ಮೂವರ ಪೈಕಿ ಯಾರಿಗೆ ಮಂತ್ರಿ ಭಾಗ್ಯ?

ಶಾಸಕರಾದ ನಾಗೇಶ್‌, ಶ್ರೀನಿವಾಸಗೌಡ, ರೂಪಕಲಾ ಆಕಾಂಕ್ಷಿಗಳು

Team Udayavani, Jun 11, 2019, 10:59 AM IST

ಕೋಲಾರ: ಜಿಲ್ಲೆಯ ಯಾರಿಗೆ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗುತ್ತದೆ ಎನ್ನುವುದು ಜನತೆಯ ಕುತೂಹಲಕ್ಕೆ ಕಾರಣವಾಗಿದೆ. ಜಿಲ್ಲೆಯ ಆರು ಮಂದಿ ಶಾಸಕರ ಪೈಕಿ ಮೈತ್ರಿ ಸರ್ಕಾರದಲ್ಲಿ ಮೂವರು ವಿವಿಧ ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಶ್ರೀನಿವಾಸಪುರ ಶಾಸಕ ರಮೇಶ್‌ಕುಮಾರ್‌ ಸ್ಪೀಕರ್‌ ಸ್ಥಾನವನ್ನು ಅಲಂಕರಿಸಿದ್ದಾರೆ. ಮಾಲೂರು ಶಾಸಕ ಕೆ.ವೈ.ನಂಜೇಗೌಡ ಕೋಚಿಮುಲ್ ಅಧ್ಯಕ್ಷರಾಗಿದ್ದಾರೆ. ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ಪೀಕರಿಸಿದ್ದಾರೆ.

ಮಂತ್ರಿ ಸ್ಥಾನದ ಮೇಲೆ ಮುಳಬಾಗಿಲು ಪಕ್ಷೇತರ ಶಾಸಕ ಎಚ್.ನಾಗೇಶ್‌, ಕೋಲಾರ ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ ಮತ್ತು ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್‌ ಕಣ್ಣಿಟ್ಟಿದ್ದಾರೆ.

ಎಚ್.ನಾಗೇಶ್‌: ಮೈತ್ರಿ ಸರಕಾರಕ್ಕೆ ಬೆಂಬಲ ನೀಡಿದ್ದ ಪಕ್ಷೇತರ ಶಾಸಕ ಎಚ್.ನಾಗೇಶ್‌ ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿಯೇ ಮಂತ್ರಿ ಸ್ಥಾನ ಪಡೆದುಕೊಳ್ಳಬೇಕಾಗಿತ್ತು. ಆದರೆ, ಅದೃಷ್ಟ ಕೈಕೊಟ್ಟಿತ್ತು. ಮಂತ್ರಿ ಸ್ಥಾನ ನೀಡುವುದಾಗಿ ವಾಗ್ಧಾನ ನೀಡಿ ಬೆಂಬಲ ಪಡೆದುಕೊಂಡಿದ್ದ ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿ ಸರಕಾರವು ನಾಗೇಶ್‌ರನ್ನು ಕಡೆಗಣಿಸಿತ್ತು.

ಇದೇ ಮುನಿಸಿನಲ್ಲಿದ್ದ ಶಾಸಕ ಎಚ್.ನಾಗೇಶ್‌, ಬಿಜೆಪಿಯ ಆಪರೇಷನ್‌ ಕಮಲ ಬೆಳವಣಿಗೆಯಲ್ಲಿ ಬಿಜೆಪಿಯತ್ತ ವಾಲಿದ್ದರು. ಗೋವಾದಲ್ಲಿ ಬೀಡು ಬಿಟ್ಟಿದ್ದರು. ಆದರೆ, ಆಪರೇಷನ್‌ ಕಮಲ ವಿಫ‌ಲವಾಗಿದ್ದರಿಂದ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಮತ್ತೆ ಮೈತ್ರಿ ಸರ್ಕಾರದ ಗುಂಪಿನಲ್ಲಿ ಕಾಣಿಸಿಕೊಂಡಿದ್ದರು. ಈ ಮಧ್ಯೆ ಕಾಂಗ್ರೆಸ್‌ ತಮಗೆ ಮಂತ್ರಿ ಸ್ಥಾನ ನೀಡದೆ ಮೋಸ ಮಾಡಿದೆಯೆಂಬ ಹೇಳಿಕೆ ನೀಡಿದ್ದರು. ಆದರೂ, ಮೈತ್ರಿ ಸರ್ಕಾರ ಇವರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಈ ಬಾರಿಯೂ ಪಕ್ಷೇತರ ಇಬ್ಬರೂ ಶಾಸಕರಿಗೆ ಮಂತ್ರಿ ಸ್ಥಾನ ಸಿಗುತ್ತದೆಯೆಂದು ಹೇಳಲಾಗುತ್ತಿದೆ ಯಾದರೂ ಖಾತ್ರಿಯಾಗಿಲ್ಲ. ಖುದ್ದು ಶಾಸಕ ಎಚ್.ನಾಗೇಶ್‌ ಅವರೇ ತಮಗೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಿಹಿ ಸುದ್ದಿ ಸಿಗುತ್ತದೆಯೆಂಬ ನಿರೀಕ್ಷೆಯಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗುಣಗಾನವನ್ನು ಮಾಡುತ್ತಿದ್ದಾರೆ. ಆದರೆ, ಈ ವಿಚಾರದಲ್ಲಿ ಜಿಲ್ಲೆಯ ಇತರೇ ಶಾಸಕರ ಬೆಂಬಲ ಇವರಿಗೆ ದೊರೆತಂತೆ ಕಾಣಿಸುತ್ತಿಲ್ಲ.

ಒಂದು ವೇಳೆ ಮಂತ್ರಿ ಸ್ಥಾನ ಸಿಗದಿದ್ದರೆ ತಮಗೆ ಸಂಪುಟ ದರ್ಜೆಯ ವಿದ್ಯುತ್‌ ಮಂಡಳಿಯ ಅಧ್ಯಕ್ಷ ಸ್ಥಾನ ಬೇಕೆಂಬ ಬೇಡಿಕೆಯನ್ನು ಶಾಸಕ ಎಚ್.ನಾಗೇಶ್‌ ಇಟ್ಟಿದ್ದಾರೆಂದು ಹೇಳಲಾಗುತ್ತಿದೆ.

ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತುಕೊಳ್ಳಬೇಕೆಂದು ಪಟ್ಟು ಹಿಡಿದಿರುವ ಎಚ್.ನಾಗೇಶ್‌ಗೆ ಮಂತ್ರಿಭಾಗ್ಯ ಸಿಗುತ್ತದೆಯೇ ಇಲ್ಲವೇ ಎನ್ನುವುದು ಕುತೂಹಲ ಮೂಡಿಸಿದೆ.

ಕೆ.ಶ್ರೀನಿವಾಸಗೌಡ: ಜಿಲ್ಲೆಯ ಏಕೈಕ ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ. ಚುನಾವಣೆ ಸಂದರ್ಭ ದಲ್ಲಿ ಟಿಕೆಟ್ ನೀಡಲೇ ಪಕ್ಷದ ವರಿಷ್ಠರು ಸತಾ ಯಿಸಿದ್ದರಿಂದ ಮುನಿಸಿಕೊಂಡಿದ್ದರು. ಬಿ ಫಾರಂ ಕೈ ತಪ್ಪಿದ್ದರಿಂದ ಬೇಸರಗೊಂಡಿದ್ದರು. ಆದರೆ, ಅಭಿಮಾನಿ ಬೆಂಬಲಿಗರ ಪ್ರಯತ್ನದಿಂದ ಕೆ.ಶ್ರೀನಿವಾಸಗೌಡರಿಗೆ ಜೆಡಿಎಸ್‌ ಟಿಕೆಟ್ ನೀಡಿತು. ಗೆಲುವು ಸಂಪಾದಿಸಿದರು.

ಬಿ ಫಾರಂ ನೀಡಲು ಜೆಡಿಎಸ್‌ ವರಿಷ್ಠರು ಸತಾಯಿಸಿದ್ದನ್ನು ಕೆ.ಶ್ರೀನಿವಾಸಗೌಡ ಮರೆತಿಲ್ಲ. ಸಮಯ ಸಿಕ್ಕಾಗಲೆಲ್ಲಾ ಆತ್ಮೀಯರ ಬಳಿ ಜೆಡಿಎಸ್‌ ವರಿಷ್ಠರ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಇದು ಜೆಡಿಎಸ್‌ ವರಿಷ್ಠರ ಕಿವಿಗೆ ಮುಟ್ಟಿಸುವ ಕೆಲಸವನ್ನು ಅವರದೇ ಪಕ್ಷದವರು ಅಚ್ಚು ಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯರಾದರೂ, ಕೆ.ಶ್ರೀನಿವಾಸಗೌಡ ಮಂತ್ರಿ ಸ್ಥಾನದಿಂದ ದೂರವಾಗಬೇಕಾಯಿತು.

ಆದರೂ, ಮುಂದಿನ ದಿನಗಳಲ್ಲಿ ಮಂತ್ರಿ ಸ್ಥಾನ ಸಿಗುತ್ತದೆಯೆಂಬ ನಿರೀಕ್ಷೆಯಲ್ಲಿದ್ದಾರೆ. ಈ ಮಧ್ಯೆ ತಮಗೂ ಆಪರೇಷನ್‌ ಕಮಲದ ಆಹ್ವಾನವಿದೆ. 30 ಕೋಟಿ ರೂ.ನ ಆಮಿಷವಿದೆ. 5 ಕೋಟಿ ನಗದು ಮುಂಗಡವಾಗಿ ಕೊಟ್ಟಿದ್ದರು. ಎಂಬೆಲ್ಲಾ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸಿಕೊಂಡಿದ್ದರು. ಆನಂತರ ಮೈತ್ರಿ ಸರ್ಕಾರವನ್ನು ಉಳಿಸುವ ಸಲುವಾಗಿಯೇ ಇಂಥದ್ದೊಂದು ಹೇಳಿಕೆ ನೀಡಿದ್ದಾಗಿ ಸ್ಪಷ್ಟನೆ ನೀಡಿ ವಿವಾದದಿಂದ ಬಚಾವ್‌ ಆಗಿದ್ದರು. ಇಷ್ಟೆಲ್ಲಾ ಆದರೂ, ಕೆ.ಶ್ರೀನಿವಾಸಗೌಡರನ್ನು ಜೆಡಿಎಸ್‌ ವರಿಷ್ಠರು ನಂಬಿದಂತೆ ಕಾಣಿಸುತ್ತಿಲ್ಲ.

ತೀರಾ ಇತ್ತೀಚಿಗೆ ಲೋಕಸಭಾ ಚುನಾವಣೆಯಲ್ಲಿ ಪ್ರತ್ಯಕ್ಷವಾಗಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದರು. ಇದಕ್ಕೆ ಕೆ.ಎಚ್.ಮುನಿಯಪ್ಪ ಮೇಲಿನ ಮುನಿಸು ಕಾರಣವೇ ಹೊರತು ತಾವು ಬಿಜೆಪಿ ಸೇರುವುದಿಲ್ಲ ವೆಂದು ಮತ್ತೂಂದು ಸ್ಪಷ್ಟನೆ ನೀಡಿದ್ದರು.

ಇವೆಲ್ಲಾ ಘಟನಾವಳಿಗಳು ಕೆ.ಶ್ರೀನಿವಾಸಗೌಡ ರನ್ನು ಮಂತ್ರಿ ಸ್ಥಾನದಿಂದ ದೂರ ಮಾಡುತ್ತಲೇ ಇದೆ. ಆದರೂ, ಮಂತ್ರಿಯಾಗುವ ಬಯಕೆ ಗೌಡರನ್ನು ಬಿಟ್ಟಿಲ್ಲ.

ರೂಪಕಲಾ ಶಶಿಧರ್‌: ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್‌ ಕಾಂಗ್ರೆಸ್‌ನಲ್ಲಿ ದಲಿತರ ಎಡಗೈ ಕೋಟಾದಲ್ಲಿ ಮಂತ್ರಿ ಸ್ಥಾನಕ್ಕಾಗಿ ಪ್ರಯತ್ನಿಸುತ್ತಲೇ ಇದ್ದಾರೆ. ಮೊದಲ ಅವಧಿಯಲ್ಲಿಯೇ ಮಂತ್ರಿ ಸ್ಥಾನ ರೂಪ ಅವರನ್ನು ಸಮೀಪಿಸಿತ್ತು. ಆದರೆ, ಕಾರಣಾಂ ತರಗಳಿಂದ ಕೈತಪ್ಪಿತ್ತು.

ಕೆ.ಎಚ್.ಮುನಿಯಪ್ಪರ ಪುತ್ರಿಯಾಗಿರುವ ರೂಪಕಲಾ ಅವರಿಗೆ ಮಹಿಳಾ ಕೋಟಾದಡಿ ಹಾಗೂ ದಲಿತರ ಎಡಗೈ ಕೋಟಾ ಎರಡೂ ಸೇರಿದಂತೆ ಮಂತ್ರಿ ಸ್ಥಾನ ಸಿಗಲೇ ಬೇಕಿತ್ತು. ಆದರೆ, ಕೆ.ಎಚ್.ಮುನಿಯಪ್ಪ ವಿರೋಧಿ ಕಾಣದ ಕೈಗಳು ಇವರಿಗೆ ಮಂತ್ರಿ ಸ್ಥಾನ ಸಿಗದಂತೆ ಮಾಡಿದ್ದವು.

ಆದರೂ, ಇವರಿಂದ ಮಂತ್ರಿ ಸ್ಥಾನಕ್ಕಾಗಿ ಪ್ರಯತ್ನ ನಡೆದೇ ಇದೆ. ಕಳೆದ ಬಾರಿ ಸಂಪುಟ ವಿಸ್ತರಣೆಯಾದ ಸಂದರ್ಭದಲ್ಲಿ ರೂಪಕಲಾ ಅವರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನ ಮಾನ ನೀಡಿ ಸಮಾಧಾನ ಮಾಡಲಾಗಿತ್ತು.

ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿ ಯಪ್ಪ ಸೋಲನ್ನು ಅನುಭವಿಸಿರುವುದರಿಂದ ಸಂಪುಟ ವಿಸ್ತರಣೆಯಲ್ಲಿ ರೂಪ ಅವರ ಹೆಸರು ಕ್ಷೀಣವಾಗಿ ಕೇಳಿ ಬರುವಂತಾಗಿದೆ. ರೂಪಕಲಾ ಅವರಿಗೆ ಮಂತ್ರಿ ಸ್ಥಾನ ದೊರೆತರೆ ಕೆ.ಎಚ್.ಮುನಿಯಪ್ಪರಿಗೆ ಪರೋಕ್ಷವಾಗಿ ಅಧಿಕಾರ ಸಿಕ್ಕಂತಾ ಗುತ್ತದೆಯೆಂಬ ಭೀತಿಯೂ ಅವರ ವಿರೋಧಿ ಗಳಲ್ಲಿದೆ. ಈ ಕಾರಣದಿಂದ ರೂಪಕಲಾ ಅವರಿಗೆ ಮಂತ್ರಿ ಸ್ಥಾನ ಸಿಗಲು ಹಿತಶತ್ರುಗಳ ಕಾಟ ಇರು ವಂತಾಗಿದೆ.

ಪ್ರತ್ಯೇಕ ಪ್ರಯತ್ನ: ಕೋಲಾರ ಜಿಲ್ಲೆಯ ಆರು ಮಂದಿ ಶಾಸಕರ ಪೈಕಿ ಒಬ್ಬರಿಗೆ ಮಂತ್ರಿ ಸ್ಥಾನ ದೊರೆತು, ಅವರಿಗೆ ಉಸ್ತುವಾರಿ ಹೊಣೆಗಾರಿಕೆ ಯನ್ನು ನೀಡಬೇಕೆಂದು ಆರು ಮಂದಿ ಶಾಸಕರು ಒಗ್ಗಟ್ಟಿನಿಂದ ಪ್ರಯತ್ನಿಸಿದರೆ ಕೋಲಾರ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗುವುದು ದೊಡ್ಡ ವಿಷಯವೇನಲ್ಲ. ಆದರೆ, ಪ್ರತಿಯೊಬ್ಬರೂ ತಮ್ಮದೇ ಹಾದಿಯಲ್ಲಿ ಪ್ರಯತ್ನಗಳನ್ನು ನಡೆಸುತ್ತಿರುವುದರಿಂದ ಹಾಗೂ ಒಬ್ಬರ ಪ್ರಯತ್ನಕ್ಕೆಮತ್ತೂಬ್ಬರು ಅಡ್ಡಗಾಲಾಗಿ ರುವುದರಿಂದ ಕೋಲಾರ ಜಿಲ್ಲೆಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಗದಂತಾಗಿದೆ.

● ಕೆ.ಎಸ್‌.ಗಣೇಶ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ