ಕೊಪ್ಪ: ವಿಜೃಂಭಣೆಯ ಶ್ರೀ ವೀರಭದ್ರಸ್ವಾಮಿ ರಥೋತ್ಸವ

ರಥೋತ್ಸವಕ್ಕೆ ಮೆರಗು ನೀಡಿದ ನಾಸಿಕ್‌ ಡೋಲು, ಚಂಡೆ ಮೇಳ, ವೀರಗಾಸೆ, ಮಂಗಳವಾದ್ಯ

Team Udayavani, Apr 20, 2019, 5:49 PM IST

ಕೊಪ್ಪ: ಪಟ್ಟಣದ ಶ್ರೀ ವೀರಭದ್ರಸ್ವಾಮಿ ವಾರ್ಷಿಕ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಕೊಪ್ಪ: ಪಟ್ಟಣದ ಪುರಾಣ ಪ್ರಸಿದ್ಧ ಕೋಪದ ವೀರಭದ್ರಸ್ವಾಮಿ ವಾರ್ಷಿಕ ರಥೋತ್ಸವ ಶುಕ್ರವಾರ ಸಕಲ ಧಾರ್ಮಿಕ ವಿ ಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಿಂದ ಹುಚ್ಚುರಾಯರ ಕೆರೆಯವರೆಗೆ ಉತ್ಸವ ಮೂರ್ತಿಯನ್ನು ಮಂಗಲ ವಾದ್ಯಮೇಳದೊಂದಿಗೆ
ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕೆರೆಯಲ್ಲಿ ಗಂಗಾ ಪೂಜೆ ನೆರವೇರಿಸಿ ಪವಿತ್ರಜಲವನ್ನು ದೇವಸ್ಥಾನಕ್ಕೆ ತರಲಾಯಿತು.

ನಂತರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕೆಂಡಸೇವೆಯಲ್ಲಿ ಮೊದಲು ಶ್ರೀದೇವರನ್ನು ಹೊತ್ತ
ಅರ್ಚಕರು ಕೆಂಡ ಹಾಯ್ದರು. ನಂತರ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಕೆಂಡ ಹಾಯ್ದು ತಮ್ಮ ಭಕ್ತಿ ಸಮರ್ಪಣೆ ಮಾಡಿದರು.

ಮಧ್ಯಾಹ್ನ 1.00 ಗಂಟೆಗೆ ಉತ್ಸವಮೂರ್ತಿಯನ್ನು ಸಕಲ ವಾದ್ಯಮೇಳದೊಂದಿಗೆ ರಥದ ಬಳಿ ತರಲಾಯಿತು. ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಶ್ರೀದೇವರ ಶ್ರೀ ಮನ್ಮಹಾರಥಾರೋಹಣ ನೆರವೇರಿತು. ನೆರದಿದ್ದ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಶ್ರೀವೀರಭದ್ರಸ್ವಾಮಿಗೆ ಜಯಘೋಷ ಕೂಗುತ್ತಾ ರಥಕ್ಕೆ ಬಾಳೆಹಣ್ಣು, ಅಕ್ಷತೆ, ದವಸ ದಾನ್ಯಗಳನ್ನು
ಎರಚಿದರು. ದೇವರಿಗೆ ಹಣ್ಣುಕಾಯಿ, ಮಹಾಮಂಗಳಾರತಿ ನೆರವೇರಿಸಿದ ನಂತರ ದೇವಸ್ಥಾನದಿಂದ ಚಿಕ್ಕಮಗಳೂರು ವೃತ್ರದವರೆಗೆ ರಥವನ್ನು ಎಳೆದುಕೊಂಡು ಬರಲಾಯಿತು. ರಾತ್ರಿ ರಥೋತ್ಸವದಲ್ಲಿ ಮೇಲಿನಪೇಟೆಯ ಗಡಿಕಟ್ಟೆವರೆಗೆ
ರಥವನ್ನು ಎಳೆದುಕೊಂಡು ಹೋಗಿ ವಾಪಸ್ಸು ದೇವಸ್ಥಾನಕ್ಕೆ ಬರಲಾಯಿತು.

ರಥ ಸಾಗಿ ಬಂದ ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ರಸ್ತೆಯನ್ನು ಬಣ್ಣದ ಬಣ್ಣದ ರಂಗೋಲಿಯಿಂದ ಅಲಂಕರಿಸಲಾಗಿತ್ತು. ತಳಿರು ತೋರಣಗಳನ್ನು ಕಟ್ಟಲಾಗಿತ್ತು. ನಾಸಿಕ್‌ ಡೋಲು, ಚೆಂಡೆ ಮೇಳ, ವೀರಗಾಸೆ, ಮಂಗಳವಾದ್ಯ ರಥೋತ್ಸವಕ್ಕೆ ವಿಶೇಷ ಮೆರುಗು ನೀಡಿತ್ತು. ದೇವಸ್ಥಾನ ಹಾಗೂ ಸುತ್ತಲಿನ ಆವರಣವನ್ನು ಹೂ ಹಾಗೂ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಜಾತ್ರೆಯ ಪ್ರಯಕ್ತ ದೇವಸ್ಥಾನ ಆವರಣದಲ್ಲಿ ಹೆಚ್ಚಿನ ಜನಸಂದಣಿ ಇದ್ದ ಕಾರಣ ಪೊಲೀಸ್‌ ರಕ್ಷಣೆ ಒದಗಿಸಲಾಗಿತ್ತು. ಜಾತ್ರೆಯ ಪ್ರಯುಕ್ತ ವಾಟರ್‌
ಟ್ಯಾಂಕ್‌ ಬಳಿ ಬೃಹತ್‌ ಗಾತ್ರದ ಸ್ವಾಗತ ಕಮಾನು ನಿರ್ಮಿಸಲಾಗಿತ್ತು. ರಥವನ್ನು ಬಣ್ಣ ಬಣ್ಣದ ಪತಾಕೆ, ಹೂಹಾರಗಳಿಂದ ಅಲಂಕರಿಸಲಾಗಿತ್ತು. ರಥದ ತುದಿಯಲ್ಲಿ ಅಳವಡಿಸಿದ್ದ ಹಿತ್ತಾಳೆಯ ಕಳಶ
ಸೂರ್ಯನ ಬೆಳಕಿಗೆ ಬಂಗಾರದ ಕಳಶದ ರೀತಿ ಹೊಳೆಯುತಿತ್ತು. ದೇವಸ್ಥಾನದಲ್ಲಿ ಬೆಳಿಗ್ಗೆ ಪಾನಕ, ಲಘು ಉಪಹಾರ, ಮಧ್ಯಾಹ್ನ ಮತ್ತು ಸಂಜೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ರಥೋತ್ಸವಕ್ಕೆ ಶಾಸಕ ಟಿ.ಡಿ. ರಾಜೇಗೌಡ, ಮಾಜಿ ಶಾಸಕ ಡಿ.ಎನ್‌. ಜೀವರಾಜ್‌, ಜಿಲ್ಲಾ ಪಂಚಾಯತ್‌
ಸದಸ್ಯ ಎಸ್‌.ಎನ್‌. ರಾಮಸ್ವಾಮಿ. ಸಹದೇವ ಬಾಲಕೃಷ್ಣ ಮತ್ತಿತರ ಗಣ್ಯರು ಆಗಮಿಸಿ ದೇವರ ದರ್ಶನ ಪಡೆದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ