ರಾಬಕೊಗೆ ಭೀಮಾನಾಯ್ಕ ಅಧ್ಯಕ್ಷ

•ಯಲಬುರ್ಗಾದ ಶಿವಪ್ಪ ವಾದಿ ಉಪಾಧ್ಯಕ್ಷ•3 ಜಿಲ್ಲೆಗಳಿಗೆ ತಲಾ 20 ತಿಂಗಳ ಅವಧಿ ಹಂಚಿಕೆ

Team Udayavani, May 26, 2019, 12:24 PM IST

ಬಳ್ಳಾರಿ: ಇಲ್ಲಿನ ಬಳ್ಳಾರಿ, ರಾಯಚೂರು, ಕೊಪ್ಪಳ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಹ.ಬೊ.ಹಳ್ಳಿ ಶಾಸಕ ಭೀಮಾನಾಯ್ಕ ಮತ್ತು ಉಪಾಧ್ಯಕ್ಷರಾಗಿ ಕೊಪ್ಪಳ ಯಲಬುರ್ಗದ ಶಿವಪ್ಪವಾದಿ ಅವಿರೋಧವಾಗಿ ಶನಿವಾರ ಆಯ್ಕೆಯಾಗಿದ್ದಾರೆ.

ಮೂರು ಜಿಲ್ಲೆಯ 12 ನಿರ್ದೇಶಕರ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಹ.ಬೊ.ಹಳ್ಳಿಯ ಅಡವಿ ಆನಂದದೇವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ, ಶಾಸಕ ಭೀಮಾನಾಯ್ಕ ಅಧ್ಯಕ್ಷ ಸ್ಥಾನಕ್ಕೆ ಮತ್ತು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಹಿರೇಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಶಿವಪ್ಪ ವಾದಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಸಲು ನಿಗದಿತ ಅವಧಿಯಲ್ಲಿ ಬೇರೆ ಯಾರೊಬ್ಬರೂ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಶಾಸಕ ಭೀಮಾನಾಯ್ಕ, ಶಿವಪ್ಪ ವಾದಿ ಅವರು ಅಧ್ಯಕ್ಷ-ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬುಕ್ಕಾ ಮಲ್ಲಿಕಾರ್ಜುನ ಘೋಷಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕೂಟದ ನೂತನ ಅಧ್ಯಕ್ಷ ಶಾಸಕ ಭೀಮಾನಾಯ್ಕ, ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಮೂರು ಜಿಲ್ಲೆಗಳ ಶಾಸಕರು, ಸಚಿವರು, ಕಾಂಗ್ರೆಸ್‌ ಮುಖಂಡರು ಒಮ್ಮತದಿಂದ ಚರ್ಚಿಸಿ 5 ವರ್ಷಗಳ ಅವಧಿಯನ್ನು ಮೂರು ಜಿಲ್ಲೆಗಳಿಗೆ ತಲಾ 20 ತಿಂಗಳ ಅಧಿಕಾರವನ್ನು ಹಂಚಿದ್ದಾರೆ. ಆ ಹಿನ್ನೆಲೆಯಲ್ಲಿ ಮೊದಲ 20 ತಿಂಗಳ ಅವಧಿಯನ್ನು ಬಳ್ಳಾರಿಗೆ ನೀಡಲಾಗಿದ್ದು, ಒಕ್ಕೂಟದ ನಿರ್ದೇಶಕರ ಒಮ್ಮತದ ಮೇರೆಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಮುಂದಿನ 20 ತಿಂಗಳ ಅವಧಿಯನ್ನು ಯಾವ ಜಿಲ್ಲೆಗೆ ನೀಡಬೇಕು ಎಂಬುದು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ರಾಬಕೊ ಒಕ್ಕೂಟದಿಂದ ರಾಜ್ಯ ಪ್ರತಿನಿಧಿಯನ್ನಾಗಿ ಮಹಾಮಂಡಳಕ್ಕೆ ನನ್ನನ್ನು ಆಯ್ಕೆ ಮಾಡಲಾಗಿದ್ದು, ಹಾಲು ಉತ್ಪಾದನೆ ಮಹಾಮಂಡಳದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಹರಪನಹಳ್ಳಿ ಮಾಜಿ ಶಾಸಕ ದಿ| ಎಂ.ಪಿ. ರವೀಂದ್ರ ಅವರು ಹಾಲು ಮಹಾಮಂಡಳದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಈ ನಿಟ್ಟಿನಲ್ಲಿ ಆಗ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ. ಶಿವಕುಮಾರ್‌ ಅವರು ನಿರ್ಣಯ ಕೈಗೊಂಡಿದ್ದರು. ಆದರೆ, ಆಗ ನಾಗರಾಜ್‌ ಎನ್ನುವವರು ನ್ಯಾಯಾಲಯಕ್ಕೆ ಹೋದ ಹಿನ್ನೆಲೆಯಲ್ಲಿ ಜಿಲ್ಲೆಗೆ ಅನ್ಯಾಯವಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ 5 ವರ್ಷಗಳ ಕಾಲ ಸುಭದ್ರವಾಗಿ ಇರಲಿದೆ. ಸಚಿವ ಸ್ಥಾನಬೇಕು ಎಂದಾಗ ಪಕ್ಷದ ನಾಯಕರು, ಹಿರಿಯರಾದ ಪಿ.ಟಿ. ಪರಮೇಶ್ವರ ನಾಯ್ಕ, ತುಕಾರಾಂ ಅವರಿಗೆ ಸಚಿವ ಸ್ಥಾನ ನೀಡಿದರು. ನನಗೆ ಬಂಜಾರಾ ಅಭಿವೃದ್ಧಿ ನಿಗಮ ನೀಡಿದರು. ಇದರಿಂದ ನಾನು ಯಾವುದೇ ಅಸಮಾಧಾನಕ್ಕೆ ಒಳಗಾಗಿಲ್ಲ. ರಾಜ್ಯ ಸರ್ಕಾರ 5 ವರ್ಷ ಸುಭದ್ರವಾಗಿರಲಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ನಿರ್ದೇಶನ ಮೇರೆಗೆ ಎಚ್.ಡಿ. ಕುಮಾರಸ್ವಾಮಿಯವರು 5 ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿ ಮುಂದುವರಿಯಲಿದ್ದಾರೆ ಎಂದು ವಿವರಿಸಿದರು.

ಭಿನ್ನಮತೀಯ ಚಟುವಟಿಕೆಯಲ್ಲಿಲ್ಲ; ನಾನು ಯಾವುದೇ ಭಿನ್ನಮತೀಯರ ಚಟುವಟಿಕೆಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ ಶಾಸಕ ಭೀಮಾನಾಯ್ಕ, ಮಾಧ್ಯಮಗಳಲ್ಲಿ ತೋರಿಸುತ್ತಿರುವುದರಿಂದ ಗ್ರಾಮೀಣ ಭಾಗದ ಜನರಲ್ಲಿ ಗೊಂದಲ ಸೃಷ್ಟಿಸಿದಂತಾಗುತ್ತಿದೆ. ದಾಖಲೆಗಳು ಇದ್ದರೆ ಸುದ್ದಿ ಮಾಡಬೇಕು. ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಮಾತ್ರ ಸೋತಿಲ್ಲ. ದೇಶಾದ್ಯಂತ ಬಿಜೆಪಿ ಜಯಗಳಿಸಿದ್ದು, ದೇಶದ ಜನರು ಸಹ ಮೋದಿಯನ್ನು ಬೆಂಬಲಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ನಿರ್ಣಯಕ್ಕೆ ತಲೆಬಾಗಬೇಕಾಗುತ್ತದೆ. ಆದರೆ, ಐದು ವರ್ಷ ಆಡಳಿತ ನಡೆದ ಪ್ರಧಾನಿ ನರೇಂದ್ರ ಮೋದಿ, ಯಾವ ಅಭಿವೃದ್ಧಿಪಡಿಸಿದ್ದಾರೆಂದು ಜನರು ಈ ಮಟ್ಟದಲ್ಲಿ ಬೆಂಬಲಿಸಿದ್ದಾರೆ ಎಂಬುದು ನನಗೆ ಈಗಲೂ ಅರ್ಥವಾಗುತ್ತಿಲ್ಲ. ಪಕ್ಷ ಸೋತಿದೆ ಎಂದು ನಾವು ಸಹ ಸುಮ್ಮನೆ ಕೂರಲ್ಲ. ಪಕ್ಷವನ್ನು ತಳಮಟ್ಟದಿಂದ ಬಲಪಡಿಸುತ್ತೇವೆ ಎಂದು ತಿಳಿಸಿದರು. ಇದಕ್ಕೂ ಮುನ್ನ ರಾಬಕೊ ಅಧ್ಯಕ್ಷರಾದ ಬಳಿಕ ಒಕ್ಕೂಟದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವಿವರಿಸಿದರು. 108 ಕೋಟಿ ರೂ. ವೆಚ್ಚದಲ್ಲಿ 3.5 ಲಕ್ಷ ಲೀಟರ್‌ ಸಾಮರ್ಥ್ಯದ ಮೆಗಾ ಡೈರಿಯನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು. ಇದಕ್ಕಾಗಿ ನಗರ ಹೊರವಲಯದಲ್ಲಿ ಸರ್ಕಾರಿ ಜಮೀನನ್ನು ಗುರುತಿಸಲಾಗಿದ್ದು, ಅದನ್ನು ಒಕ್ಕೂಟಕ್ಕೆ ನೀಡುವಂತೆ ಜಿಲ್ಲಾಧಿಕಾರಿಗಳಲ್ಲೂ ಮನವಿ ಮಾಡಲಾಗಿದೆ. ಇದರೊಂದಿಗೆ ಇನ್ನು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಉಪಾಧ್ಯಕ್ಷ ಶಿವಪ್ಪ ವಾದಿ, ಒಕ್ಕೂಟದ ನಿರ್ದೇಶಕ ಬಲಸು ಸೂರ್ಯನಾರಾಯಣ, ಜಿಪಂ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬುಕ್ಕಾ ಮಲ್ಲಿಕಾರ್ಜುನ ಸೇರಿದಂತೆ ನಿರ್ದೇಶಕರು ಇತರರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ