ಜಿಲ್ಲೆಯಲ್ಲಿ ಮುಗಿದ ಜೆಡಿಎಸ್‌ ಅಧಿಕಾರ ವೈಭವ

ಳಪತಿಗಳ ಸಂಖ್ಯೆ ಏಳರಿಂದ ಆರಕ್ಕೆ ಕುಸಿತ • ಭರವಸೆಗಳಲ್ಲೇ 14 ತಿಂಗಳ ಅಧಿಕಾರ ಪೂರ್ಣ

Team Udayavani, Jul 26, 2019, 11:46 AM IST

ಮಂಡ್ಯ: ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಪತನದೊಂದಿಗೆ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ ಅಧಿಕಾರ ವೈಭವ ಮುಗಿದಂತಾಗಿದೆ.

ವಿಶ್ವಾಸಮತದಲ್ಲಿ ದೋಸ್ತಿ ಸರ್ಕಾರ ಬಹುಮತ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಸಕರು ಹೊಂದಿದ್ದ ಸಚಿವ ಸ್ಥಾನ ಹಾಗೂ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಕಳೆದುಕೊಂಡು ಹತಾಶ ಭಾವನೆ ಮೂಡಿದೆ. ಮುಂದೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನದ ಕನಸು ಕಾಣುತ್ತಿದ್ದ ಮುಖಂಡರ ಮೊಗದಲ್ಲಿ ನಿರಾಸೆ ಆವರಿಸಿದ್ದು, ಜೆಡಿಎಸ್‌ ಪಕ್ಷದೊಳಗೆ ನೀರಸ ವಾತಾವರಣ ಕಂಡುಬರುತ್ತಿದೆ.

ಕಳೆದ ವಿಧಾನಸಭಾ ಚುನಾವಣಾ ಫ‌ಲಿತಾಂಶದಲ್ಲಿ ಅತಂತ್ರ ಸ್ಥಿತಿ ಎದುರಾದ ವೇಳೆ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಯೊಂದಿಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಗದ್ದುಗೆ ಏರಿದಾಗ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಹೊಸ ಆಶಾಭಾವನೆಗಳು ಚಿಗುರೊಡೆದಿದ್ದವು. ಹಾಸನದ ಮಾದರಿಯಲ್ಲಿ ಪ್ರಗತಿಯ ಪರ್ವ ಮಂಡ್ಯದಲ್ಲಿ ಶುರುವಾಗುವ ನಿರೀಕ್ಷೆ ಮೂಡಿತ್ತು. ಆದರೆ, ಕೇವಲ 14 ತಿಂಗಳ ಅವಧಿಯಲ್ಲಿ ಸರ್ಕಾರ ಪತನಗೊಂಡು ಪ್ರಗತಿಯ ಕನಸು ಕಮರಿಹೋಗುವಂತೆ ಮಾಡಿದೆ.

ಅಧಿಕಾರದ ಶಕ್ತಿ: ಮೈತ್ರಿ ಸರ್ಕಾರದಲ್ಲಿ ಮೊದಲ ಬಾರಿಗೆ ಜಿಲ್ಲೆಯ ಇಬ್ಬರು ಶಾಸಕರಿಗೆ ಮಂತ್ರಿ ಪದವಿ ಭಾಗ್ಯ ದೊರಕಿತ್ತು. ಮೇಲುಕೋಟೆ ಕ್ಷೇತ್ರದ ಶಾಸಕ ಪುಟ್ಟರಾಜುಗೆ ಸಣ್ಣ ನೀರಾವರಿ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಹಾಗೂ ಮದ್ದೂರು ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ ಅವರಿಗೆ ಸಾರಿಗೆಯಂತಹ ಪ್ರಭಾವಿ ಖಾತೆಯನ್ನೇ ನೀಡಲಾಗಿತ್ತು.

ಇನ್ನು ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್‌ಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಶಾಸಕ ಡಾ.ಕೆ.ಅನ್ನದಾನಿಗೆ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ, ಶಾಸಕ ಎಂ.ಶ್ರೀನಿವಾಸ್‌ಗೆ ಸಂಸದೀಯ ಕಾರ್ಯದರ್ಶಿ ಹುದ್ದೆಯನ್ನು ನೀಡುವ ಮೂಲಕ ಜೆಡಿಎಸ್‌ ನಾಯಕರಿಗೆ ಅಧಿಕಾರದ ಶಕ್ತಿಯನ್ನು ತುಂಬಲಾಗಿತ್ತು.

ಕಳೆದ ಚುನಾವಣೆಯಲ್ಲಿ ಏಳಕ್ಕೆ ಏಳು ಕ್ಷೇತ್ರಗಳಲ್ಲೂ ಜೆಡಿಎಸ್‌ ಶಾಸಕರನ್ನು ಗೆಲ್ಲಿಸಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಗದ್ದುಗೆ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಂಡ್ಯ ಜಿಲ್ಲೆಗೆ ದಳಪತಿಗಳು ಹಲವು ವಿಶೇಷ ಕೊಡುಗೆಗಳನ್ನು ನೀಡಿ ಅಭಿವೃದ್ಧಿಗೆ ಹೊಸ ದಿಕ್ಕು ತೋರಿಸುವರೆಂದೇ ಭಾವಿಸಲಾಗಿತ್ತು. ಜನರ ಮನೋಭಿಲಾಷೆಗೆ ತಕ್ಕಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಜಿಲ್ಲೆಗೆ 8500 ಕೋಟಿ ರೂ.ಗಳ ಕೊಡುಗೆಯನ್ನು ಘೋಷಣೆ ಮಾಡಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದರು.

ಮರೀಚಿಕೆಯಾದ ಅಭಿವೃದ್ಧಿ: ದೋಸ್ತಿ ಸರ್ಕಾರದಲ್ಲಿ ಆಗಾಗ ಉಂಟಾಗುತ್ತಿದ್ದ ಗೊಂದಲ, ಅನಿಶ್ಚಿತ ರಾಜಕೀಯ ಬೆಳವಣಿಗೆಗಳಿಂದಾಗಿ ಅಭಿವೃದ್ಧಿ ಜಿಲ್ಲೆಯ ಪಾಲಿಗೆ ಮರೀಚಿಕೆಯಾಯಿತು. ಸಣ್ಣ ನೀರಾವರಿ ಖಾತೆ ಪಡೆದುಕೊಂಡ ಸಿ.ಎಸ್‌.ಪುಟ್ಟರಾಜು ಅವರಿಂದ ಒಂದು ಕೆರೆಯನ್ನೂ ತುಂಬಿಸುವುದಕ್ಕಾಗಲೀ, ಅಭಿವೃದ್ಧಿಪಡಿಸುವುದಕ್ಕಾಗಲಿ ಸಾಧ್ಯವಾಗಲೇ ಇಲ್ಲ. ಕೆರೆಯಿಂದ ಕೆರೆಗೆ ನೀರು ಯೋಜನೆ ಘೋಷಣಾ ಹಂತದಲ್ಲೇ ಕಮರಿಹೋಯಿತು. ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ರೈತರು ಹಾಗೂ ಜನರ ಸಂಕಷ್ಟಗಳಿಗೆ ನಿರೀಕ್ಷೆಯಂತೆ ಸ್ಪಂದಿಸಲಿಲ್ಲವೆಂಬ ಆರೋಪಕ್ಕೆ ಗುರಿಯಾದರು. ಅಲ್ಲದೆ, ಮಂತ್ರಿ ಸ್ಥಾನದಲ್ಲಿದ್ದರೂ ಪುಟ್ಟರಾಜು ಮೇಲುಕೋಟೆ ಕ್ಷೇತ್ರಕ್ಕೆ ಸೀಮಿತರಾಗಿ ಉಳಿದುಕೊಂಡರು. ಜಿಲ್ಲಾದ್ಯಂತ ಸಂಚರಿಸಿ ಅಭಿವೃದ್ಧಿಗೆ ವೇಗ ಕೊಡುವ ದಿಟ್ಟ ಹೆಜ್ಜೆ ಇಡುವ ಧೈರ್ಯ ಮಾಡಲಿಲ್ಲ ಎಂಬ ಅಪವಾದಕ್ಕೆ ಕಾರಣರಾದರು.

ಸಾರಿಗೆ ಸಚಿವರಾಗಿ ಡಿ.ಸಿ.ತಮ್ಮಣ್ಣನವರು ಒಂದಷ್ಟು ಹೊಸ ಬಸ್ಸುಗಳನ್ನು ಕೊಟ್ಟರೇ ಹೊರತು ಇನ್ನಾವುದೇ ಮಹತ್ವದ ಕೊಡುಗೆಗಳನ್ನು ನೀಡಲಿಲ್ಲ. ಮೈತ್ರಿ ಸರ್ಕಾರದಲ್ಲಿ ಸಿ.ಎಸ್‌.ಪುಟ್ಟರಾಜು ಹಾಗೂ ಡಿ.ಸಿ.ತಮ್ಮಣ್ಣ ಅವರು ಹೆಸರಿಗಷ್ಟೇ ಸಚಿವರಾಗಿದ್ದರೇ ಹೊರತು ದಳಪತಿಗಳಿಂದ ಅಧಿಕಾರದ ಶಕ್ತಿಯನ್ನು ಪಡೆದುಕೊಂಡು ಅಭಿವೃದ್ಧಿಗೆ ವಿನಿಯೋಗಿಸುವ ಪ್ರಯತ್ನಗಳನ್ನು ಮಾಡಲಿಲ್ಲ. ದಳಪತಿಗಳೆಲ್ಲರೂ ಕೇವಲ ಆಶ್ವಾಸನೆಯಲ್ಲೇ ಅಧಿಕಾರ ಅನುಭವಿಸಿದರೇ ವಿನಃ ಪ್ರಗತಿಯ ಬಗೆಗಿನ ಬದ್ಧತೆಯನ್ನು ಪ್ರದರ್ಶಿಸದಿರುವುದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಯಿತು.

8500 ಕೋಟಿ ರೂ. ಎಲ್ಲಿ?: ಲೋಕಸಭಾ ಚುನಾವಣೆಗೂ ಮುನ್ನ ಕುಮಾರಸ್ವಾಮಿ ಘೋಷಣೆ ಮಾಡಿದ್ದ 8500 ಕೋಟಿ ರೂ. ಬಗ್ಗೆ ಪ್ರಚಾರ ಪಡೆದುಕೊಂಡಿದ್ದೇ ದಳಪತಿಗಳ ದೊಡ್ಡ ಸಾಧನೆ. ಅಭಿವೃದ್ಧಿ ಕಾಮಗಾರಿಗಳೆಲ್ಲ ಕಾಗದದಲ್ಲೇ ಉಳಿದವೇ ವಿನಃ ಒಂದೂ ಸಹ ಕಾರ್ಯಗತವಾಗಲೇ ಇಲ್ಲ. ಲೋಕ ಸಭಾ ಚುನಾವಣೆಯಲ್ಲಿ ಪುತ್ರ ನಿಖೀಲ್ ಕುಮಾರಸ್ವಾಮಿ ಸೋಲಿನ ಹಿಂದೆಯೇ 8500 ಕೋಟಿ ರೂ. ಅಭಿವೃದ್ಧಿಗೂ ಮಂಗಳ ಹಾಡಲಾಯಿತು.

ಮೈಷುಗರ್‌ ಪುನಶ್ಚೇತನಕ್ಕೆ ಬದಲಾಗಿ 450 ಕೋಟಿ ರೂ. ವೆಚ್ಚದಲ್ಲಿ ಹೊಸ ಸಕ್ಕರೆ ಕಾರ್ಖಾನೆಯನ್ನು ಸಾತನೂರು ಫಾರಂನಲ್ಲಿ ನಿರ್ಮಾಣ ಮಾಡುವ ಜೊತೆಗೆ ಲೋಕಸಭಾ ಚುನಾವಣೆ ಮುಗಿದ ತಕ್ಷಣವೇ ಗುದ್ದಲಿಪೂಜೆ ನೆರವೇರಿಸುವುದಾಗಿ ಹೇಳಿದ್ದರು. ಆನಂತರದಲ್ಲಿ ದಳಪತಿಗಳೆಲ್ಲರೂ ಆ ಬಗ್ಗೆ ತುಟಿ ಬಿಚ್ಚದೆ ಮೌನವಾದರು.

ವ್ಯಾಪಾರಿ ಉದ್ದೇಶದ ಯೋಜನೆ: ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್‌ನಂತಹ ವ್ಯಾಪಾರಿ ಉದ್ದೇಶದ ಯೋಜನೆಯನ್ನು ಜಾರಿಗೊಳಿಸುವ ಪ್ರಯತ್ನ ನಡೆಸಿದರು. ಇದರಿಂದ ಅಣೆಕಟ್ಟೆಗೆ ಅಪಾಯ ಎದುರಾಗುವ, ಜಲಾಶಯದ ಸುತ್ತಲಿನ ಪರಿಸರ ಹಾಳಾಗುವ ವಿಷಯವಾಗಿ ಜನರಿಂದ ವಿರೋಧ ವ್ಯಕ್ತವಾದಾಗ ಯೋಜನೆಯನ್ನು ಕೈಬಿಟ್ಟರು. ಅಣೆಕಟ್ಟೆ ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿರುವುದರಿಂದ ಕೆಆರ್‌ಎಸ್‌ಗೆ ಅಪಾಯವಿದ್ದು ಗಣಿಗಾರಿಕೆ ನಿಷೇಧಿಸುವಂತೆ ಜಿಲ್ಲೆಯ ಜನರು ಬೊಬ್ಬೆ ಹೊಡೆದರೂ ಅದಕ್ಕೆ ಕುಮಾರಸ್ವಾಮಿ ಸ್ಪಂದಿಸಲಿಲ್ಲ. ಅಣೆಕಟ್ಟು ಸುರಕ್ಷತೆಯನ್ನು ಕಡೆಗಣಿಸಿ ಗಣಿಗಾರಿಕೆ ಸುಗಮವಾಗಿ ನಡೆಯುವುದಕ್ಕೆ ಹೆಚ್ಚಿನ ಅವಕಾಶ ಮಾಡಿಕೊಟ್ಟರು ಎಂಬ ಆರೋಪಕ್ಕೆ ಗುರಿಯಾದರು.

ಇಸ್ರೇಲ್ ಮಾದರಿ ಕೃಷಿಯನ್ನು ಮಂಡ್ಯ ಜಿಲ್ಲೆಯಲ್ಲಿ ಜಾರಿಗೆ ತರುವುದಾಗಿ ಹೇಳುವುದರೊಂದಿಗೆ ಕೃಷಿ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಕನಸು ಮೂಡಿಸಿದರು. ಆ ದಿಕ್ಕಿನಲ್ಲೂ ಒಂದು ಹೆಜ್ಜೆಯನ್ನೂ ಇಡಲಿಲ್ಲ. ಜಿಲ್ಲೆಯ ಯಾವುದೇ ಭಾಗದಲ್ಲೂ ಇಸ್ರೇಲ್ ಮಾದರಿ ಕೃಷಿ ಅಳವಡಿಸುವ, ಅದಕ್ಕೆ ಜನರನ್ನು ಪ್ರೇರೇಪಿಸುವುಕ್ಕೂ ಮುಂದಾಗದೆ ನಿರಾಸಕ್ತಿ ವಹಿಸಿದರು.

ಕಾಪಾಡುವ ಸಮಸ್ಯೆಗಳಿಗೆ ಗಮನ ಕೊಡಲಿಲ್ಲ: ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಅವುಗಳ ಕಡೆ ಗಮನಹರಿಸಲೇ ಇಲ್ಲ. ಅಂತರ್ಜಲ ಸಾವಿರಾರು ಅಡಿ ಆಳಕ್ಕೆ ಕುಸಿದಿರುವ ಸನ್ನಿವೇಶದಲ್ಲಿ ಕೆರೆ-ಕಟ್ಟೆಗಳನ್ನು ಅಭಿವೃದ್ಧಿಪಡಿಸುವುದರಿಂದ ದೂರ ಉಳಿದರು. ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಒಲವು ತೋರಲಿಲ್ಲ. ಮೈಷುಗರ್‌ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆಗಳ ಪುನಶ್ಚೇತನ ಕನಸಾಗಿಯೇ ಉಳಿಯಿತು.

ಕಬ್ಬು ಪೂರೈಸಿದ ರೈತರಿಗೆ ಬಾಕಿ ಪಾವತಿಸದ ಸಕ್ಕರೆ ಕಾರ್ಖಾನೆಗಳಿಗೆ ಚಾಟಿ ಬೀಸಿ ಸಕಾಲದಲ್ಲಿ ಹಣ ಕೊಡಿಸದೆ ರೈತರು ಸಂಕಷ್ಟದಲ್ಲೇ ಉಳಿದರು. ರೈತರ ಆತ್ಮಹತ್ಯೆ ಅಂತ್ಯ ಕಾಣಲೇ ಇಲ್ಲ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿದ್ದ ಜಿಲ್ಲೆಯ ಪರಿಸ್ಥಿತಿಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರದ ಸ್ಥಿತಿಗೂ ಯಾವುದೇ ವ್ಯತ್ಯಾಸ ಕಂಡುಬರಲೇ ಇಲ್ಲ.

ಪುತ್ರನ ಸೋಲಿನ ಸೇಡು?: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಖೀಲ್ ಕುಮಾರಸ್ವಾಮಿ ಸೋಲನ್ನು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರಿಂದ ಅರಗಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಅಲ್ಲಿಂದ ಕುಮಾರಸ್ವಾಮಿ ಅವರು ಜಿಲ್ಲೆಯ ಕಡೆ ಮುಖ ಮಾಡಲೂ ಇಲ್ಲ, ಅಭಿವೃದ್ಧಿ ಬಗ್ಗೆ ಆಸಕ್ತಿಯನ್ನು ತೋರದೆ ದಿವ್ಯ ನಿರ್ಲಕ್ಷ್ಯ ಮಾಡಿದರೆಂಬ ಆರೋಪಕ್ಕೆ ಗುರಿಯಾದರು.

ವಿಧಾನಸಭಾ ಚುನಾವಣೆಯಲ್ಲಿ ಏಳು ಸ್ಥಾನಗಳಲ್ಲಿ ಗೆಲುವನ್ನು ತಂದುಕೊಟ್ಟ ಜಿಲ್ಲೆಯ ಜನರ ಕೊಡುಗೆಯನ್ನು ಮರೆತ ಕುಮಾರಸ್ವಾಮಿ ಅವರು ಪುತ್ರನ ಸೋಲಿಸಿದರೆಂಬ ಒಂದೇ ಕಾರಣವನ್ನು ಮುಂದಿಟ್ಟುಕೊಂಡು ಮಂಡ್ಯವನ್ನು ಸಂಪೂರ್ಣ ಕಡೆಗಣಿಸಿದರು. ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದರೂ, ನೀರು ಹರಿಸುವಂತೆ ರೈತರು ಬೊಬ್ಬಿಡುತ್ತಿದ್ದರೂ ಕಿವಿ ಕೇಳಿಸದಂತಾದರು. ಎಲ್ಲಾ ಜೆಡಿಎಸ್‌ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಬೆಳೆಗಳಿಗೆ ನೀರು ಹರಿಸುವ ಪ್ರಯತ್ನ ನಡೆಸದೆ ರೆಸಾರ್ಟ್‌ ಸೇರಿಕೊಂಡು ಜನರ ಕೆಂಗಣ್ಣಿಗೆ ಗುರಿಯಾದ್ದು ಸುಳ್ಳಲ್ಲ.

ಆರಕ್ಕೆ ಕುಸಿದ ಶಾಸಕರ ಬಲ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಜೆಡಿಎಸ್‌ ಭದ್ರಕೋಟೆ ಎನಿಸಿಕೊಂಡಿದ್ದ ಮಂಡ್ಯ ಜಿಲ್ಲೆಯಲ್ಲಿ ಹಾಲಿ ಜೆಡಿಎಸ್‌ ಶಾಸಕರ ಸಂಖ್ಯೆ ಆರಕ್ಕೆ ಕುಸಿದಿದೆ. ಶಾಸಕ ಕೆ.ಸಿ.ನಾರಾಯಣಗೌಡರು ತಮ್ಮ ಸ್ಥಾನಕ್ಕೆ ನೀಡಿರುವ ರಾಜೀನಾಮೆಯಿಂದ ಆ ಕ್ಷೇತ್ರ ಈಗ ಖಾಲಿ ಉಳಿದಿದೆ. ಅನುದಾನ ನೀಡಿಕೆಯಲ್ಲಿ ತಾರತಮ್ಯ, ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ, ದೇವೇಗೌಡರ ಕುಟುಂಬದ ಹಸ್ತಕ್ಷೇದಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ನಾರಾಯಣಗೌಡರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಕುಮಾರಸ್ವಾಮಿ ತಮ್ಮ ವಿದಾಯ ಭಾಷಣದ ವೇಳೆ ಕೆ.ಆರ್‌.ಪೇಟೆ ಕ್ಷೇತ್ರಕ್ಕೆ 475 ಕೋಟಿ ರೂ. ಅನುದಾನ ನೀಡಿರುವುದಾಗಿ ಹೇಳಿದರಾದರೂ ನಾರಾಯಣಗೌಡರು, ಕ್ಷೇತ್ರಕ್ಕೆ ದೊರಕಿರುವುದು 2 ಕೋಟಿ ಮಾತ್ರ ಎಂದಿದ್ದರು. ಹಾಗಾದರೆ 473 ಕೋಟಿ ರೂ. ಹೋಗಿದ್ದಾದರೂ ಎಲ್ಲಿಗೆ ಎನ್ನುವುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.
ಸಿಆರ್‌ಎಸ್‌ಗೆ ಸಿಕ್ಕಿದ್ದ ಅಧಿಕಾರ: ಹತ್ತು ವರ್ಷಗಳ ಹಿಂದೆ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಜಿಲ್ಲೆಯಿಂದ ಎನ್‌.ಚಲುವರಾಯಸ್ವಾಮಿ ಅವರಿಗೆ ಸಚಿವ ಸ್ಥಾನ ದೊರಕಿತ್ತು. ಮೊದಲ ಅವಧಿಯಲ್ಲಿ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಚಲುವರಾಯಸ್ವಾಮಿ ಮಂಡ್ಯ ಸೇರಿದಂತೆ ತಾಲೂಕುಗಳ ಬಸ್‌ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿದ್ದರು. ನಾಗಮಂಗಲದಲ್ಲಿ ಎಆರ್‌ಟಿಒ ಕಚೇರಿಯನ್ನು ತೆರೆಯುವಂತೆ ಮಾಡಿದ್ದರು. ಆನಂತರ ಬಂದ ಜೆಡಿಎಸ್‌-ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

 

● ಮಂಡ್ಯ ಮಂಜುನಾಥ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ