ಖಾಸಗಿ ಶಾಲೆಗಳಲ್ಲಿ ಪರಿಶಿಷ್ಟರಿಗಿಲ್ಲ ಮೀಸಲು

ಶೀಘ್ರ ಶುಲ್ಕ ವಿವರ ಪ್ರಕಟಿಸಲು ಕ್ರಮಕೈಗೊಳ್ಳಿ • ಪರಿಶಿಷ್ಟ ದೌರ್ಜನ್ಯ ತಡೆ ಸಮಿತಿ ಸಭೆಯಲ್ಲಿ ಡಿಡಿಪಿಐಗೆ ಎಸಿ ಸೂಚನೆ

Team Udayavani, Aug 8, 2019, 1:20 PM IST

ಕೋಲಾರದಲ್ಲಿ ನಡೆದ ಪರಿಶಿಷ್ಟರ ದೌರ್ಜನ್ಯ ಸಭೆಯಲ್ಲಿ ಎಸಿ ಸೋಮಶೇಖರ್‌ ಮಾತನಾಡಿದರು.

ಕೋಲಾರ: ಪರಿಶಿಷ್ಟ ಜಾತಿ, ವರ್ಗದ ವಿದ್ಯಾರ್ಥಿಗಳಿಗೆ ಮೀಸಲಾತಿ ಕಲ್ಪಿಸಲು ಅವಕಾಶವಿದ್ದರೂ ನಿರ್ಲಕ್ಷ್ಯ ತೋರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈ ಗೊಂಡು, ಶಾಲಾ ಶುಲ್ಕಗಳ ವಿವರ ಪ್ರಕಟಿಸಲು ಕ್ರಮ ಕೈಗೊಳ್ಳಿ ಎಂದು ಡಿಡಿಪಿಐಗೆ ಉಪವಿಭಾಗಾಧಿಕಾರಿ ಸೋಮಶೇಖರ್‌ ಸೂಚನೆ ನೀಡಿದರು.

ನಗರದ ತಮ್ಮ ಕಚೇರಿಯಲ್ಲಿ ನಡೆದ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಹದ್ದು ಮೀರಿ ವರ್ತಿಸುತ್ತಿವೆ, ಶಿಕ್ಷಣ ಇಲಾಖೆ ಅಧಿಕಾರಿಗಳ ಮಾತಿಗೆ ನಯಾಪೈಸೆ ಮರ್ಯಾದೆ ನೀಡುತ್ತಿಲ್ಲ. ಹೆಚ್ಚಾಗಿ ಮಾತನಾಡಿದರೆ ಅಧಿಕಾರಿಗಳನ್ನು ಬೆದರಿಸುವುದಲ್ಲದೆ, ಕೂಡಿ ಹಾಕುತ್ತಾರೆ ಎಂದು ಸಭೆಯಲ್ಲಿದ್ದ ಮುಖಂಡರು ಎಸಿ ಗಮನಕ್ಕೆ ತಂದರು.

ಮುಲಾಜಿಲ್ಲದೆ ಕ್ರಮ: ಇದಕ್ಕೆ ಪ್ರತಿಕ್ರಿಯಿಸಿದ ಸೋಮಶೇಖರ್‌, ಇವೆಲ್ಲವೂ ಸರಿಯಲ್ಲ. ಖಾಸಗಿ ಶಾಲೆಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದರೆ ನೋಡಿಕೊಂಡಿರಲು ಸಾಧ್ಯವಿಲ್ಲ. ಈ ಕೂಡಲೇ ಡಿಡಿಪಿಐಗೆ ಪತ್ರ ಕಳುಹಿಸಿ, ಸಭೆ ನಡೆಸಿ ಕ್ರಮಕೈಗೊಳ್ಳಲಾಗುವುದು. ಜೊತೆಗೆ ಶುಲ್ಕಗಳ ವಿವರದ ಫಲಕ ಹಾಕಿಸಲಾಗುವುದು. ಆಗಲೂ ಯಾರಾದರೂ ನಿಯಮ ಉಲ್ಲಂಘಿಸಿದ್ದೇ ಆದಲ್ಲಿ, ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ದೇಗುಲಕ್ಕೆ ಪ್ರವೇಶ: ಗೃಹಪ್ರವೇಶ ಸಮಿತಿಯ ಸಂಚಾಲಕ ಅರಿವು ಡಾ.ಶಿವಪ್ಪ, ಸಮಿತಿಯಿಂದ ಸಮೀಕ್ಷೆ ನಡೆಸಲಾಗಿದ್ದು, ಆ ಪೈಕಿ ಶೇ.90 ದೇವಾಲಯಗಳಿಗೆ ಗ್ರಾಮೀಣ ಭಾಗದಲ್ಲಿ ದಲಿತರಿಗೆ ಪ್ರವೇಶವಿಲ್ಲ. ಸುರಕ್ಷತೆ ಇದ್ದರೆ ಅವರೂ ಎಲ್ಲರಂತೆ ಬರುತ್ತಾರೆ. ನಾವು ಕಾರ್ಯಕ್ರಮಗಳನ್ನು ನಡೆಸಿರುವ ಪರಿಣಾಮ ರಾಜ್ಯದ 32 ಸಾವಿರ ದೇವಾಲಯಗಳಲ್ಲಿ ಪ್ರವೇಶವಕಾಶ ಸಿಕ್ಕಿದೆ ಎಂದರು.

ಕ್ರಮ ಕೈಗೊಂಡಿಲ್ಲ: ಹಳ್ಳಿಗಳಲ್ಲಿ ಈಗಲೂ ಮನೆ, ದೇವಾಲಯಗಳಲ್ಲಿ ದಲಿತರ ಪ್ರವೇಶ ನಿರಾಕರಣೆ ಇದೆ. ಇನ್ನು ನಗರ ಪ್ರದೇಶಗಳಲ್ಲಿನ ಸಫಾಯಿ ಕರ್ಮಚಾರಿಗಳು ಬಹುತೇಕ ದಲಿತರೇ ಆಗಿದ್ದು, ಇತ್ತೀಚೆಗೆ ಮುಳಬಾಗಿಲಿನಲ್ಲಿ ಸ್ವಚ್ಛತಾ ಕಾರ್ಯಕ್ಕೆ ಯಾವುದೇ ಸುರಕ್ಷತಾ ಸಲಕರಣೆಗಳನ್ನು ಬಳಸುತ್ತಿರಲಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಫೋಟೋ ಸಮೇತ ತಿಳಿಸಿದ್ದರೂ ಕ್ರಮ ಇಲ್ಲ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಉಪವಿಭಾಗಾಧಿಕಾರಿ ಸೋಮಶೇಖರ್‌, ಮುಜರಾಯಿ ಅಲ್ಲದೆ, ಎಲ್ಲ ದೇವಾಲಯಗಳೆದುರೂ ಎಲ್ಲ ವರ್ಗದ ಜನರಿಗೂ ಪ್ರವೇಶವಿದೆ ಎನ್ನುವ ಫಲಕಗಳನ್ನು ಅಳವಡಿಸಬೇಕಿದ್ದು, ಇದಕ್ಕೆ ತಹಶೀಲ್ದಾರರು ಜವಾಬ್ದಾರಿ ವಹಿಸಬೇಕು ಜೊತೆಗೆ ಪೊಲೀಸ್‌ ಅಧಿಕಾರಿಗಳ ಸಹಕಾರ ಪಡೆದುಕೊಳ್ಳಿ ಎಂದರು.

ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಸಫಾಯಿ ಕರ್ಮಚಾರಿಗಳಿಗೆ ಸಲಕರಣೆ ವ್ಯವಸ್ಥೆ ಮಾಡದ ಮುಳಬಾಗಿಲು ನಗರಸಭೆ ಪೌರಾಯುಕ್ತರಿಗೆ ನೋಟಿಸ್‌ ನೀಡುವಂತೆ ಸೂಚಿಸಿದರು. ಸಭೆಯಲ್ಲಿ ಮಾತನಾಡಿದ ಮುಖಂಡರು, ಸರ್ವೇ ಇಲಾಖೆಯ ಅಧಿಕಾರಿ ಸುರೇಶ್‌ಬಾಬು ದಲಿತರ ಭೂಮಿಗಳನ್ನೇ ಗುರಿಯಾಗಿಸಿಕೊಂಡು ಅದಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸುವ ಕೆಲಸಗಳನ್ನು ಮಾಡುತ್ತಿದ್ದಾನೆ. ಇದುವರೆಗೂ ಆತನ ವರ್ಗಾವಣೆ ಮಾಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ ಎಂದು ದೂರಿದರು.

ಪರಿಶೀಲಿಸಿ ಕ್ರಮ: ಈಗಾಗಲೇ ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ, ಮಾಲೂರಿನ ಶಾಸಕ ನಂಜೇಗೌಡರನ್ನೂ ಪ್ರಕರಣಗಳಲ್ಲಿ ಸಿಲುಕಿಸಿ ತೊಂದರೆ ನೀಡಿ ಬೆದರಿಸುತ್ತಿದ್ದಾನೆ. ದಾಖಲೆ ಸಮೇತ ಅಧಿಕಾರಿ ವಿರುದ್ಧ ದೂರು ನೀಡಿದರೂ ಕ್ರಮವಾಗಿಲ್ಲ ಎಂದು ಹೇಳಿದರು. ಇದಕ್ಕೆ ಉಪವಿಭಾಗಾಕಾರಿ ಸೋಮಶೇಖರ್‌, ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಯಾವುದಕ್ಕೂ ಸ್ಪಂದಿಸುತ್ತಿಲ್ಲ: ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಮಾಲೂರು ಅಧಿಕಾರಿ ಶಿವಕುಮಾರ್‌ ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂದು ಜಿಪಂ ಉಪಾಧ್ಯಕ್ಷರು ಸೇರಿದಂತೆ ಮುಖಂಡರು ದೂರಿದರು.

ಸಮಗ್ರ ವರದಿ ನೀಡದಿದ್ದರೆ ಕ್ರಮ: ಈ ವೇಳೆ ಶಿವಕುಮಾರ್‌ರನ್ನು ತರಾಟೆ ತೆಗೆದುಕೊಂಡ ಎಸಿ, ನಾನು ಹೇಳಿದ್ದ 3 ಕೆಲಸಗಳನ್ನು ನೀನು ಮಾಡಿಲ್ಲ. ನಿನಗೆ ಸಂಬಳ ಯಾಕೆ ಕೊಡಬೇಕು. ಆಟ ಅಡುತ್ತೀಯ ನೀನು. 2 ದಿನದ ಒಳಗಾಗಿ ಸಮಗ್ರ ವರದಿ ನೀಡದಿದ್ದರೆ ಸರಿಯಾಗಿ ಅನುಭವಿಸುತ್ತೀಯ ಎಂದು ಎಚ್ಚರಿಕೆ ನೀಡಿದರು.

ಪ್ರಕರಣ ದಾಖಲು: ಕೋಲಾರ ಡಿವೈಎಸ್ಪಿ ಚೌಡಪ್ಪ, 2017ರಲ್ಲಿ 39 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, 8 ಸುಳ್ಳಾಗಿವೆ. 2018ರಲ್ಲಿ 31 ಪ್ರಕರಣ ದಾಖಲು, 5 ಸುಳ್ಳು ಹಾಗೂ 2019ರಲ್ಲಿ 19 ಪ್ರಕರಣ ದಾಖಲು 1 ಸುಳ್ಳು ಎಂದು ಮಾಹಿತಿ ನೀಡಿದರು.

ಮುಳಬಾಗಿಲು ಡಿವೈಎಸ್ಪಿ ಬಿ.ಕೆ.ಉಮೇಶ್‌, 2017ರಲ್ಲಿ 23 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, 2 ಸುಳ್ಳಾಗಿವೆ. 2018ರಲ್ಲಿ 19 ಪ್ರಕರಣ ದಾಖಲು, 2 ಸುಳ್ಳು ಹಾಗೂ 2019ರಲ್ಲಿ 12 ಪ್ರಕರಣ ದಾಖಲು 1 ಸುಳ್ಳು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಯಶೋಧ ಕೃಷ್ಣಮೂರ್ತಿ, ಸದಸ್ಯೆ ರೂಪಶ್ರೀ ಮಂಜು, ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ಎಂ.ಕೆ.ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹೊಳಲ್ಕೆರೆ: ಮಾನವ ತನ್ನ ಅರಿವಿಗೆ ಬಾರದೇ ದುರ್ಬುದ್ಧಿಗೆ ಒಳಗಾಗುತ್ತಾನೆ. ದುರ್ಬುದ್ಧಿಯ ಮಾತನ್ನು ಕೇಳಿದವರು ಸಂಕಷ್ಟ ಅನುಭವಿಸಿದರೆ, ಸದ್ಭುದ್ಧಿಯ ಮಾತನ್ನು...

  • ತರೀಕೆರೆ: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ವಿಳಂಬದ ಕುರಿತು ಗಂಭೀರ ಚರ್ಚೆ ನಡೆಯಿತು. ಸಭೆಯಲ್ಲಿ ಮಾತನಾಡಿದ...

  • ಚಿಕ್ಕಮಗಳೂರು: ಅತಿವೃಷ್ಟಿಯಿಂದ ಮನೆ ಕಳೆದುಕೊಂಡಿರುವ ನೈಜ ಫಲಾನುಭವಿಗಳನ್ನು ಆಯ್ಕೆ ಮಾಡಿ ಸೌಲಭ್ಯ ಕಲ್ಪಿಸಬೇಕೆಂದು ತಾಲೂಕು ಪಂಚಾಯತ್‌ ಅಧ್ಯಕ್ಷ ಜಯಣ್ಣ...

  • ವೆಂಕೋಬಿ ಸಂಗನಕಲ್ಲು ಬಳ್ಳಾರಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿಯನ್ನು ವಿಶೇಷವಾಗಿ ಆಚರಿಸಲು ಮುಂದಾಗಿರುವ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ...

  • ಹರಪನಹಳ್ಳಿ: ಬಸವ ವಸತಿ ಯೋಜನೆಯಡಿ ಮಂಜೂರಾಗಿರುವ ಮನೆಗಳನ್ನು ಕಡ್ಡಾಯವಾಗಿ ಗ್ರಾಮ ಸಭೆ ಮೂಲಕವೇ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆ ನಿರ್ಮಿಸಿ ಕೊಡಬೇಕು...

ಹೊಸ ಸೇರ್ಪಡೆ