ಶೌಚಾಲಯಕ್ಕಾಗಿ ಸಾರ್ವಜನಿಕರು ಪರದಾಟ

ಮೂತ್ರ ವಿಸರ್ಜನೆ ಮಾಡಬಾರದು ಎಂದು ನಾಮಫ‌ಲಕ ಅಳವಡಿಕೆ • ಹದಗೆಟ್ಟಿದೆ ತಾಲೂಕು ಆಡಳಿತ: ದೂರು

Team Udayavani, Aug 8, 2019, 3:22 PM IST

ಮಾಗಡಿ ತಾಲೂಕು ಕಚೇರಿ ಬಳಿ ಶೌಚಾಲಯದಲ್ಲಿ ಅಳವಡಿಸಿರುವ ನಾಮಫ‌ಲಕ.

ಮಾಗಡಿ: ತಾಲೂಕು ಕಚೇರಿ ಬಳಿ ಶೌಚಾಲಯವಿದೆ. ಆದರೆ, ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು ಎಂದು ನಾಮಫ‌ಲಕ ಅಳವಡಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡಲು ಶೌಚಾಲಯಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಾಗೃತಿ ಮೂಡಿದರು ಪ್ರಯೋಜನವಿಲ್ಲ: ಸರ್ಕಾರ ಬಯಲು ಮುಕ್ತ ಶೌಚಾಲಯಕ್ಕಾಗಿ ಪ್ರತಿದಿನವೂ ವಿವಿಧ ಇಲಾಖೆ ಅಧಿಕಾರಿಗಳು ಜನಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಪ್ರಯೋಜನವಿಲ್ಲದಂತಾಗಿದೆ. ಮಾಗಡಿ ತಾಲೂಕು ಕಚೇರಿ ಆವರಣದಲ್ಲಿರುವ ಶೌಚಾಲಯದ ಗೋಡೆ ಮೇಲೆ ಆಳವಡಿಸಿರುವ ಮೂತ್ರ ವಿಸರ್ಜನೆ ಮಾಡಬಾರದು ಎಂಬ ನಾಮಫ‌ಲಕ ಏಕೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಸರ್ಕಾರಿ ಕಚೇರಿಯ ಬಳಿ ಅಧಿಕಾರಿಗಳು ನಾಮಫ‌ಲಕ ಹಾಕಿರುವುದು ಗಮನಿಸಿದ ಸಾರ್ವಜನಿಕರು, ಅಧಿಕಾರಿಗಳ ಬೇಜವಾಬ್ದಾರಿಗೆ ಕನ್ನಡಿ ಬೇಕಿಲ್ಲ. ಈ ಫ‌ಲಕವೇ ಸಾಕು. ಇದರಿಂದಾಗಿ ಅಧಿಕಾರಿಗಳೀಗ ಸಾರ್ವಜನಿಕರ ನಗೆಪಾಟಲ್ಗೆ ಗುರಿಯಾಗಿರುವುದಂತೂ ಸತ್ಯ.

ನಾಮ ಫ‌ಲಕ ನೋಡಿ ವಾಪಸ್‌: ಇಲ್ಲಿನ ಪ್ರಮುಖ ಸ್ಥಳವಾಗಿರುವ ತಾಲೂಕು ಕಚೇರಿಗೆ ನಿತ್ಯ ಸಾವಿರಾರು ಮಂದಿ ಸಾರ್ವಜನಿಕರು ತಮ್ಮ ಕೆಲಸಗಳಿಗೆ ಬರುತ್ತಾರೆ. ಕಚೇರಿಗೆ ಬರುವವರಿಗಾಗಿಯೇ ಮೂತ್ರ ವಿಸರ್ಜನೆಗೆ ಶೌಚಾಲಯವನ್ನು ಸರ್ಕಾರ ನಿರ್ಮಿಸಲಾಗಿದೆ. ಬಹುತೇಕ ಮಂದಿ ಇದೇ ಶೌಚಾಲಯವನ್ನು ಬಳಸುತ್ತಿದ್ದಾರೆ. ಕೆಲವರು ಮೂತ್ರ ವಿಸರ್ಜನೆ ಮಾಡಬಾರದು ಎಂಬ ನಾಮಫ‌ಲಕ ಓದಿ ವಾಪಸ್ಸಾಗುವವರೂ ಇದ್ದಾರೆ.

ವರ್ಷ ಕಳೆದರೂ ನಾಮಫ‌ಲಕ ಬದಲಿಸಿಲ್ಲ: ನಾಮಫ‌ಲಕ ಅಳವಡಿಸಲು ಕಾರಣವಿದೆ. ಇಲ್ಲಿ ಶೌಚಾಲಯ ನಿರ್ಮಿಸುವ ಮುನ್ನ ಬಹುತೇಕ ಮಂದಿ ತಾಲೂಕು ಕಚೇರಿಯ ಗೋಡೆ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಕಚೇರಿಯ ಅಧಿಕಾರಿಗಳು ಇದೇ ಗೋಡೆಯನ್ನು ತೆರವುಗೊಳಿಸಿ ಮೂತ್ರ ವಿಸರ್ಜನೆಗಾಗಿ ಶೌಚಾಲಯವನ್ನು ನಿರ್ಮಾಣ ಮಾಡಿದ್ದಾರೆ. ಕಟ್ಟಡ ನಿರ್ಮಿಸಿ ವರ್ಷವೇ ಕಳೆದಿದೆ. ವರ್ಷ ಕಳೆದರೂ ಇನ್ನೂ ಸಹ ನಾಮಫ‌ಲಕವನ್ನು ಬದಲಾಯಿಸಿಲ್ಲ. ಈ ನಾಮಫ‌ಲಕ ಬದಲಾಯಿಸಲು ಇನ್ನೂ ಎಷ್ಟು ವರ್ಷಬೇಕು ಎಂಬ ಪ್ರಶ್ನೆ ಸಹಜವಾಗಿ ಸಾರ್ವಜನಿಕರಲ್ಲಿ ಮೂಡಿದೆ. ತಾಲೂಕು ಕಚೇರಿಯ ಲ್ಲಿಯೂ ಸಹ ಸಾರ್ವಜನಿಕರ ಕೆಲಸ ಕಾರ್ಯಗಳು ಇದೇ ಸ್ಥಿತಿಯಲ್ಲಿ ನಡೆಯುತ್ತಿರುವುದು ಎಂಬುದಕ್ಕೆ ಇದೇ ಉದಾಹರಣೆ ಸಾಕಲ್ಲವೆ? ನಿಜಕ್ಕೂ ತಾಲೂಕು ಆಡಳಿತ ತೀರ ಹದಗೆಟ್ಟಿದೆ ಎಂದು ರೈತರು ದೂರಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ