗೆ ಬೀಳದಿರುವುದು ವಿಪರ್ಯಾಸ.

ಅರಣ್ಯದ ನಡುವೆ ಇರುವ ಈ ರಸ್ತೆಯಲ್ಲಿ ಪ್ರತಿದಿನ ಹಲವು ಗ್ರಾಮಗಳಲ್ಲಿನ ಶಾಲೆಗಳಿಗೆ ಶಿಕ್ಷಕರು ಹೋಗುತ್ತಾರೆ. ಆದರೆ, ಈ ಮಕ್ಕಳು ಯಾರ ಕಣ್ಣಿಗೂ ಕಾಣಿಸಲಿಲ್ಲ. ಕೆಲವರು ನೋಡಿದರೂ ನಿರ್ಲಕ್ಷ್ಯ ವಹಿಸಿದ್ದಾರೆ. ತಮ್ಮ ಕೈಲಾಗದಿದ್ದರೂ ಕನಿಷ್ಠ ಇಲಾಖೆಯ ಗಮನಕ್ಕೆ ತಂದಿದ್ದರೆ ಇಲಾಖೆ ಕ್ರಮ ಕೈಗೊಳ್ಳುತ್ತಿತ್ತು. ಇಂತಹ ಅದೆಷ್ಟೋ ಮಕ್ಕಳು ಅರಣ್ಯ ಪ್ರದೇಶ, ಇತರೆಡೆ ಇರಬಹುದು. ಶಿಕ್ಷಣ ಇಲಾಖೆಯ ಸಚಿವರು ಇತ್ತ ಗಮನ ಹರಿಸಿದರೆ ಪರಿಹಾರ ಸಿಗಬಹುದು.

ಹೊಟ್ಟೆಪಾಡಿಗೆ ನಾವು ಬರುತ್ತೇವೆ. ಮಕ್ಕಳನ್ನು ಬಿಟ್ಟು ಬರಲು ಸಾಧ್ಯವಿಲ್ಲ. ನಾವು ಇರುವ ಕಡೆ ಮಕ್ಕಳು ಇರುತ್ತಾರೆ. ಗಂಡ- ಹೆಂಡತಿ ಸೇರಿ ನಾವಿಬ್ಬರೂ ದಿನ  ವೊಂದಕ್ಕೆ 500 ರೂ.ನಿಂದ 600 ರೂ. ಸಂಪಾದನೆ ಮಾಡುತ್ತೇವೆ. ಮುಂಗಡವಾಗಿ ಗುತ್ತಿಗೆದಾರರು ಆಹಾರ ಧಾನ್ಯ ಕೊಡಿಸುತ್ತಾರೆ. ಇದು ನಮ್ಮ ಹೊಟ್ಟೆಪಾಡು.
-ಅಂಬಿಕಾ-ರಮೇಶ ದಂಪತಿ, ಶಿವಮೊಗ್ಗ ಜಿಲ್ಲೆಯಿಂದ ವಲಸೆ ಬಂದಿರುವ ಕಾರ್ಮಿಕರು

2020ನೇ ಸಾಲಿನ ಜನವರಿಯಲ್ಲಿ ಸಹ 8 ದಿನಗಳ ಕಾಲ ಮಕ್ಕಳ ಸಮೀಕ್ಷೆ ನಡೆಸಿ 34 ಮಕ್ಕಳನ್ನು ಪತ್ತೆ ಮಾಡಿದ್ದೇವೆ. ಆದರೆ, ಕಾಡಿನಲ್ಲಿ ಇರುವ ಮಕ್ಕಳ ಬಗ್ಗೆ ತಿಳಿದಿಲ್ಲ. ಆದರೂ ಆ ಮಕ್ಕಳು ಎಷ್ಟು ದಿನ ಇರುತ್ತಾರೆ ಎಂಬುದನ್ನು ಇಲಾಖೆಯ ಸಿಬ್ಬಂದಿ ಕಳುಹಿಸಿ, ಮಾಹಿತಿ ಪಡೆದು, ನಂತರ ಏನು ಮಾಡಬಹುದು ಎಂದು ತೀರ್ಮಾನ ತೆಗೆದುಕೊಳ್ಳುತ್ತೇವೆ.
-ಉಮಾದೇವಿ, ಬಿಇಒ ಶ್ರೀನಿವಾಸಪುರ

* ಕೆ.ವಿ.ನಾಗರಾಜ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ