ಬಿರುಗಾಳಿ, ಆಲಿಕಲ್ಲು ಮಳೆಗೆ ಬೆಳೆ-ಆಸ್ತಿ ಹಾನಿ

ಹಾರಿಹೋದ ಹೆಂಚುಗಳು, ಮನೆಗಳ ಮೇಲ್ಛಾವಣಿ ಕುಸಿತ • ಧರೆಗುರುಳಿದ ವಿದ್ಯುತ್‌ ಕಂಬಗಳು, ಮರಗಳು

Team Udayavani, May 25, 2019, 4:38 PM IST

ನಾಗಮಂಗಲ: ತಾಲೂಕಾದ್ಯಂತ ಸುಡು ಬಿಸಿಲಿಗೆ ಕಂಗಾಲಾಗಿದ್ದ ರೈತರು ಮಳೆರಾಯನಿಗಾಗಿ ಹಂಬಲಿಸುತ್ತಿದ್ದರು. ಆದರೆ ಗುರುವಾರ ಸಂಜೆ ಗುಡುಗು-ಸಿಡಿಲು, ಆಲಿಕಲ್ಲು ಮತ್ತು ಬಿರುಗಾಳಿ ಸಮೆತ ಸುರಿದ ಮಳೆಗೆ ತಾಲ್ಲೂಕಿನ ಹಲವೆಡೆ ರೈತರು ಬೆಳೆದ ಬೆಳೆಗಳು ಹಾನಿಯಾಗಿರುವಘಟನೆ ನಡೆದಿದೆ.

ಬಿರುಗಾಳಿ ಸಹಿತ ಸುರಿದ ಮಳೆಗೆ ತೋಟದಮನೆಯ ಹೆಂಚುಗಳು ಹಾರಿಹೋಗಿವೆ, ಮನೆಗಳ ಮೇಲ್ಛಾವಣಿ ನೆಲಕ್ಕುರುಳಿವೆ, ವಿದ್ಯುತ್‌ ಕಂಬಗಳು ಸೇರಿದಂತೆ ರಸ್ತೆ ಬದಿಯ ಮರಗಳು ನೆಲಕ್ಕೊರಗಿ ತೀವ್ರ ನಷ್ಟ ಸಂಭವಿಸಿದೆ.

ನೆಲಕ್ಕುರುಳಿದ 250ಕ್ಕೂ ಹೆಚ್ಚು ತೆಂಗಿನ ಮರಗಳು: ತಾಲೂಕಿನ ರೈತರುಗಳಲ್ಲಿ ಶೇ.90 ರಷ್ಟು ರೈತರುಗಳು ತೆಂಗಿನ ಬೆಳೆಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಗುರುವಾರ ಸಂಜೆ ಸುರಿದ ಬಿರುಗಾಳಿ ಮಳೆಗೆ ಹೊಣಕೆರೆ ಹೋಬಳಿಯ ಜುಟ್ಟನಹಳ್ಳಿ ಒಂದೇ ಗ್ರಾಮದಲ್ಲಿ 25ಕ್ಕೂ ಹೆಚ್ಚು ರೈತರುಗಳ 250ಕ್ಕೂ ಹೆಚ್ಚು ತೆಂಗಿನ ಮರಗಳು ನೆಲಕ್ಕುರುಳಿವೆ. ರೈತರು ಸಂಪೂರ್ಣವಾಗಿ ಆತ್ಮಸ್ಥೈರ್ಯ ಕುಂದಿಸಿಕೊಂಡಿದ್ದಾರೆ. ತೆಂಗಿನಕಾಯಿ, ಕೊಬ್ಬರಿ ಮಾರಾಟ ಮಾಡುವ ಮೂಲಕ ಅದೆಷ್ಟು ಜನರು ತಮ್ಮ ಇಡೀ ಜೀವನವನ್ನು ಸುಸೂತ್ರವಾಗಿ ಸಾಗಿಸುತ್ತಿದ್ದ ರೈತರಿಗೆ ಈ ಮಳೆ ಶಾಪದಂತೆ ಪರಿಣಮಿಸಿದೆ. ಬರಗಾಲದಿಂದ ಒಣಗುತ್ತಿದ್ದ ತೆಂಗಿನಮರಗಳ ಉಳಿವಿಗಾಗಿ ರೈತರು ಕೊಳವೆಬಾವಿಗಳನ್ನು ಹಾಕಿಸಿಕೊಳ್ಳುವ ಮೂಲಕ ತೆಂಗಿನ ಮರಗಳನ್ನು ಉಳಿಸಿಕೊಂಡಿದ್ದರು, ಪ್ರಕೃತಿಯ ವಿಕೋಪಕ್ಕೆ ತುತ್ತಾಗಿ ನಿಸ್ಸಾಹಯಕರಾಗಿದ್ದರು.

ನೆಲ ಕಚ್ಚಿದ ಈರುಳ್ಳಿ ಶೆಡ್ಡುಗಳು : ಹೊಣಕೆರೆ ಹೋಬಳಿಯಲ್ಲಿ ಬಹುತೇಕ ರೈತರುಗಳು ಈರುಳ್ಳಿ ಬೆಳೆಯನ್ನು ಮುಖ್ಯಬೆಳೆಯನ್ನಾಗಿ ಬೆಳೆಯುತ್ತಾರೆ. ಆದ್ದರಿಂದ ತಮ್ಮ ತೋಟಗಳಲ್ಲಿ ಈರುಳ್ಳಿಗಳ ಶೇಖರಣೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈರುಳ್ಳಿ ಶೆಡ್‌ಗಳನ್ನು ನಿರ್ಮಿಸಿಕೊಂಡು ತಾವು ಬೆಳೆದ ಈರುಳ್ಳಿ ಬೆಳೆಯನ್ನು ಸಂರಕ್ಷಿಸುತ್ತಿದ್ದರು. ಆದರೆ ಅಪಾರ ಪ್ರಮಾಣದಲ್ಲಿ ಬಿರುಗಾಳಿ ಸಮೇತ ಸುರಿದ ಮಳೆಗೆ ಜುಟ್ಟನಹಳ್ಳಿ ಗ್ರಾಮದ ರೈತರಾದ ಕೆ.ರಾಮು, ಮಂಜುನಾಥೇಗೌಡ, ಶಿವಣ್ಣ, ಕೃಷ್ಣ, ಜವರೇಗೌಡ ಎಂಬ 5 ಜನ ರೈತರ ಈರುಳ್ಳಿ ಶೆಡ್‌ಗಳು ಈರುಳ್ಳಿ ಫ‌ಸಲು ಸಮೇತವಾಗಿ ನೆಲಸಮವಾಗಿವೆ. ಇದರಿಂದ ಸುಮಾರು 5 ಜನ ರೈತರು 6-7 ಲಕ್ಷ ನಷ್ಟ ಅನುಭವಿಸುತ್ತಿದ್ದೇವೆ ಎಂದು ನಷ್ಟ ಅನುಭವಿಸಿದ ರೈತ ರಾಮು ತಿಳಿಸಿದರು.

ಹಾನಿಗೊಳಗಾದ ತರಕಾರಿ, ಬಾಳೆ: ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಬೇಸಿಗೆಯಲ್ಲಿಯೂ ಕಷ್ಟಪಟ್ಟು ಬೆಳೆದಿದ್ದ ಕೋಸು ಬೆಳೆ, ಟೊಮೆಟೋ, ಬಾಳೆ ತೋಟ, ಈರುಳ್ಳಿ ಸೇರಿದಂತೆ ವಿವಿಧ ರೀತಿಯ ತರಕಾರಿಗಳು ಹಾಗೂ ತರಕಾರಿಗಳನ್ನು ಸಂಗ್ರಹಿಸಲು ನಿರ್ಮಿಸಿ ಕೊಂಡಿದ್ದ ತೋಟದ ಮನೆಗಳು ಕೂಡ ಬಿರುಗಾಳಿ, ಮಳೆಗೆ ನೆಲಸಮವಾಗಿವೆ.

ತರಕಾರಿ ಬೆಳೆಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಸಾಲ ಮಾಡಿ ಬೆಳೆ ಬೆಳೆಯಲು ಖರ್ಚು ಮಾಡಿದ ರೈತರ ಗೋಳು ಮುಗಿಲು ಮುಟ್ಟಿತ್ತು. ಅಪಾರ ಪ್ರಮಾಣದಲ್ಲಿ ಬಿದ್ದ ಆಲಿಕಲ್ಲು ಗಳಿಂದ ಹೊಣಕೆರೆ ಹೋಬಳಿಯ ಬ್ರಹ್ಮದೇವರಹಳ್ಳಿ, ಸಾಮಕಹಳ್ಳಿ ಹಾಗೂ ಚಿಣ್ಯ ಗ್ರಾಮಗಳ ಅನೇಕ ರೈತರು ಬೆಳೆದಿದ್ದ ಕೋಸ್‌ ಮತ್ತು ಟೊಮೆಟೋ ಬೇಳೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದೆ. ರೈತರು ಈ ಪ್ರಕೃತಿ ವಿಕೋಪದಿಂದ ಪರಿತಪಿಸುವಂತೆ ಮಾಡಿತ್ತು.

ರಸ್ತೆಗೆ ಅಡ್ಡ ಬಿದ್ದ ವಿದ್ಯುತ್‌ ಕಂಬ: ತಾಲೂಕಿನ ಹೊಣಕೆರೆ ಹೋಬಳಿಯ ಮೇಗಲ ಜುಟ್ಟನಹಳ್ಳಿ ಗ್ರಾಮಕ್ಕೆ ವಿದ್ಯುತ್‌ ಸಂಪರ್ಕ ನೀಡುವಂತಹ ವಿದ್ಯುತ್‌ ಕಂಬಗಳು ಗ್ರಾಮಕ್ಕೆ ಹೋಗಲಿರುವ ಏಕೈಕ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ಮಲಗಿರುವಂತೆ ಗಾಳಿಯ ರಭಸಕ್ಕೆ ನೆಲಕ್ಕುರುಳಿದ್ದವು. ವಿದ್ಯುತ್‌ ತಂತಿಗಳ ಸಮೇತವಾಗಿ ಬಿದ್ದಿರುವ ಪರಿಣಾಮ ಗ್ರಾಮದಲ್ಲಿ ಜನರು ಓಡಾಡಲು ಪರಿತಪಿಸುವಂತಾಗಿತ್ತು. ಗುರುವಾರ ಸಂಜೆ ಮಳೆಗಾಳಿಯಿಂದ ಬಿದ್ದಂತಹ ವಿದ್ಯುತ್‌ ಕಂಬಗಳಿಂದ ಗ್ರಾಮಕ್ಕೆ ವಿದ್ಯುತ್‌ ಕಡಿತಗೊಂಡಿದ್ದು ಇಡೀ ರಾತ್ರಿಯೆಲ್ಲಾ ವಿದ್ಯುತ್‌ ಸಂಪರ್ಕವಿಲ್ಲದೆ ಜನರು ಕತ್ತಲಲ್ಲೆ ಕಳೆಯಬೇಕಾದ ಸ್ಥಿತಿ ನಿರ್ಮಾಣ ವಾಗಿತ್ತು. ರಸ್ತೆಗೆ ಕಂಬಗಳು ತಂತಿಗಳ ಸಮೇತವಾಗಿ ಬಿದ್ದಿದ್ದರಿಂದ ಗ್ರಾಮದ ಜನರು ಓಡಾಡಲು ಭಯಪಟ್ಟು ರಸ್ತೆಯನ್ನು ಬಿಟ್ಟು ರಸ್ತೆಬದಿಯ ಗದ್ದೆಗಳ ಮೂಲಕ ಗ್ರಾಮವನ್ನು ಸೇರಿದ ಪ್ರಸಂಗವು ನಡೆಯಿತು. ರಸ್ತೆಗೆ ಬಿದ್ದಿದ್ದ ಮರಗಳನ್ನು ಸ್ಥಳಿಯ ಜನರು ತೆರವುಗೊಳಿಸಿದರಾದರೂ ಸಹ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಲು ಸಾಧ್ಯವಾಗದ ಕಾರಣ ಗ್ರಾಮದ ಜನರು ಭಯದಿಂದ ಗ್ರಾಮದಿಂದ ಹೊರಹೋಗಲು ಅಥವಾ ಒಳಹೋಗಲು ಆಗದೆ ಕೈಕಟ್ಟಿಕುಳಿತುಕೊಳ್ಳಲಾಗಿತ್ತು.

ಕಂಗಾಲಾಗಿರುವ ರೈತರು: ಮಳೆ ಇಲ್ಲದೆ ಬಿರು ಬೇಸಿಗೆಯಲ್ಲಿ ಬೆಂದು ಹೋಗಿದ್ದ ತಾಲ್ಲೂಕಿನ ರೈತರು ಮಳೆಗಾಗಿ ಹಂಬಲಿಸುತ್ತಿದ್ದರು. ಗುರುವಾರ ಸಂಜೆ ಮಳೆ ಏನೋ ಬಂತು ಆದರೆ ಮಳೆ ಜೊತೆಗೆ ಆಗಮಿಸಿದ ಬಿರುಗಾಳಿ, ಗುಡುಗು ಸಿಡಿಲು ಆಲಿಕಲ್ಲು ಸಹಿತ ಮಳೆ ರೈತರ ಸಂತಸವನ್ನು ಕ್ಷಣಾರ್ಧದಲ್ಲೆ ನುಚ್ಚು ನೂರು ಮಾಡಿತು. ಸುರಿದ ಆಲಿಕಲ್ಲು ಸಹಿತ ಮಳೆಗೆ ರೈತರ ಬೆಳೆ, ತೆಂಗಿನ ಮರ, ದಾಸ್ತಾನಿಟ್ಟಿದ್ದ ಈರುಳ್ಳಿ, ಕೋಸಿನ ಬೆಳೆ, ಬಾಳೆ ಗಿಡ, ಟೊಮೆಟೋ ಮುಂತಾದ ಬೆಳೆಗಳು ಅಪಾರ ಹಾನಿಗೊಳಗಾಗದವು. ಮೊದಲೆ ಬಿರು ಬೇಸಿಗೆಯಲ್ಲು ಹೇಗೋ ನೀರು ಹೊಂದಿಸಿ ಬೆಳೆದ ಬೆಳೆಗಳು ನಷ್ಟಕ್ಕೊಳಗಾಗಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಕಂಗಾಲಾಗಿರುವ ರೈತರು ಸೂಕ್ತ ಪರಿಹಾರ ಶೀಘ್ರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ