ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಲ್ಲೇ ಬಿಜೆಪಿ ಭರ್ಜರಿ ಲೀಡ್‌

Team Udayavani, May 24, 2019, 3:39 PM IST

ಕೊಪ್ಪಳ: ಸ್ಥಳೀಯ ಲೋಕ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರ ಗೆಲುವಿನ ಓಟ ಕುಗ್ಗಿಲ್ಲ. ಆದರೆ ಕಾಂಗ್ರೆಸ್‌ಗೆ ರಾಜಕೀಯ ರಣತಂತ್ರ, ಮೈತ್ರಿಯಾಟವೇ ಲೆಕ್ಕಕ್ಕೇ ಸಿಗದಂತಾಗಿದೆ. ಕೈ ಶಾಸಕರ ಕ್ಷೇತ್ರದಲ್ಲಿಯೇ ಕಮಲಕ್ಕೆ ಲೀಡ್‌ ಸಿಕ್ಕಿದ್ದು ಕಾಂಗ್ರೆಸ್‌ ಶಾಸಕರಿಗೆ ಇರಿಸು-ಮುರಿಸು ತಂದಿರಿಸಿದೆ.

ಹೌದು. ಕೊಪ್ಪಳ ವಿಧಾನಸಭಾ ಕ್ಷೇತ್ರ ಕೈ ಶಾಸಕ ರಾಘವೇಂದ್ರ ಹಿಟ್ನಾಳ ಹಿಡಿತದಲ್ಲಿದ್ದರೂ ಕಮಲಕ್ಕೆ ಮುನ್ನಡೆ ಸಿಕ್ಕಿದೆ. ಈ ಕ್ಷೇತ್ರದಲ್ಲಿ ಕರಡಿಗೆ ಮೈನಸ್‌ ಆಗಲಿದೆ ಎನ್ನು ಲೆಕ್ಕಾಚಾರ ಕೇಳಿ ಬಂದರೂ ಅಲ್ಪಸಂಖ್ಯಾತ, ದಲಿತ ಸೇರಿ ಹಿಂದುಳಿದ ಮತಗಳು ಕರಡಿ ಕೈ ಹಿಡಿದಿವೆ. ಇನ್ನು ಕುಷ್ಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕ ಅಮರೇಗೌಡ ಬಯ್ನಾಪುರ ಇದ್ದರೂ ಕಮಲಕ್ಕೆ ಮುನ್ನಡೆ ಸಿಕ್ಕಿದೆ. ಇಲ್ಲಿ ಕಮಲದ ನಾಯಕ ಕೆ. ಶರಣಪ್ಪ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಕಮಲಕ್ಕೆ ಆಸರೆಯಾದರೆ, ಕೈನ ಫಾರವರ್ಡ್‌ ಮತಗಳು ಕಮಲಕ್ಕೆ ಬಂದಿವೆ ಎನ್ನುವ ಲೆಕ್ಕಾಚಾರ ಹೇಳುತ್ತಿದೆ.

ಇನ್ನು ಗಂಗಾವತಿ, ಕನಕಗಿರಿ, ಯಲಬುರ್ಗಾ ಕ್ಷೇತ್ರಗಳಲ್ಲಿ ಹಾಲಿ ಬಿಜೆಪಿ ಶಾಸಕರಿದ್ದು, ಈ ಮೂರು ಕ್ಷೇತ್ರಗಳಲ್ಲಿ ಕಮಲಕ್ಕೆ ಲೀಡ್‌ ಕೊಟ್ಟಿವೆ. ಗಂಗಾವತಿಯಲ್ಲಿ ಲಿಂಗಾಯತ, ದಲಿತ, ನಾಯಕ ಮತ ಕೈ ಹಿಡಿದಿದ್ದರೆ, ಯಲಬುರ್ಗಾದಲ್ಲಿ ಬಣಜಿಗ, ಗಾಣಿಗ, ಪಂಚಮಸಾಲಿ ಸಮುದಾಯದ ಮತ ಪ್ಲಸ್‌ ಆಗಿವೆ. ಇದು ಕಮಲಕ್ಕೆ ಆಸರೆಯಾಗಿದ್ದರೆ, ಕನಕಗಿರಿಯಲ್ಲಿ ಎಸ್‌ಸಿ, ಎಸ್‌ಟಿ ಸೇರಿ ಲಿಂಗಾಯತ ಮತ ಕಮಲಕ್ಕೆ ವರದಾನವಾಗಿವೆ. ಅಚ್ಚರಿಯಿಂದರೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಕ್ಷೇತ್ರದಲ್ಲೇ ಮತ್ತೆ ಕಮಲಕ್ಕೆ ಪ್ಲಸ್‌ ಆಗಿದೆ.

ಎಲ್ಲೂ ನಡೆಯದ ಮೈತ್ರಿಯಾಟ: ಸಿಂಧನೂರು ಕ್ಷೇತ್ರ ಜೆಡಿಎಸ್‌ ಹಿಡಿತದಲ್ಲಿದ್ದರೂ ವೆಂಕಟರಾವ್‌ ನಾಡಗೌಡರ ಕೈ-ಕಮಲ ಸಮಬಲಕ್ಕೆ ಯತ್ನಿಸಿದ್ದಾರೆ. ಆದರೆ ಉಳಿದಂತೆ ಯಾವ ಕ್ಷೇತ್ರದಲ್ಲೂ ಕಾಂಗ್ರೆಸ್‌ಗೆ ಮೈತ್ರಿ ಲಾಭವಾಗಿಲ್ಲ. ಈ ಕ್ಷೇತ್ರದಲ್ಲಿ ಲಿಂಗಾಯತ ಪ್ರಾಬಲ್ಯವಿದ್ದು, ಮೋದಿ ಅಲೆಯೂ ಹೆಚ್ಚು ಶಕ್ತಿ ನೀಡಿದೆ. ಇನ್ನೂ ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕ ಪ್ರತಾಪಗೌಡ ಪಾಟೀಲ್ ಇದ್ದರೂ ಬಿಜೆಪಿಗೆ ಹೆಚ್ಚು ಮುನ್ನಡೆ ಬಂದಿವೆ. ಲಿಂಗಾಯತ, ಎಸ್‌ಸಿ, ಎಸ್‌ಟಿ ಮತಗಳು ಕಮಲಕ್ಕೆ ಪ್ಲಸ್‌ ಆಗಿವೆ.

ಸಿರಗುಪ್ಪಾ ಕ್ಷೇತ್ರ ಬಿಜೆಪಿ ಶಾಸಕ ಸೋಮಲಿಂಗಪ್ಪರ ಹಿಡಿತದಲ್ಲಿದ್ದರೂ ಕಮಲಕ್ಕೆ 12,134 ಮತಗಳ ಹಿನ್ನಡೆಯಾಗಿದೆ. ವಿಶೇಷವೆಂದರೆ, ಎಂಟೂ ಕ್ಷೇತ್ರಗಳಲ್ಲಿ 3 ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದರೂ ಕಮಲಕ್ಕೆ ಪ್ಲಸ್‌ ಆಗಿದ್ದರೆ, ಜೆಡಿಎಸ್‌ನ ಮೈತ್ರಿ ಲೆಕ್ಕಕ್ಕಿಲ್ಲದಂತಾಗಿದೆ. ಇನ್ನೂ ನೆಚ್ಚಿದ್ದ ಸಿರಗುಪ್ಪಾ ಕ್ಷೇತ್ರದಲ್ಲೇ ಕಮಲಕ್ಕೆ ಹಿನ್ನಡೆ ಸಿಕ್ಕಿದೆ.

ಕೈಗೆ ಸಿಗುತ್ತಿಲ್ಲ ರಣತಂತ್ರದಾಟ: ಕಾಂಗ್ರೆಸ್‌ ಭಾರಿ 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ನಿರೀಕ್ಷೆಯನ್ನಿಟ್ಟಿತ್ತು. ಯಲಬುರ್ಗಾ, ಮಸ್ಕಿ ಕ್ಷೇತ್ರಗಳ ಅನುಮಾನವಿತ್ತು. ಆದರೆ ಕಾಂಗ್ರೆಸ್‌ನ ಎಲ್ಲ ಲೆಕ್ಕಾಚಾರ ಉಲಾr ಹೊಡೆದಿವೆ.

ಕಳೆದ ಬಾರಿಗಿಂತ ಹೆಚ್ಚು ಲೀಡ್‌

ಕಳೆದ ಬಾರಿಯ ಎಂಪಿ ಚುನಾವಣೆಯಲ್ಲಿ ಸಂಗಣ್ಣ ಕರಡಿ ಅವರು 486383 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಬಸವರಾಜ ಹಿಟ್ನಾಳ 453969 ಮತ ಪಡೆದಿದ್ದರು. ಅಂದರೆ 32414 ಮುನ್ನಡೆ ಪಡೆದಿದ್ದರು. ಈ ಬಾರಿ ಸಂಗಣ್ಣ ಅವರು 586783 ಮತ ಪಡೆದಿದ್ದರೆ, ರಾಜಶೇಖರ ಹಿಟ್ನಾಳ 548386 ಮತ ಪಡೆದಿದ್ದು, ಕರಡಿ ಅವರು 38,397 ಮತ ಮುನ್ನಡೆ ಸಾಧಿಸಿದ್ದಾರೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ