ಬಳ್ಳಾರಿ ವಿವಿ ವ್ಯಾಪ್ತಿಯ ಪರೀಕ್ಷೆ ಮುಂದೂಡಲು ಮನವಿ
Team Udayavani, Apr 18, 2021, 6:48 PM IST
ಕೊಪ್ಪಳ: ಬಳ್ಳಾರಿ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆ ಕೂಡಲೇ ಮುಂದೂಡಬೇಕು ಎಂದು ಒತ್ತಾಯಿಸಿ ಎಸ್‌ಎಫ್‌ಐ ಜಿಲ್ಲಾ ಸಮಿತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರ ಮೂಲಕ ವಿವಿ ಉಪಕುಲಪತಿಗೆ ಮನವಿ ಸಲ್ಲಿಸಿತು.
ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯು ಜಿಲ್ಲೆಯಲ್ಲಿ ಇದೇ ತಿಂಗಳು ಏ. 19ರಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪರೀಕ್ಷೆ ನಡೆಸಲು ತಯಾರಿ ನಡೆಸಿದೆ. ಒಂದೆಡೆ ಸಾರಿಗೆ ಮುಷ್ಕರ, ಇನ್ನೊಂದೆಡೆ ಕೊರೊನಾ 2ನೇ ಅಲೆಯಿಂದ ಅನೇಕ ಹಾಸ್ಟೆಲ್‌ಗಳು ಮುಚ್ಚಿವೆ. ಮತ್ತೂಂದೆಡೆ ಸಾರಿಗೆ ಮುಷ್ಕರದಿಂದ ಗ್ರಾಮೀಣ ಭಾಗಕ್ಕೆ ಬಸ್ ಸೌಲಭ್ಯವಿಲ್ಲ. ಹಾಗಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡಲು ಆಗಮಿಸುತ್ತಿದ್ದಾರೆ. ಕೆ-ಸೆಟ್ ಪರೀಕ್ಷೆ ನಡೆಸಲೂ ಮುಂದಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ. ಹಾಗಾಗಿ ಬಳ್ಳಾರಿ ವಿವಿ ವ್ಯಾಪ್ತಿಯ ಎಲ್ಲ ಪರೀಕ್ಷೆಗಳನ್ನು ಮುಂದೂಡಬೇಕೆಂದು ಎಸ್‌ಎಫ್‌ಐ ಒತ್ತಾಯಿಸಿ ಮನವಿ ಸಲ್ಲಿಸಿತು.
ಸಂಘಟನೆ ಮುಖಂಡರಾದ ಶಿವುಕುಮಾರ ಚೌಡಪುರ, ಯಮನೂರ ಹೊಮ್ಮಿನಾಳ, ಸೈಯದ್ ಗೌಸುಸಾಬ್, ಶರಣಬಸಯ್ಯ, ಮಲ್ಲಿಕಾರ್ಜುನ, ಹನುಮೇಶ, ಬಾಲಚಂದ್ರ, ಶ್ರೀನಿವಾಸ, ಮೆಹಬೂಬ್ ಪಾಲ್ಗೊಂಡಿದ್ದರು.