ಮಂಡ್ಯ: ಕಾರಿನಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿ ಸಾವು
Team Udayavani, Nov 7, 2020, 4:27 PM IST
ಮಂಡ್ಯ: ನಗರದ ಜಿಲ್ಲಾಸ್ಪತ್ರೆ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಕಾರಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಮಳವಳ್ಳಿ ತಾಲೂಕು ಕಿರುಗಾವಲು ಗ್ರಾಮದ ಶಶಿಕುಮಾರ್ (44) ಮೃತ ವ್ಯಕ್ತಿ. ಈತ ಅ.4ರಂದು ತನ್ನ ಸ್ನೇಹಿತ ಟೀ.ನರಸೀಪುರದ ಆನಂದ್ ಕುಮಾರ್ ಎಂಬುವವರಿಂದ ಮಾರುತಿ ಕಾರು ಪಡೆದು ಬೆಂಗಳೂರಿಗೆ ಹೋಗಿ ಬರುವುದಾಗಿ ತಿಳಿಸಿ ತೆರಳಿದ್ದಾನೆ.
ಎರಡು ದಿನ ಕಳೆದರೂ ಶಶಿಕುಮಾರ್ ಬಾರದಿರುವುದನ್ನು ಕಂಡ ಆನಂದ್ ಕುಮಾರ್ ಇತರರು ಮಂಡ್ಯ, ಮೈಸೂರು ಸೇರಿದಂತೆ ವಿವಿಧೆಡೆ ವಸತಿಗೃಹ ಇತರೆಡೆ ಹುಡುಕಾಟ ನಡೆಸಿದ್ದಾರೆ. ಆದರೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ನಡುವೆ ಮೂರು ದಿನದಿಂದ ಮಾರುತಿ ಕಾರು ಅನುಮಾನಾಸ್ಪದವಾಗಿ ನಿಂತಿದ್ದು, ಜತೆಗೆ ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರಿನ ನಂಬರ್ ಆಧಾರದ ಮೇರೆಗೆ ಆನಂದ್ ಕುಮಾರ್ ಅವರ ವಿಳಾಸ ಪತ್ತೆ ಹಚ್ಚಿ ಮಾಹಿತಿ ನೀಡಿದ್ದಾರೆ. ಶವವನ್ನು ವಶಕ್ಕೆ ಪಡೆದ ಪೊಲೀಸರು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಿದರು. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ಸಂಬಂಧ ಮಂಡ್ಯ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.