ಕಿರುಕುಳ: ಕಾಲೇಜು ಬಿಡಲು ಸಿದ್ಧವಾದ ವಿದ್ಯಾರ್ಥಿಗಳು

Team Udayavani, Jul 22, 2019, 12:57 PM IST

ಕೆ.ಆರ್‌.ಪೇಟೆ: ಕಿರುಕುಳದಿಂದ ಬೇಸತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಬಿಡಲು ವಿದ್ಯಾರ್ಥಿಗಳು ನಿರ್ಧಾರ ಮಾಡಿದ್ದಾರೆ. ತಮಗಾಗಿರುವ ದೌರ್ಜನ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಲ್ಲೂ ಹರಿಬಿಟ್ಟು ರಕ್ಷಣೆ ಕೋರಿದ್ದಾರೆ.

ತಾಲೂಕಿನ ಶೀಳನೆರೆ ಗ್ರಾಮದಲ್ಲಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಮಕ್ಕಳ ಮೇಲೆ ಪ್ರಾಂಶುಪಾಲ ಮತ್ತು ಇತರರು ಮಕ್ಕಳನ್ನು ವಿಂಗಡಣೆ ಮಾಡಿ ಕೆಲವು ಮಕ್ಕಳನ್ನು ಪ್ರೀತಿಯಿಂದ ಕಾಣುತ್ತಿದ್ದಾರೆ. ಕೆಲವು ಮಕ್ಕಳಿಗೆ ಮಾತ್ರ ಹಿಂಸೆ ನೀಡುತ್ತಿದ್ದಾರೆ ಎಂದು ಕಾಲೇಜಿನ ಕೊಠಡಿಯಲ್ಲಿಯೇ ಮಕ್ಕಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ನಮಗೆ ರಕ್ಷಣೆ ನೀಡುವ ಜೊತೆಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರನ್ನು ಬೇರೆಗಡೆಗೆ ವರ್ಗಾವಣೆ ಮಾಡಬೇಕು ಇಲ್ಲವಾದರೆ ನಾವುಗಳು ಕಾಲೇಜನ್ನೇ ಬಿಟ್ಟು ಮನೆಯಲ್ಲಿಯೇ ಉಳಿದುಕೊಳ್ಳಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕಾಲೇಜಿನಲ್ಲಿ ಹಲ್ಲೆ ನಡೆದಿರುವುದರಿಂದ ಕೆಲವು ಮಕ್ಕಳ ಕೈ ಮೂಳೆ ಊತವಾಗಿದ್ದರೆ ಮತ್ತೆ ಕೆಲವು ಮಕ್ಕಳ ಹೊಟ್ಟೆಯ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ಮಕ್ಕಳು ಆರೋಪಿಸಿದ್ದಾರೆ.

ನಿರಂತರ ದೌಜನ್ಯ:ಸಮಾಜ ಸೇವಕ ಶೀಳನೆರೆ ದಿನೇಶ್‌ ಮಾತನಾಡಿ ಕಾಲೇಜಿನಲ್ಲಿ ಮಕ್ಕಳನ್ನು ಭಯದ ವಾತಾವರಣ ನಿರ್ಮಿಸಲಾಗಿದೆ. ಮಕ್ಕಳ ನಡುವೆ ತಾರತಮ್ಯ ಮಾಡುವುದು. ಹೆಣ್ಣುಮಕ್ಕಳು ಮತ್ತು ಗಂಡು ಮಕ್ಕಳಿಗೆ ಹಲ್ಲೆ ಮಾಡುವುದು ಇಲ್ಲಿ ಸಾಮಾನ್ಯವಾಗಿದೆ. ಪ್ರಾಂಶುಪಾಲರಿಂದ ಏಟು ತಿಂದಿರುವ ಕೆಲವು ಮಕ್ಕಳ ಕೈ ಮೂಳೆಗೆ ಹಾನಿಯಾಗಿದೆ. ಇದರ ಜೊತೆಗೆ ಕೆಲವು ಉಪನ್ಯಾಸಕರು ಕಾಲೇಜಿನಲ್ಲಿಯೆ ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಪ್ರಚೋದಿಸುತ್ತಾರೆ ಎಂಬ ಆರೋಪವೂ ಇದೆ ಎಂದು ಹೇಳಿದರು.

ಪ್ರಧಾನ ಮಂತ್ರಿಯನ್ನು ಅಪಮಾನ ಮಾಡುವ ಮೂಲಕ ದೇಶ ದ್ರೋಹಿ ಕೆಲಸ ಮಾಡಿರುವ ಉಪನ್ಯಾಸಕನ ವಿರುದ್ಧ ಈಗಾಗಲೇ ಸಾರ್ವಜನಿಕರು ದೂರು ನೀಡಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಜರುಗಿಸದೆ ಇರುವುದರಿಂದ ಇಲ್ಲಿನ ಉಪನ್ಯಾಸಕರಿಗೆ ಯಾವುದೆ ಭಯ ಇಲ್ಲದಂತಾಗಿದೆ ಎಂದು ಆರೋಪ ಮಾಡಿದರು.

ಪ್ರಾಂಶುಪಾಲ ಗುರುಲಿಂಗೇಗೌಡ ಮಾತನಾಡಿ, ಕೆಲವು ಉಪನ್ಯಾಸಕರು ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಬರುತ್ತಿರಲಿಲ್ಲ, ಕಾಲೇಜಿಗೆ ಬಂದ ನಂತರವು ಮಕ್ಕಳಿಗೆ ಸರಿಯಾಗಿ ಪಾಠ ಮಾಡುತ್ತಿರಲಿಲ್ಲ. ಅದಕ್ಕಾಗಿ ನಾನು ಅವರಿಗೆ ಸರಿಯಾಗಿ ಪಾಠ ಮಾಡುವಂತೆ ಸೂಚನೆ ನೀಡಿ ಒಂದು ವೇಳೆ ಮಕ್ಕಳಿಗೆ ಅನ್ಯಾಯ ಮಾಡಿದರೆ ನಿಮ್ಮ ವಿರುದ್ಧ ಹಿರಿಯ ಅಧಿಕಾರಿಗಳಿಗೆ ವರದಿ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದೇನೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ