ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

Team Udayavani, Nov 17, 2019, 3:14 PM IST

ಶ್ರೀರಂಗಪಟ್ಟಣ: ಭಾರತ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ ಅವರ ಪಾತ್ರ ನಗಣ್ಯ ಎಂಬಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಬಿಂಬಿಸಲು ಯತ್ನಿಸು ತ್ತಿದ್ದು, ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ರಾಜೀನಾಮೆ ನೀಡಬೇಕು ಎಂದು ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಇಲ್ಲಿನ ಅಂಬೇಡ್ಕರ್‌ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಮಿನಿ ವಿಧಾನಸೌಧದ ಎದುರು ಅರ್ಧ ತಾಸಿಗೂ ಹೆಚ್ಚು ಕಾಲ ಪ್ರತಿಭಟನಾಕಾರರು ಧರಣಿ ನಡೆಸಿದರು.

ರಾಜ್ಯದ ಬಿಜೆಪಿ ಸರ್ಕಾರ ಸಂವಿಧಾನ ರಚನೆಯವಿಷಯದಲ್ಲಿ ವಾಸ್ತವ ಸಂಗತಿಯನ್ನು ಮರೆಮಾಚುತ್ತಿದೆ. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ ಗಣನೀಯ ಸೇವೆ ಸಲ್ಲಿಸಿದ್ದು, ಅವರ ನೇತೃತ್ವದಲ್ಲೇ ಸಂವಿಧಾನ ರಚನೆಯಾಗಿದೆ. ಆದರೆ ಪಠ್ಯ ಪುಸ್ತಕಗಳಲ್ಲಿ ವಾಸ್ತವ ಸಂಗತಿಗಳನ್ನು ಕೈಬಿಡಲಾಗಿದೆ ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಗಂಜಾಂ ರವಿಚಂದ್ರ ದೂರಿದರು. ಪಿಎಸ್‌ಎಸ್ಕೆ ಮಾಜಿ ನಿರ್ದೇಶಕ ಪಾಂಡು, ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಮತ್ತು ಇಲಾಖೆಯ ಆಯುಕ್ತರಾದಿಯಾಗಿ ಇತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ಸಿಎಂಸಿಎ ಎಂಬ ಸಂಸ್ಥೆಯ ವರದಿ ಆಧರಿಸಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣದಲ್ಲಿ ಅಂಬೇಡ್ಕರ್‌ ಅವರನ್ನು ಕಡೆಗಣಿಸುವ ಅಂಶಗಳನ್ನು ಸೇರಿಸಲಾಗುತ್ತಿದೆ. ಅದಕ್ಕೆ ಅವಕಾಶ ನೀಡಬಾರದು ಎಂದು ಮುಂಡುಗದೊರೆ ಶ್ರೀಕಂಠು ಹೇಳಿದರು. ದಸಂಸ ಜಿಲ್ಲಾಸಂಘಟನಾ ಸಂಚಾಲಕ ಕುಭೇರಪ್ಪ, ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಮಂಜೇಶ್‌ಗೌಡ, ತಾಪಂ ಮಾಜಿ ಅಧ್ಯಕ್ಷ ಮಹದೇವ ಪುರ ಪುಟ್ಟಸ್ವಾಮಿ ಮಾತನಾಡಿದರು. ಮೋಹನ್‌ ಕುಮಾರ್‌, ಹೊನ್ನಯ್ಯ, ಸುರೇಶ್‌, ಬೆಳವಾಡಿ ಹರೀಶ್‌, ಸಿದ್ದೇಗೌಡ, ಸಾವಿತ್ರಿ ಇತರರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ