ಬಿತ್ತನೆಗೆ ಸಿದ್ಧತೆ: ಮಳೆ ಕೊರತೆ
Team Udayavani, Jun 10, 2020, 2:34 PM IST
ಸಾಂದರ್ಭಿಕ ಚಿತ್ರ
ಕನಕಗಿರಿ: ತಾಲೂಕು ವ್ಯಾಪ್ತಿಯಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದು, ಬಿತ್ತನೆ ಮಾಡಲು ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸಂಪೂರ್ಣ ಪ್ರಮಾಣದಲ್ಲಿ ತೇವಾಂಶ ಕೊರತೆಯಾದ ಕಾರಣ ರೈತರು ಮಳೆಗಾಗಿ ಕಾಯುತ್ತಿದ್ದಾರೆ.
ಹೊಲಗಳಲ್ಲಿ ರೈತರು ರಂಟೆ-ಕುಂಟೆ ಹೊಡೆಯುವ ಮೂಲಕ ಭೂಮಿಯನ್ನು ಹದ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಉತ್ತಮವಾದ ಮಳೆಯಾಗಿ ತೇವಾಂಶ ಹೆಚ್ಚಾದರೆ ಬಿತ್ತನೆ ಕಾರ್ಯ ಮಾಡಲಿದ್ದಾರೆ. ಈಗಾಗಲೇ ಕೆಲ ರೈತರು ಬಿತ್ತನೆ ಮಾಡಿದ್ದು,
ಮಳೆಗಾಗಿ ಕಾಯುತ್ತಿದ್ದಾರೆ. ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಿಸಲು ಸಕಲ ಸಿದ್ಧತೆ ಮಾಡಲಾಗಿದೆ. ಈಗಾಗಲೇ ಕೇಂದ್ರದಲ್ಲಿ 25 ಕ್ವಿಂಟಲ್ ಮೆಕ್ಕೆಜೋಳ, 7 ಕ್ವಿಂಟಲ್ ಸೂರ್ಯಕಾಂತಿ, 15 ಕ್ವಿಂಟಲ್ ಸಜ್ಜೆ, 2 ಕ್ವಿಂಟಲ್ ತೊಗರಿ, 1 ಕ್ವಿಂಟಲ್ ಹೆಸರು, 5 ಕ್ವಿಂಟಲ್ ನವಣೆ ಬೀಜಗಳನ್ನು ಸಂಗ್ರಹ ಮಾಡಲಾಗಿದೆ. ಉತ್ತಮ ಮಳೆಯಾದರೆ ರೈತರು ಬಿತ್ತನೆ ಬೀಜ ಖರೀದಿಸಲು ಆಗಮಿಸುತ್ತಾರೆ. ಸರ್ಕಾರ ಮಾರ್ಗಸೂಚಿ ಅನ್ವಯ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು ಎಂದು ಕೃಷಿ ಅಧಿಕಾರಿ ನಿಂಗಪ್ಪ ತಿಳಿಸಿದ್ದಾರೆ.