371(ಜೆ) ಸಮರ್ಪಕ ಜಾರಿ ಯಾವಾಗ?

Team Udayavani, Sep 17, 2019, 12:33 PM IST

ಗಂಗಾವತಿ: ಶೈಕ್ಷಣಿಕ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಹೈಕ ಕಲಂ 371(ಜೆ) ನಿಯಮ ಜಾರಿಗೊಳಿಸಲಾಗಿದ್ದು, ರಾಜ್ಯದಲ್ಲಿ ನಿಯಮ ಅನುಷ್ಠಾನ ಮರೀಚಿಕೆಯಾಗಿದೆ.

ಶಿಕ್ಷಣ, ಉದ್ಯೋಗ, ಅನುದಾನ ಮೀಸಲು, ಭಡ್ತಿ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಕಲಂ 371(ಜೆ) ಉಲ್ಲಂಘನೆ ನಿರಂತರವಾಗಿದೆ. ಹೈಕ ಭಾಗದಲ್ಲಿ ಶಿಕ್ಷಣ, ಉದ್ಯೋಗ ಮತ್ತು ಬಡ್ತಿಯಲ್ಲಿ ಶೇ.80 ಮೀಸಲಾತಿ ಅನುಷ್ಠಾನವಾಗಿದೆ. ಬೆಂಗಳೂರು ಸಚಿವಾಲಯ ಸೇರಿ ಖಾಸಗಿ ಶಾಲಾ-ಕಾಲೇಜು ಮತ್ತು ಭಡ್ತಿ ವಿಷಯದಲ್ಲಿ ಸರಕಾರ ಕಲಂ 371(ಜೆ)ಯನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ ಎಂಬ ಆರೋಪ ಹೈಕ ಭಾಗ ಶಿಕ್ಷಣ ತಜ್ಞರು ಮತ್ತು ಹೋರಾಟಗಾರರ ಅಭಿಪ್ರಾಯವಾಗಿದೆ.

ಕೇಂದ್ರ ಸರಕಾರ ಮತ್ತು ರಾಜ್ಯದ ಡಾ| ನಂಜುಂಡಪ್ಪ ವರದಿಯಲ್ಲಿ ಉಲ್ಲೇಖೀಸಿರುವಂತೆ ಹೈಕ ಭಾಗದ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ, ಉದ್ಯೋಗ ಅನುದಾನ ಕಲ್ಪಿಸಬೇಕೆಂದು ಹೇಳಲಾಗಿದೆ. ರಾಜ್ಯದ ಜನಸಂಖ್ಯೆಯ ಒಟ್ಟು ಪ್ರಮಾಣದಲ್ಲಿ ಶೇ.20 ಜನ ಹೈಕ ಭಾಗದ 6 ಜಿಲ್ಲೆಯಲ್ಲಿ ವಾಸವಾಗಿದ್ದು, ಕಲಂ 371(ಜೆ) ನಿಯಮವನ್ನು ಶೇ.20 ಅನ್ಯ ಜಿಲ್ಲೆಗಳಲ್ಲಿ ಕಲ್ಪಿಸಬೇಕಿದೆ. ಸರಕಾರಕ್ಕೆ ಇಚ್ಛಾಶಕ್ತಿ ಕೊರತೆಯಿಂದ ಅನ್ಯ ಜಿಲ್ಲೆಗಳಲ್ಲಿ ಅನುಷ್ಠಾನ ಮಾಡದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಕೆಲ ವ್ಯಕ್ತಿಗಳು ಆಕ್ಷೇಪದ ಹಿನ್ನೆಲೆಯಲ್ಲಿ ಶೇ.8 ಮೀಸಲಾತಿಯಲ್ಲಿ ದೊರೆಯಬೇಕಿದ್ದ 780 ಮೆಡಿಕಲ್, 6800 ಇಂಜಿನಿಯರಿಂಗ್‌ ಸೀಟುಗಳು ಹೈಕ ಭಾಗದ ವಿದ್ಯಾರ್ಥಿಗಳಿಗೆ ಸಿಕ್ಕಿಲ್ಲ. ಬಿಬಿಎಂಪಿ ಮತ್ತು ವಿಧಾನಸೌಧದ ಸಚಿವಾಲಯದಲ್ಲಿ ಸಿಗಬೇಕಿದ್ದ 320ಕ್ಕೂ ಅಧಿಕ ಹುದ್ದೆಗಳು ಮತ್ತು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿರುವ ಹುದ್ದೆಗಳು ಸಿಗಬೇಕಿತ್ತು.

ಪ್ರಮುಖವಾಗಿ ಹೈಕ ಮೀಸಲಾತಿ ನಿಯಮವನ್ನು ಕೇಂದ್ರ ಸರಕಾರ ಜಾರಿ ಮಾಡಿದ ನಂತರ ಅಂದಿನ ಕಾಂಗ್ರೆಸ್‌ ಸರಕಾರ ಜನಸಂಖ್ಯೆಗೆ ಅನುಗುಣವಾಗಿ ಬೇರೆ ಜಿಲ್ಲೆಗಳಲ್ಲಿ ಶೇ.20 ಮೀಸಲಾತಿ ಕೊಡದೇ ತರಾತುರಿಯಾಗಿ ಕೇವಲ ಶೇ.8 ಮೀಸಲಾತಿ ಕಲ್ಪಿಸಿತ್ತು. ಇದನ್ನು ಪ್ರಶ್ನಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯ ಮೊರೆ ಹೋಗಿದ್ದವು.

ಹೈಕ ಪ್ರಮಾಣ ಪತ್ರ ಪಡೆಯಲು ಬೀದರ, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಮೂಲ ನಿವಾಸಿಗಳು ಮತ್ತು 10 ವರ್ಷಗಳಿಗೂ ಅಧಿಕ ವಾಸ ಮಾಡಿದವರು ಅರ್ಹರಾಗಿದ್ದಾರೆ. ನಿಯಮ ಜಾರಿಯಾದಾಗಿನಿಂದ ಪ್ರಮಾಣಪತ್ರ ಪಡೆಯಲು ಸರಿಯಾದ ನಿಯಮಾವಳಿ ರೂಪಿಸಿಲ್ಲ. ಎ, ಬಿ, ಸಿ ಎಂದು ಪ್ರಮಾಣ ಪತ್ರ ನೀಡುವ ನಿಯಮ ಜಾರಿ ಇದ್ದು, ಇದರ ದುರುಪಯೋಗ ಹೆಚ್ಚಾಗಿದೆ.

ಸರಕಾರಿ ಹುದ್ದೆಯಲ್ಲಿರುವ ಹೈಕ ಭಾಗದವರು ನೈಸರ್ಗಿಕವಾಗಿ ಕಲಂ 371 (ಜೆ) ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಸರಕಾರಿ ನೌಕರರ ಸೇವಾ ಪುಸ್ತಕ (ಎಸ್‌ಆರ್‌ ಬುಕ್‌) ತಿದ್ದುಪಡಿ ಮಾಡಲು ರಾಜ್ಯಮಟ್ಟದಲ್ಲಿ ಜೆಸಿಎಂ ಎಂಬ ಕಮಿಟಿ ಇರುತ್ತದೆ. ಕಲಂ 371 (ಜೆ) ಜಾರಿಯಾದಾಗಿನಿಂದ ಹೈಕ ಭಾಗದ ನೌಕರರ ಸೇವಾ ಪುಸ್ತಕ ತಿದ್ದುಪಡಿಯಾಗಿಲ್ಲ. ಅದಕ್ಕಾಗಿ ಹೈಕ ಭಾಗಕ್ಕೆ ಪ್ರತ್ಯೇಕವಾಗಿ ಸರಕಾರ ಜೆಸಿಎಂ ಕಮಿಟಿಯನ್ನು ರಚನೆ ಮಾಡಿ ಈ ಭಾಗದಲ್ಲಿ ಜನಿಸಿದ ನೌಕರರ ಸೇವಾ ವಿವರ ತಿದ್ದುಪಡಿ ಮಾಡಬೇಕಿದೆ.

ರಾಜಕೀಯವಾಗಿ ಎಲ್ಲ ಪಕ್ಷಗಳು ಹೈಕ ಭಾಗಕ್ಕೆ ಸಚಿವ ಸ್ಥಾನ ಮತ್ತು ಅನುದಾನ ನೀಡಲು ಪಕ್ಷದ ಆಂತರಿಕ ಯಾವ ನಿಯಮಗಳನ್ನು ರೂಪಿಸಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಹೈಕ ಬಗ್ಗೆ ಭರವಸೆಗಳ ಸುರಿಮಳೆಗೈದು ನಂತರ ಈ ಭಾಗದ ಜಿಲ್ಲೆಗಳ ಉಸ್ತುವಾರಿಯನ್ನು ಅನ್ಯ ಭಾಗದವರಿಗೆ ನೀಡುವ ಮೂಲಕ ಹೈಕ ಭಾಗದ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ. ಸರಕಾರ ಕಲಂ 371 (ಜೆ) ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಲು ಬದ್ಧತೆಯಿಂದ ಕಾರ್ಯ ಮಾಡಿ ಈ ಭಾಗದ ಜನಪ್ರತಿನಿಧಿಗಳ ಮತ್ತು ಸಂಘ-ಸಂಸ್ಥೆಗಳ ಸಭೆ ಕರೆದು ಚರ್ಚೆ ಮಾಡಬೇಕಾದ ಅವಶ್ಯವಿದೆ.

ಹೈಕ ಭಾಗದಲ್ಲಿ ಕಲಂ 371(ಜೆ) ಅನುಷ್ಠಾನಕ್ಕೆ ಬಂದ 6 ವರ್ಷಗಳಾದರೂ ಬಿಬಿಎಂಪಿ, ವಿಧಾನಸೌಧದ ಸಚಿವಾಲಯ, ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ಮೆಡಿಕಲ್ ಮತ್ತು ಇಂಜಿನಿಯರಿಂಗ್‌ ಹಾಗೂ ಸ್ನಾತಕೋತ್ತರ ಶಿಕ್ಷಣದಲ್ಲಿ ನಿಯಮ ಜಾರಿಯಾಗಿಲ್ಲ. ನಿಯಮ ಜಾರಿ ವಿರೋಧಿಸಿ ಅನ್ಯ ಜಿಲ್ಲೆಯವರು ಖಾಸಗಿ ಶಿಕ್ಷಣ ಸಂಸ್ಥೆಯವರು ಬೆಂಗಳೂರು ಮತ್ತು ಧಾರವಾಡ ಹೈಕೋರ್ಟ್‌ನಲ್ಲಿ 6 ವರ್ಷದಲ್ಲಿ ಸುಮಾರು 600ಕ್ಕೂ ಅಧಿಕ ಆಕ್ಷೇಪಗಳನ್ನು ದಾಖಲಿಸಿದ್ದಾರೆ. ಪ್ರಮಾಣ ಪತ್ರ ವಿತರಣೆಯ ನಿಯಮಗಳು ಸಹ ಅವೈಜ್ಞಾನಿಕವಾಗಿವೆ. ಸರಕಾರ ಕೂಡಲೇ ಜನಸಂಖ್ಯೆಗೆ ಅನುಗುಣವಾಗಿ ಶೇ. 8ರ ಬದಲಾಗಿ ಶೇ. 20 ಅನ್ಯ ಜಿಲ್ಲೆಗಳಲ್ಲಿ ಕಲಂ 371(ಜೆ) ಅನ್ವಯ ಮೀಸಲಾತಿ ಕಲ್ಪಿಸಬೇಕು. ಇತ್ತೀಚೆಗೆ ಹೈಕೋರ್ಟ್‌ 371(ಜೆ) ಕಲಂ ಅನ್ವಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸರಿಯಿದೆ ಎಂದು ತೀರ್ಪು ನೀಡಿದ್ದು, ಸರಕಾರ ಕಡ್ಡಾಯವಾಗಿ ಅನುಷ್ಠಾನ ಮಾಡಬೇಕು. ಶೀಘ್ರವೇ ಹೋರಾಟ ಸಮಿತಿಯಿಂದ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಪತ್ರ ಕೊಡಲಾಗುತ್ತದೆ ಎಂದು 371(ಜೆ) ಅನುಷ್ಠಾನ ಕಾವಲು ಸಮಿತಿ ಕಾರ್ಯದರ್ಶಿ ಈ. ಧನರಾಜ್‌ ಹೇಳಿದ್ದಾರೆ.
• ಕೆ.ನಿಂಗಜ್ಜ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ