ವಸತಿ ನಿಲಯ-ಶಾಲೆಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಿ

ಮಕ್ಕಳಿಂದ ಅಪಾಯಕಾರಿ ಕೆಲಸ ಮಾಡಿಸಿದರೆ ಕಠಿಣ ಕಾನೂನು ಕ್ರಮ

Team Udayavani, Aug 24, 2019, 5:16 PM IST

ಕೊಪ್ಪಳ: ಜಿಲ್ಲಾಡಳಿತ ಭವನದಲ್ಲಿ ನಡೆದ ವಸತಿ ನಿಲಯ ಮತ್ತು ವಸತಿ ಶಾಲೆಗಳ ಪ್ರಾಚಾರ್ಯರು ಮತ್ತು ಮೇಲ್ವಿಚಾರಕರ ಸಭೆಯಲ್ಲಿ ಜಿಲ್ಲಾಧಿಕಾರಿ ಸುನೀಲ್ ಕುಮಾರ ಮಾತನಾಡಿದರು.

ಕೊಪ್ಪಳ: ಜಿಲ್ಲೆಯ ಯಾವುದೇ ವಸತಿ ನಿಲಯ ಮತ್ತು ವಸತಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಿ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್‌ ಸೂಚಿಸಿದರು.

ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್ನಲ್ಲಿ ಶುಕ್ರವಾರ ವಸತಿ ನಿಲಯ ಮತ್ತು ವಸತಿ ಶಾಲೆಗಳ ಪ್ರಾಚಾರ್ಯರು ಮತ್ತು ಮೇಲ್ವಿಚಾರಕರ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ-66, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ-22, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ-74 ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ-24 ಸೇರಿದಂತೆ ಒಟ್ಟು 186 ಹಾಸ್ಟೆಲ್ಗಳು ಕಾರ್ಯ ನಿರ್ವಹಿಸುತ್ತಿವೆ. ಈ ಎಲ್ಲಾ ಸಂಸ್ಥೆಗಳ ಮೇಲ್ವಿಚಾರಕರು ಹಾಗೂ ಪ್ರಾಚಾರ್ಯರು ತಮ್ಮ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಯಾವ ಕೆಲಸವನ್ನು ಯಾರಿಂದ ಮಾಡಿಸಬೇಕು ಎಂಬ ತಿಳಿವಳಿಕೆ ಇರಬೇಕು. ವಸತಿ ನಿಲಯದ ಮಕ್ಕಳಿಂದ ಅಪಾಯಕಾರಿ ಕೆಲಸಗಳನ್ನು ಮಾಡಿಸಿದರೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಸಂಬಂಧಿಸಿದ ಇಲಾಖೆ ನೀಡುವ ಅನುದಾನದಲ್ಲಿ ಮಕ್ಕಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವುದು ನಿಮ್ಮೆಲ್ಲರ ಕರ್ತವ್ಯ. ಅದನ್ನು ನಿಷ್ಠೆಯಿಂದ ನಿರ್ವಹಿಸಿ ಎಂದು ಹೇಳಿದರು.

ವಸತಿ ನಿಲಯ ಅಥವಾ ವಸತಿ ಶಾಲೆ ಕಟ್ಟಡ ಯಾವುದೇ ಇದ್ದರೂ ಸರ್ಕಾರದ ನಿರ್ದಿಷ್ಟ ಮಾನದಂಡ ಅನುಸರಿಸಿ ವಿದ್ಯುತ್‌ ಪರಿವರ್ತಕ, ವಿದ್ಯುತ್‌ ತಂತಿ ಮಾರ್ಗಗಳು, ವಿದ್ಯುತ್‌ ಕಂಬಗಳನ್ನು ಅಳವಡಿಸಿ. ಕಟ್ಟಡಗಳ ಬಳಿಯೇ ವಿದ್ಯುತ್‌ ತಂತಿ ಮಾರ್ಗ ಅಳವಡಿಸುವ ಅನಿವಾರ್ಯತೆ ಇದ್ದರೆ ಅಂತಹ ಜಾಗಗಳಲ್ಲಿ ರಕ್ಷಣಾ ಸಾಧನಗಳನ್ನು ಕಡ್ಡಾಯವಾಗಿ ಅಳವಡಿಸಿ. ಜೋತು ಬಿದ್ದಿರುವ ವೈರ್‌ ಬಿಗಿಯುವುದು ಸೇರಿದಂತೆ ವಿದ್ಯುತ್‌ಗೆ ಸಂಬಂಧಿಸಿದಂತೆ ಯಾವುದೇ ದುರಸ್ತಿ ಕಾರ್ಯಗಳಿದ್ದರೆ ಸಂಬಂಧಿಸಿದ ಜೆಸ್ಕಾಂ ಅಧಿಕಾರಿಗಳು ಕೂಡಲೇ ಕ್ರಮವಹಿಸಬೇಕು ಎಂದರು.

ಸಭೆಯಲ್ಲಿ ಜಿಪಂ ಸಿಇಒ ರಘುನಂದನ್‌ ಮೂರ್ತಿ ಮಾತನಾಡಿ, ವಸತಿ ನಿಲಯಗಳಲ್ಲಿ ಶುದ್ಧ ಹಾಗೂ ಗುಣಮಟ್ಟದ ಆಹಾರ ನೀಡುವುದು ಎಷ್ಟು ಮುಖ್ಯವೋ ಅಷ್ಟೇ ಮಕ್ಕಳ ಸಂಪೂರ್ಣ ಜವಾಬ್ದಾರಿಯೂ ನಿಲಯದ ಮೇಲ್ವಿಚಾರಕರ ಮೇಲಿರುತ್ತದೆ. ವಸತಿ ನಿಲಯ ಹಾಗೂ ವಸತಿ ಶಾಲೆಗಳ ಆಹಾರ, ಸ್ವಚ್ಛತೆ, ವಿದ್ಯುತ್‌ ಸೌಲಭ್ಯ ಸೇರಿದಂತೆ ಮುಂತಾದ ಅಗತ್ಯ ಮೂಲಭೂತ ಸೌಕರ್ಯಗಳ ಕುರಿತು ವರದಿಯನ್ನು ಸಿದ್ಧಪಡಿಸಿ ಪ್ರತಿ ತಿಂಗಳೂ ವಸತಿ ನಿಲಯದ ಮೇಲ್ವಿಚಾರಕರ ಸಹಿಯೊಂದಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಬೇಕು. ವಸತಿ ನಿಲಯದಲ್ಲಿ ಯಾವುದಾದರೂ ಸಮಸ್ಯೆಗಳು ಕಂಡು ಬಂದಲ್ಲಿ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಸಿ.ಡಿ ಗೀತಾ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ. ಕಲ್ಲೇಶ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಈರಪ್ಪ ಆಶಾಪೂರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಹಿಮೂದ್‌ ಸೇರಿದಂತೆ ಜೆಸ್ಕಾಂ ಅಧಿಕಾರಿಗಳು ಹಾಗೂ ಎಲ್ಲಾ ವಸತಿ ನಿಲಯಗಳ ಮೇಲ್ವಿಚಾರಕರು ಮತ್ತು ವಸತಿ ಶಾಲೆಗಳ ಪ್ರಾಚಾರ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ