ಶಾಲಾ ಆವರಣದಲ್ಲೇ ವಿದ್ಯಾರ್ಥಿಗಳಿಂದ ಕಾರು ಸ್ವಚ್ಛಗೊಳಿಸಿದ ಶಿಕ್ಷಕ : ವಿಡಿಯೋ ವೈರಲ್
Team Udayavani, Aug 20, 2022, 1:16 PM IST
ಕುಷ್ಟಗಿ : ತಾಲೂಕಿನ ಜುಮ್ಲಾಪೂರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರೊಬ್ಬರು ಶಾಲಾ ಆವರಣದಲ್ಲಿ ತಮ್ಮ ಕಾರನ್ನು ವಿದ್ಯಾರ್ಥಿಗಳಿಂದ ತೊಳೆಸುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದೆ.
ಶನಿವಾರ ಬೆಳಗ್ಗೆ ಶಿಕ್ಷಕರೊಬ್ಬರು ತಮ್ಮ ಕಾರನ್ನು ಸ್ವಚ್ಛಗೊಳಿಸುತ್ತಿರುವುದನ್ನು ಸ್ಥಳೀಯರು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸದರಿ ವಿಡಿಯೋ ದಲ್ಲಿ ಶಿಕ್ಷಕರ ಕಾರನ್ನು ಮಕ್ಕಳು ತೊಳೆಯುತ್ತಿರುವುದು ಸ್ಪಷ್ಟವಾಗಿದೆ.
ಶಿಕ್ಷಕರು ತಮ್ಮ ಕಾರನ್ನು ತೊಳೆಯಲು ಶಾಲಾ ಆವರಣದಲ್ಲಿ ಬಳಸಿಕೊಂಡಿರುವುದು ವ್ಯಾಪಕ ವಿರೋದ ವ್ಯಕ್ತವಾಗಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಶಿಕ್ಷಕ ಸೋಮನಗೌಡ ಪಾಟೀಲ ಅವರು, ಈ ಪ್ರಕರಣ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸದರಿ ಶಿಕ್ಷಕರನ್ನು ವಿಚಾರಿಸಿ ಮಾಹಿತಿ ಪಡೆದಿದ್ದೇನೆ. ಅಡವಿಬಾವಿ ಗ್ರಾಮದಲ್ಲಿ ನಡೆಯುವ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ನಾಡಗೀತೆ ಹಾಡಲು ಮಕ್ಕಳನ್ನು ಕರೆದೊಯ್ಯುವ ಪೂರ್ವದಲ್ಲಿ ಶಿಕ್ಷಕರು ತಮ್ಮ ಕಾರನ್ನು ತಾವೇ ತೊಳೆಯುತ್ತಿದ್ದಾಗ ಮಕ್ಕಳು ಅಲ್ಲೇ ನಿಂತಿದ್ದರು ಮಕ್ಕಳಿಂದ ಕಾರು ತೊಳೆಸಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ರಜೆಯಲ್ಲಿದ್ದು ಈ ಸಂಬಂಧ ಮಂಗಳವಾರ ವಿಚಾರಿಸುವೆ ಎಂದಿದ್ದಾರೆ.
ಇದನ್ನೂ ಓದಿ : ಹಿ.ಪ್ರದೇಶ : ಭಾರೀ ಮಳೆಗೆ ಕುಸಿದು ಬಿದ್ದ ರೈಲ್ವೆ ಸೇತುವೆ: ತಪ್ಪಿದ ಅನಾಹುತ, ವಿಡಿಯೋ ವೈರಲ್