ಲೋಕಸಭಾ ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು

14 ಕೊಠಡಿಗಳ 108 ಟೇಬಲ್ಗಳಲ್ಲಿ ಮತ ಎಣಿಕೆ • 22 ಸುತ್ತುಗಳಲ್ಲಿ ನಡೆಯಲಿರುವ ಎಣಿಕೆ ಕಾರ್ಯ

Team Udayavani, May 21, 2019, 9:33 AM IST

ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫ‌ರ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಜರಿದ್ದರು.

ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜುಗೊಂಡಿದ್ದು, ಗುರುವಾರ(ಮೇ 23)ರಂದು ನಗರದ ಸರ್ಕಾರಿ ಮಹಾ ವಿದ್ಯಾಲಯ (ಸ್ವಾಯತ್ತ)ದಲ್ಲಿ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫ‌ರ್‌ ಹೇಳಿದರು.

ಸರ್ಕಾರಿ ಮಹಾ ವಿದ್ಯಾಲಯದ ಒಟ್ಟು 14 ಕೊಠಡಿಗಳ 108 ಟೇಬಲ್ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. 22 ಸುತ್ತುಗಳಲ್ಲಿ ಮತ ಎಣಿಕೆ ನಡೆದು ಫ‌ಲಿತಾಂಶ ಪ್ರಕಟಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಮಹಾ ವಿದ್ಯಾಲಯದಲ್ಲಿರುವ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳ 16 ಭದ್ರತಾ ಕೊಠಡಿಗಳನ್ನು ಮೇ 23ರಂದು ಬೆಳಗ್ಗೆ 7.30ಕ್ಕೆ ಅಭ್ಯರ್ಥಿಗಳು, ಚುನಾವಣಾ ಏಜೆಂಟರು, ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ ಸಮ್ಮುಖದಲ್ಲಿ ವಿಡಿಯೋ ಚಿತ್ರೀಕರಣದೊಂದಿಗೆ ತೆರೆಯಲಾಗುವುದು ಎಂದು ತಿಳಿಸಿದರು.

113 ಮತ ಎಣಿಕೆ ಏಜೆಂಟರು: ಮತ ಎಣಿಕಾ ಕೇಂದ್ರಗಳಲ್ಲಿ ಒಟ್ಟು 108 ಇವಿಎಂ ಎಣಿಕೆ ಟೇಬಲ್ಗಳು ಹಾಗೂ 5 ಅಂಚೆ ಮತಪತ್ರಗಳ ಎಣಿಕೆ ಟೇಬಲ್ಗಳು ಸೇರಿ 113 ಟೇಬಲ್ಗಳಿಗೆ ಮತ ಎಣಿಕೆ ಏಜೆಂಟರನ್ನು ನೇಮಕ ಮಾಡಬಹುದು. ಅಭ್ಯರ್ಥಿಗಳು ನಮೂನೆ-18ರಲ್ಲಿ ಅರ್ಜಿ ಸಲ್ಲಿಸಿ ಏಜೆಂಟರನ್ನು ನೇಮಕ ಮಾಡಬಹುದಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಬಣ್ಣವನ್ನು ನಿಗದಿಪಡಿಸಿ ಭಾವಚಿತ್ರವುಳ್ಳ ಗುರುತಿನ ಚೀಟಿಗಳನ್ನು ವಿತರಿಸಲಾಗುವುದು. ಅಭ್ಯರ್ಥಿಗಳಿಗೆ ಹಾಗೂ ಅವರ ಚುನಾವಣಾ ಏಜೆಂಟರಿಗೆ ಈಗಾಗಲೇ ನೀಡಿರುವ ಗುರುತಿನ ಚೀಟಿಯನ್ನು ಬಳಸಿಕೊಂಡು ಎಣಿಕೆ ಕೇಂದ್ರಕ್ಕೆ ಪ್ರವೇಶ ಪಡೆಯಬಹುದು.

28 ಸೀಸಿ ಕ್ಯಾಮರಾ ಅಳವಡಿಕೆ: ಎಲ್ಲಾ 14 ಮತ ಎಣಿಕೆ ಕೊಠಡಿಗಳಿಗೆ ತಲಾ ಎರಡರಂತೆ ಒಟ್ಟು 28 ಸೀಸಿ ಟೀವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಂಚೆ ಮತಪತ್ರಗಳ ಎಣಿಕೆ ಹಾಗೂ ಇಟಿಪಿಬಿಎಸ್‌ ಮತಗಳ ಎಣಿಕೆ ನಡೆಯುವ ಸ್ಥಳದಲ್ಲಿಯೂ ಸೀಸಿ ಟೀವಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಪ್ರತಿ ಮತ ಎಣಿಕೆ ಕೊಠಡಿಯಲ್ಲಿ ಒಬ್ಬರು ಹಾಗೂ ಅಂಚೆ ಮತಪತ್ರಗಳ ಎಣಿಕಾ ಕೊಠಡಿಯಲ್ಲಿ ವಿಡಿಯೋ ಗ್ರಾಫ‌ರ್‌ ನೇಮಿಸಿ ಎಣಿಕೆ ಪ್ರಕ್ರಿಯೆಯ ಪೂರ್ಣ ಚಿತ್ರೀಕರಣ ಮಾಡಿಸಲು ವ್ಯವಸ್ಥೆ ಮಾಡಲಾಗಿದೆ.

ಎಣಿಕೆ ವೀಕ್ಷಕರ ನೇಮಕ: ಭಾರತ ಚುನಾವಣಾ ಆಯೋಗ ಮೇಲುಕೋಟೆ, ನಾಗಮಂಗಲ ವಿಧಾನಸಭಾ ಕ್ಷೇತ್ರಗಳಿಗೆ ಪಿ.ಅಣ್ಣಾಮಲೈ, ಮದ್ದೂರು, ಮಳವಳ್ಳಿ ಕ್ಷೇತ್ರಗಳಿಗೆ ಪದ್ಮಾ, ಮಂಡ್ಯ, ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಉಮೇಶ್‌ ನಾರಾಯಣ್‌ ಪಾಂಡೆ, ಕೆ.ಆರ್‌.ಪೇಟೆ ಹಾಗೂ ಕೆ.ಆರ್‌.ನಗರ ಕ್ಷೇತ್ರಗಳಿಗೆ ರವ್‌ನೀತ್‌ ಚೀಮಾ ಅವರನ್ನು ಚುನಾವಣಾ ಎಣಿಕೆ ವೀಕ್ಷಕರನ್ನಾಗಿ ನೇಮಕ ಮಾಡಿದೆ.

ಎಣಿಕೆ ಅಧಿಕಾರಿಗಳು: ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಕ್ಕೂ ಒಬ್ಬರು ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಅಂಚೆ ಮತಪತ್ರಗಳ ಎಣಿಕೆಗಾಗಿ ನಾಲ್ಕು ಮಂದಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿದೆ. ಪ್ರತಿಯೊಂದು ಎಣಿಕೆ ಟೇಬಲ್ಗೆ ಒಬ್ಬ ಮೇಲ್ವಿಚಾರಕ, ಒಬ್ಬರು ಎಣಿಕೆ ಸಹಾಯಕರು ಹಾಗೂ ಒಬ್ಬರು ಸೂಕ್ಷ್ಮ ವೀಕ್ಷಕರನ್ನು ನೇಮಕ ಮಾಡಿದೆ. ಕ್ಷೇತ್ರದ 2046 ಮತಗಟ್ಟೆಗಳ ಮತ ಎಣಿಕೆಗೆ ಒಟ್ಟು 117 ಎಣಿಕೆ ಮೇಲ್ವಿಚಾರಕರು, 116 ಎಣಿಕೆ ಸಹಾಯಕರು ಹಾಗೂ 134 ಎಣಿಕೆ ಮೈಕ್ರೋ ಅಬ್ಸರ್‌ವರ್‌ಗಳನ್ನು ನೇಮಿಸಿದೆ.

ಪೇಪರ್‌ ಸ್ಲಿಪ್‌ ಎಣಿಕೆ: ಒಂದು ವೇಳೆ ಯಾವುದಾದರೂ ವಿಧಾನಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಬಳಸಲಾದ ಕಂಟ್ರೋಲ್ ಯೂನಿಟ್‌ನಲ್ಲಿ ಫ‌ಲಿತಾಂಶ ಪ್ರಕಟವಾಗದಿ ದ್ದಲ್ಲಿ ಅಂತಹ ಕಂಟ್ರೋಲ್ ಯೂನಿಟ್‌ಗಳನ್ನು ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿಗಳ ವಶಕ್ಕೆ ನೀಡಲಾಗುವುದು. ನಂತರ ಎಲ್ಲಾ ಮತಗಟ್ಟೆಗಳ ಎಣಿಕೆ ಮುಕ್ತಾಯವಾದ ಬಳಿಕ ಸಹಾಯಕ ಚುನಾವಣಾಧಿಕಾರಿಗಳ ಸುಪರ್ದಿಯಲ್ಲಿರುವ ಕಂಟ್ರೋಲ್ ಯೂನಿಟ್ ಜೊತೆಗೆ ಆ ಮತಗಟ್ಟೆಯಲ್ಲಿ ಬಳಸಲಾಗಿದ್ದ ವಿವಿ ಪ್ಯಾಟ್‌ನಲ್ಲಿನ ಪೇಪರ್‌ ಸ್ಲಿಪ್‌ಗ್ಳನ್ನು ಅಭ್ಯರ್ಥಿವಾರು ಎಣಿಕೆ ಮಾಡಲು ಕ್ರಮ ವಹಿಸಲಾಗುವುದು.

ಲಾಟರಿ ಮೂಲಕ ಆಯ್ಕೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲಾ ಸುತ್ತುಗಳ ಮತಗಳ ಎಣಿಕೆ ಘೋಷಣೆಯಾದ ನಂತರ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿನ ಒಟ್ಟು ಮತಗಟ್ಟೆಗಳ ಪೈಕಿ 5 ಮತಗಟ್ಟೆಗಳನ್ನು ಆಯಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಲಾಟರಿ ಮೂಲಕ ಆಯ್ಕೆ ಮಾಡಿ ಆ ಮತಗಟ್ಟೆಯ ವಿವಿ ಪ್ಯಾಟ್‌ನಲ್ಲಿರುವ ಪೇಪರ್‌ ಸ್ಲಿಪ್‌ಗ್ಳನ್ನು ಮತ ಎಣಿಕೆ ಕೊಠಡಿಯೊಳಗೆ ಪ್ರತ್ಯೇಕವಾಗಿ ಸ್ಥಾಪಿಸಲಾಗಿರುವ ವಿವಿ ಪ್ಯಾಟ್ ಸ್ಲಿಪ್‌ ಕೌಂಟಿಂಗ್‌ ಬೂತ್‌ಗೆ ಒಂದರ ನಂತರ ಒಂದರಂತೆ ಎಣಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಏ.18ರಂದು ನಡೆದ ಮತದಾನದ ದಿನದಂದು ಮಳವಳ್ಳಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ-60ರಲ್ಲಿ ಮತಗಟ್ಟೆ ಸಿಬ್ಬಂದಿ ಅಣಕು ಮತದಾನದ ನಂತರ ಮಾಕ್‌ ಫೋಲ್ ಕ್ಲೀಯರ್‌ ಮಾಡದೆ ಹಾಗೆಯೇ ಮತದಾನ ಪ್ರಕ್ರಿಯೆ ಆರಂಭಿಸಿದ್ದಾರೆ. ಈ ವಿಷಯವನ್ನು ಮುಖ್ಯ ಚುನಾವಣಾಧಿಕಾರಿಗಳ ಮುಖೇನ ಚುನಾವಣಾ ಆಯೋಗಕ್ಕೆ ತಿಳಿಸಿ ಮುಂದಿನ ನಿರ್ದೇಶನ ಕೋರಲಾಗಿತ್ತು. ಈ ವಿಷಯದ ಕುರಿತು ಆಯೋಗ ಸ್ಪಷ್ಟೀಕರಣ ನೀಡಿದಂತೆ ಆ ಮತಗಟ್ಟೆಯ ವಿವಿ ಪ್ಯಾಟ್‌ಗಳಲ್ಲಿರುವ ಪೇಪರ್‌ ಸ್ಲಿಪ್‌ಗ್ಳನ್ನು ಮತ ಎಣಿಕೆ ಮಾಡಲು ಸೂಚಿಸಿದೆ. ಅದರಂತೆ ಕ್ರಮ ವಹಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಪ್ರತಿ ಸುತ್ತಿನ ಎಣಿಕೆ ನಂತರ ಎಲ್ಲಾ ಟೇಬಲ್ಗಳಲ್ಲಿ ಸಿದ್ಧಪಡಿಸಲಾಗುವ ನಮೂನೆ-17 ಸಿರ ಭಾಗ-2ನ್ನು ಪ್ರತಿಗಳನ್ನು ತಯಾರಿಸಿ ಮತ ಎಣಿಕೆ ಏಜೆಂಟರಿಗೆ ನೀಡಲಾಗುವುದು.

ಗೌಪ್ಯತೆ ಉಲ್ಲಂಘನೆ ಮತ ರದ್ದು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಇಟಿಪಿಬಿಎಸ್‌ ಮೂಲಕ ಮತ ಚಲಾವಣೆ ಮಾಡಿ ಸಾಮಾಜಿಕ ಜಾಲ ತಾಣವಾದ ಫೇಸ್‌ಬುಕ್‌ನಲ್ಲಿ ತಮ್ಮ ಮತ ಚಲಾವಣೆಯನ್ನು ಬಹಿರಂಗಪಡಿಸಿದ್ದು, ಮತದಾನದ ಗೌಪ್ಯತೆ ಕಾಪಾಡುವಲ್ಲಿ ವಿಫ‌ಲರಾಗಿ ರುವುದರಿಂದ ಆ ಮತವನ್ನು ಮತ ಎಣಿಕೆ ದಿನದಂದು ರದ್ದುಪಡಿಸಲಾ ಗುವುದು ಎಂದು ಡಾ.ಪಿ.ಸಿ.ಜಾಫ‌ರ್‌ ತಿಳಿಸಿದರು.

ಮೊಬೈಲ್ ನಿಷೇಧ: ಮತ ಎಣಿಕೆ ಏಜೆಂಟರಾಗಲೀ, ಎಣಿಕೆ ಸಿಬ್ಬಂದಿ, ಚುನಾವಣಾ ಕೆಲಸ ನಿರತ ಅಧಿಕಾರಿ, ಸಿಬ್ಬಂದಿ ಮೊಬೈಲ್ ಫೋನ್‌ ಅಥವಾ ಕ್ಯಾಮರಾಗಳನ್ನು ಮತ ಎಣಿಕೆ ಕೇಂದ್ರಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಅವಕಾಶವಿರುವುದಿಲ್ಲ.

ಒಣದಿನ: ಮತ ಎಣಿಕೆಯನ್ನು ಶಾಂತಿಯುತವಾಗಿ ನಡೆಸುವ ಸಲುವಾಗಿ ಮೇ 22ರಂದು ರಾತ್ರಿ 12 ಗಂಟೆಯಿಂದ ಮೇ 23ರಂದು ರಾತ್ರಿ 12 ಗಂಟೆಯವರೆಗೆ ಜಿಲ್ಲಾದ್ಯಂತ ಬರುವ ಎಲ್ಲಾ ರೀತಿಯ ಮದ್ಯದ ಅಂಗಡಿ, ಬಾರ್‌ ಅಂಡ್‌ ರೆಸ್ಟೋರೆಂಟ್, ಕ್ಲಬ್‌ಗಳಲ್ಲಿ ಮದ್ಯ ಮಾರಾಟ, ಹಂಚಿಕೆ, ಸಾಗಾಣಿಕೆ ಹಾಗೂ ಶೇಖರಣೆಗಳನ್ನು ನಿಷೇಧಿಸಿ ಪಾನ ನಿರೋಧ ದಿನವೆಂದು ಘೋಷಿಸಿ ಆದೇಶ ಹೊರಡಿಸಿದೆ.

ಮತ ಎಣಿಕೆ ನಡೆಯುವ ಕೊಠಡಿಗಳು:

ಮಳವಳ್ಳಿ ಕ್ಷೇತ್ರದ ಮತ ಎಣಿಕೆ ಪಿ.ಜಿ.ಕಟ್ಟಡದ ಕೊಠಡಿ ಸಂಖ್ಯೆ 23 ಹಾಗೂ 24, ಶ್ರೀರಂಗಪಟ್ಟಣದ ಮತ ಎಣಿಕೆ ಪಿ.ಜಿ.ಕಟ್ಟಡದ ಮೊದಲ ಮಹಡಿಯ ಕೊಠಡಿ ಸಂಖ್ಯೆ 27, 30, ಮದ್ದೂರು ಕ್ಷೇತ್ರದ ಮತ ಎಣಿಕೆ ಸರ್ಕಾರಿ ಮಹಾ ವಿದ್ಯಾಲಯದ ಮುಖ್ಯ ಕಟ್ಟಡದ ಕೊಠಡಿ ಸಂಖ್ಯೆ 5, ಮಂಡ್ಯ ಕ್ಷೇತ್ರದ ಮತ ಎಣಿಕೆ ಸರ್ಕಾರಿ ಮಹಾ ವಿದ್ಯಾಲಯದ ಮುಖ್ಯ ಕಟ್ಟಡದ ಕೆಳಮಹಡಿಯ ಕೊಠಡಿ ಸಂಖ್ಯೆ 6, ಮೇಲುಕೋಟೆ ಕ್ಷೇತ್ರದ ಮತ ಎಣಿಕೆ ಮುಖ್ಯ ಕಟ್ಟಡದ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 15, 18, ನಾಗಮಂಗಲ ಕ್ಷೇತ್ರದ ಮತ ಎಣಿಕೆ ಮುಖ್ಯ ಕಟ್ಟಡದ ಮೊದಲನೇ ಮಹಡಿಯ 19, 20, ಕೆ.ಆರ್‌.ಪೇಟೆ ಕ್ಷೇತ್ರದ ಮತ ಎಣಿಕೆ ಮುಖ್ಯ ಕಟ್ಟಡದ ಕೆಳಮಹಡಿಯ ಕೊಠಡಿ ಸಂಖ್ಯೆ 11 ಮತ್ತು 13 ಹಾಗು ಕೆ.ಆರ್‌.ನಗರದ ಮತ ಎಣಿಕೆ ಮುಖ್ಯಕಟ್ಟಡದ ಕೆಳಮಹಡಿಯ 7 ಮತ್ತು 8ನೇ ಕೊಠಡಿಯಲ್ಲಿ ನಡೆಯಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ