ಹಿಪ್ಪುನೇರಳೆಗೆ ಹುಳುಗಳ ಕಾಟ: ರೈತರ ಸಂಕಟ

ರಾತ್ರಿ ವೇಳೆ ಬೆಳೆಗಳಿಗೆ ಆಕ್ರಮಣ: ಚಿಗುರು, ಎಲೆ ಆಪೋಶನ • ಇಳುವರಿ ಕುಂಠಿತ, ಬೆಳೆ ನಷ್ಟಕ್ಕೊಳಗಾಗುವ ಆತಂಕ

Team Udayavani, Jul 9, 2019, 1:12 PM IST

ಹುಳುಗಳ ಬಾಧೆಗೆ ತುತ್ತಾಗಿರುವ ಹಿಪ್ಪುನೇರಳೆ ತೋಟದ ಒಂದು ದೃಶ್ಯ.

ಮಂಡ್ಯ: ರೇಷ್ಮೆಗೆ ಬೆಲೆ ಇಲ್ಲದೆ ಬೆಳೆಗಾರರು ಸಂಕಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಇದೀಗ ಹಿಪ್ಪುನೇರಳೆ ಬೆಳೆಗೆ ಹುಳುಗಳ ಕಾಟ ಶುರುವಾಗಿದೆ. ಹವಾಮಾನ ವೈಪರೀತ್ಯದಿಂದ ಆಕ್ರಮಣ ಮಾಡಿರುವ ಹುಳುಗಳಿಂದ ಬೆಳೆಗಾರರು ತೀವ್ರವಾಗಿ ಬೇಸತ್ತಿದ್ದಾರೆ.

ಆಂಧ್ರ ಪ್ರದೇಶದ ಮೂಲದಿಂದ ಬಂದಿರಬಹುದೆಂದು ಶಂಕಿಸಲಾಗಿರುವ ಈ ಹುಳುಗಳು ನೇರವಾಗಿ ಹಿಪ್ಪುನೇರಳೆ ಬೆಳೆಯನ್ನು ಆವರಿಸಿಕೊಂಡಿವೆ. ಎಲೆಯ ತುದಿಯಿಂದ ತಿನ್ನಲಾರಂಭಿಸಿ ಕೊನೆಗೆ ಇಡೀ ಎಲೆಯನ್ನೇ ಆಪೋಷನ ತೆಗೆದುಕೊಳ್ಳುತ್ತಿವೆ. ಇದರಿಂದ ಹಿಪ್ಪುನೇರಳೆ ಬೆಳೆ ಇಳುವರಿ ಕುಂಠಿತಗೊಳ್ಳುವ ಹಾಗೂ ಬೆಳೆ ನಷ್ಟಕ್ಕೊಳಗಾಗುವ ಆತಂಕವನ್ನು ಬೆಳೆಗಾರರು ಎದುರಿಸುತ್ತಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಶೇ.10ರಷ್ಟು ಬೆಳೆ ಹುಳುಗಳ ಬಾಧೆಗೆ ತುತ್ತಾಗಿದ್ದು, ಮಳವಳ್ಳಿ ಹಾಗೂ ಮದ್ದೂರು ಪ್ರಮಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ.

ಮಳೆ ಕೊರತೆ: ಪ್ರಸಕ್ತ ವರ್ಷ ನಿರೀಕ್ಷೆಯಂತೆ ಪೂರ್ವ ಮುಂಗಾರು ಮಳೆ ಬರಲಿಲ್ಲ. ಬೇಸಿಗೆಯಲ್ಲಿ ಬಿಸಿಲ ತಾಪದ ತೀವ್ರತೆ ಎಲ್ಲೆಡೆ ಹೆಚ್ಚಿತ್ತು. ಜೊತೆಗೆ ಈ ಬಾರಿ ನಿರೀಕ್ಷೆಯಂತೆ ಜಿಲ್ಲೆಗೆ ಮುಂಗಾರು ಮಳೆಯ ಆಗಮನವೂ ಆಗಿಲ್ಲ. ಜತೆಗೆ ವಾತಾವರಣದಲ್ಲಿ ತೇವಾಂಶದ ಕೊರತೆ ಕಂಡುಬಂದಿದ್ದು, ಇದರ ನೇರ ಪರಿಣಾಮ ಹಿಪ್ಪುನೇರಳೆ ಬೆಳೆ ಮೇಲಾಗಿದೆ.

ಬಿಸಿಲು ಹೆಚ್ಚಾಗಿರುವ ಪ್ರದೇಶಗಳಲ್ಲಿ ಈ ಹುಳುಗಳ ಬಾಧೆ ತೀವ್ರವಾಗಿರುವಂತೆ ಕಂಡುಬಂದಿದೆ. ರಾತ್ರಿ ಸಮಯದಲ್ಲಿ ಹಿಪ್ಪುನೇರಳೆ ಬೆಳೆಗೆ ಲಗ್ಗೆ ಇಡುವ ಹುಳುಗಳು ಎಲೆಯ ಚಿಗುರನ್ನು ತಿಂದುಹಾಕುತ್ತಿವೆ. ಇದರಿಂದ ಎಲೆಗಳು ಮುದುಡಿದಂತಾಗಿ ಸತ್ವ ಕಳೆದುಕೊಳ್ಳುತ್ತಿವೆ. ಕೆಲವೆಡೆ ಇಡೀ ಎಲೆಯನ್ನೇ ಹುಳುಗಳು ತಿಂದುಹಾಕಿರುವುದು ಬೆಳೆಗಾರರನ್ನು ದಿಕ್ಕೆಡಿಸಿದೆ.

ಸಾಮಾನ್ಯವಾಗಿ ಚಳಿಗಾಲದ ಅವಧಿಯಾದ ಡಿಸೆಂಬರ್‌ ತಿಂಗಳಲ್ಲಿ ರೋಗ ಹರಡುವುದು ಸಾಮಾನ್ಯವಾಗಿತ್ತು. ಆಗೊಂದೆರಡು ಬಾರಿ ಔಷಧ ಸಿಂಪಡಣೆ ಮಾಡಿದರೆ ರೋಗ ಬಾಧೆ ದೂರವಾಗುತ್ತಿತ್ತು. ಜೂನ್‌ ತಿಂಗಳಲ್ಲಿ ಬೆಳೆಗೆ ಹುಳು ಬಾಧೆ ಕಾಣಿಸಿಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ. ಈ ಹುಳುಗಳು ಎಲೆಗಳನ್ನು ತಿಂದು ಹಾಕುವ ಜೊತೆಯಲ್ಲೇ ಹಿಕ್ಕೆಗಳನ್ನೂ ಎಲೆಯ ಮೇಲೆಯೇ ಹಾಕುತ್ತಿವೆ. ಗಾಳಿಯ ತೀವ್ರವಾಗಿದ್ದು, ಹುಳುಗಳು ಹರಡುವಿಗೆ ವ್ಯಾಪಕಗೊಳ್ಳುತ್ತಿದೆ.

ಇಳುವರಿ ಕುಂಠಿತಗೊಳ್ಳುವ ಆತಂಕ: ಸಾಮಾನ್ಯವಾಗಿ ಒಂದು ಎಕರೆ ಹಿಪ್ಪುನೇರಳೆ ತೋಟದಲ್ಲಿ ರೈತರು ಸುಮಾರು 125 ರಿಂದ 150 ರೇಷ್ಮೆ ಮೊಟ್ಟೆಗಳನ್ನು ಮೇಯಿಸಿ ರೇಷ್ಮೆ ಗೂಡಿನ ಇಳುವರಿ ತೆಗೆಯುತ್ತಿದ್ದರು. ಹುಳು ಬಾಧೆಯಿಂದ ಎಲೆಗಳು ಸತ್ವಹೀನವಾಗುತ್ತಿರುವುದು ರೇಷ್ಮೆ ಹುಳುಗಳ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇಳುವರಿ ಕುಂಠಿತಗೊಳ್ಳುವ ಆತಂಕ ಬೆಳೆಗಾರರದ್ದಾಗಿದೆ.

ಹುಳುಗಳ ಕಾಟ ತೀವ್ರವಾಗಿ ಹರಡಿದಲ್ಲಿ ಶೇ.50 ರಿಂದ 60ರಷ್ಟು ಇಳುವರಿ ಕಡಿಮೆಯಾಗಿ ನಷ್ಟ ಉಂಟಾಗಲಿದೆ. ರೈತರು ರೇಷ್ಮೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅಧಿಕಾರಿಗಳು ಔಷಧ ಸಿಂಪಡಣೆ ಮಾಡುವಂತೆ ಸೂಚಿಸಿದ್ದರೂ ಅದರಿಂದ ಪ್ರಯೋಜನವಾಗಿಲ್ಲ.

ಎಲೆಗಳ ಹಿಂದೆ ಹುಳುಗಳು: ಹಿಪ್ಪುನೇರಳೆ ಬೆಳೆಯನ್ನು ಬಾಧಿಸುತ್ತಿರುವ ಉದ್ದನೆಯ ಹುಳುಗಳು ಎಲೆಗಳ ಹಿಂಭಾಗದಲ್ಲಿ ಅಡಗಿರುತ್ತವೆ. ಇವು ಮೇಲ್ಭಾಗದಿಂದ ಅಷ್ಟಾಗಿ ಕಾಣುವುದಿಲ್ಲ. ಔಷಧ ಸಿಂಪರಣೆ ಮಾಡಿದರೂ ಅದರ ಪ್ರಭಾವ ಹುಳುಗಳ ಮೇಲೆ ಬೀಳುವುದು ಕಡಿಮೆ. ಹುಳುಗಳು ತಿಂದಿರುವ ಎಲೆಗಳನ್ನು ಹಾಗೂ ಹುಳುಗಳನ್ನು ಸಂಗ್ರಹ ಮಾಡಿ ಸುಟ್ಟು ಹಾಕುವಂತೆ ರೇಷ್ಮೆ ಇಲಾಖೆ ಅಧಿಕಾರಿಗಳು ಬೆಳೆಗಾರರಿಗೆ ಸಲಹೆ ನೀಡುತ್ತಿದ್ದಾರೆ.

ವಿಜ್ಞಾನಿಗಳ ಸಲಹೆಗೆ ನಿರ್ಧಾರ: ಹಿಪ್ಪುನೇರಳೆ ಬೆಳೆಯನ್ನು ಬಾಧಿಸುತ್ತಿರುವ ಹುಳುಗಳ ನಿಯಂತ್ರಣದ ಬಗ್ಗೆ ವಿಜ್ಞಾನಿಗಳ ಸಲಹೆ ಪಡೆಯಲು ರೇಷ್ಮೆ ಇಲಾಖೆ ಉಪ ನಿರ್ದೇಶಕರು ಮುಂದಾಗಿದ್ದಾರೆ. ಅದರಂತೆ ಮೈಸೂರಿನ ಸಿಎಸ್‌ಆರ್‌ ಅಂಡ್‌ ಟಿಐ ವಿಜ್ಞಾನಿಗಳನ್ನು ಹುಳುಗಳು ಹರಡಿರುವ ಪ್ರದೇಶಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿ ನಂತರ ಅವರ ಸಲಹೆ ಮೇರೆಗೆ ನಿಯಂತ್ರಣ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದಾರೆ.

ನಿಯಂತ್ರಣ ಹೇಗೆ? ವ್ಯಾಪಕವಾಗಿ ಹಿಪ್ಪುನೇರಳೆ ಬೆಳೆಗೆ ಹರಡುತ್ತಿರುವ ಹುಳುಗಳನ್ನು ನಿಯಂತ್ರಿಸಲು 1 ಅಥವಾ 2 ಮಿಲಿ ರೋಗರ್‌ ಮತ್ತು ನುವಾನ್‌ ಕ್ರಿಮಿನಾಶಕವನ್ನು ಒಂದು ಲೀಟರ್‌ ನೀರಿಗೆ ಬೆರೆಸಿ ಸಂಜೆ 6 ಅಥವಾ 7 ಗಂಟೆಯ ನಂತರ ಹಿಪ್ಪುನೇರಳೆ ಬೆಳೆಗೆ ಸಿಂಪಡಣೆ ಮಾಡಬೇಕು. ಹುಳುಗಳು ಎಲೆಯ ಕೆಳಗೆ ಅಡಗಿರುತ್ತವೆ. ಅದೇ ಜಾಗಕ್ಕೆ ಸಿಂಪಡಣೆ ಮಾಡುವುದರಿಂದ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಈ ಔಷಧದ ಪ್ರಭಾವ ಎಲೆಗಳ ಮೇಲೆ ಹದಿನೈದು ದಿನಗಳವರೆಗೆ ಇರುತ್ತದೆ. ಆ ಅವಧಿಯಲ್ಲಿ ಯಾವುದೇ ಕಾರಣಕ್ಕು ರೇಷ್ಮೆ ಹುಳುಗಳಿಗೆ ಸೊಪ್ಪು ನೀಡಬಾರದು.

ಹೆಚ್ಚುತ್ತಿರುವ ಹಿಪ್ಪುನೇರಳೆ ಬೆಳೆ ವಿಸ್ತೀರ್ಣ : ಜಿಲ್ಲೆಯಲ್ಲಿ ಹಿಪ್ಪುನೇರಳೆ ಬೆಳೆಯ ವಿಸ್ತೀರ್ಣ ಹೆಚ್ಚಾಗುತ್ತಿದೆ. 2017-18ನೇ ಸಾಲಿನಲ್ಲಿ 15,472.30 ಹೆಕ್ಟೇರ್‌ ಪ್ರದೇಶವಿದ್ದರೆ, 2018-19ನೇ ಸಾಲಿನಲ್ಲಿ 15,985.79 ಹೆಕ್ಟೇರ್‌ಗೆ ಏರಿಕೆಯಾಗಿದೆ. ಮದ್ದೂರು ಹಾಗೂ ಮಳವಳ್ಳಿಯಲ್ಲಿ ಹಿಪ್ಪುನೇರಳೆ ಬೆಳೆ ವಿಸ್ತೀರ್ಣ ಅಧಿಕವಾಗಿದೆ. ಹಿಪ್ಪುನೇರಳೆ ಬೆಳೆ ನೀರಾವರಿ ಆಶ್ರಿತ ಪ್ರದೇಶದಲ್ಲಿ ಮಾತ್ರವಿರುವುದು ಕಂಡುಬಂದಿದೆ.

 

● ಮಂಡ್ಯ ಮಂಜುನಾಥ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ