ಪಾರಂಪರಿಕ ಪಟ್ಟಿಯಿಂದ ಎಮ್ಮಿಗನೂರು ಶಾಲೆ ಕಡೆಗಣನೆ

ಶತಮಾನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಮಾಜಿ ಸಿಎಂ ಸಿದ್ದರಾಮಯ್ಯ

Team Udayavani, May 25, 2019, 4:30 PM IST

ಕುರುಗೋಡು: 1912ರಲ್ಲಿ ಆರಂಭಗೊಂಡ ಎಮ್ಮಿಗನೂರಿನ ಹಿರಿಯ ಪ್ರಾಥಮಿಕ ಶಾಲೆಯ ಪ್ರಥಮ ಕಟ್ಟಡ.

ಕುರುಗೋಡು: ರಾಜ್ಯದಲ್ಲಿ ಶತಮಾನ ಕಂಡ ನೂರು ಶಾಲೆಗಳನ್ನು ಪಾರಂಪರಿಕ ಶಾಲೆಗಳೆಂದು ಶಿಕ್ಷಣ ಇಲಾಖೆ ಗುರುತಿಸಿ ಸಂರಕ್ಷಿಸಲು ಮುಂದಾಗಿದೆ. ಆದರೆ, ತಾಲೂಕಿನ ಎಮ್ಮಿಗನೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನೂರು ವರ್ಷ ಪೂರೈಸಿದರೂ ಪಾರಂಪರಿಕ ಶಾಲೆಗಳ ಪಟ್ಟಿಯಿಂದ ಕೈಬಿಟ್ಟಿರುವುದು ಸ್ಥಳೀಯ ಶಿಕ್ಷಣ ಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದೆ.

ಈಗಾಗಲೇ 75 ಪ್ರಾಥಮಿಕ ಹಾಗೂ 25 ಪ್ರೌಢಶಾಲೆಗಳನ್ನು ಶಿಕ್ಷಣ ಇಲಾಖೆ ಗುರುತಿಸಿದೆ. ಈ ಪಾರಂಪರಿಕ ಶಾಲೆಗಳ ಮೂಲ ವಿನ್ಯಾಸದ ಕಟ್ಟಡದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಉದ್ದೇಶ ಹೊಂದಲಾಗಿದೆ. ಹೀಗಾಗಿ ಆಯ್ಕೆಯಾಗಿರುವ ನೂರು ಶಾಲೆಗಳ ಅಭಿವೃದ್ಧಿಗಾಗಿ ಸೆಕೆಂಡರಿ ಸ್ಕೂಲ್ ಕಟ್ಟಡಗಳ ನಿರ್ವಾಹಣೆ ಲೆಕ್ಕ ಶೀರ್ಷಿಕೆಯಡಿ ಪ್ರತಿ ಶಾಲೆಗೆ ಮೊದಲ ಹಂತದಲ್ಲಿ 2.50 ಲಕ್ಷ ರೂ. ಅನುದಾನವನ್ನು ಸ್ಥಳೀಯ ಬಿಇಒಗಳ ಖಾತೆಗೆ ಜಮೆ ಮಾಡಲಾಗಿದೆ. ತಾಲೂಕಿನ ಎಮ್ಮಿಗನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ನೂರು ವರ್ಷ ದಾಟಿದರೂ ಪಾರಂಪರಿಕ ಶಾಲೆಗೆ ಸೇರಿಸದಿರುವುದು ವಿಪರ್ಯಾಸ.

2012ರಲ್ಲಿ ಶತಮಾನೋತ್ಸವ: ಎಮ್ಮಿಗನೂರು ಶಾಲೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು, ದಾನಿಗಳು, ರೈತರು ಹಾಗೂ ಶಿಕ್ಷಣ ಪ್ರೇಮಿಗಳ ಸಹಕಾರದೊಂದಿಗೆ ನೂರನೇ ವರ್ಷದ ವಾರ್ಷಿಕೋತ್ಸವವನ್ನು 2012ರಲ್ಲಿ ಮೂರು ದಿನಗಳ ಕಾಲ ನಡೆಸಲಾಗಿತ್ತು. ಈ ನೂರು ವರ್ಷದ ಸಂಭ್ರಮಾಚರಣೆಯನ್ನು ಗ್ರಾಮದಲ್ಲಿ ತಳಿರು, ತೋರಣ ಶೃಂಗಾರ, ಸಾಂಸ್ಕೃತಿಕ ವೈಭವದಿಂದ ಆಚರಿಸಲಾಗಿತ್ತು. ಈ ಸಮಾರಂಭವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಶತಮಾನೋತ್ಸವದಲ್ಲಿ ಬೇರೆ ಬೇರೆ ರಾಜ್ಯದ ಹಿರಿಯ ವಿದ್ಯಾರ್ಥಿಗಳು ಆಗಮಿಸಿದ್ದರು.

ಜಿಲ್ಲೆಯಲ್ಲಿ ಮೂರು ಶಾಲೆಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಇದರಲ್ಲಿ 1885ರಲ್ಲಿ ಸ್ಥಾಪನೆಯಾದ ಕುರುಗೋಡಿನ ಜಿಎಂಎಚ್ಪಿಎಸ್‌ ಶಾಲೆ, 1904ರಲ್ಲಿ ಹುಟ್ಟಿಕೊಂಡ ಹಡಗಲಿ ಮಾಗಳ ಗ್ರಾಮದ ಜಿಎಂಎಚ್ಪಿಎಸ್‌ ಶಾಲೆ ಹಾಗೂ 1904ರಲ್ಲಿ ಸ್ಥಾಪನೆಗೊಂಡ ಬಳ್ಳಾರಿಯ ಜಿಎಚ್ಎಸ್‌ ಬಾಲಕಿಯ ಶಾಲೆಗೆ ಶತಮಾನದ ವಾರ್ಷಿಕೋತ್ಸವದ ಪಾರಂಪರಿಕ ಪಟ್ಟಿಗೆ ಸೇರಿವೆ. ಆದರೆ, 1912ರಲ್ಲಿ ಸ್ಥಾಪನೆಗೊಂಡ ಎಮ್ಮಿಗನೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪಾರಂಪರಿಕ ಶಾಲೆ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವಲ್ಲಿ ಶಿಕ್ಷಣ ಇಲಾಖೆ ನಿರ್ಲಕ್ಷ್ಯವಹಿಸಿರುವುದು ಯಾಕೆ? ಎಂದು ಸಾರ್ವಜನಿಕರ ಪ್ರಶ್ನೆ.

ಅಂದಿನ ಈಸ್ಟ್‌ ಇಂಡಿಯಾ ಕಂಪನಿ ತಮ್ಮ ಸ್ವಾರ್ಥದ ಸಲುವಾಗಿ ಭಾರತದಲ್ಲಿ ಶಿಕ್ಷಣ ಸಾರ್ವತ್ರಿಕಗೊಳ್ಳಬೇಕು ಎನ್ನುವ ಹಿನ್ನೆಲೆಯಲ್ಲೇ ಎಮ್ಮಿಗನೂರಿನಲ್ಲಿ ಈ ಶಾಲೆ ಒಂದು ಖಾಸಿಗಿ ಕೊಠಡಿಯಲ್ಲಿ ಆರಂಭಗೊಂಡಿತ್ತು. ಇನ್ನು ವೇದಾಂತಚಾರ್ಯ ವಿದ್ಯಾವಾಚಾಸ್ಪತಿ, ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಸ್ವಾತಂತ್ರ ಹೋರಾಟಗಾರ ಬಿ ದೊಡ್ಡನಗೌಡ ಈ ಶಾಲೆಯಲ್ಲಿ ಓದಿದವರಲ್ಲಿ ಪ್ರಮುಖರು.

ಎಮ್ಮಿಗನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂರು ವರ್ಷ ಪೂರೈಸಿದೆ. ಗ್ರಾಮದ ಮುಖಂಡರಿಗೂ ಮತ್ತು ಶಾಲೆ ಶಿಕ್ಷಕ ವೃಂದದವರಿಗೂ ಹಾಗೂ ಶಿಕ್ಷಣ ಪ್ರೇಮಿಗಳಿಗೂ ಪ್ರಾರಂಪರಿಕ ಶಾಲೆಗಳ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತದೆ ಎಂಬ ನಂಬಿಕೆ ಇತ್ತು. ಈಗ ಆಗದಿರುವುದು ಬೇಸರದ ಸಂಗತಿ. ಇನ್ಮುಂದೆಯಾದರು ಶಿಕ್ಷಣ ಇಲಾಖೆ ಇದರ ಬಗ್ಗೆ ಗಮನ ಹರಿಸಬೇಕಿದೆ.
•ಎಸ್‌. ರಾಮ,
ಎಮ್ಮಿಗನೂರು ಶಾಲೆ ಶಿಕ್ಷಕ

ಎಮ್ಮಿಗನೂರು ಶತಮಾನೊತ್ಸವ ಶಾಲೆ ಪಾರಂಪರಿಕ ಶಾಲೆಗಳ ಪಟ್ಟಿಯಿಂದ ಕೈಬಿಟ್ಟಿರುವುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಡಿಡಿಪಿಐ ಅವರ ಹತ್ತಿರ ಮಾಹಿತಿ ಇದೆ. ನನಗೆ ಕುರುಗೋಡು ಶಾಲೆ ಬಗ್ಗೆ ಮಾತ್ರ ಮಾಹಿತಿ ಇದೆ. ಎಮ್ಮಿಗನೂರು ಶತಮಾನೊತ್ಸವ ಶಾಲೆ ಮುಂದಿನ ದಿನಗಳಲ್ಲಿ ಪಾರಂಪರಿಕ ಶಾಲೆಗಳ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತದೆ. ಸರಕಾರ ಹಂತ ಹಂತವಾಗಿ ಕಾರ್ಯ ನಡೆಸುತ್ತಿದೆ.
ಖೈರುನ್ನಿಸಾ ಬೇಗಂ,
ಬಿಇಒ ಕುರುಗೋಡು

ಸುಧಾಕರ್‌ ಮಣ್ಣೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ