ನಾಲೆಗಳಿಗೆ ನೀರು ಹರಿಸಲು ತೀರ್ಮಾನ

Team Udayavani, Jun 25, 2019, 11:34 AM IST

ಮಂಡ್ಯ: ಕಾವೇರಿ ಜಲಾನಯನ ಹಾಗೂ ಹೇಮಾವತಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ಬೆಳೆಗೆ ನೀರೊದಗಿಸಲು ಕಾನೂನಾತ್ಮಕವಾಗಿ ಮಂಗಳವಾರ ಸಂಜೆಯೊಳಗೆ ನಿರ್ಧಾರಕ್ಕೆ ಬಂದು ರೈತರ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಿಗೆ ಮನವಿ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಭರವಸೆ ನೀಡಿದರು.

ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ನಾಲೆಗಳಿಗೆ ನೀರು ಹರಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಆಲಿಸಿ ಮಾತನಾಡಿದ ಅವರು, ರೈತರ ಬೆಳೆ ಕೊನೆ ಹಂತದಲ್ಲಿದ್ದು, ಇಂತಹ ಸಂದರ್ಭದಲ್ಲಿ ನೀರಿನ ಅಗತ್ಯವಿದೆ ಎಂಬುದು ನಮಗೂ ಅರ್ಥವಾಗುತ್ತದೆ. ತಾವು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರ ಜತೆ ವಸ್ತುಸ್ಥಿತಿ ಕುರಿತು ಚರ್ಚಿಸುತ್ತೇನೆ ಎಂದು ಹೇಳಿದರು.

ಮಂಗಳವಾರ (ಜೂ.25) ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದ್ದು, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯದ ವಸ್ತುಸ್ಥಿತಿ, ರೈತರ ಬವಣೆ ಕುರಿತಂತೆ ಪ್ರಾಧಿಕಾರದ ಮುಂದೆ ಸಮಸ್ಯೆಗಳನ್ನು ವಿವರಿಸಿ ಪರಿಹಾರಕ್ಕೆ ಮಾರ್ಗಸೂಚಿ ಕಂಡುಕೊಳ್ಳುವಂತೆ ಸೂಚೆನ ನೀಡಿರುವುದಾಗಿ ಪರಮೇಶ್ವರ್‌ ತಿಳಿಸಿದರು.

ಪ್ರಾಧಿಕಾರ ಸಭೆಯಲ್ಲಿ ಪ್ರಸ್ತಾಪ: ತಮಿಳುನಾಡಿನಲ್ಲೂ ಭತ್ತದ ಬೆಳೆಗೆ ನೀರಿನ ಅಗತ್ಯವಿದೆ ಎಂಬ ವಿಚಾರ ಪ್ರಾಧಿಕಾರ ಸಭೆಯಲ್ಲಿ ಅಲ್ಲಿನ ಅಧಿಕಾರಿಗಳು ವಿಚಾರ ಮಂಡಿಸುವ ಸಂಭವವಿದ್ದು, ಅದೇ ರೀತಿ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿರುವ 82 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳಿಗೆ ನೀರೊದಗಿಸಲು ನಮ್ಮ ಅಧಿಕಾರಿಗಳೂ ವಿಚಾರ ಮಂಡಿಸಲಿದ್ದಾರೆ. ಪ್ರಾಧಿಕಾರದ ಸಭೆಯಲ್ಲಿ ನೀರು ಹರಿಸುವ ಕುರಿತಂತೆ ವಿಷಯ ಇಲ್ಲದಿದ್ದರೂ, ಅಧ್ಯಕ್ಷರ ಅನುಮತಿ ಮೇರೆಗೆ ಈ ವಿಚಾರವನ್ನು ನಮ್ಮ ಅಧಿಕಾರಿಗಳು ಪ್ರಸ್ತಾಪಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ರೈತರಿಗೆ ಧೈರ್ಯ ಹೇಳಿದರು.

2016-17ರಲ್ಲಿ ದೇಶದಲ್ಲಿ ಸುಮಾರು 16 ಸಾವಿರಕ್ಕೂ ಹೆಚ್ಚು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಕರ್ನಾಟಕದಲ್ಲಿ 2800ಕ್ಕೂ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ನಡೆದಿದ್ದವು. ಈ ಪೈಕಿ ಮಂಡ್ಯ ಜಿಲ್ಲೆಯಲ್ಲೇ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಸಕಾಲಕ್ಕೆ ಮಳೆ ಬಾರದೆ, ಬೆಳೆಯೂ ಆಗದೆ ಇತ್ತ ವೈಜ್ಞಾನಿಕ ಬೆಲೆಯೂ ಸಿಗದ ಹಿನ್ನಲೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿವೆ. ಅಂತಹ ಘಟನೆಗಳು ಈ ಬಾರಿ ಮರುಕಳಿಸಬಾರದು ಎಂದು ಹೇಳಿದರು.

ಕೆಆರ್‌ಎಸ್‌ನಲ್ಲಿ 79.79 ಅಡಿ ನೀರು: ಪ್ರಸ್ತುತ ಕೆಆರ್‌ಎಸ್‌ನಲ್ಲಿ 79.79 ಅಡಿ ನೀರಿದ್ದು, ಕುಡಿಯುವ ನೀರಿಗಾಗಿ 75 ಅಡಿ ನೀರಿನ ಅವಶ್ಯಕತೆ ಇದೆ. ಕೆಆರ್‌ಎಸ್‌ ಹಾಗೂ ಹೇಮಾವತಿ ಜಲಾನಯನ ವ್ಯಾಪ್ತಿಯಲ್ಲಿ ಬೆಳೆದಿರುವ 82 ಸಾವಿರ ಎಕರೆ ಪ್ರದೇಶದ ಬೆಳೆ ರಕ್ಷಿಸಲು ಬುದ್ಧಿವಂತಿಕೆಯಿಂದ ನೀರು ಬಿಡಬೇಕಾಗಿದೆ. ಈ ಬಗ್ಗೆ ನೀರಾವರಿ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದು ಹೇಳಿದರು.

ಈ ಬಾರಿ ರಾಜ್ಯಕ್ಕೆ ಮುಂಗಾರು 20 ದಿನ ತಡವಾಗಿ ಬಂದಿದೆ. ಇದರಿಂದಾಗಿ ನೀರಿನ ಸಮಸ್ಯೆ ಉದ್ಭವವಾಗಿದೆ. ಈ ವೇಳೆಗಾಗಲೇ ಸಾಕಷ್ಟು ಮಳೆ ಬಂದು ಕೆರೆ-ಕಟ್ಟೆಗಳು ತುಂಬಿರಬೇಕಿತ್ತು. ರೈತರು ತಮ್ಮ ಬದುಕಿಗಾಗಿ ಹೋರಾಟ ನಡೆಸುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ವೇಳೆ ರೈತ ಸಂಘದ ಯುವ ಮುಖಂಡ ದರ್ಶನ್‌ ಪುಟ್ಟಣ್ಣಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್‌, ಮುಖಂಡರಾದ ಬಡಗಲಪುರ ನಾಗೇಂದ್ರ, ಕೆಂಪೂಗೌಡ, ರಾಜೇಗೌಡ, ವಿಜಯಕುಮಾರ್‌, ಲತಾಶಂಕರ್‌, ಬಳ್ಳಾರಿಗೌಡ, ರಾಮಕೃಷ್ಣಯ್ಯ, ಬೊಮ್ಮೇಗೌಡ, ಲಿಂಗಪ್ಪಾಜಿ, ಬಾಲಚಂದ್ರ, ಹರೀಶ್‌ ಸೇರಿದಂತೆ ನೂರಾರು ಮಂದಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಶ್ರೀರಂಗಪಟ್ಟಣ: ವಾಯುಭಾರ ಕುಸಿತದಿಂದಾಗಿ ಕೊಡಗು ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಕೆಆರ್‌ಎಸ್‌ ಜಲಾಶಯಕ್ಕೆ 13 ಸಾವಿರ...

  • ಮಂಡ್ಯ: ವಿದೇಶದಿಂದ ಹಾಲು ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕದಂತೆ ಒತ್ತಾಯಿಸಿ ನಾಳೆ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರ ಬೃಹತ್‌ ಪ್ರತಿಭಟನೆ ನಡೆಸಲಾಗುವುದು...

  • ಶ್ರೀರಂಗಪಟ್ಟಣ: ಜಿಲ್ಲೆಯಲ್ಲಿ ಪಿಎಸ್‌ಎಸ್ಕೆ ಹಾಗೂ ಮೈಷುಗರ್‌ ಕಾರ್ಖಾನೆಗಳು ಆರಂಭಿಸ ದಿದ್ದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಗುರಿಯಾ ಗುತ್ತಾರೆ ಎಂದು ಕನ್ನಡಸೇನೆ...

  • ಮಂಡ್ಯ: ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ಸಂಸದೆ ಸುಮಲತಾ ಅವರ ಗೃಹಕಚೇರಿಯಲ್ಲಿ ಅರ್ಹ ಫ‌ಲಾನುಭವಿಗಳಿಗೆ ಆಯುಷ್ಮಾನ್‌ ಆರೋಗ್ಯ ಚೀಟಿ ವಿತರಣೆ ಮಾಡಲಾಯಿತು. ಗುರುತಿನ...

  • ಮಂಡ್ಯ: ಮುಂಬರುವ ಉಪ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಮುಂದಾಗಿರುವ ಜೆಡಿಎಸ್‌ ಆಪರೇಷನ್‌ ಕಮಲದಿಂದ ಕಳೆದುಕೊಂಡಿರುವ ಮೂರು ಕ್ಷೇತ್ರಗಳಲ್ಲೂ...

ಹೊಸ ಸೇರ್ಪಡೆ