ಕುಡಿಯುವ ನೀರಿಗೂ ಬೆರೆತ ರಾಜಕಾರಣ

ಎರಡು ಜಿಲ್ಲೆಗಳ ನಡುವೆ ಸಂಘರ್ಷ, ಯೋಜನೆ ನನೆಗುದಿಗೆ „ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯ

Team Udayavani, Oct 31, 2019, 5:04 PM IST

ಮಂಡ್ಯ ಮಂಜುನಾಥ್‌
ಮಂಡ್ಯ:
ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿ ಸೇರಿದಂತೆ 128 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಯೋಜನೆಗೆ ರಾಜಕೀಯ ಬೆರೆತಿದ್ದು, ಇದು ಎರಡು ಪಕ್ಷಗಳ ನಡುವಿನ ಸಂಘರ್ಷದ ಜೊತೆಗೆ ಎರಡು ಜಿಲ್ಲೆಗಳ ಜನರ ನಡುವಿನ ವೈಷಮ್ಯಕ್ಕೂ ಕಾರಣವಾಗಿದೆ.

ಜಿಲ್ಲೆಯಲ್ಲಿ ಒಗ್ಗಟ್ಟಿನ ಕೊರತೆ: ಈ ಯೋಜನೆಯ ವಿಚಾರವನ್ನು ಕುಣಿಗಲ್‌ ಕ್ಷೇತ್ರದ ಶಾಸಕ ಡಾ.ರಂಗ
ನಾಥ್‌ ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿದ್ದು, ಪಕ್ಷಾತೀತವಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕುಡಿಯುವ ನೀರು ಯೋಜನೆಗೆ ಅಡ್ಡಗಾಲಾಗಿ ನಿಂತಿದ್ದಾರೆ. ಇದೇ ವೇಳೆ ಮಂಡ್ಯ ಜಿಲ್ಲಾ ರಾಜಕಾರಣ ದಲ್ಲಿನ ಒಗ್ಗಟ್ಟಿನ ಕೊರತೆ ಹಾಗೂ ನಾಗಮಂಗಲ ಶಾಸಕ ಕೆ.ಸುರೇಶ್‌ಗೌಡರ ಏಕಮೇವ ನಾಯಕತ್ವದಿಂದ ಮಹತ್ವದ ಯೋಜನೆ ನನೆಗುದಿಗೆ ಬೀಳುವಂತಾಗಿದೆ.

ಭುಗಿಲೆದ್ದ ರಾಜಕೀಯ ಹಗೆತನ: ತಾಲೂಕಿನ ಜನರ ಕುಡಿಯುವ ನೀರಿನ ದಾಹ ಇಂಗಿಸುವ ಉದ್ದೇಶದಿಂದ ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಶ್ರಮದ ಫ‌ಲವಾಗಿ ಆದಿ ಚುಂಚ ನಗಿರಿ ಸೇರಿದಂತೆ 128 ಗ್ರಾಮಗಳಿಗೆ ಕುಡಿಯುವ ನೀರು ಯೋಜನೆಗೆ ರಾಜ್ಯಸರ್ಕಾರ 2012ರಲ್ಲಿ ಅನುಮೋದನೆ ನೀಡಿತ್ತು.

ಕಾರಣಾಂತರಗಳಿಂದ ಯೋಜನೆ ನಿಗದಿತ ವೇಳೆಗೆ ಆರಂಭವಾಗದೆ 2017 ರಲ್ಲಿ ಚಾಲನೆ ನೀಡಲಾಯಿತು. ಇದೀಗ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿ ರಾಜಕೀಯ ಹಗೆತನ ಭುಗಿಲೆದ್ದಿದ್ದು, ನಾಯಕರ ನಡುವಿನ ಮುಸುಕಿನ ಗುದ್ದಾಟ ಹಾಗೂ ಕುಣಿಗಲ್‌ ಶಾಸಕರ ನೀರಿನ ರಾಜಕಾರಣದ ಹಿಂದೆ ಸಾಕಷ್ಟು ಕಾಣದ ಕೈಗಳು ಹಸ್ತಕ್ಷೇಪ ಮಾಡಿರುವುದರಿಂದ ಯೋಜನೆ ವಿವಾ ದದ ಸ್ವರೂಪ ಪಡೆದುಕೊಂಡಿದೆ.

ಅಂತಿಮ ಹಂತದಲ್ಲಿ ಕಾಮಗಾರಿ: ಈ ಯೋಜನೆಗೆ ರಾಜ್ಯ ಸರ್ಕಾರ 166.43 ಕೋಟಿ ರೂ. ವೆಚ್ಚ ಮಾಡಿದ್ದು, ಪೈಪ್‌ಲೈನ್‌ ಕಾಮಗಾರಿ, ಓವರ್‌ ಹೆಡ್‌ ಟ್ಯಾಂಕ್‌, ನೀರು ಶುದ್ಧೀಕರಣ ಘಟಕ, ಮಧ್ಯಂತರ ಜಲಸಂಗ್ರಹಾಗಾರ ಸೇರಿದಂತೆ ಇನ್ನಿತರ ಎಲ್ಲಾ ಕಾಮಗಾರಿಗಳನ್ನು ಮುಗಿಸಿ ಅಂತಿಮ ಹಂತದಲ್ಲಿ ಮಂಡ್ಯ ಜಿಲ್ಲೆಗೆ ಸೇರಿದ ಸರ್ವೆ ನಂಬರ್‌ ಜಾಗದಲ್ಲಿ ಜಾಕ್‌ವೆಲ್‌ ನಿರ್ಮಿಸುವ ವೇಳೆ ಕುಣಿಗಲ್‌ ಶಾಸಕ ಡಾ.ರಂಗನಾಥ್‌ ಪ್ರತಿಷ್ಠೆಯಿಂದಾಗಿ ಯೋಜನೆ ಸ್ಥಗಿತಗೊಂಡಿದೆ.

ಜಿಲ್ಲೆಯಲ್ಲಿ ಒಗ್ಗಟ್ಟಿನ ಕೊರತೆ: ನಾಗಮಂಗಲ ಕ್ಷೇತ್ರ ರಾಜಕಾರಣದಲ್ಲಿನ ಒಗ್ಗಟ್ಟಿನ ಕೊರತೆಯೂ ಯೋಜನೆ ಹಿನ್ನಡೆಗೆ ಮತ್ತೂಂದು ಕಾರಣವಾಗಿದೆ. ಕ್ಷೇತ್ರದಲ್ಲಿ ಶಾಸಕ ಕೆ.ಸುರೇಶ್‌ಗೌಡರ ಜೊತೆ ವಿಧಾನ ಪರಿಷತ್‌ ಸದಸ್ಯರಾದ ಎನ್‌.ಅಪ್ಪಾಜಿಗೌಡ, ಕೆ.ಟಿ. ಶ್ರೀಕಂಠೇಗೌಡ, ಮಾಜಿ ಶಾಸಕ ಎಲ್‌.ಆರ್‌.ಶಿವ ರಾಮೇಗೌಡ ಅವರಂತಹ ಪ್ರಭಾವಿ ನಾಯಕರಿದ್ದಾರೆ.

ಅವರೆಲ್ಲರೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಹೋಗುವಲ್ಲಿ ಶಾಸಕ ಕೆ.ಸುರೇಶ್‌ಗೌಡ ವಿಫ‌ಲರಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಲ್ಲದೆ, ತಾಲೂಕಿನ ನೂರಾರು ಹಳ್ಳಿಗಳ ಸಾವಿರಾರು ಜನರಿಗೆ ಅನುಕೂಲವಾಗುವಂತಹ ಯೋಜನೆಗೆ ಪಕ್ಷಾತೀತವಾಗಿ ಕಾಂಗ್ರೆಸ್‌, ಬಿಜೆಪಿ, ರೈತಸಂಘದ ನಾಯಕರನ್ನೂ ಒಗ್ಗೂಡಿಸಿಕೊಂಡು ಯೋಜನೆ ಜಾರಿಗಿರುವ ಅಡೆ-ತಡೆಗಳನ್ನು ನಿವಾರಿಸುವ ಪ್ರಯತ್ನಕ್ಕೂ ಮುಂದಾಗದಿರುವ ಬಗ್ಗೆ ಎಲ್ಲೆಡೆ ಅಪಸ್ವರಗಳೂ ವ್ಯಕ್ತವಾಗುತ್ತಿವೆ.

ಹೋರಾಟ ಘೋಷಣೆಗಷ್ಟೇ ಸೀಮಿತ: ಜಾಕ್‌ ವೆಲ್‌ ನಿರ್ಮಾಣದ ವಿಚಾರವಾಗಿ ಆಕ್ಷೇಪವೆತ್ತಿ ಯೋಜನೆಗೆ ಅಡ್ಡಗಾಲು ಹಾಕಿರುವವರ ವಿರುದ್ಧ ಪಕ್ಷಾತೀತ ಹೋರಾಟ ನಡೆಸುವುದಾಗಿ ಮಾಜಿ ಶಾಸಕ ಎಲ್‌.ಆರ್‌.ಶಿವರಾಮೇಗೌಡರು ಕೆಲವು ದಿನಗಳ ಹಿಂದೆ ಘೋಷಣೆ ಮಾಡಿದ್ದೆಷ್ಟು ಅಷ್ಟೇ.

ಅಲ್ಲಿಂದ ಮುಂದೆ ಜೆಡಿಎಸ್‌ ನಾಯಕರು ಹೋರಾಟದ ರೂಪು-ರೇಷೆ ತಯಾರಿಸುವ, ಕುಣಿಗಲ್‌
ಶಾಸಕರೊಟ್ಟಿಗೆ ಒಟ್ಟಾಗಿ ಕುಳಿತು ಸಮಾಲೋಚನೆ ನಡೆಸಿ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ, ಪಕ್ಷಾತೀತವಾಗಿ ಎಲ್ಲಾ ನಾಯಕರನ್ನು ಒಗ್ಗೂಡಿಸುವ ಪ್ರಯ ತ್ನಕ್ಕೆ ಇದುವರೆಗೂ ಯಾರೊ ಬ್ಬರೂ ಮುಂದಾಗಿಲ್ಲ. ಸ್ಥಳೀಯ ಜನಪ್ರತಿನಿಧಿಗಳಲ್ಲಿರುವ ರಾಜಕೀಯ ಇಚ್ಛಾ ಶಕ್ತಿಯ ಕೊರತೆಯೂ ಯೋಜನೆ ಸಂಕಷ್ಟಕ್ಕೆ ಸಿಲುಕಲು ಕಾರಣವಾಗಿದೆ.

ಕ್ಷೇತ್ರದ ಮತ್ತೂಬ್ಬ ಪ್ರಭಾವಿ ನಾಯಕ ಎನ್‌. ಚಲುವರಾಯಸ್ವಾಮಿ ಶಾಸಕರಾ ಗಿದ್ದ ವೇಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಅದೀಗ ಪೂರ್ಣಗೊ ಳ್ಳುವ ಹಂತ ತಲುಪಿದೆ. ಅವರೂ ಸಹ ತಮ್ಮ ಬೆಂಬಲಿಗರ ಮೂಲಕ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆಯೇ ಹೊರತು ಯೋಜನೆಗಿರುವ ಅಡೆತಡೆ ನಿವಾರಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ನಡೆಸದೆ ಮೌನಕ್ಕೆ ಶರಣಾಗಿದ್ದಾರೆ.

ಜನಸಂಖ್ಯೆ ಎಷ್ಟು ?: ಈ ಯೋಜನೆಯಿಂದ 129 ಗ್ರಾಮಗಳ ಒಟ್ಟು 75,129 (2011ರ ಜನಗಣತಿ) ಹಾಗೂ 112994 (2047ಕ್ಕೆ ಯೋಜಿಸಲಾದ ಜನಸಂಖ್ಯೆ) ಜನರಿಗೆ ನೀರು ಪೂರೈಸುವ ಉದ್ದೇಶ ಹೊಂದಲಾಗಿದೆ.

ದೂರ ಉಳಿದ ಉಸ್ತುವಾರಿ ಸಚಿವ: ಕುಡಿಯುವ ನೀರಿನ ಯೋಜನೆ ವಿಚಾರದಲ್ಲಿ ಎರಡು ಜಿಲ್ಲೆಗಳ ನಡುವೆ ರಾಜಕೀಯ ಸಂಘರ್ಷ ಏರ್ಪಟ್ಟಿದ್ದರೂ ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್‌ ದೂರವೇ ಉಳಿದಿದ್ದಾರೆ. ಎರಡೂ ಕ್ಷೇತ್ರದ ಶಾಸಕರನ್ನು ಕರೆಸಿ ಸಮನ್ವಯತೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಸಚಿವರೂ ಮುಂದಾಗದಿರುವುದು ದೌರ್ಭಾಗ್ಯದ ಸಂಗತಿಯಾಗಿದೆ.

ಯೋಜನೆ ನಿರ್ಮಾಣ ಕಾಮಗಾರಿ: ನಾಗಮಂಗಲ ತಾಲೂಕು ಮಲ್ಲಸಂದ್ರ ಗ್ರಾಮದ ಬಳಿ 10.62 ಎಂಎಲ್‌ಡಿ ಸಾಮರ್ಥ್ಯದ 1 ನೀರು ಶುದ್ಧೀಕರಣ ಘಟಕ, ಎಲೆಕೊಪ್ಪ ಗ್ರಾಮದ ಬಳಿ 12 ಲಕ್ಷ ಲೀಟರ್‌ ಸಾಮರ್ಥ್ಯದ 1 ಮುಖ್ಯ ಸಮತೋಲನ ತೊಟ್ಟಿ, ತಿರುಮಲಾಪುರ ಹಾಗೂ ಲಾಳನಕೆರೆ ಬಳಿ 10 ಲಕ್ಷ ಲೀಟರ್‌ ಸಾಮರ್ಥ್ಯದ ಮಧ್ಯಂತರ ಜಲ ಸಂಗ್ರಹಾಗಾರ, ದೊಡ್ಡ ಚಿಕ್ಕನಹಳ್ಳಿ ಬಳಿ ಎರಡು, ಎಲೆಕೊಪ್ಪ ಬೆಟ್ಟ ಬಳಿ ಎರಡು, ಆದಿ ಚುಂಚನಗಿರಿ, ಮೂಡಲಮೆಲ್ಲಹಳ್ಳಿ ಹಾಗೂ ಕದಬಹಳ್ಳಿ ಬಳಿ ತಲಾ ಒಂದೊಂದು ವಲಯ ಸಮತೋಲನಾ ತೊಟ್ಟಿಗಳ ನಿರ್ಮಾಣ. ದೊಡ್ಡ ಚಿಕ್ಕನಹಳ್ಳಿ, ಮೂಡಲ ಮಲ್ಲ ಹಳ್ಳಿ, ಕದಬಹಳ್ಳಿ ಬಳಿ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ