ಸುಮಾ ಗೆಲ್ಲಿಸಿ ಅಂಬರೀಶ್‌ಗೆ ಗೌರವ ಸಲ್ಲಿಸಿ

Team Udayavani, Apr 2, 2019, 5:00 AM IST

ಶ್ರೀರಂಗಪಟ್ಟಣ: ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಪರ ಚಿತ್ರನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸೋಮವಾರ ಚುನಾವಣಾ ಪ್ರಚಾರ ಆರಂಭಿಸಿದರು.

ತಾಲೂಕಿನ ಕೆಆರ್‌ಎಸ್‌ನ ಅರಳಿ ಕಟ್ಟೆ ವೃತ್ತಕ್ಕೆ ಆಗಮಿಸಿದ ದರ್ಶನ್‌ ರೋಡ್‌ ಶೋ ಮತದಾರರನ್ನು ಭೇಟಿ ಮಾಡಿ ಸುಮಲತಾ ಅಂಬರೀಶ್‌ ಅವರಿಗೆ ಮತ ಹಾಕಿ ಗೆಲ್ಲಿಸುವಂತೆ ಮನವಿ ಮಾಡಿದರು.

ನಾವಿಲ್ಲಿ ನಿಂತುಕೊಂಡು ಟೀಕಾಕಾರರ ಬಗ್ಗೆ ಏನೂ ಹೇಳುವುದಿಲ್ಲ, ಯಾರ ಬಗ್ಗೆಯೂ ಏನೂ ಮಾತನಾಡಲ್ಲ, ಎಲ್ಲರೂ ಅಮ್ಮನ (ಸುಮಲತಾ)ಬಗ್ಗೆ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಆದರೆ ನೀವು ಏ.18ರಂದು ಹಾಕುವ ಒಂದೊಂದು ಓಟಿನ ಮೂಲಕವೂ ಅವರಿಗೆಲ್ಲ ತಕ್ಕ ಉತ್ತರ ಕೊಡಬೇಕು ಎಂದು ದರ್ಶನ್‌ ಪ್ರಚಾರದಲ್ಲಿ ತಿರುಗೇಟು ನೀಡಿದರು.

ಚುನಾವಣೆಯಲ್ಲಿ ಅಂಬರೀಶ್‌ ಮಾಡಿರುವ ಜನಪರ ಕೆಲಸಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ಸುಮಲತಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅಂಬರೀಶ್‌ ಶಾಸಕರಾಗಿ, ಸಚಿವರಾಗಿ, ಕೇಂದ್ರ ಸಚಿವರಾಗಿ ಎಲ್ಲಾ ಅಧಿಕಾರ ನೋಡಿದ್ದಾರೆ. ಅವರಿಗೆ ಅಧಿಕಾರದ ಆಸೆ ಇಲ್ಲ.

ಕಾವೇರಿ ನೀರಿಗಾಗಿ ಕೇಂದ್ರ ಸಚಿವ ಸ್ಥಾನವನ್ನೇ ತ್ಯಾಗಮಾಡಿದ್ದವರು. ಇದರಿಂದಳೇ ಅವರು ಜಿಲ್ಲೆಯ ಜನತೆಯ ಬಗ್ಗೆ ಇಟ್ಟಿದ್ದ ಅಭಿಮಾನವೇನೆಂದು ಗೊತ್ತಾಗುತ್ತದೆ. ಅವರಿಗೆ ಅಧಿಕಾರದ ದಾಹ ಇರಲಿಲ್ಲ. ಅವರಿಗೆ ಗೌರವ ಸಲ್ಲಿಸಬೇಕಾದರೆ ಸುಮಲತಾ ಅವರಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ತಾಲೂಕಿನ ಹುಲಿಕೆರೆ, ಬೆಳಗೊಳ, ಹೊಸಹಳ್ಳಿ, ಪಾಲಹಳ್ಳಿ, ನಗುವನಹಳ್ಳಿ ಮಾರ್ಗವಾಗಿ ಕಸಬಾ ಹೋಬಳಿಯ ಹೆಬ್ಟಾಡಿ, ಹೆಬ್ಟಾಡಿಹುಂಡಿ, ಹಂಪಾಪುರ, ತರಿಪುರ, ಚನ್ನಹಳ್ಳಿ, ಮಹದೇವಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರೆದ ವಾಹನದಲ್ಲಿ ದರ್ಶನ್‌ ಚುನಾವಣಾ ಪ್ರಚಾರ ನಡೆಸಿದರು. ರಸ್ತೆ ಉದ್ದಕ್ಕೂ ದರ್ಶನ್‌ ಅವರಿಗೆ ಅಭೂತ ಪೂರ್ವ ಸ್ವಾಗತ ನೀಡಿದ ಮತದಾರರು ಹಾರ ತುರಾಯಿ ಹಾಕಿ ಅಭಿನಂದಿಸುತ್ತಿದ್ದರು.

ಚುನಾವಣಾ ಪ್ರಚಾರದಲ್ಲಿ ಅಂಬರೀಶ್‌ ಆಪ್ತ ಇಂಡುವಾಳು ಸಚ್ಚಿದಾನಂದ, ಅಖೀಲ ಕರ್ನಾಟಕ ಅಂಬರೀಶ್‌ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಲಿಂಗರಾಜು, ಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಚಂದ್ರಶೇಖರ್‌, ಜಿಪಂ ಮಾಜಿ ಸದಸ್ಯ ಶ್ರೀನಿವಾಸ್‌, ಗ್ರಾಪಂ ಸದಸ್ಯ ಮಂಜುನಾಥ್‌, ಕೆಆರ್‌ಎಸ್‌ ಪ್ರಕಾಶ್‌, ರಾಮೇಗೌಡ, ಬೆಳಗೊಳ ಮಂಜುನಾಥ್‌, ಬಿ.ವಿ.ಸುರೇಶ್‌, ನಾಗೇಂದ್ರ ಇತರರು ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ