ಕಂದಾಯ, ಕೃಷಿ ಇಲಾಖೆಗೆ ಡೀಸಿ ಭೇಟಿ

ಆಧಾರ್‌ ತಿದ್ದುಪಡಿ, ಕಿಸಾನ್‌ ಸಮ್ಮಾನ್‌ ನೋಂದಣಿ ತ್ವರಿತಕ್ಕೆ ತಹಶೀಲ್ದಾರ್‌ ಶಿವರಾಜ್‌ಗೆ ಸೂಚನೆ

Team Udayavani, Jun 27, 2019, 5:06 PM IST

ಕೊರಟಗೆರೆ ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ್ದ ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್‌ ಕುಮಾರ್‌ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕೊರಟಗೆರೆ: ಪಟ್ಟಣದ ಕಂದಾಯ ಹಾಗೂ ಕೃಷಿ ಇಲಾಖೆಗೆ ದಿಢೀರ್‌ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ರಾಕೇಶ್‌ ಕುಮಾರ್‌ ಆಧಾರ್‌ ಕಾರ್ಡ್‌ ಸಮಸ್ಯೆ ಹಾಗೂ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಪ್ರಗತಿ ಮಾಹಿತಿ ಪಡೆದು ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.

ವಿದ್ಯಾರ್ಥಿಗಳು ಮತ್ತು ರೈತರಿಗೆ ಸಮಯಕ್ಕೆ ಸರಿಯಾಗಿ ಆಧಾರ್‌ ಕಾರ್ಡಿನ ತಿದ್ದುಪಡಿಗೆ ಅವಕಾಶ ಮಾಡಿಕೊಡಬೇಕು. ಪಟ್ಟಣದಲ್ಲಿ ತಿದ್ದುಪಡಿಗೆ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಆಧಾರ್‌ ಕೇಂದ್ರದ ಮಾಹಿತಿ ಪಡೆಯುವಂತೆ ತಹಶೀಲ್ದಾರ್‌ ಶಿವರಾಜುಗೆ ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್‌ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಮಸ್ಯೆ ಸರಿಪಡಿಸಿ: ಆಧಾರ್‌ಕಾರ್ಡ್‌ನ ಸಮಸ್ಯೆ ಯಿಂದ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ಹಲವಾರು ದೂರುಗಳು ಕಚೇರಿಗೆ ಬರುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಧಾರ್‌ ಕೇಂದ್ರ ತೆರೆಯದೆ ನಿರ್ಲಕ್ಷ ಮಾಡಲಾಗಿದೆ. ಕೂಡಲೇ ನಾಡಕಚೇರಿ ವ್ಯಾಪ್ತಿಯಲ್ಲಿ ನೂತನವಾಗಿ ಆಧಾರ್‌ ಕೇಂದ್ರ ತೆರೆದು ಅನುಕೂಲ ಕಲ್ಪಿಸಿ ಸಮಸ್ಯೆಯನ್ನು ಸರಿಪಡಿಸಿ ನನಗೆ ಮಾಹಿತಿ ನೀಡಬೇಕು ಎಂದು ಎಚ್ಚರಿಕೆ ನೀಡಿದರು.

ಮಾಹಿತಿ ನೀಡಿ: ರೈತರಿಗೆ ಅನುಕೂಲವಾಗುವಂತೆ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಅನುಕೂಲತೆ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು. ಯೋಜನೆಯ ಕ್ಷೀಪ್ರ ಪ್ರಗತಿಗೆ ಕೃಷಿ, ಕಂದಾಯ, ತೋಟಗಾರಿಕೆ ಮತ್ತು ತಾಪಂ ಇಲಾಖೆಯ ಅಧಿಕಾರಿ ಗಳ ತಂಡ ಕಾರ್ಯ ಪ್ರವೃತ್ತರಾಗಿ ಕೆಲಸ ನಿರ್ವಹಿಸಿ ತಮ್ಮ ಇಲಾಖೆವಾರು ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ರೈತರ ಅನುಕೂಲಕ್ಕೆ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ತ್ವರಿತ ಪ್ರಗತಿಗಾಗಿ ಕೊರಟಗೆರೆ ಕ್ಷೇತ್ರದ ನಾಲ್ಕು ಹೋಬಳಿಯ ಕೃಷಿ ಇಲಾಖೆ ಕೇಂದ್ರದಲ್ಲಿ ರೈತರಿಂದ ಅರ್ಜಿ ಪಡೆದು ನೋಂದಣಿ ಆಗುತ್ತಿದೆ. ನಾಡಕಚೇರಿ, ತೋಟಗಾರಿಕೆ ಇಲಾಖೆ ಮತ್ತು 24 ಗ್ರಾಪಂನಲ್ಲಿಯೂ ಸಹ ರೈತರಿಂದ ಅರ್ಜಿಯನ್ನು ಸ್ವೀಕರಿಸಿ ನೋಂದಣಿ ಮಾಡಿಸ ಬಹುದು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ತ್ವರಿತ ನೋಂದಣಿ: ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜು ಪ್ರತಿಕ್ರಿಯಿಸಿ, ಕೃಷಿ ಇಲಾಖೆಯ ವ್ಯಾಪ್ತಿಯಲ್ಲಿ 33,366 ರೈತ ಕುಟುಂಬ ಗಳಿವೆ. ಈಗಾಗಲೇ 7500 ರೈತ ಕುಟುಂಬ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಗೆ ನೋಂದಣಿ ಮಾಡಿಸಿದ್ದಾರೆ.

ಇನ್ನೊಂದು ತಿಂಗಳಲ್ಲಿ ಎಲ್ಲಾ ರೈತ ಕುಟುಂಬಗಳಿಗೆ ವಿಸ್ತರಣೆ ಮಾಡಿ ತ್ವರಿತ ವಾಗಿ ಅನುಕೂಲ ಕಲ್ಪಿಸುತ್ತೇವೆ ಎಂದು ಮಾಹಿತಿ ನೀಡಿದರು. ಕೊರಟಗೆರೆ ಪಟ್ಟಣದ ಕಂದಾಯ ಇಲಾಖೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಆಧಾರ್‌ ಕಾರ್ಡ್‌ ಮತ್ತು ಪಹಣಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಂಕಿ-ಅಂಶದ ಬಗ್ಗೆ ಮಾಹಿತಿ ಪಡೆದರು.

ನಂತರ ಕೃಷಿ ಇಲಾಖೆಗೆ ಭೇಟಿ ನೀಡಿ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಮಾಹಿತಿ ಪಡೆದು ರೈತ ಸಂಪರ್ಕ ಕೇಂದ್ರದಲ್ಲಿ ಬಿಜ ವಿತರಣೆ ಗುಣಮಟ್ಟ ಪರೀಕ್ಷೆ ನಡೆಸಿದರು.

ರೈತರಿಗೆ ಉತ್ತಮ ಗುಣಮಟ್ಟದ ಬೀಜ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ರಾಕೇಶ್‌ ಕುಮಾರ್‌ ಭೇಟಿ ವೇಳೆ ಮಧುಗಿರಿ ಎಸಿ ಇಲಾಖೆಯ ಶ್ರೀರಂಗಯ್ಯ ಸೇರಿದಂತೆ ಇತರರು ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ