ಸೋರುತಿಹುದು ಕಾಲೇಜು ಮಾಳಿಗೆ…

ಶಿಥಿಲಾವಸ್ಥೆಯಲ್ಲಿ ಸರ್ಕಾರಿ ಕಾಲೇಜು•ವಿದ್ಯಾರ್ಥಿಗಳು-ಉಪನ್ಯಾಸಕರಿಗೆ ತಪ್ಪದ ಪರದಾಟ

Team Udayavani, Jul 11, 2019, 3:18 PM IST

ಕುಮಟಾ: ಮಳೆ ನೀರು ತರಗತಿಯಲ್ಲಿ ಸೋರುತ್ತಿರುವುದು.

ಕುಮಟಾ: ಶಿಥಿಲಾವಸ್ಥೆಗೆ ಜಾರಿದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೊಠಡಿಗಳು ಮಳೆಗಾಲದಲ್ಲಿ ಸೋರುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದವರು ಪರದಾಡುವಂತಾಗಿದೆ.

ಡಯಟ್‌ಗೆ ಸೇರಿದ ಬಹಳ ಹಳೆಯದಾದ ಕಟ್ಟಡದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭವಾದಾಗಿನಿಂದ ಇಂತಹ ಪರಿಸ್ಥಿತಿಯಲ್ಲೇ ದಿನ ಕಳೆಯುತ್ತಿದೆ. ಇಂತಹ ಶಿಥಿಲಾವಸ್ಥೆಗೆ ಜಾರಿದ, ಸೋರುತ್ತಿರುವ ಕಟ್ಟಡದಲ್ಲಿ ತರಗತಿ ನಡೆಸುವುದು ಕಷ್ಟ ಸಾಧ್ಯ. ಶಾಲಾ-ಕಾಲೇಜುಗಳಿಗೆ ಅನುಮತಿ ನೀಡುವ ಸರಕಾರ, ಸರಿಯಾದ ಮೂಲ ಸೌಕರ್ಯ ಒದಗಿಸಲು ಮೀನಮೇಷ ಎಣಿಸುತ್ತದೆ. ಇದು ಸರಕಾರದ ಆಡಳಿತದ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಪ್ರತೀ ವರ್ಷ ಮಳೆಗಾಲದಲ್ಲಿ ಪ್ರತಿಯೊಂದು ಕೊಣೆಯಲ್ಲೂ ನೀರು ಸುರಿದು ವಿದ್ಯಾರ್ಥಿಗಳ ತರಗತಿಗಳು ಅಸ್ಥವ್ಯಸ್ಥಗೊಳ್ಳುತ್ತಿದೆ. ಇಂತಹ ಸ್ಥಿತಿಯಲ್ಲೇ ಹಲವು ವರ್ಷಗಳು ಕಳೆದರೂ ಈ ಕಟ್ಟಡ ಮಾತ್ರ ಸುಧಾರಣೆಯ ಭಾಗ್ಯ ಕಂಡಿಲ್ಲ.

ಮಳೆಗಾಲದಲ್ಲಿ ಕಾಲೇಜು ಕಟ್ಟಡದ ವರಾಂಡದಲ್ಲಿ ನೀರು ಹರಿಯುತ್ತವೆ. ಕೆಲವು ಕಿಟಕಿಗಳು ಮುರಿದು ಬಿದ್ದಿವೆ. ಮುರಿದು ಬೀಳುವ ಸ್ಥಿತಿಯಲ್ಲಿರುವ ಮೇಲ್ಚಾವಣಿಯ ಕಟ್ಟಿಗೆಯ ದಿಂಬುಗಳಿಗೆ ಕಂಬಕೊಟ್ಟು ತಡೆಹಿಡಿಯಲಾಗಿದೆ. ಕೆಲವಡೆ ಮೇಲ್ಛಾವಣಿ ಕುಸಿಯುವ ಸ್ಥಿತಿಯಲ್ಲಿದ್ದು, ಅಪಾಯ ಸೂಚಿಸುತ್ತಿವೆ. ಹೀಗಿದ್ದರೂ ತರಗತಿ ನಡೆಸುತ್ತಿರುವುದು ವಿದ್ಯಾರ್ಥಿಗಳ ಜತೆ ಚೆಲ್ಲಾಟವಾಡುವಂತಿದೆ. ಇಂಥ ಘೋರ ಪರಿಸ್ಥಿತಿ ಸೃಷ್ಟಿಗೊಂಡರೂ ಶಿಕ್ಷಣ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸದೇ ಇರುವುದು ವಿಪರ್ಯಾಸ. ಕಾಲೇಜಿನ ಕಟ್ಟಡ ನೋಡಿದವರಿಗೆ ಕೇಂದ್ರ ಕಾರಾಗ್ರಹಕ್ಕಿಂತ ಕನಿಷ್ಠ ಮಟ್ಟದಲ್ಲಿರುವುದು ಕಂಡು ಬರುತ್ತದೆ. ಕಾಲೇಜು ಪರಿಸರದಲ್ಲಿ ಇರಬೇಕಾದ ಸ್ವಚ್ಛತೆ, ಸಂಸ್ಕಾರ ಹಾಗೂ ಬದ್ಧತೆಗಳು ಎಲ್ಲೂ ಕಾಣಸಿಗುತ್ತಿಲ್ಲ. ಸುತ್ತಲಿನ ಪರಿಸರ ಕೆಟ್ಟದಾಗಿ ಮಾಲಿನ್ಯಗೊಂಡಿದೆ. ತರಗತಿ ಪಕ್ಕದಲ್ಲೇ ದನ-ಜನ ಶೌಚ ಮಾಡಿರುವುದು ಕಂಡು ಬಂದಿದ್ದು, ಅಸ್ವಚ್ಛತೆ ತಾಂಡವಾಡುತ್ತಿದೆ.

ಕಾಲೇಜು ಡಯಟ್‌ಗೆ ಸೇರಿದ್ದಾಗಿದೆ. ಅಲ್ಲದೇ ಈ ಕಾಲೇಜಿಗೆಂದು ಹೊಸ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಪೂರ್ತಿಗೊಳ್ಳಲು ವರ್ಷಗಳೇ ಬೇಕು. ಹೀಗಿರುವಾಗ ಶಿಥಿಲಾವಸ್ಥೆಗೆ ಜಾರಿದ ಈ ಕಟ್ಟಡದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಬಹಳಷ್ಟು ಸಮಯ ಕಳೆಯುವುದು ಹೇಗೆ ಎಂಬ ಪ್ರಶ್ನೆ ಎಲ್ಲರದ್ದಾಗಿದೆ. ಇದಕ್ಕೆ ಹೊಂದಿಕೊಂಡಿರುವ ಇನ್ನಷ್ಟು ಕಟ್ಟಡಗಳನ್ನು ಡಯಟ್ ದುರಸ್ತಿಗೊಳಿಸಿದ್ದು, ಅದನ್ನು ತನ್ನ ಬಳಕೆಗೆ ಇಟ್ಟುಕೊಂಡಿದೆ. ಕಾಲೇಜು ತರಗತಿ ನಡೆಯುವ ಕೋಣೆಗಳ ರಿಪೇರಿಗಾಗಿ ಸರಕಾರ ಒಂದಿಷ್ಟು ಹಣ ನೀಡುತ್ತದೆ. ಅದರಿಂದ ಸಂಪೂರ್ಣ ದುರಸ್ತಿ ನಡೆಸಲು ಸಾಧ್ಯವಿಲ್ಲ. ಇದರಿಂದಾಗಿ ಪ್ರತೀವರ್ಷ ಮಳೆಗಾಲದಲ್ಲಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಗೀತಾ ವಾಲೀಕಾರ, ಕಾಲೇಜಿನಲ್ಲಿ 1,300 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾತಿ ಹೊಂದಿದ್ದಾರೆ. ಸಧ್ಯ ಸಾಧಾರಣ ಸ್ಥಿತಿಯಲ್ಲಿರುವ 12 ಕೋಣೆಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. 20 ಕಾಯಂ ಉಪನ್ಯಾಸಕರಿದ್ದು, ವರ್ಷಂಪ್ರತಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಸ್ಥಳಾವಕಾಶ‌ದಿಂದ ಪಟ್ಟಣದ ಪುರಸಭೆ ಎದುರಿನ ಕನ್ನಡ ಶಾಲೆಯಲ್ಲಿ ಹಾಗೂ ಡಯಟ್‌ನ ಪ್ರಾಥಮಿಕ ಶಾಲೆಯಲ್ಲಿ ಕೆಲ ತರಗತಿಗಳನ್ನು ನಡೆಸಲಾಗುತ್ತಿದೆ. ಹೀಗಾಗಿ ಉಪನ್ಯಾಸಕರು ಒಂದು ಕಡೆಯಿಂದ ಇನ್ನೊಂದು ಕಡೆ ಓಡಾಡುವಂತಾಗಿದೆ. ಅಲ್ಲದೇ ರಾತ್ರಿ ಸಮಯದಲ್ಲಿ ಹೊರಗಿನ ಕೆಲ ಜನರು ಕಾಲೇಜಿನ ಆವರಣಕ್ಕೆ ಬಂದು ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆ. ಕಾಲೇಜಿಗೆ ರಾತ್ರಿ ಸಮಯದಲ್ಲಿ ಒಬ್ಬರೇ ಕಾವುಲುಗಾರನಿದ್ದು, ಪೊಲೀಸರನ್ನು ನಿಯೋಜಿಸುವಂತೆ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ