ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹ

•ಶಿಕ್ಷಣ-ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಿ•ಎಸ್‌ಟಿ ಕಲ್ಯಾಣ ಇಲಾಖೆ ವಿಭಜಿಸಿ ಪ್ರತ್ಯೇಕ ಕಚೇರಿ ಸ್ಥಾಪಿಸಿ

Team Udayavani, Jun 7, 2019, 9:32 AM IST

ಕೊಪ್ಪಳ: ವಾಲ್ಮೀಕಿ ಸಮುದಾಯಕ್ಕೆ ಸಾಮಾಜಿಕ ನ್ಯಾಯದಡಿ ರಾಜ್ಯದಲ್ಲಿ ಶೇ.7.5 ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ವಾಲ್ಮೀಕಿ ಸಮಾಜ ಮುಖಂಡರು ನಗರದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕೊಪ್ಪಳ: ವಾಲ್ಮೀಕಿ ಸಮುದಾಯಕ್ಕೆ ಸಮಾಜಿಕ ನ್ಯಾಯದಡಿ ರಾಜ್ಯದಲ್ಲಿ ಶೇ.7.5 ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ವಾಲ್ಮೀಕಿ ಸಮುದಾಯದ ಮುಖಂಡರು ನಗರದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ವಾಲ್ಮೀಕಿ ಸಮಾಜ ನಾಲ್ಕನೇ ಅತಿದೊಡ್ಡ ಸಮುದಾಯವಾಗಿದೆ. ಸಮುದಾಯ ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ನ್ಯಾಯದ ವಿಷಯದಲ್ಲಿ ಸತತವಾಗಿ ತುಳಿತಕ್ಕೆ ಒಳಗಾಗಿದೆ. ಸಂವಿಧಾನಬದ್ಧವಾಗಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುತ್ತಿಲ್ಲ ಎಂದು ದೂರಿದರು.

60 ಲಕ್ಷಕ್ಕೂ ಅಕವಿರುವ ನಾಯಕ ಸಮಾಜಕ್ಕೆ ಎಸ್‌ಟಿಯಲ್ಲಿ ಕನಿಷ್ಟ ಶೇ. 7.5 ನೀಡಬೇಕು. ಕೇಂದ್ರ ಸರ್ಕಾರ ಈಗಾಗಲೇ ಪರಿಶಿಷ್ಟ ಪಂಗಡಕ್ಕೆ ಶೇ.7 ರಷ್ಟು ಮೀಸಲಾತಿ ನೀಡಿದೆ. ರಾಜ್ಯದಲ್ಲಿ ಲೋಕಸಭೆ, ವಿಧಾನಸಭೆ ಇತರ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಶೇ.7.5 ರಷ್ಟು ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ. ಈ ನೀತಿಯು ಇದುವರೆಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಅನ್ವಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಎಸ್‌ಟಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕೇವಲ ಶೇ.3ರಷ್ಟು ಮಾತ್ರ ಮೀಸಲಾತಿ ನಿಗದಿಯಾಗಿರುವುದನ್ನು ಮರು ಪರಿಷ್ಕರಣೆ ಮಾಡಬೇಕು. ಇತರೆ ಸಮುದಾಯಗಳು ಎಸ್‌ಟಿಗೆ ಸೇರ್ಪಡಿಸಿದರೂ ಮೀಸಲಾತಿ ಪ್ರಮಾಣ ಹೆಚ್ಚಿಸಲ್ಲ. ಕಾಲ ಕಾಲಕ್ಕೆ ಪರಿಷ್ಕರಿಸುತ್ತ ಮಧ್ಯಪ್ರದೇಶದಲ್ಲಿ ಶೇ.20ರಷ್ಟು ಹಾಗೂ ಜಾರ್ಖಂಡ್‌ ರಾಜ್ಯದಲ್ಲಿ ಶೇ. 26ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಅದರಂತೆ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಪ್ರತಿ ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್‌ಟಿ ಕಲ್ಯಾಣ ಇಲಾಖೆಯನ್ನು ವಿಭಜಿಸಿ, ಪ್ರತ್ಯೇಕ ಕಚೇರಿ ಸ್ಥಾಪಿಸಬೇಕು. ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕಚೇರಿಗಳನ್ನು ಎಲ್ಲ ಜಿಲ್ಲೆಗಳಲ್ಲಿ ಸ್ಥಾಪಿಸಬೇಕು ಹಾಗೂ ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರಗಳ ವಿತರಣೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಇದನ್ನು ತಡೆದು ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ| ಮೋಗಳ್ಳಿ ಗಣೇಶ ಅವರು ವಾಲ್ಮೀಕಿ ನಾಯಕ ಸಮುದಾಯದ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಪುಕ್ಕಟೆ ಊಟ, ವಸತಿ, ಸೌಲಭ್ಯ ಪಡೆಯುತ್ತಿರುವ ಕಾಡುಮೃಗಗಳು ಎಂದು ಕರೆದು ಅವಮಾನಿಸಿದ್ದಾರೆ. ಮಾರ್ಗದರ್ಶನ ಬಯಸಿ ಬರುವ ಸಮುದಾಯದ ವಿದ್ಯಾರ್ಥಿಗಳಿಗೆ ನಿಂದಿಸಿ, ನೋಯಿಸಿದ್ದಾರೆ. ಇಂತಹ ಪ್ರಾಧ್ಯಾಪಕರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದರು. ಜಿಲ್ಲಾ ವಾಲ್ಮೀಕಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಡೊಣ್ಣಿ, ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ರಾಮಣ್ಣ ಕಲ್ಲನವರ, ಜಿಲ್ಲಾ ಕಾರ್ಯದರ್ಶಿ ಶಿವಮೂರ್ತಿ ಗುತ್ತೂರು, ತಾಲೂಕ ಅಧ್ಯಕ್ಷ ಶರಣಪ್ಪ ನಾಯಕ್‌, ಮಂಜುನಾಥ್‌ ಜಿ. ಗೊಂಡಬಾಳ, ಅನುಸೂಯಾ ವಾಲ್ಮೀಕಿ, ಮಹೇಶ ಅರಕೇರಿ, ಧರ್ಮಣ್ಣ ಹಟ್ಟಿ, ರುಕ್ಮಣ್ಣ ಶಾವಿ, ಶ್ರೀನಿವಾಸ್‌ ಪುಜಾರ್‌, ಶಂಕ್ರಪ್ಪ ನಾಯಕ, ಮಲ್ಲಪ್ಪ ಬೇಲೇರಿ ಇತರರು ಪಾಲ್ಗೊಂಡಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ