ಮಲೇರಿಯಾ ನಿಯಂತ್ರಣ ಎಲ್ಲರ ಹೊಣೆ: ಲಿಂಗರಾಜ

•ಕಡಿತ ಚಿಕ್ಕದು-ಕಂಟಕ ದೊಡ್ಡದು •ಸುತ್ತಮುತ್ತ ಸ್ವಚ್ಛತೆ ಕಾಪಾಡಿ

Team Udayavani, Apr 28, 2019, 3:39 PM IST

ಕೊಪ್ಪಳ: ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಶನಿವಾರ ಹಮ್ಮಿಕೊಂಡ ಮಾಹಿತಿ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಲಿಂಗರಾಜ ಉದ್ಘಾಟಿಸಿದರು.

ಕೊಪ್ಪಳ: ಮಲೇರಿಯಾ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮಲೇರಿಯಾ ಮುಕ್ತ ಸಮಾಜಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಲಿಂಗರಾಜ ಹೇಳಿದರು.

ನಗರದ ಹಳೆ ಜಿಲ್ಲಾಸ್ಪತ್ರೆಯ ಆವರಣದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಶನಿವಾರ ಹಮ್ಮಿಕೊಂಡ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿ ವರ್ಷ ಏ. 25ರಂದು ವಿಶ್ವಾದ್ಯಂತ ‘ವಿಶ್ವ ಮಲೇರಿಯಾ ದಿನ’ ಆಚರಿಸಲಾಗುತ್ತದೆ. ಭಾರತದಲ್ಲಿಯೂ ಕೇಂದ್ರ ಆರೋಗ್ಯ ಸಚಿವಾಲಯ ವಿಶ್ವ ಮಲೇರಿಯಾ ದಿನ ಆಚರಿಸಲು ಎಲ್ಲ ರಾಜ್ಯಗಳಿಗೂ ಸೂಚಿಸಿದೆ. ಮಲೇರಿಯಾ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ. ಸಾರ್ವಜನಿಕರು ಯಾವುದೇ ಜ್ವರವಿರಲಿ ಶೀಘ್ರ ರಕ್ತ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಿರಿ. ಮನೆಯೊಳಗೆ ಮತ್ತು ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಸೊಳ್ಳೆ ಉತ್ಪತ್ತಿಯನ್ನು ತಡೆಗಟ್ಟಬೇಕು. ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸಿ ಸಮಗ್ರ ಕೀಟ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು. ಕಡಿತ ಚಿಕ್ಕದು-ಕಂಟಕ ದೊಡ್ಡದು, ಸೊಳ್ಳೆಗಳಿಂದ ದೂರವಿರಿ, ಸೊಳ್ಳೆಗಳನ್ನು ದೂರವಿಡಿ. ಮಲೇರಿಯಾ ನಿರ್ಮೂಲನೆಗೆ ಪ್ರತಿಯೊಬ್ಬರೂ ಪಣ ತೊಡಿ ಎಂದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಜಂಬಯ್ಯ ಮಾತನಾಡಿ, ದೇಶಾದ್ಯಂತ ಮಲೇರಿಯಾ ರೋಗವನ್ನು ಸಂಪೂರ್ಣ ನಿರ್ಮೂಲನೆಗೊಳಿಸಲು ರಾಷ್ಟ್ರಿಯ ಮಲೇರಿಯಾ ನಿವಾರಣಾ ಮಾರ್ಗದರ್ಶಿ ರೂಪಿಸಲಾಗಿದೆ. ಅದರಂತೆ ಕರ್ನಾಟಕ ಸರಕಾರ ಕೂಡ ರಾಜ್ಯದಲ್ಲಿ ಮಲೇರಿಯಾ ನಿವಾರಣಾ ಮಾರ್ಗದರ್ಶಿಯನ್ನು ಅನಾವರಣಗೊಳಿಸಿದ್ದು, ರಾಜ್ಯದಲ್ಲಿ 2025ರ ವೇಳೆಗೆ ಮಲೇರಿಯಾ ಮುಕ್ತಗೊಳಿಸುವ ಗುರಿ ನಿಗದಿಪಡಿಸಿದೆ. ಪ್ರಸಕ್ತ ಸಾಲಿನ ವಿಶ್ವ ಮಲೇರಿಯ ದಿನಾಚರಣೆಯ ಘೋಷಣೆಯು ‘ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ’ ಎಂಬುದಾಗಿದೆ. ಅದರಂತೆ ಕೊಪ್ಪಳ ಜಿಲ್ಲೆಯನ್ನು 2025ರ ವೇಳೆಗೆ ಸಂಪೂರ್ಣ ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಲು ಸರ್ವರ ಸಹಕಾರ ಅಗತ್ಯವಾಗಿದೆ. 201ನೇ ಸಾಲಿನಲ್ಲಿ ರಾಜ್ಯದ ಒಟ್ಟು ಮಲೇರಿಯಾ ಪ್ರಕರಣಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಬೆಂಗಳೂರು, ಉಡುಪಿ, ಗದಗ, ಕಲಬುರಗಿ, ರಾಯಚೂರು, ತುಮಕೂರು, ಬಾಗಲಕೋಟೆ, ಯಾದಗಿರಿ, ವಿಜಯಪುರ ಸೇರಿ ಇತರೆ ಜಿಲ್ಲೆಗಳು ನಂತರದ ಸ್ಥಾನದಲ್ಲಿವೆ. ಕೊಪ್ಪಳ ಜಿಲ್ಲೆ 13ನೇ ಸ್ಥಾನದಲ್ಲಿದೆ. ಮಲೇರಿಯಾ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯು ಸಮರೋಪಾದಿಯಲ್ಲಿ ಮಲೇರಿಯ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಮಹೇಶ, ಕುಷ್ಟ ರೋಗ ನಿರ್ಮೂಲನಾಧಿಕಾರಿ ಡಾ| ಎಸ್‌.ಕೆ. ದೇಸಾಯಿ, ತಾಲೂಕು ಆರೋಗ್ಯಾಧಿಕಾರಿ ಡಾ| ರಾಮಾಂಜನಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ