ಗಿಣಿಗೇರಾ ಕೆರೆ ಅಭಿವೃದ್ಧಿಗೆ 3 ಕೋಟಿ ಅನುದಾನ
ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆದ ಗಿಣಿಗೇರಾ ಕೆರೆ ಅಭಿವೃದ್ಧಿ
Team Udayavani, May 28, 2021, 10:11 PM IST
ಕೊಪ್ಪಳ: ಅಭಿನವ ಶ್ರೀಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಗಿಣಗೇರಾ ಗ್ರಾಮ ಕೆರೆ ಅಭಿವೃದ್ಧಿ ಸೇವಾ ಟ್ರಸ್ಟ್ ಹಾಗೂ ಜನ-ಸಮುದಾಯದ ಸಹಭಾಗಿತ್ವದಲ್ಲಿ ನಡೆದ ಗಿಣಿಗೇರಾ ಕೆರೆ ಅಭಿವೃದ್ಧಿ, ಪುನಃಶ್ಚೇತನ ಕಾರ್ಯಕ್ಕೆ ರಾಜ್ಯ ಸರ್ಕಾರ 3 ಕೋಟಿ ರೂ. ಅನುದಾನ ನೀಡಿರುವುದು ಸಂತಸ ತಂದಿದೆ ಎಂದು ಜಿಪಂ ಕೆಡಿಪಿ ಸದಸ್ಯ ಅಮರೇಶ ಕರಡಿ ತಿಳಿಸಿದ್ದಾರೆ.
ಕೋವಿಡ್-19 ಸಂಕಷ್ಟ ಪರಿಸ್ಥಿತಿ ಮಧ್ಯೆಯೂ ಸರ್ಕಾರವು ಸಣ್ಣ ನೀರಾವರಿ ಇಲಾಖೆಯಲ್ಲಿನ ಕಳೆದ ಆರ್ಥಿಕ ವರ್ಷದಲ್ಲಿ ಉಳಿಕೆಯಾಗಿರುವ ಅನುದಾನದಲ್ಲಿ ಪ್ರಸ್ತುತ ಮೂರರ ಒಂದರಷ್ಟು ಅನುದಾನವನ್ನು ಬಿಡುಗಡೆ ಮಾಡಿದೆ. ಕೆರೆಯ ಕಾಯಕಲ್ಪ, ಅಂತರ್ಜಲ ವೃದ್ಧಿಗಾಗಿ ಪೂಜ್ಯರು ನಡೆಸಿರುವ ಕೆರೆಗಳ ಜೀರ್ಣೋದ್ಧಾರ ಕಾಯಕ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಇದರ ಸಮಗ್ರ ಅಭಿವೃದ್ಧಿಗೆ ಸಂಸದ ಸಂಗಣ್ಣ ಕರಡಿ ಮತ್ತು ಈ ಭಾಗದ ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಪೂಜ್ಯರ ಆಶಯದಂತೆ ಕೆರೆ ಪುನಃಶ್ಚೇತನ ಅಭಿವೃದ್ಧಿ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ.
ಈಗಾಗಲೇ ಸಿದ್ಧಪಡಿಸಿದ ಪ್ರಸ್ತಾವನೆಯಂತೆ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಕೊಪ್ಪಳದ ಗಿಣಿಗೇರಾ ಕೆರೆ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಅಂತರ್ಜಲ ವೃದ್ಧಿ, ಕೆರೆಯ ಅಭಿವೃದ್ಧಿಗಾಗಿ 3 ಕೋಟಿ ರೂ. ಮಂಜೂರಿ ಮಾಡಿರುವ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.