ಮಂಡ್ಯ: ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ
7.25 ಲಕ್ಷ ರೂ. ಮೌಲ್ಯದ 26 ದ್ವಿಚಕ್ರ ವಾಹನಗಳ ವಶ
Team Udayavani, Jan 15, 2021, 7:35 PM IST
ಮಂಡ್ಯ: ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೂರ್ವ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಳವಳ್ಳಿ ತಾಲೂಕಿನ ಹಿಟ್ಟನಕೊಪ್ಪಲು ಗ್ರಾಮದ ಶರತ್(20), ಮಂಡ್ಯ ನಗರದ ಬೀಡಿಕಾರ್ಮಿಕರ ಕಾಲೋನಿಯ ನಿವಾಸಿ ಸಫೀವುಲ್ಲಾ ಆಲಿಯಾಸ್ ಬಾಬು(32) ಹಾಗೂ ಹೊಳಲು ಗ್ರಾಮದ ಸಂತೋಷ್ ಆಲಿಯಾಸ್ ಸಂತು(30) ಬಂಧಿತ ಆರೋಪಿಗಳು.
ಇವರ ವಿರುದ್ಧ ಕಿರುಗಾವಲು, ಬನ್ನೂರು ಹಾಗೂ ಟಿ.ನರಸೀಪುರ ಠಾಣೆಗಳಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಮೂವರು ಆರೋಪಿಗಳು ಸ್ಪ್ಲೆಂಡರ್ ಬೈಕ್‌ನಲ್ಲಿ ಜ.11ರಂದು ಮುಂಜಾನೆ 5 ಗಂಟೆ ಸಮಯದಲ್ಲಿ ನಗರದ ಸ್ವರ್ಣಸಂದ್ರದ ಸುರೇಶ್ ಪೆಟ್ರೋಲ್ ಬಂಕ್ ಬಳಿ ಬೆಂಗಳೂರು ಕಡೆಗೆ ಹೋಗುವ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಗಸ್ತಿನಲ್ಲಿದ್ದ ಸಿಬ್ಬಂದಿಗಳಾದ ಲೋಕೇಶ್, ಗಿರಿಶ್ ಹಾಗೂ ಆನಂದ ಅವರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದ್ವಿಚಕ್ರ ವಾಹನಗಳ ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಪರ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ ತಿಳಿಸಿದರು.
ಇದನ್ನೂ ಓದಿ: ನಾನು ಹಿಂದೂ-ಮುಸ್ಲಿಂ ಪರ, ದೇಶದ್ರೋಹಿಗಳ ಪರ ಅಲ್ಲ: ಸತೀಶಗೆ ಸಹೋದರ ರಮೇಶ್ ತಿರುಗೇಟು
ನಕಲಿ ಕೀ ಬಳಸಿ ಕಳ್ಳತನ:
ನಗರ ಸೇರಿದಂತೆ ವಿವಿಧೆಡೆ ಒಂಟಿಯಾಗಿ ನಿಂತಿದ್ದ ದ್ವಿಚಕ್ರ ವಾಹನಗಳನ್ನು ಟಾರ್ಗೆಟ್ ಮಾಡಿಕೊಂಡು ನಕಲಿ ಕೀ ಬಳಸಿ ಹಾಗೂ ಹ್ಯಾಂಡ್ ಬ್ರೇಕ್ ಮಾಡಿ ಕಳ್ಳತನ ಮಾಡುತ್ತಿದ್ದರು. ಬಂಧಿತರಿoದ 7.25 ಲಕ್ಷ ರೂ. ಮೌಲ್ಯದ 26 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡಿವೈಎಸ್ಪಿ ನವೀನ್‌ಕುಮಾರ್, ಸಿಪಿಐ ಸಂತೋಷ್, ಪಿಎಸ್‌ಐ ಶರತ್‌ಕುಮಾರ್, ಎಎಸ್‌ಐ ಲಿಂಗರಾಜು, ಸಿಬ್ಬಂದಿಗಳಾದ ಉಮರ್ ಅಹಮದ್, ಕಬಡ್ಡಿ ಮಂಜುನಾಥ, ಮಹೇಶ್, ಶ್ರೀನಿವಾಸ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಪ್ರಶಂಸಿಸಿ ನಗದು ಬಹುಮಾನ ಘೋಷಿಸಿದ್ದಾರೆ.
ಇದನ್ನೂ ಓದಿ: ಸಚಿವ ಸಂಪುಟ ಅಸಮಾಧಾನ: ಮಾರ್ಗದಲ್ಲಿ ನಿಂತು ಅಪಸ್ವರ ತೆಗೆಯೋ ಅವಶ್ಯಕತೆ ಇಲ್ಲ ಎಂದ ನಳಿನ್