ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕ: ಆರೋಪ

Team Udayavani, Nov 18, 2019, 4:42 PM IST

ಪಾಂಡವಪುರ: ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆಸಲಾಗುತ್ತಿರುವ ಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಗುತ್ತಿಗೆದಾರರ ಜತೆ ಅಧಿಕಾರಿಗಳು ಶಾಮಿಲಾಗಿ ಸರ್ಕಾರದ ಹಣ ಲಪಟಾಯಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ರೈತಸಂಘ-ಕಾಂಗ್ರೆಸ್‌ಬೆಂಬಲಿತ ಗ್ರಾಪಂ ಸದಸ್ಯರು ಹಾಗೂ ಗ್ರಾಪಂ ಮಾಜಿ ಅಧ್ಯಕ್ಷೆ ಸಾಕಮ್ಮ ಆರೋಪಿಸಿದರು.

ರೈತಸಂಘ-ಕಾಂಗ್ರೆಸ್‌ ಗ್ರಾಪಂ ಸದಸ್ಯರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಸದಸ್ಯ ರಘು ಮಾತನಾಡಿ, ಚಿಕ್ಕಾಡೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ 6.60ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯ ಗ್ರಾಪಂ ಸದಸ್ಯರನ್ನೇ ಆಹ್ವಾನಿಸದೆ ನಿರ್ಲಕ್ಷಿಸಿದ್ದಾರೆ. ಅಲ್ಲದೆ ನಮ್ಮ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ
ಕೆಲಸವಾಗಬೇಕಾದರೂ ಗ್ರಾಮದ ಯಜಮಾನರ ಸಮಕ್ಷಮ ಕುಳಿತು ಚರ್ಚಿಸಿ ಕೆಲಸಗಳನ್ನು ನಡೆಸಲಾಗುತ್ತಿದೆ. ಆದರೆ, ಈ ಕಾಮಗಾರಿ ವಿಚಾರದಲ್ಲಿ ಗ್ರಾಪಂ ಸದಸ್ಯರನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.

ಪ್ರಸ್ತುತ ರಸ್ತೆ ಅಭಿವೃದ್ಧಿಗೆ ಈ ಹಿಂದೆ ಲ್ಯಾಂಡ್‌ ಆರ್ಮಿಯಿಂದ 20 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಆ ಹಣ ಏನಾಯಿತು
ಎನ್ನುವುದೇ ಗೊತ್ತಿಲ್ಲ. ಈ ಬಗ್ಗೆ ನಾವು ಲ್ಯಾಂಡ್‌ ಆರ್ಮಿ ಎದುರು ಪ್ರತಿಭಟನೆಯನ್ನು ಸಹ ನಡೆಸಿದ್ದೇವೆ. ಅದಾದ ನಂತರ ಇದೇ ರಸ್ತೆ ಅಭಿವೃದ್ಧಿ ಕಾಮಗಾರಿಗೆ 6.50 ಕೋಟಿ ಅನುದಾನದಲ್ಲಿ ಕೆಲಸ ಆರಂಭಿಸಿದ್ದಾರೆ.

ಆದರೆ ಕಾಮಗಾರಿ ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲ, ನೇರವಾಗಿ ಚರಂಡಿಗಳನ್ನು ನಿರ್ಮಿಸುತ್ತಿಲ್ಲ. ಬದಲಿಗೆ ಅಡ್ಡದಿಡ್ಡಿ ಚರಂಡಿಗಳನ್ನು ನಿರ್ಮಿಸುತ್ತಿದ್ದು, ಈ ಬಗ್ಗೆ ಗುತ್ತಿಗೆದಾರರನ್ನು ಪ್ರಶ್ನಿಸಿದರೆ ಅಧಿಕಾರಿಗಳ ಮೇಲೆ ಹೇಳಿ ತಪ್ಪಿಸಿಕೊಳ್ಳುತ್ತಾರೆ. ಆದರೆ ಖುದ್ದು ತಹಶೀಲ್ದಾರ್‌ ಪ್ರಮೋದ್‌ ಎಲ್‌.ಪಾಟೀಲ್‌ ಅವರೇ ಸ್ಥಳದಲ್ಲಿಮೊಕ್ಕಾಂಹೂಡಿ ಕಾಮಗಾರಿ ನಿರ್ವಹಣೆ
ಮಾಡಿಸುತ್ತಾರೆ ಎಂದು ಕಿಡಿಕಾರಿದರು.

ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸ್ಥಳ ಪರಿಶೀಲಿಸಿ ನ್ಯಾಯಾ ಹೊದಗಿಸುವಂತೆ ಮನವಿ ಮಾಡಿದಾಗ ಜಿಲ್ಲಾಧಿಕಾರಿಗಳು ಕಾಮಗಾರಿ ಕೆಲಸ ನಿಲ್ಲಿಸುವಂತೆ ಸೂಚಿಸಿದ್ದರು.  ಆದರೆ ಗ್ರಾಮದ ಕೆಲವರು ಸ್ಥಳೀಯ ಶಾಸಕ ಸಿ.ಎಸ್‌.ಪುಟ್ಟರಾಜು ಅವರ ಕುಮ್ಮಕ್ಕಿನಿಂದ ಗ್ರಾಮದಲ್ಲಿ ಬಿರುಕು ಮೂಡಿಸುವ ಕೆಲಸ ಮಾಡುತ್ತಿದಾರೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಗ್ರಾಪಂ ಸದಸ್ಯರಾದ ಸಾಕಮ್ಮ, ಸಿ.ಡಿ.ರವಿ, ಸಿ.ಆರ್‌. ರಘು, ಮಂಗಳಗೌರಮ್ಮ, ಪ್ರಕಾಶ್‌ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ