ಸಕ್ಕರೆ ನಾಡಲ್ಲಿ ಹಾಲಿ, ಮಾಜಿಗಳ ಕೆಸರೆರಚಾಟ

Team Udayavani, Oct 27, 2018, 6:00 AM IST

ಮಂಡ್ಯ ಲೋಕಸಭಾ ಉಪ ಚುನಾವಣೆಯ ಕಾವು ಏರುತ್ತಿದ್ದು, ಶುಕ್ರವಾರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದರು. ಜಿಲ್ಲೆಯ ಮಳವಳ್ಳಿ, ಮದ್ದೂರುಗಳಲ್ಲಿ ಮೈತ್ರಿ ಅಭ್ಯರ್ಥಿ ಶಿವರಾಮೇಗೌಡರ ಪರ ಪ್ರಚಾರ ನಡೆಸಿದ ಎಚ್ಡಿಕೆ, ಬಿಜೆಪಿ ಹಾಗೂ ಬಿಎಸ್‌ವೈ ಪರ ವಾಗ್ಧಾಳಿ ನಡೆಸಿದರು. ಇದೇ ವೇಳೆ ಮದ್ದೂರು, ನಾಗಮಂಗಲಗಳಲ್ಲಿ ಪ್ರಚಾರ ಕೈಗೊಂಡ ಯಡಿಯೂರಪ್ಪ, ಮೈತ್ರಿ ಸರ್ಕಾರ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಡಿನೋಟಿಫಿಕೇಷನ್‌ ಕೆಲಸ ಮಾತ್ರ ಸ್ಥಗಿತ  
ಮದ್ದೂರಿನಲ್ಲಿ ಪ್ರಚಾರ ಭಾಷಣ ಮಾಡಿದ ಕುಮಾರಸ್ವಾಮಿ, ಹಣ ಬಲದಿಂದ ಚುನಾವಣೆ ನಡೆಸುವುದು ಜೆಡಿಎಸ್‌ ಜಾಯಮಾನವಲ್ಲ. ಅದು ಬಿಜೆಪಿ ಜಾಯಮಾನ. ಹಣದಿಂದ ರಾಜಕಾರಣ ಮಾಡುವುದನ್ನು ಕಲಿಸಿಕೊಟ್ಟಿದ್ದೇ ಬಿಜೆಪಿ. ನಾವು ಜನರ ಪ್ರೀತಿ ವಿಶ್ವಾಸದ ಮೇಲೆ ರಾಜಕಾರಣ ಮಾಡುತ್ತಿದ್ದೇವೆ. ಹಣದಿಂದ ಅಧಿಕಾರ ಗಳಿಸಬೇಕೆಂಬ ಅಗತ್ಯ, ಅನಿವಾರ್ಯತೆ ನಮಗಿಲ್ಲ ಎಂದರು.

ರಾಜ್ಯ ಸರ್ಕಾರ ದಿವಾಳಿಯಾಗಿದೆ. ಬೊಕ್ಕಸ ಬರಿದಾಗಿದೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿದೆ ಎಂಬ ಯಡಿಯೂರಪ್ಪನವರ ಹೇಳಿಕೆ ಬಾಲಿಶವಾದದ್ದು. ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆಗಳೆಲ್ಲವೂ ಸುಸೂತ್ರವಾಗಿ ನಡೆಯುತ್ತಿವೆ. ಯಡಿಯೂರಪ್ಪನವರ ಕಾಲದ ಡಿನೋಟಿಫಿಕೇಷನ್‌ ಕೆಲಸ ಮಾತ್ರವಷ್ಟೇ ಸ್ಥಗಿತಗೊಂಡಿದೆ ಎಂದು ಛಾಟಿ ಬೀಸಿದರು. 

ನಾಡಿನ ಜನರಿಗೆ ದ್ರೋಹ ಮಾಡಿ ಬದುಕುಳಿಯಲಾರೆ: ಬಳಿಕ ಮಳವಳ್ಳಿಯಲ್ಲಿ ಮಾತನಾಡಿ, ಮುಂದಿನ ಹದಿನೈದು ದಿನಗಳಲ್ಲಿ ರಾಜ್ಯದಲ್ಲಿ ಋಣಮುಕ್ತ ಕಾಯ್ದೆ ಅನುಷ್ಠಾನದ ಘೋಷಣೆ ಮಾಡುತ್ತೇನೆ. ಋಣಮುಕ್ತ ಕಾಯ್ದೆ ಜಾರಿಗೊಳಿಸಲು ರಾಷ್ಟ್ರಪತಿಯವರ ಸಹಿಗೆ ಕಳುಹಿಸಲಾಗಿದೆ. ಬಡ್ಡಿ, ಚಕ್ರಬಡ್ಡಿ ಸಹಿತ ಸಾಲದ ಶೂಲದಲ್ಲಿ ಸಿಲುಕಿರುವ ಬಡವರನ್ನು ರಕ್ಷಿಸಲು ಋಣಮುಕ್ತ ಕಾಯ್ದೆಯನ್ನು ಘೋಷಣೆ ಮಾಡಲಾಗುವುದು. ಹಂತ ಹಂತವಾಗಿ ರೈತರ ಎಲ್ಲಾ ಸಾಲಮನ್ನಾ ಮಾಡಲಾಗುವುದು. ನವೆಂಬರ್‌ನಲ್ಲಿ ಎಲ್ಲಾ ಜಿಲ್ಲೆಯ ಹತ್ತು ಲಕ್ಷ
ರೈತರನ್ನು ಕರೆಸಿ ಸಂಪೂರ್ಣ ಸಾಲ ಮನ್ನಾದ ಬಗ್ಗೆ ಘೋಷಣೆ ಮಾಡಲಾಗುವುದು ಎಂದರು.

ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಭರವಸೆಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ. ನವೆಂಬರ್‌ ಒಂದರಿಂದ ವೃದ್ದಾಪ್ಯ ವೇತನವನ್ನು 600ರಿಂದ 1000ಕ್ಕೆ ಹೆಚ್ಚಿಸಲಾಗುವುದು. ಗರ್ಭಿಣಿಯರಿಗೆ 6 ತಿಂಗಳಿಂದ 12 ತಿಂಗಳ ವರೆಗೆ ಪ್ರತಿ ತಿಂಗಳು 2 ಸಾವಿರ ರೂ.ನೀಡಲಾಗುವುದು. 
● ಎಚ್‌.ಡಿ.ಕುಮಾರಸ್ವಾಮಿ, ಸಿಎಂ

ಸರ್ಕಾರ ಸಂಪೂರ್ಣ ದಿವಾಳಿ, ಬೊಕ್ಕಸ ಖಾಲಿ ನಾಗಮಂಗಲದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ ಯಡಿಯೂರಪ್ಪ, ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದ್ದು, ಬೊಕ್ಕಸದಲ್ಲಿ ಹಣವಿಲ್ಲ. ಅಭಿವೃದ್ಧಿ ಯೋಜನೆಗಳಿಗೆ ದೇವಾಲಯಗಳ ಹುಂಡಿ ಹಣಕ್ಕೆ ಕೈ ಹಾಕಿದೆ.
ಶ್ರೀರಂಗಪಟ್ಟಣದ ಶ್ರೀರಂಗನಾಥ, ಮೇಲು ಕೋಟೆ ಚೆಲುವನಾರಾಯಣಸ್ವಾಮಿ ಹುಂಡಿ ಹಣವನ್ನು ಸರ್ಕಾರ ತೆಗೆದುಕೊಂಡಿದೆ. ಕಳೆದ ಆರು ತಿಂಗಳಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ನಡೆದಿಲ್ಲ. ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಿರಲಿ, ಶವಸಂಸ್ಕಾರಕ್ಕೂ ಸರ್ಕಾರದ ಬಳಿ ಹಣವಿಲ್ಲ. ಇಂಥ ಸರ್ಕಾರದಿಂದ ಯಾವ ರೀತಿ ಅಭಿವೃದಿಟಛಿ ನಿರೀಕ್ಷಿಸಲು ಸಾಧ್ಯ ಎಂದರು. ರೈತರ ಸಂಪೂರ್ಣ
ಸಾಲ ಮನ್ನಾ ಮಾಡುವಲ್ಲಿ ವಿಫ‌ಲವಾಗಿರುವ ಸಮ್ಮಿಶ್ರ ಸರ್ಕಾರ ಮೊದಲು ಸಾಲ ಮನ್ನಾ ಮಾಡುವ ಸಾಮರ್ಥ್ಯ ಪ್ರದರ್ಶಿಸುವಂತೆ ಸವಾಲು ಹಾಕಿದರು.

ಚೆಲುವರಾಯಸ್ವಾಮಿಯನ್ನು ನಾಗ ಮಂಗಲದಲ್ಲಿ ಸೋಲಿಸಿ ಅವಮಾನ ಮಾಡಿದ್ದಾರೆ. ಅವರ ಬೆಂಬಲಿಗರೆಲ್ಲರೂ ಜೆಪಿಗೆ ಮತ ಹಾಕಿ ಗೆಲ್ಲಿಸಬೇಕು. ಇದರಿಂದ ಅವರಿಗೆ ಅವಮಾನ ಮಾಡಿದವರಿಗೆ ಪಾಠ ಕಲಿಸಿದಂತಾಗುವುದು ಎಂದು ತಿಳಿಸಿದರು. ಬಹಿರಂಗ ಸಭೆಯಲ್ಲಿ ಯಡಿಯೂರಪ್ಪ ಭಾಷಣ ಮಾಡುವ ವೇಳೆ ಬಿಜೆಪಿ ಕಾರ್ಯಕರ್ತರು ಚೆಲುವರಾಯಸ್ವಾಮಿ ಪರ ಜೈಕಾರ ಕೂಗಿದರು. ಮದ್ದೂರಿನಲ್ಲಿ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಶನಿ, ರಾಹು, ಕೇತು ಒಂದಾಗಿದ್ದಾಗಿ ಸ್ವತಃ ಅವರೇ ಹೇಳಿದ್ದು ಶನಿ, ರಾಹು, ಕೇತು ಯಾರೆಂಬುದು ಈಗಾಗಲೇ ಜನರಿಗೆ ಅರಿವಾಗಿದೆ. ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸ್ವಲ್ಪ ಅಂತರದಿಂದ ಗೆದ್ದು ತಮ್ಮ ಮರ್ಯಾದೆ ಉಳಿಸಿಕೊಂಡಿದ್ದಾರೆ ಎಂದರು.

ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್‌ ಸಭೆಗೆ ಹಾಜರಾಗದೆ ಜನಾಂಗಕ್ಕೆ ಅಪಮಾನವೆಸಗಿದ್ದಾರೆ. ವಾಲ್ಮೀಕಿ ಪ್ರಶಸ್ತಿ ಸ್ವೀಕರಿಸಲು ಆಗಮಿಸದ ದೇವೇಗೌಡ ಅವರು ಕ್ಷಮೆಯಾಚಿಸಬೇಕು.
● ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ