ರಾತ್ರಿವರೆಗೂ ಕಾದು ಕುಳಿತರೂ ಬಾರದ ಮುಖ್ಯಮಂತ್ರಿ

Team Udayavani, Apr 13, 2019, 5:38 PM IST

ಭಾರತೀನಗರ: ಮುಖ್ಯಮಂತ್ರಿ ಕುಮಾರಸ್ವಾಮಿ ಬರುವಿಕೆಗಾಗಿ ಸುತ್ತ-ಮುತ್ತಲ ಗ್ರಾಮಸ್ಥರು ಕಾದು ಬಸವಳಿದರು. ಕೊನೆಗೂ ಕುಮಾರಸ್ವಾಮಿ ಆಗಮಿಸದ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣನವರಿಗೆ ಅಂತಿಮವಾಗಿ ಗೌರವ ಸಲ್ಲಿಸಿದ ಪ್ರಸಂಗ ಭಾರತೀನಗರದ ಮದ್ದೂರು- ಮಳವಳ್ಳಿ ಮುಖ್ಯರಸ್ತೆಯಲ್ಲಿ ನಡೆಯಿತು.
 ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖೀಲ್‌ಕುಮಾರಸ್ವಾಮಿ ಪರ ರೋಡ್‌ ಶೋ ನಡೆಸಲು ಆಗಮಿಸಬೇಕಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗಾಗಿ ಕಾರ್ಯಕರ್ತರು, ಸುತ್ತ-ಮುತ್ತಲ ಗ್ರಾಮಸ್ಥರು, ಮಹಿಳೆಯರು, ಸಹಸ್ರಾರು ಸಂಖ್ಯೆಯಲ್ಲಿ ಪಟ್ಟಣದ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದರು.
ಸೇಬು, ಹೂವಿನಗಳೊಂದಿಗೆ: ಗುರುವಾರ ಮಧ್ಯಾಹ್ನ ಸುಮಾರು 3.30 ಗಂಟೆಗೆ ಮುಖ್ಯಮಂತ್ರಿಗಳ ಆಗಮನ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪೂಜಾಕುಣಿತ, ಡೊಳ್ಳು ಕುಣಿತ ಸೇರಿದಂತೆ ಜನಪದ
ಕಲಾಮೇಳದೊಂದಿಗೆ ಮುಖ್ಯರಸ್ತೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ 500 ಕೆ.ಜಿ.ಸೇಬಿನಹಾರ, ಭಾರಿ ಗಾತ್ರದ ಹೂವಿನ ಹಾರ ಹಾಕಬೇಕೆಂದು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ರಾತ್ರಿ 10 ಗಂಟೆಯಾದರೂ ಕುಮಾರಸ್ವಾಮಿ ಪಟ್ಟಣಕ್ಕೆ ಆಗಮಿಸಲೇ ಇಲ್ಲ. ಇದರಿಂದ ನೆರೆದಿದ್ದ ಜನರು ಬೇಸರಗೊಂಡರು.
ಮನವೊಲಿಸಿದ ತಮ್ಮಣ್ಣ: ಈ ವಿಷಯ ತಿಳಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ರಾತ್ರಿ 9.30ಕ್ಕೆ ಸ್ಥಳಕ್ಕೆ ಆಗಮಿಸಿ ಕಾರ್ಯಕರ್ತರು, ಸಾರ್ವಜನಿಕರ ಮನವೊಲಿಸಲು ಯತ್ನಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರದಲ್ಲಿ ಪ್ರತೀ ಹಳ್ಳಿಗಳಿಗೂ ಭೇಟಿ ನೀಡಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಬರುವುದು ತಡವಾಗಿದೆ. ಇದರಿಂದ ಪಟ್ಟಣಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಸಮಜಾಯಿಷಿ ನೀಡಿದರು.
ಅನ್ಯತಾ ಭಾವಿಸಬೇಡಿ: ಜೊತೆಗೆ ಕಾಂಗ್ರೆಸ್‌ ಮುಖಂಡ ಹಾಗೂ ಸಚಿವ ಡಿ.ಕೆ.ಶಿವಕುಮಾರ್‌ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಕಾರ್ಯ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಲ್ಲಿಗೆ ತೆರಳಬೇಕಿದ್ದ ಕಾರಣ ತಡವಾಗಿ ಮಳವಳ್ಳಿ ಕ್ಷೇತ್ರಕ್ಕೆ ಹೋಗಿದ್ದಾರೆ. ಯಾರೂ ಅನ್ಯತಾ ಭಾವಿಸದೆ ನಿಖೀಲ್‌ಕುಮಾರಸ್ವಾಮಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಸಾರಿಗೆ ಸಚಿವರ ಮನವಿಗೆ ಸ್ಪಂದಿಸಿದ ಕಾರ್ಯಕರ್ತರು ಮುಖ್ಯಮಂತ್ರಿ
ಕುಮಾರಸ್ವಾಮಿ ಅವರಿಗಾಗಿ ತರಿಸಿದ್ದ ಭಾರಿ ಗಾತ್ರದ ಸೇಬಿನ ಹಾರ ಹಾಗೂ ಹೂವಿನ ಹಾರವನ್ನು ಸಾರಿಗೆ ಸಚಿವರಿಗೇ ಸಮರ್ಪಿಸುವ ಮೂಲಕ ಮುಖ್ಯಮಂತ್ರಿಗಳಿಗೆ ಗೌರವ ಸಲ್ಲಿಸಿದರು.
ಕಾದುಕುಳಿದ ಹಿರಿಯ ಮುತ್ಸದ್ಧಿ: ಮಾಜಿ ಸಂಸದ ಜಿ.ಮಾದೇಗೌಡರೂ ಕೂಡ ಭಾರತೀಕಾಲೇಜಿನಲ್ಲಿ ತಮ್ಮ ಬೆಂಬಲಿಗರೊಂದಿಗೆ ರಾತ್ರಿ 10 ಗಂಟೆವರೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಗಮನಕ್ಕಾಗಿ ಕಾದು ಕುಳಿತಿದ್ದರು.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ