ಬೆಲೆ ಕುಸಿತ: ಬಾಳೆ ನಾಶ ಮಾಡಿದ ಅನ್ನದಾತ
3 ಲಕ್ಷ ರೂ. ವ್ಯಯ ಮಾಡಿದ್ದ ಕೃಷಿಕ! ಹೊದ್ದು ಮಲಗಿದ ಸರ್ಕಾರ, ಜಿಲ್ಲಾಡಳಿತ
Team Udayavani, Apr 15, 2021, 8:18 PM IST
ಕೊಪ್ಪಳ: ಕೋವಿಡ್ ಅಬ್ಬರ ಒಂದೆಡೆಯಾದರೆ ಬೇಸಿಗೆಯಲ್ಲಿ ನೀರಿನ ಕೊರತೆ ಮಧ್ಯೆಯೂ ಅನ್ನದಾತ ಬೆಳೆ ಉಳಿಸಿಕೊಳ್ಳುವುದು ಸವಾಲಾಗಿದೆ. ಈ ಮಧ್ಯೆ ಬೆಲೆ ಕುಸಿತದಿಂದ ರೈತರು ತಾವು ಉತ್ತಿ, ಬಿತ್ತಿ ಬೆಳೆದ ಬೆಳೆಯನ್ನೇ ಕೈಯಾರೆ ನಾಶಪಡಿಸುತ್ತಿರುವ ಘಟನೆ ಜಿಲ್ಲಾದ್ಯಂತ ನಡೆದಿವೆ.
ರಾಜ್ಯ ಸರ್ಕಾರ, ಜಿಲ್ಲಾಡಳಿತ ಈ ಸ್ಥಿತಿಯಲ್ಲಿ ನಿಜಕ್ಕೂ ಹೊದ್ದು ಮಲಗಿದೆ ಎಂದೆನಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ತಾಲೂಕಿನ ಅಳವಂಡಿ ಗ್ರಾಮದ ರೈತ ವಸಂತರಡ್ಡಿ ಅವರು ಕಳೆದ ವರ್ಷ 2.5 ಎಕರೆ ಜಮೀನಿನಲ್ಲಿ ಬಾಳೆ ಬೆಳೆ ಬೆಳೆದಿದ್ದರು. ಕಷ್ಟಪಟ್ಟು ಹನಿ ನೀರಾವರಿ ಮಾಡಿ ಕೃಷಿ ಮಾಡಿದ್ದ ಈ ರೈತ ಬಾಳೆ ಸಸಿಯನ್ನು ಮಕ್ಕಳಂತೆ ಪೋಷಣೆ ಮಾಡಿದ್ದರು. ಬಾಳೆಯು ಗೊನೆಯನ್ನು ಬಿಟ್ಟಿದೆ. ಆದರೆ ಮಾರುಕಟ್ಟೆಯಲ್ಲಿ ಬಾಳೆಯನ್ನು ಕೇಳುವವರೇ ಇಲ್ಲ ಎನ್ನುವಂತ ಸ್ಥಿತಿ ಬಂದಿದೆ. ಕೆಜಿಗೆ 4-5 ರೂ.ಗೆ ಕೇಳುತ್ತಿರುವುದು ನಿಜಕ್ಕೂ ರೈತರು ಕಂಗಾಲಾಗುವಂತೆ ಮಾಡಿದೆ. ರೈತ ವಸಂತರಡ್ಡಿ ಅವರು 2.5 ಎಕರೆ ಬಾಳೆಗೆ 3 ಲಕ್ಷ ರೂ. ವ್ಯಯ ಮಾಡಿದ್ದಾರೆ. ಈ ವರೆಗೂ ನಯಾಪೈಸೆ ಬಾಳೆಯಿಂದ ಆದಾಯ ಬಂದಿಲ್ಲ. ಬೆಲೆ ಕುಸಿತದಿಂದಾಗಿ ಕಂಗಾಲಾಗಿದ್ದಾರೆ. ಬಾಳೆ ಗೊನೆ ಕಡಿದು ನಗರದ ಮಾರುಕಟ್ಟೆಗೆ ತಂದರೂ ಖರೀದಿ ಮಾಡುವವರೂ ಇಲ್ಲದಂತಾಗಿದೆ. ಸಾರಿಗೆ ಹಾಗೂ ಗೊನೆ ಕಡಿತಕ್ಕೆ ಹೆಚ್ಚು ಕೂಲಿ ವ್ಯಯಿಸಿ ಅದನ್ನೂ ಮೈಮೇಲೆ ಮಾಡಿಕೊಳ್ಳುವಂತಹ ಸ್ಥಿತಿ ಎದುರಾಗಿ ರೈತನು ಬುಧವಾರ ಟ್ರ್ಯಾಕ್ಟರ್ ಮೂಲಕ ಇಡೀ 2.5 ಎಕರೆ ಬಾಳೆಯನ್ನೇ ರೂಟರ್ ಹೊಡೆಯಿಸಿ ನಾಶಪಡಿಸಿದರು.
ಮಕ್ಕಳಂತೆ ಹಗಲು-ರಾತ್ರಿ ಎನ್ನದೇ ಕಷ್ಟಪಟ್ಟು ಬೆಳೆಸಿದ್ದ ಬಾಳೆ ಬೆಳೆಯು ನೆಲ ಕಚ್ಚುತ್ತಿರುವುದನ್ನು ನೋಡಿದ ರೈತರು ಕಣ್ಣಾಲೆಗಳು ಒದ್ದೆಯಾಗಿದ್ದವು. ಇದು ಕೇವಲ ಬಾಳೆಯ ಬೆಳೆ ಒಂದೇ ಕತೆಯಲ್ಲ. ತರಕಾರಿಯ ಬೆಲೆಗಳು ಪಾತಾಳಕ್ಕೆ ಕುಸಿತ ಕಂಡಿವೆ. ಟಮೋಟಾ, ಚಳವೆ, ಬದನೆ ಸೇರಿ ಇತರೆ ಬೆಳೆಗಳ ದರವು ನಿಜಕ್ಕೂ ಹೇಳದಂತ ಸ್ಥಿತಿಯಿದೆ. ಇಷ್ಟೆಲ್ಲ ಅನ್ನದಾತನ ಕೋವಿಡ್ ಸಂಕಷ್ಟ ಎದುರಿಸಿದರೂ ಸರ್ಕಾರ, ಜಿಲ್ಲಾಡಳಿತವು ಮೌನ ವಹಿಸಿರುವುದು ರೈತಾಪಿ ವಲಯದ ಆಕ್ರೋಶಕ್ಕೂ ಕಾರಣವಾಗಿದೆ. ಇನ್ನಾದರೂ ರೈತರ ನೆರವಿಗೆ ಸರ್ಕಾರ, ಜಿಲ್ಲಾ ಆಡಳಿತದ ಅ ಧಿಕಾರಿಗಳು ಮಧ್ಯ ಪ್ರವೇಶ ಮಾಡಿ ರೈತರಿಗೆ ಆಗುತ್ತಿರುವ ನಷ್ಟವನ್ನು ತಡೆದು ಪರ್ಯಾಯ ವ್ಯವಸ್ಥೆ ಮಾಡಬೇಕಿದೆ.