ಲಕ್ಷ ಮತಗಳ ಅಂತರದಲ್ಲಿ ಸುಮಲತಾ ಗೆಲುವು

ಮಂಡ್ಯ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲೂ ಸುಮಲತಾಗೆ ಹೆಚ್ಚು ಮತ

Team Udayavani, May 12, 2019, 12:17 PM IST

ಮದ್ದೂರು ಪಟ್ಟಣದಲ್ಲಿ ಬಿಜೆಪಿ ತಾಲೂಕುಮಟ್ಟದ ಆತ್ಮಾವಲೋಕನ ಸಭೆಯಲ್ಲಿ ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿ ಜಯಕೃಷ್ಣ ಮಾತನಾಡಿದರು.

ಮದ್ದೂರು: ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಯಕೃಷ್ಣ ತಿಳಿಸಿದರು.

ಪಟ್ಟಣದ ಶಂಕರಪಾರ್ಟಿ ಹಾಲ್ನಲ್ಲಿ ತಾಲೂಕು ಬಿಜೆಪಿ ಸಂಘಟನೆ ಆಯೋಜಿಸಿದ್ದ ಲೋಕಸಭಾ ಚುನಾವಣೆಯ ತಾಲೂಕು ಮಟ್ಟದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 8 ಕ್ಷೇತ್ರಗಳಲ್ಲಿ ಸುಮಲತಾ ಅಂಬರೀಶ್‌ ಪರ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಮತದಾರರು ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿದ್ದು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆಂದು ಭವಿಷ್ಯ ನುಡಿದರು.

ಸುಮಲತಾಗೆ ಬೆಂಬಲ: ಜಿಲ್ಲೆಯ ಸ್ವಾಭಿಮಾನ, ಅನುಕಂಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಆಡಳಿತ ಮೆಚ್ಚಿ ಜಿಲ್ಲೆಯ ಯುವ ಮತದಾರರು, ಮಹಿಳೆಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸುಮಲತಾ ಅಂಬರೀಶ್‌ ಅವರನ್ನು ಬೆಂಬಲಿ ಮತ ಚಲಾಯಿಸಿದ್ದಾರೆ. ಮೇ 23ರಂದು ಹೊರಬೀಳುವ ಫ‌ಲಿತಾಂಶದ ವೇಳೆ ಸ್ವಾಭಿಮಾನಕ್ಕೆ ಜಯವಾಗಲಿದೆ. ಜೆಡಿಎಸ್‌ ಮುಖಂಡರು ಮೈತ್ರಿಕೂಟ ಅಭ್ಯರ್ಥಿ ನಿಖೀಲ್ 2 ಲಕ್ಷಕ್ಕೂ ಅಧಿಕ ಮತಗಳಿಂದ ಜಯಗಳಿಸುವ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದವೆಂದರು.

ಪಕ್ಷ ಬಲಪಡಿಸಿ: ಬಿಜೆಪಿ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಪಣ್ಣೇದೊಡ್ಡಿ ರಘು ಮಾತನಾಡಿ, ವಿಧಾನಸಭೆ, ಲೋಕಸಭೆ ಚುನಾವಣೆಗಳು ಮುಗಿದ ಬಳಿಕ ಸ್ಥಳೀಯ ಸಂಸ್ಥೆ, ಪಂಚಾಯಿತಿ ಚುನಾವಣೆಗಳು ನಡೆಯಲಿವೆ. ಈಗಾಗಲೇ ಪಕ್ಷದ ಕಾರ್ಯಕರ್ತರು ಬೂತ್‌ ಮಟ್ಟದಿಂದಲೇ ಸಮಿತಿಗಳನ್ನು ರಚಿಸಿ ಪಕ್ಷ ಬಲವರ್ಧನೆಗೆ ಮುಂದಾಗಬೇಕೆಂದರು.

ಸಭೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಉಪಾಧ್ಯಕ್ಷ ದೇವರಾಜು, ಪದಾಧಿಕಾರಿಗಳಾದ ಕೆ.ಎಂ.ರಮೇಶ್‌, ತ್ರಿವೇಣಿ, ಎಂ.ಸಿ.ಸಿದ್ದು, ಯೋಗೇಶ್‌, ಜಗನ್ನಾಥ್‌, ಮ.ನ. ಪ್ರಸನ್ನಕುಮಾರ್‌ ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ